ಸೋಮವಾರ, ಜನವರಿ 24, 2022
18 °C

ಬೆರಗಿನ ಬೆಳಕು: ದೈವೇಚ್ಛೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಆವ ಋಣಗೋಸುಗವೊ, ಆರ ಹಿತಕೋಸುಗವೊ

ಆವಾವ ಕಾರಣಕೊ, ಆವ ಯೋಜನೆಗೊ ||

ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ?

ದೈವಕುರುಡೆನ್ನದಿರು – ಮಂಕುತಿಮ್ಮ || 512 ||

ಪದ-ಅರ್ಥ: ಋಣಗೋಸುಗವೊ=ಋಣಕ್ಕಾಗಿಯೋ, ಕುರುಡೆನ್ನದಿರು=ಕುರುಡು+ಎನ್ನದಿರು

ವಾಚ್ಯಾರ್ಥ: ಯಾವ ಋಣಸಂದಾಯಕ್ಕೊ, ಯಾರ ಹಿತಕಾಗಿಯೊ, ಯಾವುದೋ ಕಾರಣಕ್ಕೊ, ಯಾವುದೋ ಯೋಜನೆಗೊ, ನೀನು ನೋವು ಪಡುವುದು ದೈವೇಚ್ಛೆಯಾಗಿರಬಹುದೆ? ದೈವವನ್ನು ಕುರುಡು ಎನ್ನಬೇಡ.

ವಿವರಣೆ: ಹದಿನಾರರ ಹುಡುಗಿ ಕಿಟಕಿಯಿಂದಾಚೆ ನೋಡುತ್ತಿದ್ದಳು. ಹೊರಗಡೆ ತುಂಬ ಗಲಾಟೆಯಾಗುತ್ತಿದೆ. ಜನ ಅಲ್ಲಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಪೊಲೀಸರ ದಂಡೇ ನೆರೆದಿದೆ. ಆಗ ಆಕೆಗೆ ಒಬ್ಬ ಮುದುಕಿ ರಸ್ತೆ ದಾಟಿ ಹೋಗಲು ಒದ್ದಾಡುತ್ತಿರುವುದು ಕಂಡಿತು. ಆಕೆಗೆ ಸಹಾಯಮಾಡಲು ಮನೆಯಿಂದ ಹೊರಗೆ ಬಂದು, ಅಜ್ಜಿಯ ಕೈಹಿಡಿದು ರಸ್ತೆಯಾಚೆಗೆ ಬಿಟ್ಟು ಮರಳಿ ಬರುವಾಗ ಪೋಲೀಸರು ಹಾರಿಸಿದ ಗುಂಡು ಆಕೆಗೆ ತಗುಲಿ ತಕ್ಷಣವೇ ಸತ್ತು ಹೋದಳು.

ಮೂವತ್ತೈದರ ತರುಣ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಂಬ ದೊಡ್ಡ ಹೆಸರು ಮಾಡಿದ್ದ. ಹಳ್ಳಿಯಲ್ಲಿ ಕಲಿತು ಮುಂದೆ ಬಂದ ಇವನ ಬಗ್ಗೆ ಹಳ್ಳಿಯಲ್ಲಿ ಎಲ್ಲರಿಗೂ ಹೆಮ್ಮೆ. ಒಂದು ದಿನ ಹಳ್ಳಿಯ ಅನಾಥಾಶ್ರಮದ ಮಕ್ಕಳಿಗೆ ಒಂದು ಪ್ರೇರಣಾದಾಯಿ ಉಪನ್ಯಾಸ ಕೊಡುವಂತೆ ಒಪ್ಪಿಸಿ, ಊರವರು ಕರೆದುಕೊಂಡು ಹೋದರು. ತರುಣ ಸಂತೋಷದಿಂದ ಅವರೊಡನೆ ಬೆರೆತ. ಅಲ್ಲಿ ಯಾವುದೋ ಹುಡುಗನಿಗೋ, ಮೇಲ್ವಿಚಾರಕರಿಗೋ ಕೋವಿಡ್ ಬಂದಿರಬೇಕು. ಅದು ಇವನನ್ನು ಅಮರಿಕೊಂಡಿತು. ಈತ ಅದನ್ನು ಮೊದಲು ಅಲಕ್ಷಿಸಿ, ನಂತರ ಉಲ್ಬಣವಾದಾಗ ಆಸ್ಪತ್ರೆ ಸೇರಿದ. ಮೂವತ್ತು ದಿನಗಳ ಕಾಲ ತೀವ್ರನಿಗಾ ಘಟಕದಲ್ಲಿ ಹೋರಾಡಿ ಕೊನೆಗೆ ಸಾವಿಗೆ ಶರಣಾದ. ಒಬ್ಬ ಕಷ್ಟಪಟ್ಟು ಬದುಕಿನುದ್ದಕ್ಕೂ ಕೂಡಿಟ್ಟಿದ್ದ ಹಣದಿಂದ ಪುಟ್ಟಮನೆಯೊಂದನ್ನು ಕಟ್ಟಿಕೊಂಡು ಬದುಕಿದ್ದ. ಹತ್ತು ವರ್ಷಗಳ ಮೇಲೆ ಹತ್ತಿರದಲ್ಲಿ ನದಿಗೆ ಆಣೆಕಟ್ಟು ಮಂಜೂರಾಗಿ, ಅದು ಸಿದ್ಧವಾದಾಗ ಈತನ ಮನೆ ನೀರಲ್ಲಿ ಮುಳುಗಿ ಹೋಯಿತು. ಪಾದಾಚಾರಿಯೊಬ್ಬ ರಸ್ತೆಯ ಬದಿಯ ಪಾದಚಾರಿ ಮಾರ್ಗದಲ್ಲೇ ಹೋಗುತ್ತಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಹೋಗುವ ಕಾರೊಂದು ಹಿಡಿತ ತಪ್ಪಿ ಈ ಪಾದಚಾರಿಗೆ ಅಪ್ಪಳಿಸುತ್ತದೆ. ಇಂಥ ಸಾವಿರಾರು ಘಟನೆಗಳನ್ನು ಕೇಳಿದ್ದೇವೆ, ಓದಿದ್ದೇವೆ. ಇಂಥವುಗಳಲ್ಲಿ ಯಾರ ತಪ್ಪು, ಯಾಕೆ ಹೀಗಾಯಿತು ಎಂದು ತೀರ್ಮಾನಿಸುವುದು ಕಷ್ಟ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ. ಯಾಕೆ ಹೀಗಾಗುತ್ತದೆ? ನಾನೊಂದು ಹನಿಗವನವನ್ನು ಎಲ್ಲಿಯೋ ಓದಿದ ನೆನಪು.

ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ;

ಓದದೆ ತಿರುಗಾಡಿದ ಮಗ ಪಾಸಾಗಲೆಂದು

ಮಾರೆಮ್ಮನಿಗೆ ಕೋಳಿಯ ಹರಕೆ !

ಓದದ ಮಗನ ಒಳಿತಿಗೆ ಕೋಳಿಯ ತಲೆದಂಡ! ಇದು ಸರಿಯೆ?

ಕಗ್ಗ ಒಂದು ಸಮಜಾಯಿಷಿಯನ್ನು ನೀಡುತ್ತದೆ. ಯಾರ ಹಿತಕ್ಕೊ, ಆವ ಕಾರಣಕ್ಕೋ, ಯಾವುದೋ ಯೋಜನೆಗೊ, ಮನುಷ್ಯ ನೋವು ಪಡುವುದು ದೈವೇಚ್ಛೆ. ಇದನ್ನೇ ನಮ್ಮ ಪರಂಪರೆ ಪ್ರಾರಬ್ಧಕರ್ಮ ಎನ್ನುತ್ತದೆ. ಅದನ್ನು ದೂಷಿಸಿ ಫಲವಿಲ್ಲ. ಯಾಕೆಂದರೆ ಹಿಂದೆ ಜನ್ಮಾಂತರಗಳಲ್ಲಿ ನಾವು ಮಾಡಿದ ಕರ್ಮಗಳ ಸ್ಮರಣೆ ನಮಗಿಲ್ಲ. ಆದ್ದರಿಂದ ದೈವವನ್ನು ಕುರುಡೆನ್ನದೆ ಬಂದದ್ದನ್ನು ದೈವೇಚ್ಛೆಯೆಂದು ಸ್ವೀಕರಿಸುವುದೊಂದೆ ನಮಗುಳಿದ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು