ಶನಿವಾರ, ಫೆಬ್ರವರಿ 22, 2020
19 °C

ತಪ್ಪಿಗೆ ಸರಿಯಾದ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅತ್ಯಂತ ಶ್ರೀಮಂತ ಶ್ರೇಷ್ಠಿಯ ಮನೆಯಲ್ಲಿ ಹುಟ್ಟಿದ್ದ. ಆತ ಬೆಳೆದು ಸಂಪತ್ತನ್ನು ಇನ್ನೂ ವೃದ್ಧಿಸಿ ತಾನು ಎಂಬತ್ತು ಕೋಟಿ ಸಂಪತ್ತಿನ ಒಡೆಯನಾದ. ಅವನಿಗೊಬ್ಬ ತಮ್ಮನಿದ್ದ.

ಕೆಲವು ದಿನಗಳ ನಂತರ ಬೋಧಿಸತ್ವನಿಗೆ ಒಬ್ಬ ಮಗ ಹುಟ್ಟಿದ. ಅವನು ದೊಡ್ಡವನಾಗಿ ನಡೆಯಲಾರಂಭಿಸಿದಾಗ ಬೋಧಿಸತ್ವನಿಗೆ ಸಂಸಾರ ಸಾಕೆನ್ನಿಸಿತು. ಆತ ತನ್ನ ಹೆಂಡತಿ ಹಾಗೂ ಮಗನನ್ನು ತಮ್ಮನ ಸುಪರ್ದಿಗೆ ಒಪ್ಪಿಸಿ, ‘ತಮ್ಮಾ, ಈ ಐಶ್ವರ್ಯ ನಮ್ಮದು ಎಂದು ತಿಳಿದು ಅಹಂಕಾರಪಡಬೇಡ. ಇದು, ಭಗವಂತ ಸಮಾಜದ ಒಳಿತಿಗೆ, ನಮ್ಮನ್ನು ಈ ಹಣಕ್ಕೆ ಕಾವಲುಗಾರರನ್ನಾಗಿ ನೇಮಿಸಿದ್ದಾನೆ. ನೀನು ಈ ಹಣವನ್ನು ಸಪಾತ್ರರಿಗೆ ದಾನಮಾಡಿ ವಿನಿಯೋಗಿಸು. ಹಸಿದು ಬಂದವರಿಗೆ, ಬೇಡಿ ಬಂದವರಿಗೆ ಎಂದೂ ಇಲ್ಲ ಎನ್ನಬೇಡ. ದಾನ ಮಾಡುವುದೇ ನಿನ್ನ ಧರ್ಮವಾಗಲಿ’ ಎಂದು ಹೇಳಿ ಹಿಮಾಲಯಕ್ಕೆ ಹೊರಟುಬಿಟ್ಟ. ಅಲ್ಲಿ ಪ್ರವ್ರಜಿತನಾಗಿ ಸಮಾಪ್ತಿಗಳನ್ನು ಪಡೆದ.

ಇತ್ತ ಕಡೆ ತಮ್ಮನಿಗೂ ಒಬ್ಬ ಮಗ ಹುಟ್ಟಿದ. ಅವನು ಬೆಳೆದು ದೊಡ್ಡವನಾಗುತ್ತಿದ್ದಂತೆ ತಮ್ಮನಿಗೊಂದು ದುಷ್ಟ ವಿಚಾರ ಬಂದಿತು. ಈಗ ಮನೆಯಲ್ಲಿ ಅಣ್ಣನ ಮಗ ಮತ್ತು ನನ್ನ ಮಗ ಇರುವುದರಿಂದ ಮುಂದೆ ಆಸ್ತಿ ಎರಡು ಭಾಗವಾಗುತ್ತದೆ. ಆದ್ದರಿಂದ ಅಣ್ಣನ ಮಗನನ್ನು ಕೊಂದುಬಿಟ್ಟರೆ ಇಡೀ ಆಸ್ತಿ ತನ್ನ ಮಗನಿಗೇ ದಕ್ಕುತ್ತದೆ ಎಂದು ಚಿಂತಿಸಿ ಒಂದು ದಿನ ಅಣ್ಣನ ಮಗನನ್ನು ನದಿಗೆ ಕರೆದುಕೊಂಡು ಹೋಗಿ ಆಳವಾದ ನೀರಿನಲ್ಲಿ ಅವನನ್ನು ಮುಳುಗಿಸಿ ಕೊಂದುಬಿಟ್ಟ. ಮನೆಯಲ್ಲಿ ಅತ್ತಿಗೆ ಮಗನೆಲ್ಲಿ ಎಂದು ಕೇಳಿದಾಗ ತಾನೂ ಅತ್ಯಂತ ದುಃಖದಿಂದ ಅತ್ತಂತೆ ನಾಟಕವಾಡಿ ಮಗು ಪ್ರವಾಹದ ಸೆಳವಿನಲ್ಲಿ ಕೊಚ್ಚಿಕೊಂಡು ಹೋದ. ಅವನನ್ನು ಹುಡುಕಿಸಲು ಎಷ್ಟು ಪ್ರಯತ್ನ ಮಾಡಿದರೂ ದೊರಕಲಿಲ್ಲ ಎಂದು ಗೋಳಾಡಿದ. ಪಾಪ! ತಾಯಿ ಏನು ಮಾಡಿಯಾಳು? ನಿರಂತರ ದುಃಖವೇ ಅವಳ ಸಂಗಾತಿಯಾಯಿತು.

ನಿಶ್ಚಿಂತೆಯಾದ ತಮ್ಮ ಅಹಂಕಾರಿಯಾದ, ದುರಾಚಾರಿಯಾದ. ದಾನ ನಿಂತು ಹೋಯಿತು. ಬೋಧಿಸತ್ವ ಧ್ಯಾನದಲ್ಲಿದ್ದಾಗ ಅವನ ಮನಸ್ಸಿಗೆ ಈ ಎಲ್ಲ ವಿಷಯಗಳು ಹೊಳೆದವು. ಆತ ತಕ್ಷಣವೇ ವಾರಾಣಸಿಗೆ ಬಂದಿಳಿದ. ಅಣ್ಣ ಬಂದ ಸುದ್ದಿ ತಿಳಿದೊಡನೆ ತಮ್ಮ ಅಣ್ಣನನ್ನು ಮನೆಗೆ ಕರೆತಂದ. ಊಟ ಉಪಚಾರ ಮುಗಿದ ಮೇಲೆ ಅಣ್ಣ ತಮ್ಮನನ್ನು ಕರೆದು, ‘ನನ್ನ ಮಗ ಎಲ್ಲಿ? ಅವನನ್ನು ಕರೆ’ ಎಂದ. ಮತ್ತೆ ತಮ್ಮ ಹೊರಳಾಡಿ ಅತ್ತು ಅಣ್ಣನ ಮಗ ತೀರಿ ಹೋದದ್ದನ್ನು ವರ್ಣಿಸಿ ನಾಟಕಮಾಡಿದ. ಅಣ್ಣ, ‘ತಮ್ಮಾ, ನಾಟಕ ಸಾಕು. ನಿನ್ನ ನೀಚಕಾರ್ಯ ನನಗೆ ತಿಳಿದಿದೆ. ಆಸ್ತಿಯ ಆಸೆಗಾಗಿ ನೀನು ಅವನನ್ನು ಕೊಲ್ಲಲಿಲ್ಲವೆ? ದಾನಕ್ಕಾಗಿ ಇಟ್ಟ ಹಣವನ್ನು ದುರಾಚಾರಕ್ಕೆ ಬಳಸುತ್ತಿಲ್ಲವೆ? ನೀನು ಮಾಡಿದ ಪಾಪಕ್ಕೆ ನೀನು ಮ್ಯಹಕ ಪಕ್ಷಿಯಾಗಿ ಹುಟ್ಟುತ್ತೀ’ ಎಂದು ಹೇಳಿ ಅಲ್ಲಿಂದ ಹೊರಟ.

ಕೆಲವೇ ದಿನಗಳಲ್ಲಿ ತಮ್ಮ ಸತ್ತು ಅಣ್ಣ ನುಡಿದಂತೆ ಮ್ಯಹಕ ಪಕ್ಷಿಯಾಗಿ ಹುಟ್ಟಿದ. ಇದೊಂದು ವಿಚಿತ್ರವಾದ ಪಕ್ಷಿ. ಹಿಮಾಲಯದಲ್ಲಿ ಅಂಜೂರ ವೃಕ್ಷದ ಮೇಲೆ ವಾಸಿಸುತ್ತದೆ. ಅಂಜೂರ ಹಣ್ಣು ಮರದಲ್ಲಿ ತುಂಬಿದಾಗ, ‘ಈ ಹಣ್ಣುಗಳು ನನ್ನವು. ಬೇರೆ ಯಾರಿಗೂ ಇಲ್ಲ’ ಎಂದು ಕಿರಿಚುತ್ತಲೇ ಇರುತ್ತದೆ. ಆದರೆ ತಾನು ಒಂದು ಹಣ್ಣನ್ನೂ ತಿನ್ನುವುದಿಲ್ಲ. ಅದು ಕೂಗುತ್ತಿರುವಂತೆ ಬೇರೆ ಪಕ್ಷಿಗಳು ಬಂದು ಅವುಗಳನ್ನು ತಿಂದು ಮುಗಿಸುತ್ತವೆ. ಹೀಗೆ ಕೂಗುತ್ತಲೇ, ಹಣ್ಣುಗಳನ್ನು ಅನುಭವಿಸದೇ ಒದ್ದಾಡಿ ಸತ್ತು ಹೋಗುತ್ತದೆ ಆ ಪಕ್ಷಿ. ತಮ್ಮನ ಗತಿಯೂ ಹಾಗೆಯೇ ಆಯಿತು.

ಯಾವ ಉದ್ದೇಶಕ್ಕೆ, ಭಗವಂತನ ಕೃಪೆಯಿಂದ ನಮಗೆ ಸಂಪತ್ತು ದೊರೆತಿದೆಯೋ, ಅದನ್ನು ಆ ಕಾರ್ಯಕ್ಕೇ ಬಳಸದಿದ್ದರೆ ನಮಗೂ ಆ ಶಿಕ್ಷೆಯೇ ದೊರೆತೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)