ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪುಗಳು

Last Updated 23 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನಾಗಿ ಜನಿಸಿ, ಸಕಲ ವಿದ್ಯಾ ಪಾರಂಗತನಾಗಿ ರಾಜನಿಗೆ ಅರ್ಥ-ಧರ್ಮಗಳನ್ನು ಬೋಧಿಸುವ ಮಂತ್ರಿಯಾಗಿದ್ದ. ಆತನ ಜ್ಞಾನ, ವ್ಯವಹಾರ ಚಾತುರ್ಯ ಬಹು ಪ್ರಸಿದ್ಧವಾಗಿದ್ದವು.

ಒಂದು ದಿನ ರಾಜಪುರೋಹಿತನ ಮಗ ಅರಮನೆಗೆ ಬಂದಾಗ ರಾಜನ ಪಟ್ಟಮಹಿಷಿಯ ಅಪೂರ್ವ ಸೌಂದರ್ಯವನ್ನು ಕಂಡು ಮನಸೋತ. ಆಕೆಯನ್ನು ಹೇಗಾದರೂ ಪಡೆಯಲೇಬೇಕೆಂದು ಚಿಂತಿಸುತ್ತ ಮನೆಗೆ ಬಂದು ನಿರಾಹಾರಿಯಾಗಿ ಮಲಗಿಬಿಟ್ಟ. ಪುರೋಹಿತನಿಗೆ ಚಿಂತೆಯಾಯಿತು. ಮರುದಿನ ರಾಜ, ಮಂತ್ರಿಯೊಡನೆ ಕುಳಿತಾಗ ‘ನಿಮ್ಮ ಮಗ ಎಲ್ಲಿ?’ ಎಂದು ಪುರೋಹಿತನನ್ನು ಕೇಳಿದ. ‘ಅವನು ದುಃಖದಿಂದ ಮಲಗಿದ್ದಾನೆ’ ಎಂದು ಹೇಳಿದಾಗ ಅವನನ್ನು ಕರೆಸಿ ಕಾರಣವನ್ನು ಕೇಳಿದ. ಆಗ ಆ ತರುಣ ನೇರವಾಗಿ, ‘ಪ್ರಭು, ನನಗೆ ಮಹಾರಾಣಿಯವರ ಮೇಲೆ ಮನಸ್ಸಾಗಿದೆ’ ಎಂದ. ಆಶ್ಚರ್ಯವೆಂದರೆ ರಾಜ ಕೋಪಿಸಿಕೊಳ್ಳದೆ, ‘ಮಗೂ ನೀನು ಆಕೆಯ ಮಗನ ವಯಸ್ಸಿನವ. ನಿನಗೆ ಪ್ರೀತಿ ಮತ್ತು ಅಂತಃಕರಣದ ನಡುವಿನ ವ್ಯತ್ಯಾಸ ತಿಳಿದಿಲ್ಲ. ನೀನು ಅರಮನೆಗೆ ಬಂದು ಎಂಟು ದಿನ ಕಳೆ. ಆಗ ನಿನಗೆ ಆಕೆಯ ಪ್ರೀತಿಯ ಅರ್ಥವಾಗುತ್ತದೆ’ ಎಂದ. ಮುಂದೆ ಎಂಟು ದಿನ ತರುಣ, ರಾಣಿಯೊಂದಿಗೆ ಅರಮನೆಯಲ್ಲಿ ಉಳಿದ. ಈ ದಿನಗಳಲ್ಲಿ ರಾಣಿಗೂ ತರುಣನ ಮೇಲೆ ಮೋಹ ಉಂಟಾಗಿ ಎಂಟನೆಯ ದಿನ ರಾತ್ರಿ ಇಬ್ಬರೂ ಎಲ್ಲರ ಕಣ್ಣುತಪ್ಪಿಸಿ ಅರಮನೆಯಿಂದ ಓಡಿಹೋದರು. ಇದನ್ನು ನಿರೀಕ್ಷಿಸದಿದ್ದ ರಾಜನಿಗೆ ಬಹಳ ದುಃಖವಾಯಿತು. ಆತ ಕೊರಗಿ ಕೊರಗಿ ರೋಗಿಯಂತಾದ. ಮಂತ್ರಿಯಾದ ಬೋಧಿಸತ್ವ ಇದು ಮಾನಸಿಕರೋಗ, ರಾಜನ ದುಃಖವನ್ನು ಹೇಗಾದರೂ ಕೊನೆಗಾಣಿಸಿದರೆ ಅವನ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಯೋಚಿಸಿದ.

ಮರುವಾರ ರಾಜ್ಯದಲ್ಲಿರುವ ಅನೇಕ ಹಾಸ್ಯಕಲಾವಿದರನ್ನು, ಕುಶಲಕಲೆಗಳನ್ನು ತೋರುವವರನ್ನು ಕರೆಸಿ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡುವಂತೆ ಏರ್ಪಡಿಸಿದ. ರಾಜನನ್ನು ಅಲ್ಲಿಗೆ ಒತ್ತಾಯದಿಂದ ಕರೆದೊಯ್ದು, ಈ ತಮಾಷೆಗಳು ಮನಸ್ಸನ್ನೂ ಹಗುರಗೊಳಿಸುತ್ತವೆ ಎಂದು ಒಪ್ಪಿಸಿದ. ರಾಜ ಅಲ್ಲಿಗೆ ಹೋಗಿ ಹಾಸ್ಯಗಾರರು ಮಾಡುವ ಆಟಗಳನ್ನು ನೋಡಿದರೂ ಮನಸ್ಸು ಪ್ರಸನ್ನವಾಗಲಿಲ್ಲ. ಆಗ ಅಲ್ಲಿ ಇಬ್ಬರು ತರುಣರು ಬಂದು ಮೂವತ್ತು ಅಂಗುಲದ ಹರಿತವಾದ ಕತ್ತಿಯನ್ನು ನುಂಗುವ ಪ್ರದರ್ಶನ ಮಾಡಿದರು. ಎಲ್ಲರೂ ಬೆರಗಾದರು. ರಾಜ ಆಶ್ಚರ್ಯದಿಂದ ಒಬ್ಬ ತರುಣನನ್ನು ಮಾತನಾಡಿಸಿದ, ‘ಇದು ಭಾರೀ ಕಷ್ಟದ ಕೆಲಸ. ಇದಕ್ಕಿಂತ ಕಷ್ಟದ ಕೆಲಸ ಯಾವುದೂ ಇರಲಿಕ್ಕಿಲ್ಲ’. ಆಗ ತರುಣ ಹೇಳಿದ, ‘ಇದಕ್ಕಿಂತ ಕಷ್ಟವಾದದ್ದು ಮೂರ್ಖರಿಗೆ ಮಾತುಕೊಡುವುದು’. ಇನ್ನೊಬ್ಬ ತರುಣ ಮಾತು ಸೇರಿಸಿದ, ‘ಮೂರ್ಖರಿಗೆ ಮಾತುಕೊಡುವುದು ಕಷ್ಟವೇ. ಆದರೆ ಮಾತು ಕೊಟ್ಟು ಅದನ್ನು ನಡೆಸುವುದು ಕಷ್ಟವೂ ಹೌದು, ಅತಿಮೂರ್ಖತನವೂ ಹೌದು’. ರಾಜ ತಬ್ಬಿಬ್ಬಾದಂತೆ ಕಂಡ. ಮಂತ್ರಿಯನ್ನು ಕೇಳಿದ, ‘ಅವರು ಹೇಳಿದ್ದು ಸರಿಯೆ?’ ಬೋಧಿಸತ್ವ ಹೇಳಿದ, ‘ಹೌದು ಮಹಾಸ್ವಾಮಿ, ಮೂರ್ಖರಿಗೆ ಮಾತುಕೊಡುವುದು ತಪ್ಪು, ಅದನ್ನು ನಡೆಸುವುದು ದೊಡ್ಡ ತಪ್ಪು. ಹೀಗೆ ತಪ್ಪು ಮಾಡಿ ದುಃಖಿಸುತ್ತಾ ಕೂರುವುದು ತೀರ ತಪ್ಪು’. ರಾಜ ಚಿಂತಿಸಿದ, ಮೂರ್ಖ ತರುಣನಿಗೆ ತನ್ನ ಹೆಂಡತಿಯೊಡನೆ ಇರುವಂತೆ ಮಾತು ಕೊಟ್ಟು ತಪ್ಪು ಮಾಡಿದೆ, ನಂತರ ಅದನ್ನು ನಡೆಸಿ ಮತ್ತೊಂದು ತಪ್ಪು ಮಾಡಿದೆ. ಈಗ ಅದನ್ನು ನೆನೆದು ದುಃಖಿಸುತ್ತ ಬಹು ದೊಡ್ಡ ತಪ್ಪು ಮಾಡುತ್ತಿದ್ದೇನೆ. ನನ್ನ ಪ್ರೀತಿಯನ್ನು ಮರೆತು ಆ ಹುಡುಗನೊಂದಿಗೆ ಓಡಿಹೋದ ಸ್ನೇಹರಹಿತಳ ಬಗ್ಗೆ ನನಗೇಕೆ ದುಃಖ? ಹೀಗೆ ಯೋಚಿಸಿದಾಗ ಆತನ ದುಃಖ ಕರಗಿ ಹೋಯಿತು. ಅವನ ಆರೋಗ್ಯವೂ ಮುಂದೆ ಸುಧಾರಿಸಿತು.

ಮಾತುಕೊಡುವಾಗ ಎಚ್ಚರವಿರಬೇಕು. ಕೊಟ್ಟ ಮೇಲೆ ನಡೆಸುವ ಮುನ್ನ ಮತ್ತೊಮ್ಮೆ ಚಿಂತಿಸಬೇಕು. ನಡೆಸಿದ ಮೇಲೆ ಏನಾದರೂ ಸರಿ, ಹಳಹಳಿಸುತ್ತ ಕೂರುವಲ್ಲಿ ಯಾವ ಸಾರ್ಥಕ್ಯವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT