ಗುರುವಾರ , ಅಕ್ಟೋಬರ್ 6, 2022
26 °C

ಬೆರಗಿನ ಬೆಳಕು: ಹಿರಿದಾದ ಮಹಿಮೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮೆರೆಯುವವು ನೂರಾರು ಮೈಮೆಗಳು ಸೃಷ್ಟಿಯಲಿ |
ಧರಣಿಯವು, ಗಗನದವು, ಮನುಜಯತ್ನದವು ||
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ
ಅರಿವುಳ್ಳೊಲುಮೆ ಪಿರಿದು – ಮಂಕುತಿಮ್ಮ ||721||

ಪದ-ಅರ್ಥ: ಮೈಮೆಗಳು=ಮಹಿಮೆಗಳು, ಪಿರದೆಂಬೆನವುಗಳೊಳು=ಪಿರಿದು(ಹಿರಿದಾದದ್ದು)+
ಎಂಬೆನು+ಅವುಗಳೊಳು(ಅವುಗಳಲ್ಲಿ), ಧರುಮವರಿತವನೊಲುವೆ= ಧರುಮದ(ಧರ್ಮವ)+ಅರಿತವನ+ಒಲುಮೆ,ಅರಿವುಳ್ಳೊಲುಮೆ=ಅರಿವುಳ್ಳ+ಒಲುಮೆ, ಪಿರಿದು=ಹಿರಿದು.

ವಾಚ್ಯಾರ್ಥ: ಜಗತ್ತಿನಲ್ಲಿ ನೂರಾರು ಮಹಿಮೆಗಳು ಮೆರೆಯುವುದು ಕಾಣುತ್ತದೆ. ಅವುಗಳಲ್ಲಿ ಕೆಲವು ಭೂಮಿಯವು, ಆಕಾಶದವು, ಮನುಷ್ಯ ಪ್ರಯತ್ನದವು. ಆ ಮಹಿಮೆಗಳಲ್ಲಿ ಹಿರಿದಾದವುಗಳು ಧರ್ಮವನ್ನು ತಿಳಿದವನ ಮತ್ತು ಅರಿವನ್ನು ಹೊಂದಿದ ಒಲುಮೆಗಳು.
ವಿವರಣೆ: ಜಗತ್ತಿನಲ್ಲಿ ಅನೇಕ ಮಹಿಮೆಗಳು ಕಾಣುತ್ತ ಅದನ್ನು ಅತ್ಯಂತ ಆಕರ್ಷಕವಾಗಿ, ಮೈಮರೆಯುವಂತೆ ಮಾಡಿವೆ. ಅವುಗಳಲ್ಲಿ ಕೆಲವು ಭೂಮಿಗೆ ಸಂಬಂಧಿಸಿದವು. ಭೂಮಿಯ ಪ್ರಾಕೃತಿಕ ಸಂಗತಿಗಳು ಅದ್ಭುತವಾಗಿವೆ.

ತುರ್ಕಾನಾದ ಸರೋವರದ ಅತ್ಯಂತ ಕ್ಷಾರೀಯಗುಣ, ನಿತ್ಯವೂ ಮಳೆಯಾಗುವ ದಕ್ಷಿಣ ಅಮೇರಿಕೆಯ ಮೌಂಟ್ ರೋರೈಮಾದ ಅತ್ಯಂತ ಎತ್ತರದ ಪರ್ವತ, ಕೆನಡಾದ ಕ್ಪಿಬೆಕ್‌ನಲ್ಲಿರುವ ಕಲ್ಪನಾತೀತವಾದ ಬೃಹತ್ ಕುಳಿ, ವೆನೆಜುವೆಲಾದ ಅತ್ಯದ್ಭುತವಾದ ಏಂಜೆಲ್ಸ ಜಲಪಾತ ಇವುಗಳೊಂದಿಗೆ ನಮ್ಮವೆ ಆದ ಹಿಮವತ್ ಪರ್ವತಗಳು, ವಿಶಾಲ ಮರುಭೂಮಿಗಳು,
ಬೆರಗು ಹುಟ್ಟಿಸುವ ಅಮೆಜಾನ್ ಕಾಡುಗಳು, ಈ ಭೂಮಿಯ ನಿಸರ್ಗ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇದಲ್ಲದೆ ಆಕಾಶದ ವೈಭವವೇನು ಕಡಿಮೆಯದೆ? ಅಲ್ಲಿ ಏನೂ ಇಲ್ಲ ಎನ್ನುವ ವಿಸ್ತಾರದಲ್ಲಿ ಏನಿಲ್ಲ? ತಾರೆಗಳು, ಗ್ರಹಗಳು, ಸೂರ್ಯ, ಚಂದ್ರ, ನಿಹಾರಿಕೆಗಳು, ಧೂಮಕೇತುಗಳು, ಕಪ್ಪು ರಂಧ್ರಗಳು, ಸತತ ಸುತ್ತುವ ಆಕಾಶಕಾಯಗಳು. ಇವೆಲ್ಲ ಕಿಕ್ಕಿರಿದು ನೆರೆದು ಬೆರಗು ಹುಟ್ಟಿಸಿವೆ. ಈ ನೈಸರ್ಗಿಕ ಅದ್ಭುತಗಳೊಂದಿಗೆ ಮನುಷ್ಯನ ಬುದ್ಧಿವಂತಿಕೆ, ಪರಿಶ್ರಮಗಳು ಬೆರೆತು ಮತ್ತಷ್ಟು ಮಹಿಮೆಗಳನ್ನು ಸೃಷ್ಟಿಸಿವೆ. ಪ್ರಪಂಚದ ಅದ್ಭುತಗಳಾದ ಚೀನಾದ ಗೋಡೆ, ತಾಜಮಹಲ, ಪೀಸಾದ ವಾಲಿದ ಗೋಪುರ ಇಂಥವೆಲ್ಲ ಈ ಜಗತ್ತಿನ ಸಿರಿಯನ್ನು ಹಿರಿದಾಗಿಸಿವೆ. ಇವೆಲ್ಲ ಮಹಿಮೆಗಳೇ ಸರಿ. ಆದರೆ ಇವೆಲ್ಲವುಗಳಿಗಿಂತ ಹಿರಿದಾದವು ಎರಡು ವಿಶೇಷ ಮಹಿಮೆಗಳು. ಮೊದಲನೆಯದು ಧರ್ಮವನ್ನು ಚೆನ್ನಾಗಿ ತಿಳಿದ ಒಲುಮೆ.

ಬದುಕಿನಲ್ಲಿ ಒಲುಮೆ ಒಂದು ಬಹುದೊಡ್ಡ ಭಾವ. ವ್ಯಕ್ತಿಗಳನ್ನು, ಸಂಸ್ಥೆಗಳನ್ನು, ದೇಶಗಳನ್ನು ಒಂದುಗೂಡಿಸುವುದು ಒಲುಮೆ. ಆದರೆ ಅದು ಧರ್ಮದ ನೆಲೆಯ ಮೇಲೆ ನಿಂತಿರಬೇಕು. ಅದು ಸ್ತ್ರೀ- ಪುರುಷರ ನಡುವಿನ ಒಲುಮೆಯಾಗಬಹುದು, ಎರಡು ಜನರ ಮಧ್ಯದ ಸ್ನೇಹವಾಗಬಹುದು, ಕೆಲವು ದೇಶಗಳ ನಡುವಿನ ಬಾಂಧವ್ಯವಾಗಬಹುದು, ಇವೆಲ್ಲ ಪ್ರಪಂಚಕ್ಕೆ ಒಳಿತೇ. ಆದರೆ ಅವು ಧರ್ಮದ ಆಧಾರದಲ್ಲಿ ಇದ್ದಾಗ ಪ್ರಪಂಚವನ್ನು ಕಟ್ಟುತ್ತವೆ. ಅಧರ್ಮದ ಒಲವಾದರೆ ಅದು ಜಗತ್ತನ್ನು ಒಡೆದುಹಾಕುತ್ತದೆ. ಇದೆಲ್ಲಕ್ಕೂ ಸರಿಯಾದ ತಿಳಿವು ಬೇಕು. ಅದೇ ಅರಿವಿನ ಒಲುಮೆ. ಹೀಗೆ ಧರ್ಮದ ಹಾಗೂ ತಿಳಿವಿನ ನೆಲೆಯಲ್ಲಿ ಹೊಳೆದ ಒಲವು ಸೃಷ್ಟಿಯ ಅನೇಕ ಮಹಿಮೆಗಳಲ್ಲಿ ಪ್ರಮುಖವಾದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು