ಶುಕ್ರವಾರ, ಸೆಪ್ಟೆಂಬರ್ 25, 2020
26 °C

ಬೆರಗಿನ ಬೆಳಕು | ಪುಣ್ಯದ ನಿಧಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ರಾಜಗೃಹದಲ್ಲಿ ಮಗಧರಾಜ ಆಳುತ್ತಿದ್ದಾಗ, ನಗರದ ಪೂರ್ವದಲ್ಲಿ ಮಗಧದ ಹೊಲಗಳಿದ್ದವು. ಅಲ್ಲಿ ಒಬ್ಬ ಬ್ರಾಹ್ಮಣ ಸಾವಿರ ಎಕರೆ ಜಮೀನನ್ನು ತೆಗೆದುಕೊಂಡು, ಐದುನೂರನ್ನು ತಾನೇ ಇಟ್ಟುಕೊಂಡು, ಉಳಿದ ಐದುನೂರು ಎಕರೆಯನ್ನು ಕೂಲಿಯ ಮೇಲೆ ನಡೆಸುವಂತೆ ಮತ್ತೊಬ್ಬನಿಗೆ ಕೊಟ್ಟುಬಿಟ್ಟಿದ್ದ. ಆತ ಅಲ್ಲಿಯೇ ಗುಡಿಸಲು ಹಾಕಿಕೊಂಡಿದ್ದ. ಹೊಲದಲ್ಲಿ ಬತ್ತವನ್ನು ಬಿತ್ತಿದ್ದ. ಕಾಳುಗಳು ರಸ ತುಂಬಿಕೊಳ್ಳುತ್ತಿದ್ದವು. ಅವನ ಹೊಲದ ಮಧ್ಯದಲ್ಲಿ ಒಂದು ಅರಳಿಮರವಿತ್ತು. ಅದರಲ್ಲಿ ಸಹಸ್ರಾರು ಗಿಳಿಗಳಿದ್ದವು. ಬೋಧಿಸತ್ವ ಈ ಗಿಳಿಗಳ ರಾಜನಾಗಿ ಹುಟ್ಟಿದ್ದ. ಅವನ ಹೆಸರು ಶುಕರಾಜ. ಅವನ ತಂದೆತಾಯಿಗಳಿಗೆ ವಯಸ್ಸಾಯಿತು. ಶುಕರಾಜ ಅವರನ್ನು ಗೂಡಿನಲ್ಲಿಯೇ ಬಿಟ್ಟು ತಾನೇ ದಿನಾಲು ಆಹಾರ ತಂದು ಕೊಡುತ್ತಿದ್ದ.

ಪ್ರತಿದಿನ ಹಿಂಡುಹಿಂಡಾಗಿ ಗಿಳಿಗಳು ಬತ್ತದ ಹೊಲದಲ್ಲಿ ಇಳಿದು ಹೊಟ್ಟೆ ತುಂಬ ಕಾಳು ತಿನ್ನುತ್ತಿದ್ದವು. ಆದರೆ ಶುಕರಾಜ ಮಾತ್ರ ಹೊಟ್ಟೆ ತುಂಬ ತಿಂದು, ಅತ್ಯಂತ ಒಳ್ಳೆಯ, ಹದವಾದ ಕಾಳುಗಳ ತೆನೆಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಹಾರುತ್ತಿತ್ತು. ಈ ಹಕ್ಕಿಗಳ ಹಾವಳಿಗಳನ್ನು ತಡೆಯಲಾರದೆ ರೈತ ಬ್ರಾಹ್ಮಣನ ಕಡೆಗೆ ಹೋಗಿ ಕಷ್ಟ ಹೇಳಿಕೊಂಡ, ‘ಸ್ವಾಮಿ, ಉಳಿದ ಗಿಳಿಗಳು ಹೊಟ್ಟೆತುಂಬ ತಿಂದರೆ ಒಂದು ದೊಡ್ಡ ಗಿಳಿ ಮಾತ್ರ ತಿಂದು, ಬಹಳಷ್ಟು ತೆನೆಗಳನ್ನು ತೆಗೆದುಕೊಂಡು ಹೋಗುತ್ತದೆ. ಏನು ಮಾಡಲಿ?’ ಬ್ರಾಹ್ಮಣ ಒಂದು ಅತ್ಯಂತ ತೆಳುವಾದ ಆದರೆ ಗಟ್ಟಿಯಾದ ಬಲೆಯನ್ನು ಕೊಟ್ಟು ಶುಕರಾಜನನ್ನು ಹಿಡಿದು ತಂದುಕೊಡಲು ಹೇಳಿದ. ಅದರಂತೆ, ರೈತ ಬಲೆಯನ್ನು ಹಾಸಿ ಸಿದ್ಧನಾಗಿ ಕುಳಿತ. ಶುಕರಾಜ ತನ್ನ ಪರಿವಾರದೊಡನೆ ಬಂದು ಬಲೆಯ ಮೇಲೆ ಕುಳಿತಿತು. ಅದಕ್ಕೆ ತಕ್ಷಣ ತಾನು ಬಲೆಯಲ್ಲಿ ಸಿಕ್ಕಿರುವುದರ ಅರಿವಾಯಿತು. ತನ್ನ ಸ್ನೇಹಿತರು ಹೊಟ್ಟೆ ತುಂಬ ತಿನ್ನುವುದನ್ನು ಮುಗಿಸುವವರೆಗೆ ಸುಮ್ಮನೆ ಇತ್ತು. ಅವುಗಳು ಹಾರಿದ ಮೇಲೆ ರೈತ ಬಲೆಯನ್ನು ಸೆಳೆದು ಶುಕರಾಜನ ಕಾಲುಗಳಿಗೆ ಪಟ್ಟಿ ಬಿಗಿದು ಬ್ರಾಹ್ಮಣನ ಕಡೆಗೆ ತೆಗೆದುಕೊಂಡು ಹೋದ.

ಬ್ರಾಹ್ಮಣ ಶುಕರಾಜನನ್ನು ಮುಂದೆ ಕೂಡ್ರಿಸಿಕೊಂಡು ಕೇಳಿದ, ‘ನೀನು ನಾನು ಕಂಡಂತಹ ಅತ್ಯಂತ ಆಸೆಬುರುಕ ಗಿಳಿ. ನಮ್ಮ ರೈತ ಹೇಳುವಂತೆ, ನೀನೂ ಹೊಟ್ಟೆತುಂಬ ಕಾಳುಗಳನ್ನು ತಿನ್ನುತ್ತೀ ಮತ್ತು ನಂತರ ಬಹಳಷ್ಟು ತೆನೆಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಹೋಗುತ್ತೀಯಂತೆ? ಅವುಗಳನ್ನು ಯಾವ ಕೋಠಿಯಲ್ಲಿ ತುಂಬುತ್ತೀ?’ಆಗ ಶುಕರಾಜ ನಿಧಾನವಾಗಿ ಹೇಳಿತು, ‘ನನ್ನ ಬಳಿ ಯಾವ ಕೋಠಿಯೂ ಇಲ್ಲ. ಆದರೆ ಪ್ರತಿದಿನ ನಾನು ಋಣ ಹೊರಿಸುತ್ತೇನೆ, ಋಣ ತೀರಿಸುತ್ತೇನೆ ಮತ್ತು ಒಂದು ನಿಧಿಯನ್ನು ಸ್ಥಾಪಿಸುತ್ತಿದ್ದೇನೆ. ಅದಕ್ಕಾಗಿ ಕಾಳುಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಹೋಗುತ್ತೇನೆ’. ಆಶ್ಚರ್ಯದಿಂದ ಬ್ರಾಹ್ಮಣ ಕೇಳಿದ, ‘ಎರಡನ್ನು ನೀನೇ ಹೇಳುತ್ತೀಯಲ್ಲ, ಋಣಮುಕ್ತನಾಗುವುದು ಮತ್ತು ಋಣಿಯಾಗುವುದು ಎಂದು. ಎರಡೂ ಹೇಗೆ ಸಾಧ್ಯ? ಮತ್ತೆ ನಿಧಿ ಯಾವುದು?’. ಶುಕರಾಜ ಹೇಳಿದ, ‘ಬ್ರಾಹ್ಮಣ, ನನ್ನ ಗೂಡಿನಲ್ಲಿ ರೆಕ್ಕೆ ಬಲಿಯದ, ದುರ್ಬಲವಾದ ಮರಿಗಳಿವೆ. ಅವುಗಳಿಗೆ ಕಾಳು ಕೊಟ್ಟು ಅವುಗಳ ಮೇಲೆ ಋಣಭಾರವನ್ನು ಹೊರಿಸುತ್ತೇನೆ, ತನ್ನ ತಂದೆ-ತಾಯಿಯರು ವೃದ್ಧರಾಗಿದ್ದಾರೆ. ಅವರಿಗೆ ಕಾಳುಕೊಟ್ಟು ನನ್ನ ಋಣವನ್ನು ತೀರಿಸುತ್ತೇನೆ. ಮರದಲ್ಲಿ ಅನೇಕ ಅಶಕ್ತ ಹಕ್ಕಿಗಳಿವೆ. ಅವುಗಳಿಗೆ ಕಾಳು ನೀಡಿ ಪುಣ್ಯದ ನಿಧಿಯನ್ನು ಸ್ಥಾಪಿಸುತ್ತಿದ್ದೇನೆ’. ಬ್ರಾಹ್ಮಣ ಸಂತೋಷದಿಂದ ಶುಕರಾಜನನ್ನು ಹಾರಿಬಿಟ್ಟ.

ನಾವೂ ಹೀಗೆ ಸದಾಕಾಲ ಋಣಮುಕ್ತರಾಗುತ್ತ, ಋಣಿಗಳನ್ನಾಗಿಸುತ್ತ, ಪುಣ್ಯದ ನಿಧಿಯನ್ನು ಸ್ಥಾಪಿಸುತ್ತಲೇ ಸಾಗಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.