ಭಾನುವಾರ, ಆಗಸ್ಟ್ 1, 2021
26 °C

ಬೆರಗಿನ ಬೆಳಕು | ಪಾಪದ ಸುಳಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಆತನ ಪಟ್ಟಮಹಿಷಿಯ ಗರ್ಭದಲ್ಲಿ ಜನಿಸಿದ. ಆತ ಸುಂದರವಾದ ಕಮಲದಂತಿದ್ದುದರಿಂದ ಅವನನ್ನು ಪದ್ಮಕುಮಾರ ಎಂದು ಕರೆದರು. ಅವನು ಸಕಲವಿದ್ಯೆಗಳಲ್ಲಿ ಪಾರಂಗತನಾಗಿ ಮರಳಿ ಬರುವುದರಲ್ಲಿ ಅವನ ತಾಯಿ ತೀರಿ ಹೋದಳು. ರಾಜ ಮತ್ತೊಬ್ಬ ಚಿಕ್ಕವಯಸ್ಸಿನ ಹೆಣ್ಣನ್ನು ಮದುವೆಯಾಗಿ ರಾಣಿಯನ್ನಾಗಿಸಿದ.

ಒಂದು ಸಲ ರಾಜ ಗಡಿನಾಡಿನಲ್ಲಾದ ದಂಗೆಯನ್ನು ಹತ್ತಿಕ್ಕಲು ಸೈನ್ಯದೊಡನೆ ಹೊರಟ. ಹೊರಡುವ ಮುನ್ನ ಮಗ ಪದ್ಮಕುಮಾರನಿಗೆ ರಾಜ್ಯದ ಜವಾಬ್ದಾರಿ ಒಪ್ಪಿಸಿ ಹೊರಟ. ರಾಜ ಶತ್ರುಗಳನ್ನು ನಿಗ್ರಹಿಸಿ ಮರಳಿ ಬರುತ್ತಿದ್ದಾನೆಂಬ ವಾರ್ತೆ ಬಂದಿತು. ಪದ್ಮಕುಮಾರ ರಾಣಿಗೆ ವಿಷಯ ಮುಟ್ಟಿಸಲು ಬಂದ. ಸುಂದರನಾದ ಈ ತರುಣನನ್ನು ಕಂಡೊಡನೆ, ತಾನು ಆತನಿಗೆ ತಾಯಿ ಎಂಬುದನ್ನು ಮರೆತು ಆಕೆ ಅವನನ್ನು ಕಾಮದಿಂದ ಕಂಡಳು ‘ಅಮ್ಮಾ, ನೀನು ನನಗೆ ತಾಯಿ ಮಾತ್ರವಲ್ಲ, ನಮ್ಮ ಸ್ವಾಮಿಯ ಹೆಂಡತಿ. ಇಂಥ ಅನಾಚಾರವನ್ನು ಯೋಚಿಸಲೂ ಬಾರದು’ ಎಂದು ಹೇಳಿ ಹೊರಟಬಿಟ್ಟ.

ರಾಜ ಅರಮನೆಗೆ ಬರುವುದರಲ್ಲಿ ರಾಣಿ ತನ್ನ ಬಟ್ಟೆಗಳನ್ನೆಲ್ಲ ಕೆದರಿಕೊಂಡು, ಮೈಮೇಲೆ ಉಗುರಿನಿಂದ ಗಾಯಗಳನ್ನು ಮಾಡಿಕೊಂಡು ಅಳುತ್ತ ಕುಳಿತಳು. ಗಾಬರಿಯಿಂದ ಕಾರಣ ಕೇಳಿದ ರಾಜನಿಗೆ, ಮಗ ಪದ್ಮಕುಮಾರ ತನ್ನ ಮೇಲೆ ಅತ್ಯಾಚಾರ ಮಾಡಬಂದನೆಂದೂ, ತಾನು ಒಪ್ಪದಾಗ, ಹೊಡೆದು ಬಡಿದು ಗಾಯಮಾಡಿದ್ದಾನೆ ಎಂದು ದೂರಿದಳು. ಹಿಂದೆ ಮುಂದೆ ಯೋಚನೆ ಮಾಡದ ರಾಜ ಪದ್ಮಕುಮಾರನನ್ನು ಎಳೆದುಕೊಂಡು ಚೋರ ಪ್ರತಾಪಕ್ಕೆ ತಳ್ಳಿಬಿಡಲು ಆಜ್ಞೆ ಮಾಡಿದ. ನಗರದ ಎಲ್ಲ ಪ್ರಜೆಗಳು ಅದು ಬೇಡವೆಂದು ಪ್ರತಿಭಟಿಸಿದರೂ ಕೇಳದೆ ಅವನನ್ನು ರಾಜಭಟರು ಪ್ರಪಾತಕ್ಕೆ ತಲೆ ಕೆಳಗಾಗಿ ತಳ್ಳಿದರು.. ಪದ್ಮಕುಮಾರನ ಮನದ ನಿರ್ಮಲತೆಯನ್ನು ಕಂಡ ದೇವಿ-ಮಹಾಪದ್ಮ ಅವನನ್ನು ಕೈಯಲ್ಲಿ ಹಿಡಿದು, ಆಶೀರ್ವದಿಸಿ, ನಾಗಭವನಕ್ಕೆ ಕರೆತಂದು ನಾಗರಾಜನ ಜವಾಬ್ದಾರಿಗೆ ಒಪ್ಪಿಸಿದಳು. ನಾಗರಾಜ ಪದ್ಮಕುಮಾರನ ರಕ್ಷಣೆಯನ್ನು ನೋಡಿಕೊಂಡ. ಒಂದು ತಿಂಗಳಿನ ನಂತರ, ಈ ಪ್ರಪಂಚದ ಕಲ್ಮಷವಾದ ಹೃದಯದ ಬಗೆಗಳನ್ನು ಕಂಡ ಪದ್ಮಕುಮಾರ, ನಾಗರಾಜನ ಅಪ್ಪಣೆ ಪಡೆದು ಹಿಮಾಲಯಕ್ಕೆ ತೆರಳಿ ಪ್ರವ್ರಜ್ಜೆಯನ್ನು ಸ್ವೀಕರಿಸಿ ಉಳಿದು ಬಿಟ್ಟ.

ಒಂದು ದಿನ ವಾರಾಣಸಿಯ ಮನುಷ್ಯನೊಬ್ಬ ಈತನನ್ನು ಗುರುತು ಹಿಡಿದ. ಮರಳಿ ವಾರಣಾಸಿಗೆ ಹೋಗಿ ಪದ್ಮಕುಮಾರ ಹಿಮಾಲಯದಲ್ಲಿರುವುದನ್ನು ತಿಳಿಸಿದ. ರಾಜ ಮಿತವಾದ ಸೈನ್ಯವನ್ನು ತೆಗೆದುಕೊಂಡು ಅಲ್ಲಿಗೆ ಹೋಗಿ ಪದ್ಮಕುಮಾರನನ್ನು ಕಂಡ. ‘ಮಗೂ, ನಿನ್ನನ್ನು ಪ್ರಪಾತಕ್ಕೆ ತಳ್ಳಿಸಿದ್ದರೂ, ನೀನು ಬದುಕಿ ಉಳಿದದ್ದು ಹೇಗೆ?’ ಎಂದು ಕೇಳಿದ ರಾಜ. ‘ರಾಜಾ, ಕೊಲ್ಲುವವರು ಸಾವಿರವಿದ್ದರೂ, ಕಾಯುವವನು ಒಬ್ಬನೇ. ಆತ ಅನ್ಯಾಯವನ್ನು ತಡೆಯಲಾರ. ಅತನೇ ನನ್ನನ್ನು ರಕ್ಷಿಸಿದ’ ಎಂದ ಕುಮಾರ. ‘ಆಯ್ತು, ನನ್ನ ತಪ್ಪು ನನಗೆ ತಿಳಿದಿದೆ. ಈಗಾಗಲೇ ನಾನು ರಾಣಿಗೆ ಶಿಕ್ಷೆ ಕೊಟ್ಟು ಆಕೆಯನ್ನೇ ಪ್ರಪಾತಕ್ಕೆ ತಳ್ಳಿಸಿಬಿಟ್ಟಿದ್ದೇನೆ. ನೀನು ಮರಳಿ ಬಂದು ರಾಜನಾಗು’ ಎಂದು ಕೇಳಿದ ರಾಜ. ಆಗ ಪದ್ಮಕುಮಾರ ಹೇಳಿದ, ‘ಮಗನನ್ನು ಕಾಮಿಸುವ ತಾಯಿ ಎಂಥ ದೊಡ್ಡ ಅಪರಾಧಿಯೋ, ವಿಚಾರಣೆ ಮಾಡದೆ ಮಗನನ್ನು ಮೃತ್ಯುವಿಗೆ ತಳ್ಳುವ ತಂದೆಯಾದ ರಾಜನೂ ಅಷ್ಟೇ ದೊಡ್ಡ ಅಪರಾಧಿ. ಆ ಅಪರಾಧದ ಜಗತ್ತು ನನಗೆ ಬೇಡ’ ಎಂದು ತಂದೆಯನ್ನು ಕಳುಹಿಸಿಬಿಟ್ಟ.

ಬದುಕಿನಲ್ಲಿ ಯಾವಾಗ, ಯಾರ ಮನಸ್ಸಿನಲ್ಲಿ ಎಂಥ ಪಾಪದ ವಿಚಾರ ಬಂದೀತೋ ಹೇಳುವಂತಿಲ್ಲ. ಸದಾ ಜಾಗ್ರತರಾಗಿರುವುದು ತುಂಬ ಅವಶ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು