ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಭೂಮಿಯ ಸೊಗಸು

Last Updated 19 ಮೇ 2021, 19:30 IST
ಅಕ್ಷರ ಗಾತ್ರ

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |
ಇಳೆಯೊಳಗದೊಂದು ಸೊಗ – ಮಂಕುತಿಮ್ಮ
⇒|| 419 ||

ಪದ-ಅರ್ಥ: ತರು=ಸಸಿ, ಹೊಸತಳಿರ=ಹೊಸಚಿಗುರು, ನಿಲದುಕ್ಕುವಂತೆ= ನಿಲದೆ(ನಿಲ್ಲದೆ)+
ಉಕ್ಕುವಂತೆ, ಇಳೆಯೊಳಗದೊಂದು=ಇಳೆಯೊಳಗೆ (ಭೂಮಿಯಲ್ಲಿ) +ಅದೊಂದು, ಸೊಗ=ಸೊಗಸು.

ವಾಚ್ಯಾರ್ಥ: ಎಳೆಯ ಸಸಿಯಲ್ಲಿ ದಿನದಿನವೂ ಹೊಸ ಚಿಗುರು ಬರುವಂತೆ, ನೆಲದ ಚಿಲುಮೆಯಲಿ ತಿಳಿನೀರು ನಿಲ್ಲದೆ ಉಕ್ಕುವಂತೆ, ಎಳೆಯ ಮಕ್ಕಳಲ್ಲಿ ಅವರು ಬೆಳೆದಂತೆ ತಿಳಿವು ಚಿಗುರಿ ಬೆಳೆಯುತ್ತದೆ. ಇದೇ ಭೂಮಿಯೊಳಗೆ ಒಂದು ಸೊಗಸು.

ವಿವರಣೆ: ಮನೆಯಲ್ಲಿ ಬೆಳೆಯುವ ಮಗುವನ್ನು ಕಂಡವರಿಗೆಲ್ಲರಿಗೂ ಅನುಭವಕ್ಕೆ ಬಂದ ಚಿಂತನೆ ಇದು. ಹುಟ್ಟಿದಾಗ ಅಳುವುದೊಂದನ್ನು ಬಿಟ್ಟು ಮತ್ತೇನನ್ನು ತಿಳಿಯದ ಮಗು, ದಿನದಿನಕ್ಕೆ ಬೆಳೆಯುವುದು, ಬದಲಾಗುವುದು ಒಂದು ಅತ್ಯಂತ ಕೌತುಕದ, ಸಂಭ್ರಮದ ಸಂಗತಿ. ಅದು ಬೆಳವಣಿಗೆಯ ಮೈಲುಗಲ್ಲುಗಳನ್ನು ದಾಟಿ ಮುಂದುವರೆಯುವುದನ್ನು ಕಾಣುವುದೇ ಸಂತೋಷ. ನಿಧಾನಕ್ಕೆ ತಂದೆ-ತಾಯಿಯರನ್ನು ಗುರುತಿಸಿ ನಗುವುದು, ಆಧಾರವಿಲ್ಲದೆ ಕುಳಿತುಕೊಳ್ಳುವುದು, ನಿಂತುಕೊಳ್ಳುವುದು, ‘ಅಮ್ಮಾ’ ಎಂದು ಕರೆಯುವುದು, ಧ್ವನಿಯನ್ನು ಗುರುತಿಸುವುದು, ನಂತರ ನಡೆಯುವುದು ಎಲ್ಲವೂ ಪವಾಡದಂತೆ ನಡೆಯುತ್ತದೆ. ಮಗು ದಿನದಿನಕ್ಕೆ ಬದಲಾಗುತ್ತದೆ. ಬೆಳೆದಂತೆ ಮಾತು ಕಲಿತು, ಬರಹ ಕಲಿತು, ಶಾಲೆಗೆ ಹೋಗಿ, ಸ್ನೇಹಿತರೊಂದಿಗೆ ಬಾಂಧವ್ಯ ಬೆಳೆಸಿಕೊಂಡ ಮಗು ತನಗರಿಯದ ವಿಷಯಗಳನ್ನು ಕಲಿಯುತ್ತದೆ. ಅದರ ಚಿಂತನೆಯ ವಿಕಾಸವಾಗುತ್ತದೆ. ವಿಚಾರ ಪ್ರಬುದ್ಧವಾಗುತ್ತ, ಸ್ವಂತ ಅಭಿಪ್ರಾಯಗಳನ್ನು ನೀಡತೊಡಗುತ್ತದೆ. ಆಗ ಪಾಲಕರಿಗೆ ನಾವು ಎತ್ತಿ ಆಡಿಸಿದ ಮಗು ಇದೇನೇ ಎಂದು ಆಶ್ಚರ್ಯವಾಗುವಷ್ಟು ದೈಹಿಕ, ಬೌದ್ಧಿಕ, ಮಾನಸಿಕ ಬೆಳವಣಿಗೆಯಾಗುತ್ತದೆ. ಮಗು ತನ್ನನ್ನು ಸಾಮಾಜೀಕರಣಕ್ಕೆ ಒಡ್ಡಿಕೊಂಡಷ್ಟೂ ಹೆಚ್ಚಿನ ಪ್ರಪಂಚ ಜ್ಞಾನವನ್ನು, ಅರಿವನ್ನು ಬೆಳೆಸಿಕೊಳ್ಳುತ್ತದೆ. ತನ್ನ ಸಂಸ್ಕೃತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜೀಕರಣವಾಗುತ್ತದೆ. ಇದರೊಂದಿಗೆ ತನ್ನ ಭಾಷೆ, ನಾಡು, ದೇಶ ಮತ್ತು ಅವುಗಳನ್ನು ಬೆಳೆಸಿ, ಉಳಿಸುವಲ್ಲಿ ತನ್ನ ಪಾತ್ರದ ಅರಿವು ಮೂಡುತ್ತದೆ.

ಹೀಗೆ ಮಗುವಿನಲ್ಲಿ ಹಂತಹಂತವಾಗಿ, ಅರಿವಿನ ಮೊಳಕೆಯೊಡೆದು. ಮುಂದೆ ಸಮೃದ್ಧವಾಗುತ್ತದೆ. ಕಗ್ಗ ಇದನ್ನು ನಿಸರ್ಗಕ್ಕೆ ಹೋಲಿಸುತ್ತದೆ. ಮನೆಯ ಮುಂದೆ ನೆಟ್ಟ ಪುಟ್ಟ ಸಸಿ ದಿನ ಕಳೆದಂತೆ ಹೊಸ ಚಿಗುರುಗಳನ್ನು ಬಿಡುತ್ತ ಬೆಳೆದು ದೊಡ್ಡ ಮರವಾಗುತ್ತದೆ. ಅದರ ಬದಲಾವಣೆ ನಿತ್ಯದ್ದು, ನಿರಂತರವಾದದ್ದು. ಅಂತೆಯೇ ನೆಲದಲ್ಲಿ ಉಕ್ಕುವ ಜಲಧಾರೆ ಕೂಡ. ಜಲಮೂಲದ ಹತ್ತಿರವಿರುವ ನೀರಿನ ಊಟೆ ಸದಾಕಾಲ ಉಕ್ಕುವಂತೆ, ನಿಸರ್ಗದಲ್ಲಿ, ಮನುಷ್ಯ ಜೀವನದಲ್ಲಿ, ಬದಲಾವಣೆ ಅನಿವಾರ್ಯ, ನಿರಂತರ ಮತ್ತು ಅದೇ ಈ ಭೂಮಿಯಲ್ಲಿ ನಾವು ಕಾಣುವ ಸೊಗಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT