ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಯತ್ನದೊಂದಿಗೆ ದೈವಕೃಪೆ

Last Updated 25 ಅಕ್ಟೋಬರ್ 2021, 19:35 IST
ಅಕ್ಷರ ಗಾತ್ರ

ಗಾಳಿಯನು ಗುದ್ದಿದರೆ ಮೈ ನೋಯ್ಪುದೊಂದೆ ಫಲ|
ಮೂಲಸತ್ತ್ವವ ಮರೆತ ಸಾಹಸಗಳಂತು||
ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ|
ತಾಳಿ ಬಾಳಾವರೆಗೆ – ಮಂಕುತಿಮ್ಮ ||483||

ಪದ-ಅರ್ಥ: ನೋಯ್ಪುದೊಂದೆ= ನೋಯ್ಪುದು (ನೋಯುವುದು)+ ಒಂದೆ, ಮೇಳವಿಸೆ= ಸೇರಿದಾಗ, ಬಾಳಾವರೆಗೆ= ಬಾಳು ಆ ವರೆಗೆ

ವಾಚ್ಯಾರ್ಥ: ಗಾಳಿಯನ್ನು ಗುದ್ದಿದರೆ ಮೈ ನೋಯುವುದೊಂದೆ ಫಲ. ತಮ್ಮ ಮೂಲಸತ್ವವನ್ನು ಮರೆತವರ ಸಾಹಸಗಳ ಫಲ ಇದೇ. ಪೌರುಷಕ್ಕೆ ದೈವಕೃಪೆ ಸೇರಿದಾಗ ಫಲ ದೊರೆಯುತ್ತದೆ. ಅಲ್ಲಿಯವರೆಗೆ ತಾಳಿಕೊಂಡು ಬಾಳು.

ವಿವರಣೆ: ಗಾಳಿಯನ್ನು ಗುದ್ದುವುದು ಎಂಬುದೊಂದು ವ್ಯರ್ಥಪ್ರಯತ್ನವನ್ನು ವರ್ಣಿಸುವ ರೀತಿ. ಗಾಳಿಯನ್ನು ಗುದ್ದಿದರೆ ಏನಾಗುತ್ತದೆ? ಕೇವಲ ಮೈ ಕೈ ನೋವು ಉಂಟಾಗುತ್ತದೆ. ಅದರ ಫಲವೇನೂ ಇಲ್ಲ. ಬದುಕಿನಲ್ಲಿ ಸಾರ್ಥಕತೆಗೆಂದು ಅನೇಕ ಸಾಹಸಗಳನ್ನು ಮಾಡುತ್ತೇವೆ. ಆದರೆ ಕೆಲವು ಮಾತ್ರ ಸಫಲವಾಗುತ್ತವೆ. ನಮ್ಮ ಮೂಲಸತ್ವವನ್ನು ಮರೆತು ಮಾಡಿದ ಪ್ರಯತ್ನಗಳು ಸಾಮಾನ್ಯವಾಗಿ ವಿಫಲವಾಗುತ್ತವೆ. ಯಾವುದು ನಮಗೆ ಜೈವಿಕವಾಗಿಯೋ, ಶಿಕ್ಷಣದ ಮೂಲಕವೋ, ಪರಿಸರದಿಂದಲೋ ದೊರಕಿ ನಮ್ಮನ್ನು ದಕ್ಷರನ್ನಾಗಿ, ಸಮರ್ಥರನ್ನಾಗಿ ಮಾಡಿದೆಯೋ, ಯಾವುದನ್ನು ಮಾಡುವುದರಲ್ಲಿ ಪರಿಣಿತಿ ಇದೆಯೋ ಅದು ಮೂಲಸತ್ವ. ಅದರಲ್ಲಿ ಮಾಡಿದ ಕೆಲಸ ಸಾಮಾನ್ಯವಾಗಿ ಯಶಸ್ಸು ನೀಡುತ್ತದೆ. ನನಗೆ ಪರಿಚಯದ ಶಿಕ್ಷಕರೊಬ್ಬರಿಗೆ ಯಾರೋ, ಒಂದು ಕಾರು ಕೊಂಡು ಟ್ಯಾಕ್ಸಿಯನ್ನಾಗಿ ಮಾಡಿ ಬಾಡಿಗೆ ಕೊಟ್ಟರೆ ತುಂಬ ಹಣ ಬರುತ್ತದೆ, ಎಂದು ತಲೆ ತುಂಬಿದರು. ಪಾಪ! ಮೇಷ್ಟ್ರರಿಗೆ ಕಾರಿನ ವ್ಯವಹಾರ ಗೊತ್ತಿಲ್ಲ, ಕಾರು ಓಡಿಸಲೂ ಬರುವುದಿಲ್ಲ. ಹೇಳಿದವರ ಮಾತು ನಂಬಿ ಬಾಡಿಗೆಗೆ ಕೊಟ್ಟು ಹಣ, ಮನಃಶಾಂತಿ ಎರಡನ್ನೂ ಕಳೆದುಕೊಂಡರು. ಯಾಕೆಂದರೆ ಆ ವ್ಯವಹಾರ ಅವರ ಮೂಲಸತ್ವಕ್ಕೆ ಹೊಂದಿದ್ದಲ್ಲ. ಕಾರಿನ ವ್ಯವಹಾರದ ಒಳಹೊರಗನ್ನು ಚೆನ್ನಾಗಿ ತಿಳಿದುಕೊಂಡು ಮಾಡಿದ್ದರೆ ತೊಂದರೆಯಾಗುತ್ತಿರಲಿಲ್ಲವೇನೋ.

ಇನ್ನೊಂದು ಮುಖ್ಯ ವಿಷಯವೆಂದರೆ, ನಮ್ಮ ಪೌರುಷದ ಪ್ರಯತ್ನಕ್ಕೆ ದೈವಬಲವಿದ್ದರೆ ಮಾತ್ರ ಯಶಸ್ಸು ದೊರಕುವುದು. ಸಾಹಿತ್ಯದಲ್ಲಿ, ವಿಜ್ಞಾನದಲ್ಲಿ, ಆಟದಲ್ಲಿ, ಸಮಾಜಸೇವೆಯಲ್ಲಿ ದೊಡ್ಡ ಪ್ರಯತ್ನ ಮಾಡಿದವರು ಅನೇಕರಿದ್ದಾರೆ. ಆದರೆ ಯಶಸ್ಸು, ಖ್ಯಾತಿ ದೊರಕಿದ್ದು ಕೆಲವರಿಗೆ ಮಾತ್ರ. ಸುನೀಲ್‌ ಗಾವಸ್ಕರ್‌ ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ. ಅವರು ನನಗೆ ಆತ್ಮೀಯರೂ ಹೌದು. ಒಂದು ಬಾರಿ ನಾವು ಮಾತನಾಡುತ್ತ ಕುಳಿತಾಗ ಹಿರಿಯರೊಬ್ಬರು ಬಂದು, ‘ಗಾವಸ್ಕರ್‌, ನಿಮ್ಮ ಸಾಧನೆ ಅದ್ಭುತವಾದದ್ದು. ನೀವು ಅತ್ಯಂತ ಶ್ರೇಷ್ಠ ಆಟಗಾರ’ ಎಂದರು. ಆಗ ಗಾವಸ್ಕರ್‌, ‘ಹಾಗೆ ಹೇಳಬೇಡಿ. ನನಗಿಂತ ದೊಡ್ಡ ಆಟಗಾರರಿದ್ದರು. ಆದರೆ ದೈವಕೃಪೆ ನನಗಿತ್ತು. ಆದ್ದರಿಂದ ಈ ಮರ್ಯಾದೆ ಬಂದಿತು’ ಎಂದು ಹೇಳಿ ಒಂದು ಘಟನೆಯನ್ನು ವಿವರಿಸಿದರು. ಅವರು ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‍ಗೆ ಹೋದಾಗ ಮೊದಲ ಟೆಸ್ಟ್‌ನಲ್ಲಿ ಬೇರೊಬ್ಬರನ್ನು ಆರಂಭಿಕ ಆಟಗಾರರನ್ನಾಗಿ ಆಡಿಸಿದರು. ಆತ ಪ್ರತಿಭಾಶಾಲಿ. ಆದರೆ ಏಳೆಂಟು ರನ್ ಮಾಡಿದಾಗ ಚೆಂಡು ಬ್ಯಾಟಿಗೆ ಸವರಿ ಸ್ಲಿಪ್ ಕಡೆಗೆ ಹೋದಾಗ ಗ್ಯಾರಿ ಸೋಬರ್ಸ ತಮಗೆ ಸುಲಭವಲ್ಲದ ಬಲಗಡೆಗೆ ಹಾರಿ, ನೆಲದಿಂದ ಒಂದೇ ಇಂಚು ಅಂತರದಲ್ಲಿ ಕ್ಯಾಚ್ ಹಿಡಿದರು. ಮರುಟೆಸ್ಟ್‌ನಲ್ಲಿ ಗಾವಸ್ಕರ್‌ರಿಗೆ ಸ್ಥಾನ ದಕ್ಕಿತು. ಅವರೂ ಆರು ರನ್ ಮಾಡಿದಾಗ ಚೆಂಡು ಇವರ ಬ್ಯಾಟಿನಿಂದ ಎಗರಿ ನೇರವಾಗಿ ಗ್ಯಾರಿ ಸೋಬರ್ಸರಿಗೆ ಅತ್ಯಂತ ಅನುಕೂಲವಾದ ಎದೆ ಎತ್ತರಕ್ಕೆ ಹೋಯಿತು. ಆದರೆ ಕೈಯಿಂದ ಚೆಂಡು ಹಾರಿ ಕೆಳಗೆ ಬಿತ್ತು. ಮರುಟೆಸ್ಟಿನಲ್ಲೂ ಒಂದು ಸುಲಭದ ಕ್ಯಾಚ್ ತಪ್ಪಿತು. ‘ಹಾಗಾಗದಿದ್ದರೆ ನಾನು ಯಶಸ್ಸು ಪಡೆಯುತ್ತಿರಲಿಲ್ಲ. ಆ ಅವಕಾಶ ಭಗವಂತನ ಕೃಪೆ’ ಎಂದರು. ಆ ಕೃಪೆಗೆ ಕಾಯ್ದು, ಬರುವವರೆಗೆ ತಾಳ್ಮೆಯಿಂದ ಕೆಲಸ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT