ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮುಕ್ತನ ದೃಷ್ಟಿ

Last Updated 10 ಜನವರಿ 2023, 19:30 IST
ಅಕ್ಷರ ಗಾತ್ರ

ಸುಟ್ಟ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |
ಗಟ್ಟಿ ಜಗವಂತು ತತ್ವಜ್ಞಾನ ಸೋಕೆ ||
ತೊಟ್ಟಿಹುದು ಲೋಕರೂಪವ, ತಾತ್ವಿಕನ ವೃತ್ತಿ |
ಕಟ್ಟದವನಾತ್ಮವನು – ಮಂಕುತಿಮ್ಮ || 797 ||

ಪದ-ಅರ್ಥ: ರೂಪಮಾತ್ರದಿ=ಆಕಾರದಿಂದ ಮಾತ್ರ, ಜಗವಂತು=ಜಗವು+ಅಂತು, ಸೋಕೆ=ಸ್ಪರ್ಶಿಸಿದರೆ, ತೊಟ್ಟಿಹುದು=ಹಾಕಿಕೊಂಡಿಹುದು, ಕಟ್ಟದವನಾತ್ಮವನು=ಕಟ್ಟದು+ಅವನ+ಆತ್ಮವನು.

ವಾಚ್ಯಾರ್ಥ: ಸುಟ್ಟು ಹೋದ ಹಗ್ಗದ ಬೂದಿ ಮೇಲ್ನೋಟಕ್ಕೆ ಹಗ್ಗದಂತೇ ಕಂಡೀತು. ಹಾಗೆಯೇ ಗಟ್ಟಿಯಾದ ಜಗತ್ತಿನರೂಪವೂ. ತತ್ವಜ್ಞಾನ ಸ್ಪರ್ಶವಾದ ವ್ಯಕ್ತಿಗೆ ಅದರ ನಿಜರೂಪ ಅರ್ಥವಾಗಿ ಜಗತ್ತು ಅವನ ಆತ್ಮವನ್ನು ಕಟ್ಟಲು ವಿಫಲವಾಗುತ್ತದೆ.

ವಿವರಣೆ: ಅಲ್-ಹಲಾಜ್-ಮನ್ಸ್ಸೂರ್ ಒಬ್ಬ ಬಹುದೊಡ್ಡ ಸೂಫೀ ಸಂತ. ಸದಾಕಾಲ ಭಗವಂತನ ಚಿಂತನೆಯಲ್ಲೇ ಉನ್ಮತ್ತನಾದವನು. ಅವನಿಗೆ ಪ್ರಪಂಚವೇ ಕಾಣುತ್ತಿರಲಿಕ್ಕಿಲ್ಲ. ಎಲ್ಲೆಲ್ಲಿಯೂ ಅವನಿಗೆ ಭಗವಂತನೇ ಕಾಣುತ್ತಿದ್ದ. ಹೀಗಾಗಿ ಸಾಮಾನ್ಯರ ಕಣ್ಣಿಗೆ ಅವನೊಬ್ಬ ಹುಚ್ಚ. ಒಂದು ಬಾರಿ ನವಾಬನೊಬ್ಬ ಅವನನ್ನು ಕೇಳಿದ, “ನಿನ್ನ ದೇವರು ದೊಡ್ಡವನೋ, ನಾನು ದೊಡ್ಡವನೋ?”ಮನ್ಸೂರ್ ಗಹಗಹಿಸಿ ನಕ್ಕ. “ನೀನು ಯಾರು? ಒಂದು ಹುಳ. ಆ ಭಗವಂತನ ಕೃಪೆಯಿಂದ ಅಲ್ಲಿ ಕುಳಿತಿದ್ದೀ. ಆತ ಕ್ಷಣಮಾತ್ರದಲ್ಲಿ ನಿನ್ನನ್ನು ಭಸ್ಮ ಮಾಡಬಲ್ಲ” ಎಂದ. ಸೊಕ್ಕಿನ ನವಾಬನಿಗೆ ಅವಮಾನವಾಗದಿರುತ್ತದೆಯೇ? ತಕ್ಷಣ ತನ್ನ ಸೈನಿಕರಿಗೆ ಹೇಳಿದ, “ನನಗಿಂತ ದೇವರು ದೊಡ್ಡವನು ಎನ್ನುವ ಈ ಮೂರ್ಖನನ್ನು ಬಜಾರಿನ ಚೌಕದಲ್ಲಿ ನಿಲ್ಲಿಸಿ ತುಂಡು ತುಂಡಾಗಿ ಕೊಂದುಬಿಡಿ. ನಾನು ಯಾರೆಂಬುದು ಲೋಕಕ್ಕೆ ತಿಳಿಯಲಿ”. ಸೈನಿಕರು ಮನ್ಸೂರ್‌ನನ್ನು ಬಜಾರಿನ ಚೌಕಕ್ಕೆ ಕರೆದೊಯ್ದರು. ಮೊದಲು ಅವನ ಒಂದು ಕೈಯನ್ನು ಕತ್ತರಿಸಿದರು.

ಮನ್ಸೂರ್ ನಗುತ್ತಲೇ ಇದ್ದಾನೆ! ಎರಡನೆಯ ಕೈ ಕತ್ತರಿಸಿದರು. ಅವನ ನಗು ಹೆಚ್ಚಾಯಿತು. ಮುಂದೆ ಒಂದೊಂದೇ ಕಾಲು ಕತ್ತರಿಸಿದರು. ಅವನ ಅಬ್ಬರದ ನಗೆ ಕಡಿಮೆಯಾಗಲಿಲ್ಲ. ಕೂಗಿ ಹೇಳಿದ, “ಮೂರ್ಖ ನವಾಬ, ನಾನು ದೇಹ ಎಂದು ಭಾವಿಸಿದ್ದಾನೆ. ನನ್ನನ್ನು ನಿಜವಾಗಿ ಹಿಡಿಯಲು, ಕತ್ತರಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಪ್ರಪಂಚ ಒಂದು ಕನಸು. ನಾನೀಗ ಕನಸನ್ನು ಕಳೆದುಕೊಂಡು ಶಾಶ್ವತವಾದ ಪರಮಾತ್ಮನನ್ನೇ ಸೇರುತ್ತೇನೆ. ಅದನ್ನು ಆಗ ಮಾಡಿದ ನವಾಬನಿಗೆ ನನ್ನ ಕೃತಜ್ಞತೆಗಳು” ಹೀಗೆ ನುಡಿದ ಮನ್ಸೂರ್ ದೇಹತ್ಯಾಗ ಮಾಡಿದ. ಪ್ರಪಂಚವನ್ನು ಕನಸೆಂದು ಭಾವಿಸಿದ ಮನ್ಸೂರ್ ಜಗತ್ತಿನಲ್ಲಿ ಇರಲಿಲ್ಲವೇ? ಎಲ್ಲರಂತೆಯೇ ಅವನೂ ಇದ್ದ. ಪ್ರಪಂಚವನ್ನು ನೋಡಿದ, ಅನುಭವಿಸಿದ, ಸಂತೋಷಪಟ್ಟ. ಆದರೆ ವ್ಯತ್ಯಾಸವೆಂದರೆ, ಉಳಿದವರಂತೆ ಅದಕ್ಕೆ ಅಂಟಿಕೊಂಡು, ಮೋಹವನ್ನು ಬೆಳೆಸಿಕೊಳ್ಳದೆ, ಅದೊಂದು ಸುಂದರ ಕನಸು ಎಂಬುದನ್ನು ತಿಳಿದಿದ್ದ. ಅದಕ್ಕೇ ಅವನಿಗೆ ಬಂಧನಗಳಿರಲಿಲ್ಲ. ಕಗ್ಗದ ಮಾತು ಇದೇ. ಹಗ್ಗವನ್ನು ಸುಟ್ಟು, ಅದನ್ನು ಮುಟ್ಟದಿದ್ದರೆ ಅದರ ಬೂದಿ ಕೂಡ ದೂರದಿಂದ ಹಗ್ಗದಂತೆಯೇ ಕಾಣುತ್ತದೆ. ಆದರೆ ಹತ್ತಿರ ಹೋಗಿ ಮುಟ್ಟಿದವನಿಗೆ ಮಾತ್ರ ಅದು ಬೂದಿ ಎಂಬುದು ತಿಳಿದೀತು. ಹಾಗೆಯೇ ತನ್ನಾತ್ಮದ ಸ್ವರೂಪವನ್ನು ಅನುಭವದ ಮೂಲಕ ತಿಳಿದವನಿಗೆ ಮಾತ್ರ ಮುಕ್ತಿ. ಆಗ ಅವನಿಗೆ ಸೆರೆಮನೆಯೂ ಒಂದೇ, ಅರಮನೆಯೂ ಒಂದೇ. ಗೀತೆ ಹೇಳುವಂತೆ, “ಆತ್ಮನ್ಯೇವ ಚ ಸಂತುಷ್ಟ. ತಸ್ಯ ಕಾರ್ಯಂ ನ ವಿದ್ಯತೇ”, ಆತ್ಮನಲ್ಲೇ ಸಂತುಷ್ಟನಾಗಿರುವವನಿಗೆ ಮಾಡಬೇಕಾದ ಯಾವ ಕೆಲಸವೂ ಇರುವುದಿಲ್ಲ. ಯಾವ ಕರ್ತವ್ಯವೂ, ಬಂಧನವೂ ಅವನನ್ನು ಕಟ್ಟಿ ಹಾಕಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT