ಶುಕ್ರವಾರ, ಅಕ್ಟೋಬರ್ 22, 2021
20 °C

ಬೆರಗಿನ ಬೆಳಕು: ಸೌಂದರ್ಯದ ಅರಿವು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸೌಂದರ್ಯವೊಂದು ದೈವರಹಸ್ಯ, ಸೃಷ್ಟಿವೊಲು|
ನಿಂದಿರ್ಪುದದರಾಶೆಯಿನೆ ಜೀವಿತಾಶೆ||
ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ |
ಚೆಂದದರಿವೆ ತಪಸ್ಸೊ – ಮಂಕುತಿಮ್ಮ ||469||

ಪದ-ಅರ್ಥ: ಸೃಷ್ಟಿವೊಲು= ಸೃಷ್ಟಿಯಂತೆ, ನಿಂದಿರ್ಪುದದರಾಶೆಯಿನೆ= ನಿಂದಿರ್ಪುದು (ನಿಂತಿರುವುದು)+
ಅದರ+ ಆಶೆಯಿನೆ (ಆಸೆಯಿಂದ), ಅಂದುವುದು= ಹೊಂದಿಕೊಳ್ಳುವುದು, ಚೆಂದದರಿವೆ= ಚೆಂದದ+ ಅರಿವೆ (ತಿಳಿವೆ)

ವಾಚ್ಯಾರ್ಥ: ಸೃಷ್ಟಿಯಂತೆ ಸೌಂದರ್ಯವೂ ಒಂದು ದೈವರಹಸ್ಯ. ಆ ಸೌಂದರ್ಯವನ್ನು ಪಡೆಯುವುದೇ ಜೀವಿತದ ಆಸೆ. ಸಂಸ್ಕೃತಿಗೆ ತಕ್ಕಂತೆ ಅದು ನಮ್ಮ ಕಣ್ಣಿಗೆ ಹೊಂದಿಕೊಳ್ಳುತ್ತದೆ. ಸೌಂದರ್ಯದ ಸರಿಯಾದ ಅರಿವನ್ನು ಪಡೆಯುವುದೇ ತಪಸ್ಸು.

ವಿವರಣೆ: ಸೌಂದರ್ಯವೆಂಬುದು ಒಂದು ಅನುಭವ. ಎಲ್ಲರ ಅನುಭವಗಳೂ ಒಂದೇ ರೀತಿ ಆಗಿರುವುದು ಸಾಧ್ಯವಿಲ್ಲ. ಕೆಲವರಿಗೆ ಮನೆಯಲ್ಲಿ ಸಾಕಿದ ನಾಯಿಯೋ, ಬೆಕ್ಕೋ ತುಂಬ ಸುಂದರ. ಅದನ್ನು ಬಿಟ್ಟಿರುವುದು ಸಾಧ್ಯವಿಲ್ಲ. ಅದನ್ನು ಅಪ್ಪಿ ಮುದ್ದಾಡುವುದೇನು, ಹಾಸಿಗೆಯಲ್ಲಿಯೇ ಮಲಗಿಸಿಕೊಳ್ಳುವುದೇನು! ಆದರೆ ಕೆಲವರಿಗೆ ಆ ಪ್ರಾಣಿಗಳು ಮನೆಯೊಳಗೆ ಬಂದರೆ ಅಸಹ್ಯ! ಅದಕ್ಕೇ ಕವಿ, ಸೌಂದರ್ಯವೆಂಬುದು ನೋಡುವವನ ಕಣ್ಣಿನಲ್ಲಿದೆ ಎನ್ನುತ್ತಾನೆ. ಸೌಂದರ್ಯವಿರುವುದು ಪ್ರಪಂಚದಲ್ಲಿ. ಅಲ್ಲಿ ಚೆಲುವಿನ ವಸ್ತುಗಳಿವೆ. ಆದರೆ ಅದನ್ನು ಸವಿಯುವ ಶಕ್ತಿ ಇರುವುದು ನಮ್ಮ ಮನಸ್ಸಿನಲ್ಲಿ. ಇವೆರಡರ ಸಂಗಮದಿಂದ ದೊರೆಯುವ ಆನಂದದ ಮರ್ಮವೇನು? ಪ್ರತಿಯೊಬ್ಬ ವ್ಯಕ್ತಿಗೂ ಬೇರೆಬೇರೆಯಾಗಿಯೇ ಕಾಣಿಸುವ, ಪ್ರಚೋದಿಸುವ, ಒಳಜಗತ್ತನ್ನು ಹೊರಜಗತ್ತಿಗೆ ಹೆಣೆಯುವ ಶಕ್ತಿ ಯಾವುದು? ಇದು ರಹಸ್ಯವೇ? ಬೇಂದ್ರೆಯವರ ಉತ್ತರ ಹೀಗಿದೆ.

ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ
ಕಣ್ಣಿಗೂ ಕಣ್ಣಾಗಿ ಒಳಗಿಹುದು
ರೂಪ ಲಾವಣ್ಯಕೆ ಅಳೆಯಲು ಬಾರದು
ಅವುಗಳೆ ಇದರೊಂದು ಕಣವಿಹವು

ಕಣ್ಣಿಗೆ ಕಾಣುವುದು ಸೌಂದರ್ಯವಲ್ಲ. ಅದು ವಿಶ್ವಚೈತನ್ಯದ ಸ್ಪಂದನ. ನಮ್ಮ ಬದುಕಿಗೆ ಅದೇ ಮೂಲ. ಸೌಂದರ್ಯದಿಂದ ದೊರಕುವ ಬಂಧುರತೆ ದೈವದ್ದು. ಆ ಬಂಧುರತೆಗಾಗಿ ಜೀವಗಳು ಕಾತರಿಸುತ್ತವೆ. ಆ ಸೌಂದರ್ಯವನ್ನು ಪಡೆಯುವುದೇ ಜೀವಿತದ ಆಸೆ. ಆದರೆ ಸೌಂದರ್ಯ ನಮಗೆ ಇಷ್ಟವಾಗುವುದು, ಇಷ್ಟವಾಗದೆ ಇರುವುದು ಅವರ ಸಂಸ್ಕೃತಿಗೆ ಬಿಟ್ಟ ವಿಷಯ. ಬೇರೆ ದೇಶದ ಜನರಿಗೆ ಸುಂದರವೆಂದು ತೋರುವುದು ಭಾರತೀಯರಿಗೆ ಆಶ್ಲೀಲವೆನ್ನಿಸಬಹುದು. ಖಜುರಾಹೋದ ಶಿಲ್ಪಗಳು ಕಲಾವಿದರಿಗೆ, ಶಿಲ್ಪಿಗಳಿಗೆ ಸೌಂದರ್ಯದ ಪ್ರತೀಕಗಳೆನಿಸಿದರೆ ರಸಿಕನಲ್ಲದವನಿಗೆ ಅವು ಕಾಮ ಪ್ರಚೋದಕ. ಹಾಗಾದರೆ ನಿಜವಾದ ಸೌಂದರ್ಯ ಯಾವುದು ಎಂಬುದನ್ನು ತಿಳಿಯುವುದು ಹೇಗೆ? ಅದು ದೇಹದಲ್ಲಿಲ್ಲ. ನಿಜವಾದ ಸೌಂದರ್ಯವು ಹೃದಯದ ಬೆಳಕು. ಆತ್ಮದ ವಿಕಾರತೆ ದೇಹದ ಸೌಂದರ್ಯವನ್ನು ಮರೆಮಾಚುವಂತೆ, ಆತ್ಮದ ಸೌಂದರ್ಯ ದೇಹದ ವಿಕಾರತೆಯನ್ನು ಮುಚ್ಚಿ ಮೋಡಿಮಾಡುತ್ತದೆ. ಮನಸ್ಸನ್ನು ಎಲ್ಲ ಭೌತಿಕ ಪ್ರಲೋಭನೆಗಳಿಂದ ಮುಕ್ತಗೊಳಿಸುವುದು ಆಂತರಿಕ ಸೌಂದರ್ಯವನ್ನು ಸವಿಯಲು ಸಜ್ಜುಗೊಳ್ಳುವ ಒಂದು ವಿಧಾನ. ಎಲ್ಲ ಚಂಚಲತೆಗಳಿಂದ ಮುಕ್ತವಾದಾಗ, ಭೌತಿಕ ಅಸ್ತಿತ್ವ ಲಯವಾಗುತ್ತದೆ. ಇದುವೆ ಅಧ್ಯಾತ್ಮದ ಅನುಭೂತಿ. ಅದನ್ನು ಸಾಧಿಸುವುದನ್ನೇ ಕಗ್ಗ ‘ಚೆಂದದ ಅರಿವಿನ ತಪಸ್ಸು’ ಎನ್ನುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.