ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳಲ್ಲಿ ಗುರುತ್ವ

Last Updated 4 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನಿಗೆ ಮಕ್ಕಳಿರಲಿಲ್ಲ. ಅವನು ಯಾವ ಪ್ರಾರ್ಥನೆ ಸಲ್ಲಿಸಿದರೂ ಮಕ್ಕಳಾಗಲಿಲ್ಲ. ಒಂದು ದಿನ ಪರಿವಾರದೊಂದಿಗೆ ರಾಜೋದ್ಯಾನಕ್ಕೆ ಹೋದಾಗ ಒಂದು ಮರದ ಕೆಳಗೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವಾಗ ಮೇಲೆ ಮರವನ್ನು ನೋಡುತ್ತಿದ್ದ. ಆಗ ಒಂದು ಪಕ್ಷಿಯ ಗೂಡು ಕಂಡಿತು. ಆತ ತನ್ನ ಸೈನಿಕನೊಬ್ಬನಿಗೆ, ‘ಗೂಡಿನಲ್ಲಿ ಏನಿದೆಯೋ ನೋಡು. ಮರಿಗಳಿದ್ದರೆ, ಮೊಟ್ಟೆಗಳಿದ್ದರೆ ನಿಧಾನವಾಗಿ ಉಸಿರು ತಾಗದಂತೆ ಕೆಳಗೆ ಇಳಿಸಿಕೊಂಡು ಬಾ’ ಎಂದ. ಆತ ಮೇಲಕ್ಕೆ ಹತ್ತಿ ಹೋಗಿ ಗೂಡಿನಲ್ಲಿದ್ದ ಮೂರು ಮೊಟ್ಟೆಗಳನ್ನು ಹತ್ತಿಯನ್ನು ಹಾಸಿದ ಬುಟ್ಟಿಯಲ್ಲಿಟ್ಟುಕೊಂಡು ಕೆಳಗೆ ಬಂದ. ‘ಇವು ಯಾವ ಪಕ್ಷಿಯ ಮೊಟ್ಟೆಗಳು?’ ರಾಜ ಕೇಳಿದ. ಹತ್ತಿರದಲ್ಲೇ ಇದ್ದ ಶಿಕಾರಿ ಹೇಳಿದ, ‘ಒಂದು ಗೂಬೆಯ ಮೊಟ್ಟೆ, ಇನ್ನೊಂದು ಮೈನಾ ಪಕ್ಷಿಯ ಮೊಟ್ಟೆ, ಮತ್ತೊಂದು ಗಿಳಿಯ ಮೊಟ್ಟೆ’. ‘ಅದು ಹೇಗೆ ಬೇರೆ ಬೇರೆ ಪಕ್ಷಿಗಳು ಒಂದೇ ಗೂಡಿನಲ್ಲಿ ಮೊಟ್ಟೆ ಇಡುತ್ತವೆ?’ ಎಂದು ಕೇಳಿದಾಗ ಶಿಕಾರಿ ಹೇಳಿದ, ‘ಪ್ರಭೂ, ಪಕ್ಷಿಗಳಿಗೆ ಯಾವ ಸ್ಥಾನ ಭದ್ರ ಎನ್ನಿಸುತ್ತದೆಯೋ ಅಲ್ಲಿ ಮೊಟ್ಟೆಗಳನ್ನಿಡುತ್ತವೆ. ಈ ಸ್ಥಾನ ತುಂಬ ಭದ್ರವಾದದ್ದು’.

ರಾಜ ತನ್ನ ಮೂರು ಅಮಾತ್ಯರನ್ನು ಕರೆದ, ‘ನನಗೆ ಮಕ್ಕಳಿಲ್ಲ. ಆದ್ದರಿಂದ ಮೊಟ್ಟೆಗಳನ್ನು ಒಡೆದು ಬರುವ ಪಕ್ಷಿಗಳೇ ನನ್ನ ಮಕ್ಕಳು. ನೀವು ಅವುಗಳನ್ನು ಕಾಪಾಡಬೇಕು’ ಎಂದು ಒಬ್ಬೊಬ್ಬರಿಗೆ ಒಂದೊಂದು ಮೊಟ್ಟೆ ಕೊಟ್ಟ. ಒಬ್ಬ ಅಮಾತ್ಯನ ಮನೆಯ ಮೊಟ್ಟೆಯಿಂದ ಗಂಡು ಗೂಬೆಯ ಮರಿ ಹೊರಬಂದಿತು. ಅದಕ್ಕೆ ವೆಸ್ಸಂತರ ಎಂದು ರಾಜ ಹೆಸರಿಟ್ಟ. ಎರಡನೆಯ ಅಮಾತ್ಯನ ಮನೆಯಲ್ಲಿ ಹೆಣ್ಣು ಮೈನಾ ಪಕ್ಷಿ ಹುಟ್ಟಿತು. ಅದಕ್ಕೆ ಕುಂಡಲಿನಿ ಎಂಬ ಹೆಸರಾಯಿತು. ಮೂರನೆಯ ಅಮಾತ್ಯನ ಮನೆಯಲ್ಲಿ ಬೋಧಿಸತ್ವ ಗಂಡು ಗಿಳಿಯಾಗಿ ಹುಟ್ಟಿದ. ಅದಕ್ಕೆ ಜಂಬುಕನೆಂಬ ಹೆಸರು ಕೊಟ್ಟ ರಾಜ. ಮೂವರೂ ಅಮಾತ್ಯರಿಗೆ ಹೇರಳವಾದ ಧನವನ್ನು ಕೊಟ್ಟು ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೇಳಿದ. ಮೇಲಿಂದ ಮೇಲೆ ಆ ಅಮಾತ್ಯರನ್ನು ಕರೆಸಿ ತನ್ನ ಮಕ್ಕಳು ಹೇಗಿದ್ದಾರೆಂದು ಕೇಳುತ್ತಿದ್ದ.

ಇದನ್ನು ಕಂಡ ಜನ ರಾಜನನ್ನು ಅವನ ಹಿಂದೆ ಅಪಹಾಸ್ಯ ಮಾಡುತ್ತಿದ್ದರು. ಪಕ್ಷಿಗಳನ್ನು ಮಗ, ಮಗಳು ಎಂದು ತಿರುಗಾಡುವ ನಮ್ಮ ರಾಜನಿಗೆ ಹುಚ್ಚು ಹಿಡಿದಿದೆ ಎಂದುಕೊಳ್ಳುತ್ತಿದ್ದುದು ರಾಜನ ಗಮನಕ್ಕೆ ಬಂದಿತ್ತು. ಆತ ಒಂದು ದಿನ ರಾಜಸಭೆಯನ್ನು ಕರೆದು ಮೂರೂ ಅಮಾತ್ಯರಿಗೆ ತನ್ನ ಮಕ್ಕಳನ್ನು ಕರೆತರಲು ಹೇಳಿದ. ಆಸ್ಥಾನ ಕಿಕ್ಕಿರಿದು ತುಂಬಿತ್ತು. ಆ ಪಕ್ಷಿಗಳನ್ನು ಏಕೆ ರಾಜ ತರಿಸಿದ್ದಾನೆ ಎಂಬುದು ಕುತೂಹಲವನ್ನು ಹುಟ್ಟಿಸಿತ್ತು. ರಾಜನ ಮುಂದೆ ಮೂರು ಸ್ವರ್ಣ ಪೀಠಗಳ ಮೇಲೆ ಪಕ್ಷಿಗಳು ಕುಳಿತವು. ರಾಜ ವೆಸ್ಸ್ಸಂತರನನ್ನು ಕೇಳಿದ, ‘ರಾಜ್ಯಭಾರ ಮಾಡುವ ವ್ಯಕ್ತಿ ಯಾವ ಕೆಲಸಗಳನ್ನು ಮಾಡಬೇಕು?’ ಸಭಿಕರೆಲ್ಲ ಮುಸಿ ಮುಸಿ ನಕ್ಕರು. ಗೂಬೆಯ ಮರಿ ಏನು ಹೇಳಿತು? ರಾಜನ ತಲೆ ಕೆಟ್ಟಿದೆ ಎಂದುಕೊಂಡರು. ಆದರೆ ವೆಸ್ಸಂತರ ಗಂಭೀರವಾಗಿ ರಾಜಧರ್ಮವನ್ನು ವಿವರಿಸಿದಾಗ ಜನ ಬೆರಗಾದರು. ನಂತರ ಕುಂಡಲಿನಿ ಕೂಡ ವೆಸ್ಸಂತರನ ಮಾತನ್ನು ಮುಂದುವರೆಸಿ ಇನ್ನೂ ಆಳವಾದ ಚಿಂತನೆಗಳನ್ನು ನೀಡಿತು. ಕೊನೆಗೆ ಗಿಳಿಯ ಮರಿಯಾದ ಬೋಧಿಸತ್ವ ಹೇಳಿತು, ‘ರಾಜಾ, ಇದುವರೆಗೂ ನೀನು ರಾಜಧರ್ಮವನ್ನು ನನ್ನ ಅಣ್ಣ, ಅಕ್ಕನಿಂದ ಕೇಳಿದೆ. ನೀನು ಇದುವರೆಗೂ ಆ ಧರ್ಮದಲ್ಲೇ ನಡೆದಿದ್ದೀಯಾ. ಇನ್ನೂ ಈ ರಾಜಭೋಗ ಸಾಕು ಎನ್ನಿಸಲಿಲ್ಲವೆ? ಇನ್ನೂ ಭೋಗಕ್ಕೆ ಅಂಟಿಕೊಳ್ಳುವುದು ಬೇಡ’. ತಕ್ಷಣ ರಾಜ ಅಮಾತ್ಯರಿಗೆ ರಾಜ್ಯವನ್ನು ಒಪ್ಪಿಸಿ ಪ್ರವ್ರಜಿತನಾಗಿ ಹೊರಟು ಹೋದ. ದೈವತ್ವ, ಗುರುತ್ವ ಎಲ್ಲರಲ್ಲಿಯೂ ಇದೆ. ಅದನ್ನು ಗುರುತಿಸಬೇಕು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT