ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೇವತಾಪೂಜೆ ಮನೆಯಲ್ಲಿ

Last Updated 1 ಡಿಸೆಂಬರ್ 2020, 20:30 IST
ಅಕ್ಷರ ಗಾತ್ರ

ಹಿಂದೆ ವಾರಣಾಸಿಯಲ್ಲಿ ಬ್ರಹ್ಮವರ್ಧನನೆಂಬ ಪಟ್ಟಣವಿತ್ತು. ಅದರ ರಾಜ ಮನೋಜ. ಅಲ್ಲಿ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಹೆಂಡತಿ ಪುತ್ರ ಪ್ರಾರ್ಥನೆ ಮಾಡಿದಾಗ ಬ್ರಹ್ಮ ಲೋಕದಿಂದ ಬೋಧಿಸತ್ವ ಮಗನಾಗಿ ಹುಟ್ಟಿದ. ಅವನಿಗೆ ಸೊನಕುಮಾರ ಎಂಬ ಹೆಸರಾಯಿತು. ಕೆಲವರ್ಷಗಳ ನಂತರ ಇನ್ನೊಬ್ಬ ಮಗ ಹುಟ್ಟಿದ. ಅವನು ನಂದಕುಮಾರ. ಇಬ್ಬರೂ ಮಕ್ಕಳು ಸಕಲವಿದ್ಯೆಗಳಲ್ಲಿ ಪಾರಂಗತರಾದರು. ಆದರೆ ಇಬ್ಬರೂ ಮದುವೆಯಾಗಲು ಒಪ್ಪದೆ ಪ್ರವ್ರಜಿತರಾಗಬಯಸಿದರು. ಹಾಗಾದರೆ ನಾವು ಇಲ್ಲಿ ಇದ್ದು ಪ್ರಯೋಜನವೇನು, ನಾವೂ ಅವರ ಜೊತೆಗೇ ಕಾಡಿಗೆ ಹೋಗಿ ಬಿಡೋಣವೆಂದು ತಮ್ಮ ಸಂಪತ್ತನ್ನೆಲ್ಲ ದಾನ ಮಾಡಿ ಮಕ್ಕಳೊಂದಿಗೆ ಹಿಮಾಲಯದಲ್ಲಿ ಸರೋವರದ ಬಳಿ ಆಶ್ರಮವನ್ನು ಕಟ್ಟಿಕೊಂಡು ಬದುಕತೊಡಗಿದರು.

ಇಬ್ಬರೂ ಮಕ್ಕಳು ತಂದೆ-ತಾಯಿಯರ ಸೇವೆ ಮಾಡುತ್ತಿದ್ದರು. ಬೆಳಿಗ್ಗೆ ನಂದಕುಮಾರ ಹತ್ತಿರದಲ್ಲೇ ಇದ್ದ ಮರದ ಹಣ್ಣುಗಳನ್ನು ತಂದು ಅವರಿಗೆ ಕೊಡುತ್ತಿದ್ದ. ಒಮ್ಮೆ ಹಣ್ಣು ತಿಂದ ಮೇಲೆ ಮಾರನೆಯ ದಿನದವರೆಗೂ ಅವರು ಏನೂ ತಿನ್ನುವಂತಿಲ್ಲ. ಅಣ್ಣ ಸೊನಕುಮಾರ ತನ್ನ ಜ್ಞಾನದಿಂದ ದೂರದೂರಕ್ಕೆ ಹೋಗಿ ಅತ್ಯಂತ ರುಚಿಯಾದ, ಆರೋಗ್ಯಕರವಾದ ಹಣ್ಣುಗಳನ್ನು ತರುತ್ತಿದ್ದ. ಆದರೆ ಅವನು ಬರುವಷ್ಟರಲ್ಲಿ ಅವರ ವೃತ ಮುಗಿದುಹೋಗಿರುತ್ತಿತ್ತು. ಅವನು ತಂದ ಹಣ್ಣುಗಳು ವ್ಯರ್ಥವಾಗುತ್ತಿದ್ದವು. ಅಣ್ಣ ತಮ್ಮನಿಗೆ ಹೇಳಿದ, “ಬೆಳಿಗ್ಗೆ ಅವಸರ ಮಾಡಿ ಯಾವುಯಾವುದೋ ಹಣ್ಣುಗಳನ್ನು ಹಿರಿಯರಿಗೆ ತಿನ್ನಿಸಬೇಡ. ಅದರಿಂದ ಅವರು ಹೆಚ್ಚು ಕಾಲ ಬದುಕಲಾರರು. ನಾನು ಬರುವವರೆಗೂ ಕಾಯುತ್ತಿರು. ನಂತರ ಇಬ್ಬರೂ ಸೇರಿ ತಿನ್ನಿಸೋಣ”. ಆದರೆ ತಮ್ಮ ಮಾತನ್ನು ಕೇಳದೆ ಪುಣ್ಯ ತನಗೆ ಮಾತ್ರ ಬರಲಿ ಎಂದು ಅವಸರದಿಂದ ಹಣ್ಣುಗಳನ್ನು ತಿನ್ನಿಸಿಬಿಡುತ್ತಿದ್ದ. ಸೊನಕುಮಾರ, “ನಿನಗೆ ಎಷ್ಟು ಹೇಳಿದರೂ ಬುದ್ಧಿ ಬರುತ್ತಿಲ್ಲ. ನಾನು ಹಿರಿಯ ಮಗನಾದ್ದರಿಂದ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನೀನು ಇಲ್ಲಿಂದ ಹೊರಟು ಹೋಗು” ಎಂದು ಕಳುಹಿಸಿಬಿಟ್ಟ.

ನಂದಕುಮಾರ ಅಣ್ಣನಿಗೆ, ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ ಬೇರೊಂದು ಕುಟೀರಕ್ಕೆ ಬಂದು ಧ್ಯಾನ ವಿಧಿಯನ್ನು ಅಭ್ಯಾಸ ಮಾಡಿಕೊಂಡು ಸಕಲ ಸಿದ್ಧಿಗಳನ್ನು ಪಡೆದ. ಅವನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಅಣ್ಣನಿಗೆ, ತಾಯಿ-ತಂದೆಯರಿಗೆ ಕ್ಷಮೆ ಕೇಳಬೇಕು. ಆದರೆ ತಾನೊಬ್ಬನೇ ಹೋದರೆ ಸಾಲದು. ತನ್ನ ತಪ್ಪಿಗೆ ಪ್ರಾಯಶ್ಚಿತ್ತವೆಂಬAತೆ ವಾರಣಾಸಿಯ ಮನೋಜ ರಾಜನ ಇಡೀ ಸೈನ್ಯದ ಮುಂದೆ ಕ್ಷಮೆ ಕೇಳಬೇಕು ಎಂದು ತೀರ್ಮಾನಿಸಿ ಅವನ ಬಳಿಗೆ ಹೋದ. ಅವನಿಗೆ ತನ್ನ ಅಪೇಕ್ಷೆಯನ್ನು ತಿಳಿಸಿದ. ಅದಕ್ಕೆ ಪ್ರತಿಯಾಗಿ ಅವನನ್ನು ಇಡೀ ಜಂಬೂದ್ವೀಪಕ್ಕೆ ಅಧಿಪತಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ. ರಾಜ ತನ್ನ ಇಪ್ಪತ್ನಾಲ್ಕು ಅಕ್ಷೆರೋಹಿಣಿ ಸೇನೆಯೊಂದಿಗೆ ಹೊರಟ. ಅದರ ಮುಂದೆ ನಂದ ತಪಸ್ಪಿ ಆಕಾಶದಲ್ಲಿ ಮುಂದೆ ಜಿಂಕೆಯ ಚರ್ಮದ ಮೇಲೆ ತೇಲುತ್ತಾ ಹೋಗುತ್ತಿದ್ದ. ಅವನ ಪ್ರಭೆಯಿಂದ ಎಲ್ಲ ರಾಜರು ಶರಣಾದರು. ಕೊನೆಗೆ ಮನೋಜ ಚಕ್ರವರ್ತಿಯನ್ನು ಅವನ ಅಪಾರ ಸೈನ್ಯದೊಂದಿಗೆ ಅಣ್ಣನ ಆಶ್ರಮದ ಬಳಿ ಕರೆತಂದ. ಆದರೆ ಬೋಧಿಸತ್ವನಾಗಿದ್ದ ಸೊನಕುಮಾರನನ್ನು ನೋಡಿದೊಡನೆ ಎಲ್ಲರೂ ಅವನ ದೈವತ್ವಕ್ಕೆ ಶರಣಾದರು. ತಾಯಿ-ತಂದೆಯರು ತಮ್ಮ ಸಣ್ಣ ಮಗನನ್ನು ಅಪ್ಪಿಕೊಂಡರು, ಕ್ಷಮಿಸಿದರು. ತಮ್ಮ ಹೇಳಿದ, “ತಾಯಿ-ತಂದೆಯರು ದೇವರಿಗಿಂತ ಮಿಗಿಲು. ಅವರ ಸೇವೆಯನ್ನು ಹೇಗೆ ಹೇಗೋ ಮಾಡುವಂತಿಲ್ಲ. ಅದನ್ನು ದೇವರಪೂಜೆಯಂತೆಯೇ ಮಾಡಬೇಕೆಂಬುದನ್ನು ಅಣ್ಣ ಕಲಿಸಿದ. ಅದರಲ್ಲಿ ಕೊರೆಯಾದರೆ ದೇವತೆಗಳಿಗೆ ಅಪಮಾನ ಮಾಡಿದಂತೆ. ಆದ್ದರಿಂದ ಅವರೆಲ್ಲರ ಕ್ಷಮೆ ಕೇಳುತ್ತೇನೆ”. ನಂತರ ಎಲ್ಲರೂ ಸಂತೋಷವಾಗಿದ್ದು ಬ್ರಹ್ಮಲೋಕಗಾಮಿಗಳಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT