ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನುಭವದ ಪರಿಪಾಕ

Last Updated 15 ಏಪ್ರಿಲ್ 2022, 15:28 IST
ಅಕ್ಷರ ಗಾತ್ರ

ಹೊಸಹೊಸಬನಾಗುವವನುಕ್ಷಣಂ ಮಾನವನು|

ವಸುಧೆಯಾ ಮೂಸೆಯಲಿ ಪುಟಪಾಕವಾಂತು ||
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |
ಕಸವೆಲ್ಲ ಕಳೆದವನು – ಮಂಕುತಿಮ್ಮ || 604 ||

ಪದ-ಅರ್ಥ: ಹೊಸಹೊಸಬನಾಗುವವನುಕ್ಷಣ= ಹೊಸಹೊಸಬನು+ಆಗುವನು+ಅನುಕ್ಷಣಂ
(ಪ್ರತಿಕ್ಷಣ), ವಸುಧೆ=ಜಗತ್ತು, ಲೋಕ,
ಪುಟಪಾಕವಾಂತು=ಪುಟಪಾಕ (ಶುದ್ಧಿಗೊಳಿಸಲು ಕುದಿಸುವುದು/ಕಾಯಿಸುವುದು)
ವಾಚ್ಯಾರ್ಥ: ಮನುಷ್ಯ ಜಗತ್ತು ಎನ್ನುವ ಮೂಸೆಯಲ್ಲಿ ಬೆಂದು, ಕರಗಿ ಪ್ರತಿಕ್ಷಣವೂ ಹೊಸಮನುಷ್ಯನಾ
ಗುತ್ತಾನೆ. ಮನದ ಕಸವನ್ನು ಕಳೆದುಕೊಂಡು,
ಜಗದ ಆತ್ಮದ ಬುದ್ಧಿ ಬಲಿತಂತೆ ಆತ ರಸಮೂರ್ತಿ
ಯಾಗುತ್ತಾನೆ.

ವಿವರಣೆ: ಮಗು ಭೂಮಿಗೆ ಬಂದ ಕ್ಷಣದಿಂದ, ಪ್ರತಿಕ್ಷಣಕ್ಕೂ ಅದು ಬದಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಅದಕ್ಕೆ ದೊರಕುವ ಅನುಭವ. ತಾಯಿಯ ಗರ್ಭದಲ್ಲಿದ್ದಾಗ ಆದ ಅನುಭವವೇ ಬೇರೆ, ಹೊರಗಡೆ ಬಂದ ಮೇಲೆ ಅದು ಅನುಭವಿಸುವುದೇ ಬೇರೆ. ಆ ಅನುಭವಗಳಿಗೆ ಪ್ರತಿಕ್ರಿಯಿಸುತ್ತ, ಹೊಂದಿಕೊಳ್ಳುತ್ತ ಮಗು ಬೆಳೆಯುತ್ತದೆ. ದೊಡ್ಡವರಾಗುತ್ತಿದ್ದಂತೆ, ನಮಗೂ ಒಂದಲ್ಲ ಒಂದು ಅನುಭವವಾಗುತ್ತಲೇ ಇರುತ್ತದೆ. ಪ್ರತ್ಯಕ್ಷ, ಪರೋಕ್ಷ, ದೈಹಿಕ, ಮಾನಸಿಕ, ಲೌಕಿಕ, ಆಧ್ಯಾತ್ಮಿಕ ಅನುಭವಗಳ ಸ್ವರೂಪ ಬೇರೆ ಬೇರೆ ಮತ್ತು ಅವು ಉಂಟು ಮಾಡುವ ಪರಿಣಾಮಗಳೂ ಬೇರೆ. ತಾನು ವಿಮಾನ ಅಪಘಾತದಲ್ಲಿ ಸತ್ತು ಹೋದೆ ಎಂಬುದನ್ನು ಪತ್ರಿಕೆಯಲ್ಲಿ ಓದಿದ, ಡೈನಾಮೈಟ್ ಮಾಡಿ ಮಾರುತ್ತಿದ್ದ, ಅಲ್‍ಫ್ರೆಡ್ ನೋಬೆಲ್, ಬದಲಾಗಿ ನೋಬೆಲ್ ಪಾರಿತೋಷಕ ಸ್ಥಾಪಿಸಿದ ವ್ಯಕ್ತಿಯಾದ. ಕೊಲೆಗಡುಕನಾಗಿದ್ದ ಅಂಗುಲಿಮಾಲ, ಬುದ್ಧನ ಕ್ಷಣಕಾಲದ ದರ್ಶನದಿಂದ ಬೌದ್ಧಯತಿಯೇ ಆದ. ತಂದೆಯ ಸಾವನ್ನು ಬಾಲ್ಯದಲ್ಲೇ ಕಂಡ ಶಂಕರರು ಅಧ್ಯಾತ್ಮ ಗುರುವಾದರು, ವಿವೇಕಾನಂದರ ಒಂದು ಪುಸ್ತಕವನ್ನು ರೈಲ್ವೆ ನಿಲ್ದಾಣದಲ್ಲಿ ಓದಿ ಪ್ರಭಾವಿತರಾದ ವ್ಯಕ್ತಿ ತಮ್ಮ ಜೀವನದ ದಿಶೆಯನ್ನು ಬದಲಿಸಿಕೊಂಡು ಅಣ್ಣಾ ಹಜಾರೆಯಾದರು. ಹೀಗೆ ಪ್ರತಿ ಅನುಭವಕ್ಕೆ ತನ್ನನ್ನು ತೆರೆದುಕೊಂಡ ಮನುಷ್ಯ ಬದಲಾಗುತ್ತ ಹೋಗುತ್ತಾನೆ. ಈ ಪ್ರಪಂಚವೇ ಮೂಸೆಯಾಗಿ ಮನುಷ್ಯನನ್ನು ಅನುಭವದಲ್ಲಿ ಬೇಯಿಸಿ, ಕಾಯಿಸಿ ಬದಲಾಯಿಸುತ್ತದೆ. ಈ ಪ್ರಕ್ರಿಯೆಯನ್ನು ಒಂದು ವಚನ ಬಹಳ ಮನನೀಯವಾಗಿ ತಿಳಿಸುತ್ತದೆ.

ತನು ಸೋಂಕಿ ತನು ನಷ್ಟವಾಯಿತ್ತು.
ಮನ ಸೋಂಕಿ ಮನ ನಷ್ಟವಾಯಿತ್ತು,
ಭಾವ ಸೋಂಕಿ ಭಾವ ನಷ್ಟವಾಯಿತ್ತು.
ಇದು ಕಾರಣ ಕೂಡಲಚೆನ್ನಸಂಗಯ್ಯ ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು.

ಇಷ್ಟಲಿಂಗ ತನುವನ್ನು ಸ್ಪರ್ಶಿಸಿದಾಗ ತನು ಪ್ರಸಾದವಾಯಿತು. ಪ್ರಾಣಲಿಂಗದ ನೆನಪು ಮನಸ್ಸನ್ನು ಆವರಿಸಿದಾಗ ಮನದ ಪ್ರಾಕೃತಿಕತೆ ಮರೆಯಾಗಿ ಅದೂ ಪ್ರಸಾದವೇ ಆಯಿತು. ಅಂತರಂಗದಲ್ಲಿ ಮಾತ್ರವಿದ್ದ ಭಾವಲಿಂಗವು ಈ ಜೀವಭಾವವನ್ನು ತಲುಪಿದಾಗ ಜೀವಭಾವ ಕರಗಿಹೋಗಿ ಆತ್ಮದ ಅನುಭೂತಿಯಾಗಿತ್ತು. ನಂತರ ಶರಣನನ್ನು ಮಹಾಲಿಂಗವು ಸೋಕಿದಾಗ ನಾನು ಶರಣ, ನಾನು ಬೇರೆ ಎಂಬ ಭೇದ ನಷ್ಟವಾಯಿತು. ಹೀಗೆ ತನು, ಮನ, ಭಾವಗಳನ್ನು ಅನುಭವದ ಮೂಸೆಯಲ್ಲಿ ಪಕ್ವಗೊಳಿಸಿದ ವ್ಯಕ್ತಿ ಮುಕ್ತಾತ್ವನಾಗುತ್ತಾನೆ. ಅದನ್ನೇ ಕಗ್ಗ ಹೇಳುತ್ತದೆ, ಪ್ರಪಂಚದ ಮೂಸೆಯಲ್ಲಿ ಪ್ರತಿಕ್ಷಣ ಅನುಭವದ ಅಗ್ನಿಯಲ್ಲಿ ಹಾಯ್ದುಬಂದ ಮನುಷ್ಯ ಜಗದಾತ್ಮದ ಬುದ್ಧಿಯನ್ನು ಬೆಳೆಸಿಕೊಂಡು ಬ್ರಹ್ಮನೇ (ರಸಮೂರ್ತಿಯೇ) ಆಗುತ್ತಾನೆ. ಯಾಕೆಂದರೆ ಅವನು ತನ್ನ ಕಲ್ಮಷಗಳನ್ನೆಲ್ಲ ಕಳೆದುಕೊಂಡವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT