ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು–ಗುರುರಾಜ ಕರಜಗಿ ಅಂಕಣ| ತಂದೆ-ಮಕ್ಕಳ ಸಂವಾದ

Last Updated 16 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ತಂದೆ ರಾಜ ಸಂಜಯ ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಅಳತೊಡಗಿದ. ವೆಸ್ಸಂತರನಿಗೂ ದುಃಖ ತಡೆಯಲಾಗಲಿಲ್ಲ. ನೋಡುತ್ತಿದ್ದ ಮಾದ್ರಿದೇವಿ ಕಣ್ಣೀರಿನಲ್ಲಿ ನೆನೆದು ಹೋದಳು. ಸ್ವಲ್ಪ ದು:ಖ ಶಮನವಾದ ಮೇಲೆ ರಾಜ ಮಗ-ಸೊಸೆಯನ್ನು ಕೂಡ್ರಿಸಿಕೊಂಡು ಅವರ ಕುಶಲವನ್ನು ವಿಚಾರಿಸಿದ. ‘ಮಗನೇ ನೀನು ಮತ್ತು ಮಾದ್ರಿ ಕ್ಷೇಮವಾಗಿದ್ದೀರಾ? ನೀವು ನಿರೋಗಿಗಳು ತಾನೆ? ಬರೀ ಫಲಮೂಲಗಳನ್ನು ತಿಂದು ಜೀವಿಸುತ್ತೀರಾ? ಅವು ಸಾಕಷ್ಟು ದೊರಕುತ್ತವೆಯೇ? ಕಾಡುಮೃಗಗಳಿಂದ, ಸೊಳ್ಳೆ, ಹಾವುಗಳ ಕಾಟ ಇಲ್ಲವೆ?’

‘ದೇವ ನಾವು ನಡೆಸುತ್ತಿರುವ ಕಾಡಿನ ಜೀವನ ಹೀಗೆಯೇ ಇದೆ. ನಾವು ದೊರಕುವ ಫಲಮೂಲಗಳನ್ನೇ ತಿನ್ನುತ್ತೇವೆ. ಈ ಜೀವನ ಕಷ್ಟಕರವಾದದ್ದೆ. ಮಹಾರಾಜ, ಸಾರಥಿ ಕುದುರೆಯನ್ನು ನಿಗ್ರಹ ಮಾಡುವಂತೆ, ದರಿದ್ರತೆ ನಮ್ಮನ್ನು ನಿಗ್ರಹ ಮಾಡುತ್ತದೆ. ನಾವು ದಮನಗೊಂಡಿದ್ದೇವೆ. ತಂದೆ-ತಾಯಿಯರ ದರ್ಶನವಿಲ್ಲದೆ ಮತ್ತಷ್ಟು ಕೃಶರಾಗಿದ್ದೇವೆ. ನಮ್ಮ ದೇಶದಿಂದ ಹೊರಹಾಕಲ್ಪಟ್ಟವರಿಗೆ ಕಾಡಿನಲ್ಲಿ ಏನು ಸುಖ ಇದ್ದೀತು?’ ಎಂದ ವೆಸ್ಸಂತರ. ತಕ್ಷಣ ರಾಜನ ಕಣ್ಣಲ್ಲಿ ನೀರು ಚಿಮ್ಮಿತು. ‘ಮಗು ವೆಸ್ಸಂತರ, ಈ ಅಪರಾಧವನ್ನು ಮಾಡಿದವನು ನಾನೇ. ನನಗೆ ಈ ಕಾರ್ಯಕ್ಕೆ ಕ್ಷಮೆಯಿಲ್ಲ’ ಎಂದ. ವೆಸ್ಸಂತರ, ‘ನಮ್ಮ ಕಷ್ಟಗಳಿಗೆ ಹೆಚ್ಚಿನ ದುಃಖವಿಲ್ಲ. ಆದರೆ ಕ್ರೂರ ಬ್ರಾಹ್ಮಣನೊಬ್ಬ ನಮ್ಮ ಪ್ರಿಯ ಮಕ್ಕಳಾದ ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು ದಾನ ಪಡೆದು, ಹಸುಗಳನ್ನು ಹೊಡೆಯುವಂತೆ, ಅವರನ್ನು ಹೊಡೆಯುತ್ತ ಕರೆದುಕೊಂಡು ಹೋದ. ಅದು ನಮ್ಮ ಮನಸ್ಸಿಗೆ ಬಹಳ ನೋವು ಮಾಡಿದೆ’ ಎಂದ. ‘ಮಗೂ, ಆ ವಿಷಯದಲ್ಲಿ ನಿನಗೆ ದುಃಖಬೇಡ. ಈಗಾಗಲೇ ಬ್ರಾಹ್ಮಣನಿಗೆ ಹಣಕೊಟ್ಟು ಮಕ್ಕಳನ್ನು ಬಿಡಿಸಿಕೊಂಡಿದ್ದೇನೆ. ಆಸೆಬುರುಕ ಬ್ರಾಹ್ಮಣ ದುರಾಸೆಯಿಂದ ಹಣ ಪಡೆದು, ಮಿತಿಮೀರಿ ತಿಂದು ಸತ್ತುಹೋದ. ಅವನಿಗೆ ಸರಿಯಾದ ಶಿಕ್ಷೆಯಾಗಿದೆ’ ಎಂದು ನುಡಿದ ಸಂಜಯ ರಾಜ. ‘ಮಹಾರಾಜಾ, ಹಾಗಾದರೆ ರಾಜಪುತ್ರ, ರಾಜಪುತ್ರಿಯರು ಈಗ ಎಲ್ಲಿದ್ದಾರೆ? ಹಾವು ಕಚ್ಚಿದವನಿಗೆ ತೀವ್ರವಾಗಿ ಔಷಧ ಕೊಡುವಂತೆ, ಆ ವಿಷಯವನ್ನು ನನಗೆ ಬೇಗನೆ ತಿಳಿಸಿ’ ಎಂದು ವೆಸ್ಸಂತರ ಅವಸರಿಸಿದ. ‘ಮಕ್ಕಳು ನನ್ನೊಂದಿಗೇ ಇದ್ದಾರೆ. ಅವರ ಬಗ್ಗೆ ಯಾವ ಕಾಳಜಿ ಬೇಡ’ ಎಂದು ಸಮಾಧಾನ ಮಾಡಿದ ರಾಜ.

ವೆಸ್ಸಂತರ ತಂದೆಯ ಕುಶಲವನ್ನು ಕೇಳಿದ, ‘ಅಪ್ಪ, ತಾವು ಕುಶಲ ತಾನೆ? ತಮ್ಮ ಆರೋಗ್ಯ ಹೇಗಿದೆ? ಅಮ್ಮನ ಆರೋಗ್ಯ ಹೇಗಿದೆ? ಆಕೆಯ ಕಣ್ಣುಗಳು ದುರ್ಬಲವಾಗಿಲ್ಲವಲ್ಲ?’. ‘ಇಲ್ಲ ಪುತ್ರ, ನಾವಿಬ್ಬರೂ ನಿರೋಗಿಗಳಾಗಿದ್ದೇವೆ. ನಿನ್ನ ತಾಯಿಯ ದೃಷ್ಟಿ ದುರ್ಬಲವಾಗಿಲ್ಲ’ ಎಂದ ರಾಜ. ‘ಅಪ್ಪಾ, ನಿಮ್ಮ ರಥಗಳು ಚೆನ್ನಾಗಿವೆಯೆ? ಜನಪದರೆಲ್ಲ ಸಮೃದ್ಧರಾಗಿದ್ದಾರೆಯೆ? ಅತಿವೃಷ್ಟಿ, ಅನಾವೃಷ್ಟಿಗಳು ದೇಶವನ್ನು ಕಾಡಿಲ್ಲವಲ್ಲ?’ ಎಂದು ಮರುಪ್ರಶ್ನೆ ಮಾಡಿದ ವೆಸ್ಸಂತರ. ‘ಎಲ್ಲವೂ ಕ್ಷೇಮವಾಗಿದೆ. ರಥ, ಕುದುರೆ, ಆನೆಗಳು, ಸೈನ್ಯ ಎಲ್ಲವೂ ಕ್ಷೇಮವಾಗಿವೆ. ಜನಪದರು ಸಂತೃಪ್ತಿಯಿಂದ ಇದ್ದಾರೆ. ಅತಿವೃಷ್ಟಿ, ಅನಾವೃಷ್ಟಿಗಳು ದೇಶವನ್ನು ಕಂಗೆಡಿಸಿಲ್ಲ’, ಎಂದು ಸಂಜಯ ಮಹಾರಾಜ ಹೇಳುತ್ತಿರುವಂತೆ ಮಹಾರಾಣಿ ಪುಸತಿದೇವಿ ದೊಡ್ಡ ಜನಸಮೂಹದೊಡನೆ ಅಲ್ಲಿಗೆ ಬಂದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT