ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮತ್ತೊಬ್ಬರಿಗೆ ಶ್ರಮದ ಲಾಭ

Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು |
ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ||
ಹುತ್ತನಾಗುವುದು ವಿಷಸರ್ಪಕ್ಕೆ; ಮಾನವನ |
ಯತ್ನಗಳ ಕಥೆಯಿಷ್ಟೆ- ಮಂಕುತಿಮ್ಮ || 302 ||

ಪದ-ಅರ್ಥ: ಗೆದ್ದಲಿರುವೆಗಳು=ಗೆದ್ದಲು+ಇರುವೆಗಳು, ಮೆತ್ತುತೆಡೆಬಿಡದೆ=ಮೆತ್ತುತ+ಎಡೆಬಿಡದೆ, ದುಡಿದಾಗಿಸಿದ=ದುಡಿದು+ಆಗಿಸಿದ

ವಾಚ್ಯಾರ್ಥ: ಕಣಕಣವಾಗಿ ಮಣ್ಣನ್ನು ಹೊತ್ತು ಗೆದ್ದಲು, ಇರುವೆಗಳು ಸತತವಾಗಿ ದುಡಿದು ನಿರ್ಮಿಸಿದ ಗೂಡು, ವಿಷಸರ್ಪಕ್ಕೆ ಹುತ್ತವಾಗುತ್ತದೆ. ಮನುಷ್ಯನ ಪ್ರಯತ್ನಗಳ ಕಥೆಯೂ ಇಷ್ಟೇ.

ವಿವರಣೆ: ಸುಮತಿ ತುಂಬ ಪ್ರತಿಭಾಶಾಲಿಯಾದ ಆಂಗ್ಲಭಾಷಾ ಅಧ್ಯಾಪಕಿ. ಅವಳಿಗೆ ಕಲಿಸುವುದೊಂದು ಅತ್ಯಂತ ಪ್ರಿಯವಾದ ಕಾರ್ಯ. ಅದರಲ್ಲೂ ತಾನು ಕಲಿಸುವ ಹಳ್ಳಿಯ ಮಕ್ಕಳಿಗೆ ವ್ಯಾಕರಣವನ್ನು ಚೆನ್ನಾಗಿ ಕಲಿಸುವ ಆಸೆ. ಆಕೆ ಮಕ್ಕಳಿಗೆ ಹಂತ ಹಂತವಾಗಿ ವ್ಯಾಕರಣವನ್ನು ಕಲಿಸುವ ರೀತಿಯನ್ನು ತಿಳಿದುಕೊಂಡು, ಒಂದೆರಡು ವರ್ಷ ಅದನ್ನು ಪಾಠ ಮಾಡಿ ಪರೀಕ್ಷಿಸಿ, ಖಾತ್ರಿ ಮಾಡಿಕೊಂಡಳು. ಇಂಥ ಮಕ್ಕಳು ಎಲ್ಲೆಲ್ಲಿಯೂ ಇದ್ದಾರಲ್ಲವೆ? ಅವರಿಗೆಲ್ಲ ಅನುಕೂಲವಾಗಲಿ ಎಂದು ಹಗಲು-ರಾತ್ರಿ ದುಡಿದು, ಬರೆದು, ತಿದ್ದಿ, ಮತ್ತೆ ಪರಿಷ್ಕರಿಸಿ ಒಂದು ರೂಪಕ್ಕೆ ತಂದಳು. ಅದನ್ನು ಪುಸ್ತಕವನ್ನಾಗಿ ಪ್ರಕಟಿಸಿದರೆ ಲಕ್ಷಾಂತರ ಮಕ್ಕಳಿಗೆ ಪ್ರಯೋಜನವಾಗುತ್ತದೆ ಎಂದು ತೀರ್ಮಾನಿಸಿದಳು. ಅದನ್ನು ಅಚ್ಚಿಗೆ ಕಳುಹಿಸುವ ಮೊದಲು ತಮ್ಮ ಕಾಲೇಜಿನ ಪ್ರಿನ್ಸಿಪಾಲರಿಗೆ ಹಸ್ತಪ್ರತಿಯನ್ನು ಕೊಟ್ಟು, ಅದನ್ನೊಂದು ಬಾರಿ ನೋಡಿ, ಸಲಹೆ ಕೊಡಲು ಕೇಳಿಕೊಂಡಳು.

ಎರಡು ವಾರಗಳಾದವು, ಎರಡು ವರ್ಷಗಳಾದವು, ಎಷ್ಟು ಬಾರಿ ಕೇಳಿದರೂ ಪ್ರಿನ್ಸಿಪಾಲರು ಹಸ್ತಪ್ರತಿಯನ್ನು ಮರಳಿಸಲಿಲ್ಲ, ಸೂಚನೆಗಳನ್ನು ಕೊಡಲಿಲ್ಲ. ಪ್ರಿನ್ಸಿಪಾಲರು ನಿವೃತ್ತರಾದರು. ಆಕೆ ಗೋಗರೆದು ಕೇಳಿದರೂ, ‘ಹಸ್ತಪ್ರತಿ ಎಲ್ಲಿ ಇಟ್ಟಿದ್ದೇನೋ ಸಿಗುತ್ತಿಲ್ಲ. ಈಗ ಹೇಗೂ ನಿವೃತ್ತಿ ಆಯಿತಲ್ಲ, ಒಂದು ವಾರದಲ್ಲಿ ಹುಡುಕಿ ಕೊಡುತ್ತೇನೆ’ ಎಂದವರು ಮತ್ತೆ ಕೈಗೆ ಸಿಗಲಿಲ್ಲ. ಒಂದು ದಿನ ಯಾವುದೋ ಪುಸ್ತಕ ಕೊಳ್ಳಲು ನಗರದ ಅತ್ಯಂತ ದೊಡ್ಡ ಪುಸ್ತಕದ ಅಂಗಡಿಗೆ ಹೋದಾಗ ಎದುರಿಗೆ ಮುಖಕ್ಕೆ ರಾಚುವಂತೆ ಪುಸ್ತಕ ಕುಳಿತಿದೆ, ಈ ಪುಸ್ತಕ, ಪ್ರಿನ್ಸಿಪಾಲರ ಹೆಸರಿನೊಂದಿಗೆ! ಅವಳು ವರ್ಷಗಟ್ಟಲೇ ಹಾಕಿದ ಪರಿಶ್ರಮ ಅನಾಯಾಸವಾಗಿ ಪ್ರಿನ್ಸಿಪಾಲರ ಹೆಗಲೇರಿದೆ.

ಇದು ಕೇವಲ ಒಂದು ಉದಾಹರಣೆ. ಇಂತಹ ಹತ್ತು ನಮ್ಮ ನಮ್ಮ ಜೀವನದಲ್ಲಿಯೇ ನಡೆದಿವೆ. ಯಾವುದೋ ವಿಶೇಷ ಸಂಶೋಧನೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡವರಿದ್ದಾರೆ, ದಶಕಗಳ ಪರಿಶ್ರಮದಿಂದ ಕಟ್ಟಿದ ಸಂಸ್ಥೆಯಲ್ಲಿ ಬುದ್ಧಿವಂತ (?) ಕೆಲವರು ಒಳಸೇರಿಕೊಂಡು, ದುಡಿದವರನ್ನು ಹೊರಗೆ ಹಾಕಿ, ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡವರಿದ್ದಾರೆ.

ಇದನ್ನು ಈ ಕಗ್ಗ ಹೇಳುತ್ತದೆ. ಗೆದ್ದಲುಗಳು, ಇರುವೆಗಳು ಹಗಲುರಾತ್ರಿ ದುಡಿದು, ಒಂದೊಂದೇ ಮಣ್ಣಿನ ಕಣವನ್ನು ಹೊತ್ತು ತಂದು ತನ್ನ ಎಂಜಲಿನಲ್ಲಿ ನೆನೆಸಿ, ನಾದಿ, ಒಂದರ ಮೇಲೊಂದರಂತೆ ಇರಿಸುತ್ತ ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡುತ್ತವೆ. ಮನೆ ಮುಗಿಸಿ, ಒಳಸೇರಿದ ಕೆಲವೇ ದಿನಗಳಲ್ಲಿ ವಿಷಸರ್ಪವೊಂದು ಅದರಲ್ಲಿ ಸೇರಿಕೊಂಡು ವಾಸಿಸುವುದು ಮಾತ್ರವಲ್ಲ, ಆ ಶ್ರಮಿಕ ಪ್ರಾಣಿಗಳನ್ನೆಲ್ಲ ತಿಂದುಬಿಡುತ್ತದೆ. ಯಾರದೋ ಶ್ರಮ, ಯಾರಿಗೋ ಲಾಭ. ಎಷ್ಟೋ ಮನುಷ್ಯ ಪ್ರಯತ್ನಗಳು ಹೀಗೆಯೇ ಅನ್ಯರ ಪಾಲಾಗುತ್ತವೆ. ನಾವು ಮಾಡಿದ ಕೆಲಸಗಳನ್ನು ಭದ್ರವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT