ಮಂಗಳವಾರ, ಮೇ 11, 2021
24 °C

ನಿಲ್ಲದ ಮಾನವಧರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ |
ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ||
ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ|
ನಿಲದಮೃತಧಾರೆಯದು-ಮಂಕುತಿಮ್ಮ || 408 ||

ಪದ-ಅರ್ಥ: ಅಲೆಯಿಂದಲಲೆಗೆ= ಅಲೆಯಿಂದ+ ಅಲೆಗೆ, ಟಪ್ಪೆಯ= ಟಪಾಲಿನ, ಅಂಚೆಯ, ಚಾರ= ಸೇವಕ, ನಿಲದಮೃತದಾರೆಯದು= ನಿಲದ (ನಿಲ್ಲದ)+ ಅಮೃತಧಾರೆ+ ಅದು.

ವಾಚ್ಯಾರ್ಥ: ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ, ಅಲೆಯಿಂದ ಅಲೆಗೆ ಬರುವಂತೆ, ಅಂಚೆಯ ಸೇವಕನಂತೆ, ಮಾನವಧರ್ಮ ಯುಗದಿಂದ ಯುಗಕೆ ಹರಿದು ಬರುತ್ತಿದೆ. ಅದೊಂದು ಅನಂತವಾದ ಅಮೃತಧಾರೆ.

ವಿವರಣೆ: ಈ ಜಗತ್ತಿನ ವ್ಯವಸ್ಥೆ ಒಂದು ಅದ್ಭುತ. ತಲೆಮಾರಿನಿಂದ ತಲೆಮಾರಿಗೆ ಹೇಗೆ ಗುಣಗಳು, ಧರ್ಮಗಳು ಸಾಗಿಬರುತ್ತವೆ
ಎಂಬುದೊಂದು ಕೌತುಕ. ಇಂದು ರಾಮನಿಲ್ಲ, ಕೃಷ್ಣನಿಲ್ಲ, ಏಸೂಕ್ರಿಸ್ತನಿಲ್ಲ ಬುದ್ಧ, ಮಹಾವೀರ, ಶಂಕರಾಚಾರ್ಯ, ಬಸವಣ್ಣ ಇವರಾರೂ ದೇಹದಿಂದ ಇಲ್ಲ. ಆದರೆ ಅವರು ಹೇಳಿದ, ನಡೆದು ತೋರಿದ ಜೀವನ ಮೌಲ್ಯಗಳು ಒಂದು ರೀತಿಯ ಬದಲಾವಣೆಗಳನ್ನು ಕಂಡರೂ ಹಾಗೆಯೇ ಮುಂದುವರೆದಿವೆ. ಇದೇ ಬಹುಶ: ಭಗವದ್ಗೀತೆಯ ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ತಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ’ ಎಂಬ ಮಾತಿನ ಅರ್ಥ. ಮೌಲ್ಯಗಳ, ಮಾನವಧರ್ಮದ ಅಧಃಪತನವಾದಾಗಲೆಲ್ಲ ಅದರ ಪುನರುತ್ಥಾನಕ್ಕಾಗಿ ನಾನು ಹುಟ್ಟಿ ಬರುತ್ತೇನೆ ಎಂಬ ವಾಗ್ದಾನ ಅದು. ಇದೊಂದು ಸಾಂಕೇತಿಕವಾದ ಮಾತು. ಕಾಲದಿಂದ ಕಾಲಕ್ಕೆ ಬದಲಾವಣೆಗಳು ಆಗುವುದು ಖಚಿತ. ಆದರೆ ಆತಂಕಕ್ಕೆ  ಕಾರಣವಿಲ್ಲ. ಆಗ ಮತ್ತೊಬ್ಬ ನಾಯಕ, ಮತ್ತೊಂದು ಬದಲಾವಣೆಯನ್ನು ತಂದು ಮಾನವಧರ್ಮವನ್ನು ಸ್ಥಿರವಾಗುವಂತೆ ಮಾಡಬಹುದು. ಅವರ ವಿಧಾನಗಳು ಬೇರೆ. ಆದರೆ ಉದ್ದೇಶ ಒಂದೇ. ಅದು ಮಾನವ ಧರ್ಮದ ಉಳಿವು.

ಶ್ರೀರಾಮನ ಮೌಲ್ಯ ಪ್ರತಿಪಾದನೆಯ ನಡೆಗಳೇ ಬೇರೆ, ಕೃಷ್ಣನ ನಡೆಗಳೇ ಬೇರೆ. ಮುಂದೆ ಬಂದ ಬುದ್ಧ ಆಸೆಯ ನಿರಾಕರಣೆ ಮಾಡಿದರೆ, ಮಹಾವೀರ ಅಪರಿಗ್ರಹವನ್ನು ಮಾದರಿಯನ್ನಾಗಿಸಿದ. ಎಲ್ಲರ ವಿಧಾನಗಳು ಬೇರೆಯಾದರೂ ಅವೆಲ್ಲ ಮಾನವತೆಯನ್ನು ಸಾರುವ ಕ್ರಿಯೆಗಳೇ.

ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠಮಟ್ಟದ ಹತ್ತಿಯ ಎಳೆ ಹೆಚ್ಚೆಂದರೆ ಎರಡು ಅಂಗುಲ ಉದ್ದವಿರುತ್ತದಂತೆ. ಆದರೆ ಆ ಹತ್ತಿಯ ಎಳೆಗಳಿಂದ ನೂರು ಮೀಟರ್ ಉದ್ದವಾದ ನೂಲಿನ ಹಗ್ಗವನ್ನು ನಿರ್ಮಿಸಬಹುದು. ಅಷ್ಟು ಚಿಕ್ಕದಾದ ನೂಲಿನ ಎಳೆಯಿಂದ ಅಷ್ಟು ಉದ್ದ ಹಗ್ಗವಾಗುವುದು ಹೇಗೆ? ಒಂದು ಎಳೆ ಮತ್ತೊಂದರ ಮೇಲೆ ಸರಿಯಾಗಿ ಹರಡಿ ಹುರಿಗೊಂಡರೆ ಗಟ್ಟಿಯಾದ ಹಗ್ಗವಾದೀತು. ಅಂತೆಯೇ ಅಶಾಶ್ವತವಾದ ಪ್ರತಿಯೊಬ್ಬ ಮನುಷ್ಯನ ಮೌಲ್ಯಗಳು ಮುಂದಿನ ತಲೆಮಾರಿನೊಂದಿಗೆ ಹೊಂದಿ ಹುರಿಗೊಂಡಾಗ ಅವು ಹಾಗೆಯೇ ನೀರಿನ ಅಲೆಗಳಂತೆ ಮುಂದುವರೆಯುತ್ತ ಹೋಗುತ್ತವೆ. ಇದನ್ನು ಕಗ್ಗ ತಿಳಿಸುತ್ತದೆ. ಹಿಂದೆ ಸಂದೇಶಗಳನ್ನು ಕಳುಹಿಸುವಾಗ ಒಬ್ಬ ವಾಹಕ ಅದನ್ನು ತೆಗೆದುಕೊಂಡು ಸಾಗಿ ಮತ್ತೊಬ್ಬನಿಗೆ ತಲುಪಿಸುತ್ತಿದ್ದ. ಅವನು ಹಾಗೆಯೇ ಮತ್ತೊಬ್ಬನಿಗೆ, ಅವನು ಇನ್ನೊಬ್ಬನಿಗೆ ತಲುಪಿಸುತ್ತ, ಕೊನೆಗೆ ಅದು ಗಮ್ಯವನ್ನು ಸೇರುತ್ತಿತ್ತು. ಇದೇ ರೀತಿ ಮಾನವಧರ್ಮ ಯುಗದಿಂದ ಯುಗಕ್ಕೆ ಹರಿದುಬರುತ್ತ ಎಂದೆಂದಿಗೂ ನಿಲ್ಲದ, ಅನಂತವಾದ ಅಮೃತಧಾರೆಯಾಗಿದೆ. ಮನುಷ್ಯ ಮರೆಯಾಗಿ ಹೋದರೂ ಮಾನವತೆ ನಿಂತಿದೆ. ⇒v

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು