ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬಾಳ ನಿರ್ಮಾತೃಗಳು

Last Updated 20 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? |
ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ||
ಅನ್ನವಿಡುವರು, ತಿಳಿವನೀವರ್, ಒಡನಾಡುವರು |
ನಿನ್ನ ಬಾಳ್ಗಿವರಿರರೆ? – ಮಂಕುತಿಮ್ಮ || 336 ||

ಪದ-ಅರ್ಥ: ಕೈಮಾಳ್ಕೆಯೇಂ=ಕೈಯಿಂದ ಆದದ್ದೇ, ಅನ್ಯಶಕ್ತಿಗಳೆನಿತೊ=ಅನ್ಯಶಕ್ತಿಗಳು+ಎನಿತೊ
(ಎಷ್ಟೋ), ತಿಳಿವನೀವರ್=ತಿಳಿವು ನೀಡುವವರು, ಬಾಳ್ಗಿವರಿರರೆ=ಬಾಳ್ಗೆ(ಬಾಳಿಗೆ)+ಇವರು+ಇರರೆ(ಇರಲಾರರೆ).

ವಾಚ್ಯಾರ್ಥ: ನಿನ್ನ ಬದುಕೆಲ್ಲ ಕೇವಲ ನಿನ್ನ ಕೈಯಿಂದಲೇ ಆದದ್ದೇ? ಅದೆಷ್ಟೋ ಹೊರಗಿನ ಶಕ್ತಿಗಳು ಅಲ್ಲಿ ಸೇರಿವೆ. ನಿನಗೆ ಅನ್ನ ನೀಡುವವರು, ತಿಳಿವನ್ನು ಕೊಡುವವರು, ಜೊತೆಗೆ ಕೂಡಿ ಆಡುವವರು ಇವರೆಲ್ಲ ನಿನ್ನ ಬಾಳಿನ ವೃದ್ಧಿಗೆ ಇದ್ದಿರಲಾರರೆ?

ವಿವರಣೆ: ತಾವೋ ಪರಂಪರೆಯ ಮೂಲ ಗುರು ಲಾ-ಓ-ತ್ಸೆ ಮನೆಯಲ್ಲಿದ್ದ. ಅವನ ಶಿಷ್ಯನೊಬ್ಬ ಅವನೊಂದಿಗೆ ಚರ್ಚಿಸಲು ಬಂದ. ಆಗ ಲಾ-ಓ-ತ್ಸೆ ಶಿಷ್ಯನಿಗೆ ಹೇಳಿದ, ‘ಮನೆಯ ಮುಂದೆ ಏನಿದೆ, ನೋಡಿ ಬಂದು ಹೇಳು’. ಶಿಷ್ಯ ಹೊರಗೆ ಹೋಗಿ ನೋಡಿ ಬಂದು ಹೇಳಿದ, ‘ಗುರುಗಳೆ, ಮನೆಯ ಮುಂದೆ ಒಂದು ಕುದುರೆ ನಿಂತಿದೆ’. ಗುರು ಹೇಳಿದ ‘ಸರಿಯಾಗಿ ನೋಡಿ ಬಾ’. ಶಿಷ್ಯ ಹೊರಗೆ ನಿಂತು, ಸುತ್ತಲೆಲ್ಲ ಎಚ್ಚರದಿಂದ ಗಮನಿಸಿ ಮರಳಿ ಬಂದು, ‘ಗುರುಗಳೇ, ಕುದುರೆಯನ್ನು ಬಿಟ್ಟು ಹೊರಗೆ ಏನೂ ಇಲ್ಲ’ ಮತ್ತೆ ಗುರು ಶಿಷ್ಯನನ್ನು ಇದಕ್ಕಾಗಿಯೇ ಮತ್ತೆರಡು ಬಾರಿ ಕಳುಹಿಸಿದ. ಶಿಷ್ಯನಿಗೆ ಬೇಸರವಾಯಿತು. ಮತ್ತೆ ಬಂದು, ‘ಗುರುಗಳೆ, ನೀವು ಏಕೆ ಹೀಗೆ ಹೇಳುತ್ತಿದ್ದೀರೋ ತಿಳಿಯದು. ಮನೆಯ ಮುಂದೆ ಕುದುರೆಯಲ್ಲದೆ ಬೇರೇನೂ ಇಲ್ಲ’ ಎಂದ. ಆಗ ಗುರು, ‘ಆ ಕುದುರೆಯನ್ನು ತೋರಿದ ಬೆಳಕು ಕಾಣಲಿಲ್ಲವೆ? ಬೆಳಕಿಲ್ಲದಿದ್ದರೆ ಕುದುರೆ ನಿನಗೆ ಕಾಣುತ್ತಿತ್ತೇ? ಎಲ್ಲೆಡೆಗೆ ಪಸರಿಸಿರುವ ಬೆಳಕನ್ನೇ ಕಾಣದ ನಿನಗೆ ಮಹಾ ಬೆಳಕಾದ ತಾವೋ ಹೇಗೆ ಕಂಡೀತು? ಕುದುರೆಯ ಅಸ್ತಿತ್ವದ ದರ್ಶನಕ್ಕೆ ಮೂಲ ಕಾರಣ ಬೆಳಕು’ ಎಂದ. ಅದರಂತೆ ನಮ್ಮ ಬದುಕಿನ ಸಾಧನೆಗಳಿಗೆ ಬೆಳಕಾಗಿ ಅನೇಕರು ನಿಂತಿದ್ದಾರೆ. ನಾವು ಯಾರೂ ಸ್ವಯಂಭೂ ಅಲ್ಲ. ಹಾಗೆಂದರೆ ಯಾರೂ ನಿರ್ಮಾಣ ಮಾಡದೆ, ತನ್ನಷ್ಟಕ್ಕೆ ತಾನೇ ಸೃಷ್ಟಿಯಾದವರಲ್ಲ. ನಮ್ಮ ಹುಟ್ಟಿಗೆ ತಂದೆ-ತಾಯಿ ಕಾರಣರು. ಅಂದರೆ ನಮ್ಮ ಜನ್ಮಕ್ಕೆ ನಾವು ಕಾರಣರಲ್ಲ. ನನ್ನ ಹೆಸರಿಟ್ಟದ್ದು ನನ್ನನ್ನು ಕೇಳಿಯಲ್ಲ. ನಾನು ಕಲಿತ ಶಾಲೆಯೂ ನನ್ನ ತೀರ್ಮಾನವಾಗಿರಲಿಲ್ಲ. ಕಲಿತ ವಿಷಯ ಶಿಕ್ಷಕರು ಕೃಪೆಯಿಂದ ನೀಡಿದ ಭಿಕ್ಷೆ. ನಾನು ತಿಳಿದುಕೊಂಡೆ ಎಂದು ಗರ್ವಿಸುವ ಜ್ಞಾನವೂ ನಾನು ಸೃಷ್ಟಿಸಿದ್ದಲ್ಲ. ಯಾರೋ ನಿರ್ಮಾಣ ಮಾಡಿದ್ದನ್ನು ಕೊಂಚ ಬದಲಾಯಿಸಿ ನನ್ನದನ್ನಾಗಿಸಿಕೊಂಡಿದ್ದೇನೆ. ನಾವು ಉಣ್ಣುವ ಅನ್ನ ನನ್ನ ನಿರ್ಮಾಣವಲ್ಲ. ನನ್ನ ದೇಹದ ಅಂಗಾಂಗಗಳಿಗೆ ನಾನು ಸಹಾಯ ಮಾಡಬಹುದಷ್ಟೇ, ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಾರೆ. ಒಂದು ದಿನ ಸತ್ತಾಗ, ಈ ದೇಹಕ್ಕೆ ಏನು ಮಾಡಬೇಕೆನ್ನುವುದನ್ನು ತೀರ್ಮಾನ ಮಾಡುವವನೂ ನಾನಲ್ಲ. ಹಾಗಾದರೆ ನಾನು ಗರ್ವಪಡುವಂಥದ್ದು, ಕೇವಲ ನಾನೇ ಮಾಡಿದ್ದೇನೆ ಎನ್ನುವಂತದ್ದು ಯಾವುದು?

ಕಗ್ಗ ಅದನ್ನು ನೆನೆಪಿಸುತ್ತದೆ. ನನ್ನ ಜೀವನ ಕೇವಲ ನನ್ನ ಶಕ್ತಿಯಲ್ಲ. ಅನೇಕ ಶಕ್ತಿಗಳು ಸೇರಿ ನನ್ನನ್ನು ‘ಈ ವ್ಯಕ್ತಿ’ಯನ್ನಾಗಿ ಮಾಡಿವೆ. ನನಗೆ ಅನ್ನ ಕೊಟ್ಟವರು, ತಿಳಿವು ನೀಡಿ ಬೆಳೆಸಿದವರು, ಜೊತೆಯಾಗಿ ಬೆಳೆದು ಪಾಠ ಕಲಿಸಿದವರು, ಇವರೇ ನನ್ನ ಬಾಳಿಗೆ ನೆರವಾದವರು. ನಾನು ಹಲವರ ಕೃಪೆಯ ಋಣದ ಚಿಗುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT