ಗುರುವಾರ , ಜೂನ್ 24, 2021
28 °C

ಬೆರಗಿನ ಬೆಳಕು: ರಾಜನಿಷ್ಠೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಹೋಷಧಕುಮಾರ, ಬ್ರಹ್ಮದತ್ತ ರಾಜನನ್ನು ಎತ್ತರದ ಅಂತಸ್ತಿಗೆ ಕರೆದೊಯ್ದು ಅವನನ್ನು ಸಿಂಹಾಸನದ ಮೇಲೆ ಕೂರಿಸಿ ಹೇಳಿದ, ‘ಮಹಾರಾಜಾ, ನಾನು ಏಕೆ ಮತ್ತೊಬ್ಬ ರಾಜನಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನೇ ಯಾಕೆ ರಾಜನಾಗಲಿಲ್ಲವೆಂದು ತಾವು ಕೇಳಿದಿರಿ. ನಾನು ಮನಸ್ಸು ಮಾಡಿದ್ದರೆ ನಮ್ಮ ರಾಜ ವಿದೇಹರನ್ನು, ತಮ್ಮನ್ನು ಕೊಂದು ಎರಡು ದೇಶಗಳಿಗೂ ಒಡೆಯನಾಗಬಹುದಿತ್ತು. ಆದರೆ ಅದು ನನ್ನ ಕೆಲಸವಲ್ಲ. ದುಡ್ಡಿಗಾಗಿ ತನ್ನ ದೇಶವನ್ನು, ತಾನು ಒಪ್ಪಿದ ಪಕ್ಷವನ್ನು ಬಿಟ್ಟು ಬೇರೆಡೆಗೆ ಹೋಗುವವನು ಎಂದಿಗೂ ಉದ್ಧಾರವಾಗುವುದಿಲ್ಲ. ಹಣ ಶಾಶ್ವತವಲ್ಲ, ನಂಬಿಕೆ ಶಾಶ್ವತ. ಒಂದು ಸಲ ನಂಬಿಕೆಯನ್ನು ಕಳೆದುಕೊಂಡರೆ, ಆಗ ಹೋದ ಮರ್ಯಾದೆಯನ್ನು ಯಾವ ಹಣವೂ ಕೊಡಲಾರದು. ನಾನು ವಿದೇಹ ರಾಜನಿಗೆ, ಅವನಿಗೆ ಬೆಂಗಾವಲಾಗಿ ಇರುತ್ತೇನೆಂದು ತೆತ್ತುಕೊಂಡಿದ್ದೇನೆ. ಆತ ನನ್ನ ಮೇಲೆ ಕೋಪ ಮಾಡಿಕೊಂಡರೂ ಸರಿಯೆ, ದೇಶದಿಂದ ಬಹಿಷ್ಕಾರ ಮಾಡಿದರೂ ಸರಿಯೆ. ನಾನು ಮಾತ್ರ ಅವನಿಗೆ ಯಾವ ತೊಂದರೆಯೂ, ಅನ್ಯಾಯವೂ ಆಗದಂತೆ ನೋಡಿಕೊಳ್ಳುತ್ತೇನೆ. ಈಗ ನಿಮ್ಮ ಮಗಳನ್ನು ಆತ ಮದುವೆಯಾಗಬೇಕು ಎಂದು ಅಪೇಕ್ಷೆಪಟ್ಟ. ನನಗೆ ಗೊತ್ತಿತ್ತು, ನೀವು ಈ ಮೋಸವನ್ನು ಮಾಡಿ ಆತನನ್ನು ಮತ್ತು ನನ್ನನ್ನು ಕೊಲ್ಲಿಸಲು ಹೊಂಚು ಹಾಕಿದ್ದಿರಿ. ಆದರೆ ನನ್ನ ರಾಜ ಕಾಮದಲ್ಲಿ ಮೈಮರೆತಿದ್ದ. ಆದ್ದರಿಂದ ನಾನು ಯೋಜನೆ ಮಾಡಿ ಆತನ ಅಪೇಕ್ಷೆ ಪೂರೈಸುವಂತೆಯೂ ಮತ್ತು ಆತನ ಸರಿಯಾದ ರಕ್ಷಣೆಯಾಗುವಂತೆಯೂ ನೋಡಿಕೊಳ್ಳಬೇಕಾಯಿತು’.

ಈ ಉತ್ತರ ಬ್ರಹ್ಮದತ್ತ ಮಹಾರಾಜನಿಗೆ ತುಂಬ ಇಷ್ಟವಾಯಿತು. ಅವನ ರಾಜನಿಷ್ಠೆ, ವೃತ್ತಿಪರತೆಯನ್ನು ಮೆಚ್ಚಿದ. ಅಂಥ ಮಂತ್ರಿ ಇದ್ದರೆ ರಾಜ ನೆಮ್ಮದಿಯಿಂದ ಇರಬಹುದು ಎಂದುಕೊಂಡ. ತನ್ನ ದೇಶದ ಮಹಾಮಂತ್ರಿಯಾಗು, ನಿನಗೆ ಏನೆಲ್ಲವನ್ನೂ ಕೊಡುತ್ತೇನೆ ಎಂದು ಕೇಳಿದ. ಅದನ್ನು ಮಹೋಷಧಕುಮಾರ ವಿನಯದಿಂದ ನಿರಾಕರಿಸುವುದು ಮಾತ್ರವಲ್ಲ, ಮುಂದೆ ಇಬ್ಬರೂ ರಾಜರು ತಮ್ಮೊಳಗೆ ಕಾದಾಡದಂತೆ, ಅಣ್ಣತಮ್ಮಂದಿರಂತೆ ನಡೆದುಕೊಳ್ಳುವುದಾಗಿ ಭಾಷೆ ತೆಗೆದುಕೊಂಡ. ಇದರಿಂದ ಶಾಂತಿ ನೆಲೆಸಿ, ಪರಸ್ಪರ ಮೋಸದಾಟ ನಡೆಯದಂತೆ ಆಯಿತು.

ಅಲ್ಲಿಂದ ಹೊರಡುವಾಗ ಬ್ರಹ್ಮದತ್ತ ಮಹಾರಾಜನಿಗೆ ಮಹೋಷಧಕುಮಾರ ಆಶ್ವಾಸನೆಯನ್ನಿತ್ತ. ‘ಮಹಾರಾಜಾ, ನಿನ್ನ ಪರಿವಾರದವರ ಬಗ್ಗೆ ಯಾವ ಆತಂಕವೂ ಬೇಡ. ವಿದೇಹ ರಾಜ ತಮ್ಮ ತಾಯಿ ತಲತಲಾದೇವಿ ಮತ್ತು ರಾಣಿ ನಂದಾದೇವಿಯರನ್ನು ತನ್ನ ತಾಯಿಯಂತೆ, ನಿನ್ನ ಮಗನನ್ನು ತಮ್ಮನಂತೆ ನೋಡಿಕೊಳ್ಳುತ್ತಾನೆ. ನಾನು ಹೋದ ತಕ್ಷಣ ಮದುವೆಯ ವ್ಯವಸ್ಥೆ ಮಾಡಿ ತಿಳಿಸುತ್ತೇನೆ. ತಮ್ಮೆಲ್ಲ ಪರಿವಾರದೊಂದಿಗೆ ಬರಬೇಕು’. ಕುಮಾರನ ಮಾತು ಕೇಳಿ ರಾಜ ಬ್ರಹ್ಮದತ್ತನಿಗೆ ನಿರಾತಂಕವಾಯಿತು. ಕುಮಾರನನ್ನು ಮತ್ತೆ ಒಂದು ವಾರ ತನ್ನ ಬಳಿಯೇ ಇಟ್ಟುಕೊಂಡು ಅವನ ಮಾತುಗಳನ್ನು ಕೇಳಿದ. ‘ನಾನು ಅತ್ಯಂತ ಸಂತೋಷದಿಂದ ನಿನಗಾಗಿ ಸಾವಿರ ನಿಕಷಗಳನ್ನು, ಕಾಶೀಪದದ ಎಂಭತ್ತು ಗ್ರಾಮಗಳನ್ನು, ನಾಲ್ಕುನೂರು ದಾಸಿಯರನ್ನು, ನೂರು ಜನ ಅತ್ಯಂತ ಸುಂದರಿಯರನ್ನು ಕೊಡುತ್ತೇನೆ’ ಎಂದು, ವಿದೇಹ ಮಹಾರಾಜನಿಗೆ, ತನ್ನ ಮಕ್ಕಳಿಗೆ ಅನೇಕ ವಸ್ತ್ರ, ಅಲಂಕಾರ, ಹಿರಣ್ಯ, ಅಲಂಕೃತ ಆನೆಗಳನ್ನು, ಕುದುರೆ ರಥಾದಿಗಳನ್ನು ಕಾಣಿಕೆಯಾಗಿ ಕಳುಹಿಸಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.