ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆರಗಿನ ಬೆಳಕು | ಜೀವನೋತ್ಸಾಹಕ್ಕೆ ಮಾದರಿ

Last Updated 30 ಅಕ್ಟೋಬರ್ 2022, 22:26 IST
ಅಕ್ಷರ ಗಾತ್ರ

ಅಣಗಿದ್ದು ಬೇಸಗೆಯೊಳ್, ಎದ್ದು ಮಳೆಕರೆದಂದು |ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ||
ಉಣಿಸನೀವನು ದನಕೆ, ತಣಿವನೀವನು ಜಗಕೆ |
ಗುಣಶಾಲಿ ತೃಣಸಾಧು – ಮಂಕುತಿಮ್ಮ || 744|| ಪದ-ಅರ್ಥ: ಅಣಗಿದ್ದು=ಅಡಗಿದ್ದು, ಮಳೆಕರೆದಂದು=ಮಳೆ+ಕರೆದ+ಅಂದು, ಗುಣಿ=ಹಳ್ಳ,
ತಿಟ್ಟು=ಬೆಟ್ಟ, ಉಣಿಸನೀವನು=ಉಣಿಸನು(ಆಹಾರವನು)+ಈವನು(ನೀಡುತ್ತಾನೆ), ತಣಿವನೀವನು=ತಣಿವನು(ತಂಪನ್ನು)+ಈವನು,

ವಾಚ್ಯಾರ್ಥ: ಬೇಸಿಗೆಯಲ್ಲಿ ಒಣಗಿ ಅಡಗಿ, ಮಳೆ ಬಂದಾಗ ಮತ್ತೆದ್ದು, ಕಣಿವೆ, ಗುಡ್ಡವೆನ್ನದೆ ಎಲ್ಲೆಡೆಯಲ್ಲೂ ಬೆಳೆದು, ದನಕ್ಕೆ
ಆಹಾರವನ್ನು, ಜಗತ್ತಿಗೆ ತಂಪನ್ನು ನೀಡುವ ಗುಣಶಾಲಿ ಹುಲ್ಲು ಸಾಧುವಾದದ್ದು.

ವಿವರಣೆ: ಹುಲ್ಲುಕಡ್ಡಿ ಜೀವನೋತ್ಸಾಹಕ್ಕೆ ಒಂದು ಸುಂದರಮಾದರಿ. ತಾವೆಲ್ಲ ಕಂಡಿದ್ದೀರಿ, ಹಳೆಯ ಕಟ್ಟಡಗಳ ಗೋಡೆಯ ಕೊರಕಲಿನಲ್ಲಿ ಒಂದು ಪುಟ್ಟ ಬಳ್ಳಿ ಎದ್ದು ನಿಂತಿದೆ, ಮಳೆಗಾಲದಲ್ಲಿ ಮನೆಯ ಮಾಳಿಗೆಯ ಮೇಲೆ ಹಸಿರು ಹುಲ್ಲು ಮೊಳೆತಿದೆ. ಇದು
ಆಶ್ಚರ್ಯವಲ್ಲವೆ? ಗೋಡೆಯ ಕೊರಕಲಿನಲ್ಲಿ ಬೀಜ ಹಾಕಿದವರಾರು, ಗೊಬ್ಬರ ನೀಡಿ, ನೀರು ಹನಿಸಿದವರಾರು? ಸಿಮೆಂಟ್‌ ಗೋಡೆಯ ಬಿರುಕಿನಲ್ಲಿ ಅದು ಹೇಗೋ ಎಲ್ಲಿಂದಲೋ ಹಾರಿ ಬಂದ ಹುಲ್ಲಿನ ಬೀಜ, ಅವಕಾಶಕ್ಕೆ ಕಾಯುತ್ತಿತ್ತು. ಅದಕ್ಕೆ
ಗೊಬ್ಬರವೆಲ್ಲಿ, ನೀರೆಲ್ಲಿ? ಹಾರಿಬಂದ ಧೂಳೇ ಅದಕ್ಕೆ ಮಣ್ಣು, ಮಳೆನೀರಿನ ಸಿಂಚನವೇ ಸಾಕು ಅದಕ್ಕೆ.

ಮನೆಯ ಮಾಳಿಗೆಯ ಮೇಲೆ ಬೇಸಿಗೆಯಲ್ಲಿ ಹಾರಿಬಿದ್ದ ಧೂಳೇ ಹುಲ್ಲಿನ ಬೀಜಕ್ಕೆ ಸಮೃದ್ಧ ಭೂಮಿ. ಆದರೆ ಇಲ್ಲಿ ಮುಖ್ಯವಾದದ್ದೆಂದರೆ ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಬೀಜ ತನ್ನನ್ನು ಅಂಕುರಿಸಿಕೊಳ್ಳುವ ಶಕ್ತಿಯನ್ನು ಮರೆತಿರಲಿಲ್ಲ, ಅವಕಾಶ ಸಿಕ್ಕಾಗ ತನ್ನನ್ನು ಅರಳಿಸಿಕೊಳ್ಳುವ ಆಶಾವಾದವನ್ನು ತೊರೆದಿರಲಿಲ್ಲ. ಅದಕ್ಕೆ ತನ್ನ ಆಯುಸ್ಸು ತುಂಬ ಚಿಕ್ಕದೆಂಬ ಅರಿವಿದೆ. ದೊರೆತ ಚಿಕ್ಕ ಆಯುಸ್ಸನ್ನು
ಸಂಭ್ರಮದಿಂದ ಎದುರುಗೊಳ್ಳುವ ಉಮೇದು ಇದೆ.

ಬೆಟ್ಟಗುಡ್ಡಗಳ ಪ್ರದೇಶದಲ್ಲಂತೂ ಬೇಸಿಗೆಯಲ್ಲಿ ನೆಲವೆಲ್ಲ ಒಣಒಣ. ಬರೀ ಧೂಳು. ನೆಲ ಸೂರ್ಯನ ಕಾವಿಗೆ ಸುಟ್ಟು ಕರಕಲಾಗಿದೆ. ಕಣ್ಣಿಗೆ ಒಣಭೂಮಿ ರಾಚುತ್ತದೆ. ಆದರೆ ಒಂದೆರಡು ಮಳೆಯಾದ ಮೇಲೆ ದೃಶ್ಯವೇ ಬದಲಾಗುತ್ತದೆ. ಹುಲ್ಲು ಇದುವರೆಗೂ ಎಲ್ಲಿ ಅಡಗಿ ಕುಳಿತಿತ್ತೋ? ನೆಲದಿಂದ ಕಿತ್ತುಕೊಂಡು ಎದ್ದು ಬರುತ್ತದೆ. ಮೊದಲು ಭೂಮಿಯ ಪುಟ್ಟ ನೆಲದಲ್ಲಿ ಹುಲ್ಲಿನ ಬೀಜವಿತ್ತು ಎಂಬ ಕಲ್ಪನೆಯೂ ಇರಲಿಲ್ಲ. ಈಗ ಕಣಿವೆಯಲ್ಲಿ, ಬೆಟ್ಟದ ತಲೆಯ ಮೇಲೆ, ಎಲ್ಲೆಲ್ಲಿ ಒಂದಿಷ್ಟು ಮಣ್ಣಿನಂಶವಿದೆಯೋ ಅಲ್ಲೆಲ್ಲ ಚಿಗುರಿ ನೆಲವನ್ನು ಸಸ್ಯಶಾಮಲೆಯನ್ನಾಗಿ ಮಾಡುತ್ತದೆ. ದನಕರುಗಳ ಹೊಟ್ಟೆಗೆ ಆಹಾರವಾಗಿ ತೃಪ್ತಿನೀಡುತ್ತದೆ.

ನೀರನ್ನು ಹಿಡಿದಿಟ್ಟು ಭೂಮಿಯ ಕುದಿಯನ್ನು ಕಡಿಮೆ ಮಾಡುತ್ತದೆ. ಕಣ್ಣಿಗೆ ತಂಪನ್ನುಂಟುಮಾಡುತ್ತದೆ. ಕಗ್ಗದ ಉದ್ದೇಶ, ಹುಲ್ಲಿನ ಗುಣವನ್ನು ಹೊಗಳುವುದು ಮಾತ್ರವಲ್ಲ. ಒಂದು ಸಣ್ಣ ಹುಲ್ಲುಕಡ್ಡಿ ವಿಪರೀತ ಪರಿಸ್ಥಿತಿಯನ್ನು ತಾಳ್ಮೆಯಿಂದ, ಆಶಾವಾದದಿಂದ ಎದುರಿಸಿ, ಅನುಕೂಲ ಪರಿಸ್ಥಿತಿ ಬಂದಾಗ,ತನ್ನಲ್ಲಿಯ ಶಕ್ತಿಯನ್ನು ಮರೆಯದೆ ಬಳಸಿ, ಜೀವನೋತ್ಸಾಹದಿಂದ ತಲೆ ಎತ್ತಿ ನಿಂತು
ಪ್ರಯೋಜನಕಾರಿಯಾಗಬಹುದಾದರೆ, ಭಗವಂತನ ಸೃಷ್ಟಿಯಕಿರೀಟವೆನ್ನಿಸಿಕೊಂಡ ಮನುಷ್ಯ ಕೊರಗುವುದೇಕೆ? ಜೀವನದಲ್ಲಿನಿರುತ್ಸಾಹವೇಕೆ? ಹುಲ್ಲುಕಡ್ಡಿಗಿರುವ ಆತ್ಮವಿಶ್ವಾಸವೂನಮಗಿಲ್ಲವೆ? ಅದಕ್ಕೇ ಹುಲ್ಲು ನಮಗೊಂದು ಶ್ರೇಷ್ಠಮಾದರಿ –ಆತ್ಮವಿಶ್ವಾಸಕ್ಕೆ, ಜೀವನೋತ್ಸಾಹಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT