ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಜೀವನದ ಶಾಶ್ವತತೆ

Last Updated 1 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ

ಹಿಂದೆ ಮಿಥಿಲೆಯನ್ನು ಸಾಧೀನ ರಾಜ ಆಳುತ್ತಿದ್ದ. ಆತ ಧರ್ಮಿಷ್ಠ ಮತ್ತು ಪ್ರಜೆಗಳನ್ನು ಮಕ್ಕಳಂತೆ ಕಾಣುವವನು. ಆತ ತನ್ನ ರಾಜ್ಯದಲ್ಲೆಲ್ಲ ದಾನಶಾಲೆಗಳನ್ನು ಕಟ್ಟಿ ಸದಾ ದಾನ ಮಾಡುತ್ತಿದ್ದ. ದಿನನಿತ್ಯ ಆರು ಲಕ್ಷ ಹಣ ವಿನಿಯೋಗವಾಗುತ್ತಿತ್ತು. ಆತ ಪಂಚಶೀಲಗಳನ್ನು ನಡೆಸುತ್ತ ಉಪೋಸಥ ವ್ರತವನ್ನು ತಪ್ಪದೆ ಮಾಡುತ್ತಿದ್ದ. ರಾಜನೇ ಹೀಗಿದ್ದಾಗ ಪ್ರಜೆಗಳೂ ಧರ್ಮಮಾರ್ಗದಲ್ಲಿ ನಡೆಯುತ್ತಿದ್ದುದರಿಂದ ಅವರೆಲ್ಲ ಸತ್ತ ಮೇಲೆ ಸ್ವರ್ಗಲೋಕವನ್ನೇ ಸೇರುತ್ತಿದ್ದರು. ಹೀಗಾಗಿ ಸ್ವರ್ಗಲೋಕ ಈ ಜನರಿಂದಲೇ ತುಂಬಿ ಹೋಯಿತು. ಅಲ್ಲಿ ಹೋದರೂ ಅವರು ತಮ್ಮ ರಾಜನ ಹೆಗ್ಗಳಿಕೆಯ ಬಗ್ಗೆಯೇ ಮಾತನಾಡುತ್ತಿದ್ದರು. ಅದನ್ನು ಕೇಳಿ ದೇವತೆಗಳಿಗೆಲ್ಲ ಕುತೂಹಲವಾಯಿತು. ಇಂದ್ರ, ‘ತಾವೆಲ್ಲ ಆ ಸಾಧೀನ ರಾಜನನ್ನು ನೋಡಬಯಸುತ್ತೀರಾ? ಹಾಗಾದರೆ ಅವನನ್ನು ಇಲ್ಲಿಗೇ ಕರೆಸುತ್ತೇನೆ’ ಎಂದು ಮಾತಲಿಗೆ ಹೇಳಿ ಸಾಧೀನ ರಾಜನನ್ನು ಕರೆತರುವಂತೆ ಆಜ್ಞೆ ಮಾಡಿದ.

ಮಾತಲಿ ಇಂದ್ರನ ರಥವನ್ನು ತೆಗೆದುಕೊಂಡು ಮಿಥಿಲೆಗೆ ಹೊರಟ. ಅಂದು ಹುಣ್ಣಿಮೆ. ರಥ ರಾಜ್ಯವನ್ನು ಸುತ್ತುಹಾಕಿ ಅರಮನೆಯ ಮಹಾದ್ವಾರದ ಬಳಿಗೆ ಬಂದಿಳಿಯಿತು. ಜನಕ್ಕೆಲ್ಲ ಸಂತೋಷ. ತಮ್ಮ ರಾಜನಿಗಾಗಿ ಇಂದ್ರನ ರಥ ಬಂದದ್ದು ಅವರಿಗೆ ಹೆಮ್ಮೆ ಎನ್ನಿಸಿತು. ಮಾತಲಿ ರಾಜನನ್ನು ಕಂಡು ಇಂದ್ರನ ಆಮಂತ್ರಣವನ್ನು ಕೊಟ್ಟ. ಸಾಧೀನ ರಾಜ ಬಂದು ರಥವನ್ನೇರಿದ. ಸಾವಿರ ಕುದುರೆಗಳ ಆ ರಥ ಮನೋವೇಗದಲ್ಲಿ ಹಾರಿ ಸ್ವರ್ಗಲೋಕವನ್ನು ಸೇರಿತು. ದೇವತೆಗಳಿಗೆಲ್ಲ ಈ ರಾಜನನ್ನು ನೋಡಿ ಆನಂದವಾಯಿತು. ಇಂದ್ರ, ರಾಜನನ್ನು ತನ್ನ ಸಿಂಹಾಸನದಲ್ಲೇ ಕೂಡ್ರಿಸಿಕೊಂಡು, ‘ನೀನು ತುಂಬ ಧರ್ಮಿಷ್ಠ. ಆದ್ದರಿಂದ ದೇಹ ಸಮೇತ ಸ್ವರ್ಗಲೋಕಕ್ಕೆ ಬಂದಿದ್ದೀ. ತೃಯೋತ್ರಿಂಶ ದೇವಲೋಕದಲ್ಲಿ ನೀನು ಸುಖಿಯಾಗಿರು’ ಎಂದು ಹೇಳಿ ಹತ್ತು ಸಾವಿರ ಯೋಜನದ ದೇವನಗರ, ಎರಡೂವರೆ ಕೋಟಿ ಅಪ್ಸರೆಯರು ಮತ್ತು ತನ್ನ ಭವನದ ಅರ್ಧವನ್ನು ಆತನಿಗೆ ಕೊಟ್ಟುಬಿಟ್ಟ.

ಸಾಧೀನ ರಾಜ ಅಲ್ಲಿಯೇ ದೇವಲೋಕದ ದಿವ್ಯ ಕಾಮಭೋಗಗಳಲ್ಲಿ ಸಂತೋಷಪಡುತ್ತ ಉಳಿದುಬಿಟ್ಟ. ಹಾಗೆ ಭೋಗದಲ್ಲಿರುವಾಗ ಮನುಷ್ಯರ ಲೆಕ್ಕದಲ್ಲಿ ಏಳುನೂರು ವರ್ಷಗಳು ಕಳೆದು ಹೋದವು. ನಿಧಾನವಾಗಿ ಅವನಲ್ಲಿ ಕಾಮಭೋಗಗಳಲ್ಲಿ ವೈರಾಗ್ಯ ಬರತೊಡಗಿತು. ಆತ ಇಂದ್ರನನ್ನು ಕೇಳಿದ, ‘ನಾನು ಸ್ವರ್ಗಕ್ಕೆ ಬಂದ ಹೊಸದರಲ್ಲಿ ನೃತ್ಯ, ಗೀತೆ, ಮದ್ಯ ಮತ್ತು ಅಪ್ಸರೆಯರಿಂದ ಆನಂದಿತನಾಗುತ್ತಿದ್ದೆ. ಈಗ ನನಗೆ ಸ್ವರ್ಗದಲ್ಲಿ ಆನಂದವಾಗುತ್ತಿಲ್ಲ. ಅಂದರೆ ನನ್ನ ಆಯುಷ್ಯ ಮುಗಿಯುತ್ತ ಬಂದಿತೇ ಅಥವಾ ನಾನು ಮೂರ್ಖನಾಗುತ್ತಿದ್ದೇನೆಯೇ?’. ಇಂದ್ರ ಹೇಳಿದ, ‘ನಿನ್ನ ಸಾವು ದೂರವಿದೆ. ಆದರೆ ನಿನ್ನ ಪುಣ್ಯಕರ್ಮ ಕ್ಷೀಣವಾಗಿದೆ’.

ತಕ್ಷಣ ಸಾಧೀನರಾಜ ಇಂದ್ರನ ಅಪ್ಪಣೆ ಪಡೆದು ಮಿಥಿಲೆಗೆ ಮರಳಿ ಬಂದ. ರಾಜೋದ್ಯಾನದಲ್ಲಿ ಇಳಿದು, ಅಲ್ಲಿಯ ಮಾಲಿಗೆ ತನ್ನ ಪರಿಚಯ ಹೇಳಿದ. ಆತ ಓಡಿ ಹೋಗಿ ಆಗ ಇದ್ದ ನಾರದ ರಾಜನನ್ನು ಕರೆತಂದ. ಸಾಧೀನನಿಗೆ ಆಶ್ಚರ್ಯ! ನಾನು ಇರುವಾಗ ಮತ್ತೊಬ್ಬ ರಾಜ ಎಲ್ಲಿಂದ ಬಂದ? ನಾರದ ರಾಜ ವಿನಯದಿಂದ ಹೇಳಿದ, ‘ಸ್ವಾಮಿ, ನಾನು ನಿಮ್ಮ ಏಳನೆಯ ತಲೆಮಾರಿನವರು. ತಮ್ಮ ತಲೆಮಾರಿನವರು, ಪರಿಚಯದವರು ಯಾರೂ ಬದುಕಿಲ್ಲ. ದಯವಿಟ್ಟು ತಾವೇ ರಾಜ್ಯವನ್ನು ಆಳಿ’. ಸಾಧೀನ ರಾಜ ಅದನ್ನೊಪ್ಪದೆ ಹೇಳಿದ, ನಾನು ಭೂಮಿಯ ಮೇಲೆ ಮಾಡಿದ ಪುಣ್ಯದಿಂದ ಸ್ವರ್ಗ ಲಭಿಸಿತು, ಸ್ವರ್ಗದ ಭೋಗದಿಂದ ಪುಣ್ಯ ಅಳಿಯಿತು. ನನಗೆ ಸ್ವರ್ಗಬೇಡ, ಧರ್ಮಕಾರ್ಯ ಬೇಕು ಎಂದು ದಾನ ಮಾಡಿ, ಪ್ರವ್ರಜಿತನಾಗಿ ಶಾಶ್ವತ ಸ್ವರ್ಗ ಪಡೆದ.

ಸ್ವರ್ಗಕ್ಕಿಂತ, ಧರ್ಮಜೀವನ ಹೆಚ್ಚು ಶಾಶ್ವತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT