ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಗುರುತನ ಬೇಡ

Last Updated 16 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |
ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||
ಮೇಲು ಬೀಳುಗಳರ‍್ಗದೆಂತೊ ನೀನೇನರಿವೆ? |
ತಾಳದಿರು ಗುರುತನವ – ಮಂಕುತಿಮ್ಮ || 844 ||

ಪದ-ಅರ್ಥ: ಬೀಳಿಸದಿರೆಲೊ=ಬೀಳಸದಿರು+ಎಲೊ, ನೆರಳನಿತರರ=ನೆರಳನು+ಇತರರ,
ಬಾಳಿಕೊಳುಗವರು=ಬಾಳಿಕೊಳ್ಳುವರವರು, ಬೀಳುಗಳರ‍್ಗದೆಂತೊ=ಬೀಳುಗಳು+ರ‍್ಗೆ(ಯಾರಿಗೆ)+ಎಂತೊ, ನೀನೇನರಿವೆ=ನೀನು+ಏನು+ಅರಿವೆ.

ವಾಚ್ಯಾರ್ಥ: ನಿನ್ನ ನೆರಳನ್ನು ಇತರರ ಮೇಲೆ ಬೀಳಿಸಬೇಡ. ಅವರು ತಮ್ಮ ತಮ್ಮ ಬೆಳಕಿನಲ್ಲಿ ಬಾಳಿಕೊಳ್ಳುವರು. ಮೇಲುಬೀಳುಗಳು ಯಾರಿಗೆ ಅದೆಂತು ಬರುತ್ತವೋ ಎಂಬುದನ್ನು ನೀನು ಎಂತು ತಿಳಿವೆ? ಗುರುತನವನ್ನು ತಾಳಬೇಡ.

ವಿವರಣೆ: ನಾನು ಪುಟ್ಟ ಬಾಲಕನಾಗಿದ್ದಾಗ ನನ್ನಜ್ಜ ನನ್ನನ್ನು ಕರೆದುಕೊಂಡು ಮರ‍್ಕೆಟ್ಟಿಗೆ ಹೋಗುತ್ತಿದ್ದ. ಆಗ ನನ್ನ ತಲೆಗೊಂದು ಟೊಪ್ಪಿಗೆ ಸಿಕ್ಕಿಸಿ, ನನ್ನ ಕೈ ಹಿಡಿದುಕೊಳ್ಳದೆ, “ನೋಡು, ನೀನು ನನ್ನ ನೆರಳಲ್ಲೇ ಬರಬೇಕು” ಎಂದು ಆಜ್ಞೆ ಮಾಡುತ್ತಿದ್ದ. ನನಗೆ ಅದೊಂದು ಆಟ. ಆತ ತಿರುಗಿದಾಗಲೆಲ್ಲ ತಿರುಗಿದ ನೆರಳಲ್ಲೇ ನಡೆದುಕೊಂಡು ಬರುತ್ತಿದ್ದೆ. ಎರಡು ಮೂರು ವರ್ಷಗಳು ಕಳೆದ ಮೇಲೆ ನನಗೆ ಆತನ ನೆರಳು ಸಾಕಾಗುತ್ತಿರಲಿಲ್ಲ. ನಾನು ಎತ್ತರವಾಗಿದ್ದೆ. ಅಜ್ಜನಿಗೆ ಹೇಳಿದೆ, “ಅಜ್ಜಾ, ನನಗೆ ನಿನ್ನ ನೆರಳು ಸಾಗುವುದಿಲ್ಲ”. ಅಜ್ಜ ನನ್ನ ತಲೆ ಸವರಿ ಹೇಳಿದ್ದು ನನಗಿಂದಿಗೂ ಜೀವನ ಪಾಠವಾಗಿದೆ.

“ನೋಡು ಪುಟ್ಟಾ, ನೀನು ಚಿಕ್ಕವನಿದ್ದಾಗ ಬೇರೆಯವರ ನೆರಳನ್ನು ಗಮನಿಸಿ ಅದರಲ್ಲೇ ನಡೆಯಬೇಕು. ದೊಡ್ಡವನಾದ ಮೇಲೆ ಬೇರೆಯವರ ನೆರಳಲ್ಲಿ ಎಂದೂ ಇರಬೇಡ. ನಿನ್ನ ನೆರಳನ್ನು ನೀನೇ ಸೃಷ್ಟಿಸಿಕೊಳ್ಳಬೇಕು”. ಎಂಥ ಮಾತು! ಸಣ್ಣವರಿದ್ದಾಗ ಬೇರೆಯವರ, ಹಿರಿಯರ ಜೀವನವನ್ನು ಗಮನಿಸಿ, ಅನುಸರಿಸಬೇಕು. ಆದರೆ ಅವರ ನೆರಳಲ್ಲೇ ಉಳಿದುಬಿಡಬಾರದು. ಅಷ್ಟೇ ಅಲ್ಲ ಮತ್ತೊಬ್ಬರ ಮೇಲೆ ನಮ್ಮ ನೆರಳನ್ನೂ ಹಾಕಬಾರದು. ನಮ್ಮ ನೆರಳನ್ನು ಹಾಕುವುದೆಂದರೆ ಮತ್ತೊಬ್ಬರ ಬಾಳನ್ನು ನಿರ್ದೇಶಿಸುವುದು, ನಿಯಂತ್ರಿಸುವುದು. ಜನರು ತಾವು ಬದುಕಿನಲ್ಲಿ ಕಂಡ ಸತ್ಯದ ಬೆಳಕಿನಲ್ಲಿ ತಮ್ಮ ತಮ್ಮ ಬದುಕನ್ನು ಸಾಗಿಸಿಕೊಳ್ಳುತ್ತಾರೆ. ನಮ್ಮ ಮಾರ್ಗದರ್ಶನವನ್ನು ಅವರಾಗಿಯೇ ಕೇಳಿದರೆ ತಿಳಿದದ್ದನ್ನು ನಿರ್ವಂಚನೆಯಿಂದ ಹೇಳಬೇಕು. ಆದರೆ ಅವರು ನಾವು ಹೇಳಿದಂತೆಯೇ ನಡೆಯಬೇಕೆಂಬ ಒತ್ತಾಯಬೇಡ. ಯಾಕೆಂದರೆ ಅವರ ಜೀವನದ ಏರು-ಬೀಳುಗಳು ಹೇಗೆ ಬರುತ್ತದೆಯೆಂದು ನಮಗೆ ತಿಳಿದಿಲ್ಲ, ನಾವು ನೀಡಿದ ಮಾರ್ಗದರ್ಶನದಿಂದ ಅವರಿಗೆ ಅನುಕೂಲವೂ ಆಗಬಹುದು ಅಥವಾ ತುಂಬ ತೊಂದರೆಯೂ ಆದೀತು. ಅದಕ್ಕೇ ಕಗ್ಗ ಹೇಳುತ್ತದೆ. ನಿನ್ನ ನೆರಳನ್ನು ಮತ್ತೊಬ್ಬರ ಮೇಲೆ ಹಾಕಬೇಡ. ನೀನು ಗುರುವಾಗಬೇಡ. ಅವರಿಗೆ ಅವರೇ ಗುರು. ಅವರ ಅರಿವೇ ಅವರ ಗುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT