ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಹನುಮಂತನ ಉಪದೇಶ

Last Updated 28 ನವೆಂಬರ್ 2022, 15:53 IST
ಅಕ್ಷರ ಗಾತ್ರ

ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ – ಮಂಕುತಿಮ್ಮ || 766 ||

ಪದ-ಅರ್ಥ: ಘನತತ್ವವೊಂದಕ್ಕೆ=ಘನತತ್ವ (ಶ್ರೇಷ್ಠತತ್ವ)+ಒಂದಕ್ಕೆ, ನೆನೆಯದಿನ್ನೊಂದನೆಲ್ಲವ=ನೆನೆಯದು+ಇನ್ನೊಂದನು+ಎಲ್ಲವ, ನೀಡುತದರಾ=ನೀಡುತ+ಅದರ+ಆ,

ವಾಚ್ಯಾರ್ಥ: ಶ್ರೇಷ್ಠವಾದ ತತ್ವಕ್ಕೆ ದಿನರಾತ್ರಿ ಮನಸ್ಸನ್ನು ತೆತ್ತು, ಬೇರೆ ಏನನ್ನೂ ನೆನೆಯದೆ ಆ ತತ್ವದ ಅನ್ವೇಷಣೆಯಲ್ಲಿ ತನ್ನ ಬದುಕಿನ ಭಾರವನ್ನು ಮರೆಯುವುದೇ ಹನುಮಂತ ನಮಗೆ ನೀಡಿದ ಉಪದೇಶ.

ವಿವರಣೆ: ಕಗ್ಗ ಇಲ್ಲಿ ಮತ್ತೊಂದು ಅಮೋಘವಾದ ಮಾದರಿಯನ್ನು ಕಣ್ಣ ಮುಂದೆ ಇರಿಸುತ್ತದೆ. ಬದುಕಿನಲ್ಲಿ ಸಾಧನೆ ಮಾಡುವುದು ಹೇಗೆ? ಅದಕ್ಕೆ ನಾವು ಯಾವ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗಳು ಕಾಡುತ್ತವೆ. ಅವುಗಳಿಗೆ ಉತ್ತರವಾಗಿ ಈ ಕಗ್ಗ. ನಮ್ಮ ಜೀವನದಲ್ಲಿ ಗುರಿಯೊಂದನ್ನು ಆರಿಸಿಕೊಳ್ಳಬೇಕು. ಆ ಗುರಿ ಚಿಕ್ಕದಾಗಿರಬಾರದು. ಅದು ಒಂದು ಶ್ರೇಷ್ಠ ತತ್ವ – ಘನತತ್ವ. ಒಂದು ಬಾರಿ ಗುರಿ ನಿರ್ಧಾರವಾಯಿತೋ, ಅದರ ಮೇಲಿನ ದೃಷ್ಟಿ ಅಲುಗಾಡಬಾರದು. ಏಕದೃಷ್ಟಿಯಿಂದ ನಮ್ಮ ಸಕಲ ಶಕ್ತಿಯನ್ನು ಹಾಕಿ, ಆ ದೆಶೆಗೆ ನಡೆಯಬೇಕು. ಆ ಪ್ರಯಾಣದಲ್ಲಿ ತನ್ಮಯತೆ ಯಾವ ಪ್ರಮಾಣದಲ್ಲಿರಬೇಕೆಂದರೆ, ದಾರಿಯಲ್ಲಿ ಬರುವ ಯಾವ ತೊಂದರೆಯೂ ಗಮನಕ್ಕೆ ಬರುವುದಿಲ್ಲ. ಆದರ್ಶಗುರಿ ಮತ್ತು ಅದರೆಡೆಗೆ ಅವಿರತ ಪರಿಶ್ರಮ ಇವೆರಡೇ ಅದ್ಭುತ ಸಾಧನೆಗಳಿಗೆ ದಾರಿಗಳು.ಹನುಮಂತ ಶ್ರೀರಾಮನನ್ನು ತನ್ನ ದೈವ, ನಾಯಕ ಮತ್ತು ಆದರ್ಶವೆಂದು ಒಪ್ಪಿಕೊಂಡ. ಆ ಕ್ಷಣದಿಂದಲೇ ಅವನ ಬದುಕು ರಾಮಮಯವಾಯಿತು.

ರಾಮನ ಸೇವೆಯೇ ತನ್ನ ಜೀವನದ ಪರಮ ಉದ್ದೇಶ, ರಾಮತೃಪ್ತಿ ತನ್ನ ಕರ್ತವ್ಯ ಎಂದುಕೊಂಡು ರಾಮನನ್ನು ತನ್ನ ಉಸಿರಿನ ಉಸಿರನ್ನಾಗಿ ಮಾಡಿಕೊಂಡ. ಅವನ ಸ್ವಾಮಿ ಸೇವೆ ಅನನ್ಯವಾದದ್ದು. ಆ ಕರ್ತವ್ಯದಲ್ಲಿ ತನಗೆ ಬಂದ ಅಡೆತಡೆಗಳು, ನೋವುಗಳುಅವನಿಗೆ ಕಾಣಲೇ ಇಲ್ಲ. ಯಾಕೆಂದರೆ ಅವನ ಹೃದಯವನ್ನು, ಕಣ್ಣುಗಳನ್ನು ತುಂಬಿಕೊಂಡದ್ದು ಕೇವಲ ರಾಮ. ಹನುಮಂತ ಸೇವೆ ಮಾಡುತ್ತಲೇ ಕೋಟಿ ಕೋಟಿ ಜನರಿಗೆ ಆದರ್ಶವಾದ. ಇಂದು ಭಾರತದ ಹಳ್ಳಿ ಹಳ್ಳಿಗಳಲ್ಲಿ ಹನುಮಂತನ ದೇವಸ್ಥಾನಗಳಿವೆ. ಅಷ್ಟು ಪ್ರಮಾಣದ ರಾಮಮಂದಿರಗಳಿಲ್ಲ. ಹನುಮಂತನ ದೇವಸ್ಥಾನಗಳಲ್ಲಿ ರಾಮ ವಿಗ್ರಹಗಳಿರಲಿಕ್ಕಿಲ್ಲ,
ಆದರೆ ರಾಮಮಂದಿರಗಳಲ್ಲಿ ಖಂಡಿತವಾಗಿಯೂ ಹನುಮಂತನಿದ್ದಾನೆ. ಇದು ಆಂಜನೇಯನ ತ್ಯಾಗದ, ಸೇವೆಯ ಹೆಗ್ಗುರುತು. ದಾಸನಾಗಿಯೂ, ಜನರ ಹೃದಯಸಿಂಹಾಸನಾಧೀಶ್ವರನಾದವನು ಹನುಮಂತ. ಇದು ಕಗ್ಗ ನಮಗೆ ಹೇಳುವ ಆದರ್ಶ, ಸಫಲತೆಯ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT