ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನಸ್ಸೇ ಮುಕ್ತಿಯ ಪಥ

Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ |
ರಕ್ತಿ ವಿಪರೀತವದಕಾಗದಿರೆ ಮುಕ್ತಿ ||
ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ |
ಶಕ್ತಿವಂತನೆ ಮುಕ್ತ – ಮಂಕುತಿಮ್ಮ || 647 ||

ಪದ-ಅರ್ಥ: ಸಂಸ್ಥಿತಿ=ಸಮಸ್ಥಿತಿ, ರಕ್ತಿ=ಆಸಕ್ತಿ, ವಿಪರೀತವದಕಾಗದಿರೆ=ವಿಪರೀತ+ಅದಕೆ+ಆಗದಿರೆ, ಯುಕ್ತಿಯಿಂ=ಯುಕ್ತಿಯಿಂದ, ಕರಣಚೇಷ್ಟಿತವ=ಕರಣ(ಇಂದ್ರಿಯ)+ಚೇಷ್ಟಿತವ(ಚೇಷ್ಟೆಗಳನ್ನು), ತಿದ್ದುತೆ=ತಿದ್ದುತ್ತ, ಶಮಿಪ=ಶಾಂತಗೊಳಿಸುವ.
ವಾಚ್ಯಾರ್ಥ: ಮುಕ್ತಿ ಎಂಬುದು ಮನಸ್ಸಿನ ಸಮಸ್ಥಿತಿಯೇ, ಬೇರೇನೂ ಅಲ್ಲ. ಜಗತ್ತಿನ ಆಸಕ್ತಿ ವಿಪರೀತವಾಗದಿದ್ದರೆ ಮುಕ್ತಿ. ಯುಕ್ತಿಯಿಂದ ಇಂದ್ರಿಯಗಳ ಚೇಷ್ಟೆಗಳನ್ನು ತಿದ್ದುತ್ತ, ಶಾಂತಗೊಳಿಸುವ ಶಕ್ತಿವಂತನೆ ನಿಜವಾಗಿಯೂ ಮುಕ್ತ.

ವಿವರಣೆ: ಮುಕ್ತಿ ಎಂದರೆ ಬಿಡುಗಡೆ. ಯಾವುದರಿಂದ ಬಿಡುಗಡೆ? ನಮಗೆ ಮೂರು ತರಹದ ಬಿಡುಗಡೆಗಳು ಬೇಕು. ಶರೀರಪರವಾದ ದೇಹ ರೋಗದಿಂದ ಬಿಡುಗಡೆ, ಮಾನಸಿಕವಾದ ಚಿಂತೆಯಿಂದ ಬಿಡುಗಡೆ, ಬುದ್ಧಿಪರವಾದ ಮಾಂದ್ಯದಿಂದ ಬಿಡುಗಡೆ. ಕಪಿಲ ಮಹರ್ಷಿ ಹೇಳುತ್ತಾರೆ ‘ತ್ರಿವಿಧ ದುಃಖ ಆತ್ಯಂತ್ಯ ನಿವೃತ್ತಿ: ಅತ್ಯಂತ ಪುರುಷಾರ್ಥ.’ ಹಾಗೆಂದರೆ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ನಾಲ್ಕನೆಯದಾದ ಮೋಕ್ಷ ನಮ್ಮನ್ನು ತ್ರಿವಿಧ ದುಃಖಗಳಿಂದ ಪೂರ್ಣ ಬಿಡುಗಡೆ ಮಾಡುವುದರಿಂದ ಅದೇ ಅತ್ಯಂತ ಶ್ರೇಷ್ಠ ಪುರುಷಾರ್ಥ. ನಾವು ಮೂರು ಬಗೆಯ ಗುಣದೋಷಗಳಿಂದ ಸೇರಿದ ದುಃಖಗಳಿಂದ ಹೊರಗೆ ಬರುವುದು ಮುಕ್ತಿ. ಅವು, ಶಾರೀರಿಕವಾದ ತಮೋಗುಣ, ಮಾನಸಿಕವಾದ ರಜೋಗುಣ ಮತ್ತು ಬೌದ್ಧಿಕವಾದ ಸತ್ವಗುಣಗಳು.

ಈ ಗುಣಗಳಿಂದ ಹೊರಬಂದರೆ ಮನಸ್ಸು ಸಂಪೂರ್ಣ ಸಮಸ್ಥಿತಿಯಲ್ಲಿ ಇರುತ್ತದೆ. ಕಗ್ಗ ಹೇಳುತ್ತದೆ, ಇದೇ ಮುಕ್ತಿ, ಬೇರೇನೂ ಅಲ್ಲ. ಇದನ್ನು ಸಾಧಿಸುವ ವಿಧಾನಗಳೇನು? ಮೊದಲನೆಯದು ಆಸಕ್ತಿ ಕಡಿಮೆಯಾಗಬೇಕು. ಆಸಕ್ತಿ ಕರ್ತವ್ಯದಲ್ಲಿ ಅಲ್ಲ. ಇದು ನನ್ನದು, ಇವರು ನನ್ನವರು ಎಂಬ ಅತಿಯಾದ ಮೋಹದ ಅಂಟು, ಆಸಕ್ತಿ. ಆಸಕ್ತಿ ಗಟ್ಟಿಯಾಗಿದ್ದಷ್ಟೂ ಬಿಡುಗಡೆ ಕಷ್ಟ. ನಾನು ಅನೇಕ ವ್ಯಕ್ತಿಗಳನ್ನು ಕಂಡಿದ್ದೇನೆ. ಯಾರು ಪ್ರಪಂಚಕ್ಕೆ, ಅಂದರೆ, ನನ್ನ ಮನೆ, ನನ್ನ ಮೊಮ್ಮಕ್ಕಳು, ಅವರ ಮದುವೆಯನ್ನು ನೋಡುವಾಸೆ, ಎಂದೆಲ್ಲ ಅತಿಯಾದ ಮೋಹವನ್ನು ಕಟ್ಟಿಕೊಂಡಿದ್ದಾರೋ ಅವರು ಬೇಗ ದೇಹವನ್ನು ಬಿಡಲಾರರು. ಬಹಳಷ್ಟು ಬಾರಿ ಹಾಸಿಗೆ ಹಿಡಿದು, ನರಳಿದರೂ ಬಿಡುವ ಮನಸ್ಸು ಬರುವುದಿಲ್ಲ. ಯಾರು ಹೆಚ್ಚು ಅಂಟಿಕೊಂಡಿಲ್ಲವೋ, ಜೀವನವನ್ನು ಮೇಲೆ ಮೇಲೆ ಹಗುರವಾಗಿ ನಡೆಸಿದ್ದಾರೋ ಅವರು ಫಟ್ ಎಂದು ದೇಹವನ್ನು ಬಿಟ್ಟು ಹಾರಿಬಿಡುತ್ತಾರೆ. ಬಿಡುಗಡೆ ಅವರಿಗೆ ಸುಲಭ. ಅದು ದೇಹದಿಂದ ಬಿಡುಗಡೆ ಮಾತ್ರವಲ್ಲ, ಆಸೆಗಳಿಂದ ಬಿಡುಗಡೆ. ಅದನ್ನೇ ಕಗ್ಗ ಸುಂದರವಾಗಿ, ಆಸಕ್ತಿ, ಮೋಹ ಹೆಚ್ಚಾಗದಿದ್ದರೆ ಮುಕ್ತಿ ಎನ್ನುತ್ತದೆ.

ಎರಡನೆಯದು, ಕುಶಲತೆಯಿಂದ, ಇಂದ್ರಿಯಗಳ ಚೇಷ್ಟೆಗಳನ್ನು ನಿಯಂತ್ರಿಸಬೇಕು. ಇಂದ್ರಿಯಗಳನ್ನು ಸತ್ ಚಿಂತನೆಗಳಿಂದ, ಸತ್ ಕಾರ್ಯಗಳಿಂದ, ಸತ್ ಸಂಗದಿಂದ ತಿದ್ದುತ್ತ ಇರಬೇಕು. ಅದರೊಂದಿಗೆ, ಕೊಂಚ ಅವಕಾಶ ಸಿಕ್ಕರೆ ಸಾಕು, ಥಟ್ಟನೆ ಹಾರಾಡುವ ಇಂದ್ರಿಯಗಳನ್ನು ಶಾಂತಗೊಳಿಸಬೇಕು. ಹಾಗೆ ಮಾಡುವವನೇ ನಿಜವಾದ ಶಕ್ತಿವಂತ. ಅವನಿಗೆ ಬದುಕು ಬಿಡುಗಡೆಯ
ಹಾದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT