ಬುಧವಾರ, ಜೂನ್ 16, 2021
27 °C

ಬೆರಗಿನ ಬೆಳಕು: ವೈರಿಯ ಬುದ್ಧಿವಂತಿಕೆಗೆ ಮೆಚ್ಚುಗೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ರಾಜನಿಗೆ ದಿಕ್ಕೇ ತೋಚದಂತಾಯಿತು. ತನ್ನ ದೇಶಕ್ಕೆ ಬಂದು, ತನ್ನ ರಾಜಧಾನಿಯಲ್ಲೇ, ತನ್ನ ಅತಿಥಿಯಾಗಿದ್ದುಕೊಂಡೇ, ಈ ಅಸಾಧ್ಯ ಕೆಲಸ ಮಾಡಿದ ಮಹೋಷಧಕುಮಾರನ ಮೇಲೆ ಅವನಿಗೆ ಅಸಾಧ್ಯ ಕೋಪ ಬಂತು. ಆದರೆ ಏನೂ ಮಾಡುವ ಹಾಗಿಲ್ಲ, ಯಾಕೆಂದರೆ ಇವರ ತಾಯಿ, ಹೆಂಡತಿ, ಮಗ, ಮಗಳು ವೈರಿರಾಜನಾದ ವಿದೇಹನ ಅರಮನೆಯಲ್ಲಿದ್ದಾರೆ. ಬ್ರಹ್ಮದತ್ತನಿಗೆ ಖಾತ್ರಿಯಾಯಿತು. ತನ್ನ ಪರಿವಾರದವರು ಮರಳಿ ಸುರಕ್ಷಿತವಾಗಿ ಬರಬೇಕೆಂದಿದ್ದರೆ, ಅದು ಕೇವಲ ಮಹೋಷಧಕುಮಾರನಿಂದ ಮಾತ್ರ ಸಾಧ್ಯ. ಅವನ ಮುಖದ ಮೇಲಿನ ಚಿಂತೆಯನ್ನು ಕಂಡು ಕುಮಾರ ಹೇಳಿದ, ‘ಮಹಾರಾಜ, ಚಿಂತಿಸಬೇಡಿ. ನಿಮ್ಮ ಪರಿವಾರದ ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ನಾನು ಮಿಥಿಲೆಯನ್ನು ಮುಟ್ಟಿದ ತಕ್ಷಣ ಅವರನ್ನು ಗೌರವದಿಂದ ಕಳುಹಿಸಿಕೊಡುತ್ತೇನೆ’.

ರಾಜ ಆಶ್ಚರ್ಯದಿಂದ ಕೇಳಿದ, ‘ಪಂಡಿತ, ನನಗೊಂದು ಪ್ರಶ್ನೆ. ನೀನು ನಮ್ಮ ನಗರದಲ್ಲಿಯೇ ಇದ್ದೆ. ನನ್ನ ಇಷ್ಟೊಂದು ಸೈನ್ಯ, ಅಷ್ಟು ಗೂಢಚಾರರು ಇಡೀ ನಗರವನ್ನು ಕಾಯುತ್ತಿದ್ದರೂ ನೀನು ಹೇಗೆ ನನ್ನ ಅರಮನೆಯ ಜನರನ್ನು ಯಾರಿಗೂ ತಿಳಿಯದಂತೆ ಅಪಹರಿಸಿದೆ?’. ಮಹೋಷಧಕುಮಾರ ಹೇಳಿದ, ‘ಮಹಾರಾಜ, ಕೆಲವರು ನನ್ನ ಹತ್ತಿರ ಮಂತ್ರ ಶಕ್ತಿ ಇದೆ ಎನ್ನುತ್ತಾರೆ, ಕೆಲವರು ದಿವ್ಯಮಾಯೆ ಇದೆ ಎಂದು ಭಾವಿಸುತ್ತಾರೆ. ನಿಜ ಹೇಳಲೇ? ಇವು ಯಾವುವೂ ನನ್ನ ಕಡೆಗೆ ಇಲ್ಲ, ಅವು ಯಾರ ಹತ್ತಿರವೂ ಇರಲಾರವು. ಇರುವುದೊಂದೇ ಬುದ್ಧಿವಂತಿಕೆ. ಬುದ್ಧಿವಂತಿಕೆ ಅರ್ಥವಾಗದಿದ್ದರೆ ಅದನ್ನು ಮಾಯೆ ಅಥವಾ ಮಂತ್ರಶಕ್ತಿ ಎಂದು ತಿಳಿಯುತ್ತಾರೆ. ನಾನು ನಿಮ್ಮ ಪರಿವಾರದವರನ್ನೆಲ್ಲ ಕರೆದುಕೊಂಡು ಹೋದದ್ದು ಒಂದು ಸುರಂಗ ಮಾರ್ಗವಾಗಿ’. ರಾಜನಿಗೆ ಆಶ್ಚರ್ಯ! ‘ಅಂಥ ಸುರಂಗ ನಮ್ಮ ನಗರದಲ್ಲಿ ಎಲ್ಲಿದೆ? ಅದಿದ್ದರೂ ಅರಮನೆಯಿಂದ ಜನ ಸುರಂಗಕ್ಕೆ, ನಮ್ಮ ಅರಮನೆಯ ಕಾವಲುಗಾರನಿಗೆ ತಿಳಿಯದಂತೆ ಹೇಗೆ ಹೋದರು?’ ಪ್ರಶ್ನಿಸಿದ ರಾಜ.

ಮಹೋಷಧಕುಮಾರ ರಾಜನನ್ನು ಕರೆದುಕೊಂಡು ಅರಮನೆಗೆ ಬಂದ. ಅರಮನೆಯ ಮಧ್ಯಭಾಗದಲ್ಲಿ, ಯಾವ ಕಾವಲುಗಾರರೂ ಬರದಂಥ ಸ್ಥಳದಲ್ಲಿ, ಗೋಡೆಯ ಮೇಲೊಂದು ದೊಡ್ಡ ಸುಂದರವಾದ ವರ್ಣಚಿತ್ರವಿತ್ತು. ಅದರ ಹಿಂದೆ ಮೆಟ್ಟಿಲುಗಳು! ಕುಮಾರ ರಾಜನಿಗೆ ಹೇಳಿದ, ‘ಮಹಾರಾಜ, ಈ ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದರೆ ನಿನಗೊಂದು ಸುರಂಗ ಕಾಣುತ್ತದೆ. ಈ ಸುರಂಗವನ್ನು ನೋಡು. ಎರಡು ಆನೆಯಷ್ಟು ಎತ್ತರದ, ಹತ್ತು ಆನೆಗಳು ಒಂದೇ ಸಲ ಸಾಗಿ ಹೋಗುವಷ್ಟು ವಿಸ್ತಾರವಾದ, ಬೆಳಕಿನಿಂದ ಬೆಳಗುವ ಸುರಂಗದ ವೈಭವವನ್ನು ನೋಡು. ಗೋಡೆಯ ಮೇಲಿನ ವರ್ಣಚಿತ್ರಗಳು, ಫಳಫಳ ಹೊಳೆಯುವ ನೆಲಗಟ್ಟು ಇವುಗಳನ್ನು ನೋಡಿದರೆ ಇದು ಸುರಂಗವೆಂದು ತೋರುವುದೇ ಇಲ್ಲ. ಅದೊಂದು ರಾಜಮಾರ್ಗವೆಂದೇ ಭಾಸವಾಗುತ್ತದೆ. ಈ ಸುರಂಗ ನಮ್ಮ ಅರಮನೆಯಿಂದ ನಿಮ್ಮ ಅರಮನೆಯವರೆಗೂ ಇದ್ದುದರಿಂದ ಅದು ಸುರಂಗವೆಂದು ಅರಮನೆಯವರಿಗೆ ತಿಳಿಯಲೇ ಇಲ್ಲ’. ದೇವನಗರದಂತೆ ಹೊಳೆಯುತ್ತಿದ್ದ ಅದನ್ನು ಕಂಡು, ಮಹೋಷಧಕುಮಾರನ ಕಾರ್ಯದಕ್ಷತೆಗೆ ಬ್ರಹ್ಮದತ್ತ ರಾಜ ಮನಸೋತ. ತಾನು ಸೋತಿದ್ದರೂ, ವೈರಿಯ ಬುದ್ಧಿಶಕ್ತಿಯನ್ನು ಹೊಗಳಿದ. ಅವನ ತಲೆಯಲ್ಲಿ ಹೊಸ ವಿಚಾರವೊಂದು ಹೊಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.