ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಬಲ

Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ನಗರದಲ್ಲಿ ಸುಲಸಾ ಎಂಬ ಅತ್ಯಂತ ಶ್ರೀಮಂತ ವೇಶ್ಯೆಯಿದ್ದಳು. ಆಕೆಗೆ ಐದು ನೂರು ಜನ ದಾಸಿಯರಿದ್ದರು. ಆಕೆ ಸಾಮಾನ್ಯ ಪುರುಷರಿಗೆ ಗಗನಕುಸುಮ. ತನ್ನನ್ನು ಅಪೇಕ್ಷಿಸಿ ಬರುತ್ತಿದ್ದ ಶ್ರೀಮಂತ ಪುರುಷರಿಂದ ಆಕೆ ಒಂದು ರಾತ್ರಿಗೆ ಸಾವಿರ ಕಹಾಪಣಗಳನ್ನು ತೆಗೆದುಕೊಳ್ಳುತ್ತಿದ್ದಳು.

ಆ ಸಮಯದಲ್ಲಿ ನಗರದಲ್ಲಿ ಶ್ರೀಮಂತರ ಮನೆಗಳಿಗೆ ನುಗ್ಗಿ ಲೂಟಿ ಮಾಡಿ ತುಂಬ ಹೆದರಿಕೆಯನ್ನು ಹುಟ್ಟಿಸಿದ್ದ ಸತ್ತುಕನೆಂಬ ಕಳ್ಳನನ್ನು ಸೈನಿಕರು ಹಿಡಿದರು. ಅವನ ಕೈಗಳನ್ನು ಹಿಂದೆಕಟ್ಟಿ, ಛಡಿಯಿಂದ ಬೆನ್ನಮೇಲೆ ಪೆಟ್ಟು ಹಾಕುತ್ತ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದರು. ರಾಜ ಅವನನ್ನು ನೇಣಿಗೇರಿಸಬೇಕೆಂದು ಆಜ್ಞೆ ಮಾಡಿದ್ದ. ವಧಾಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸುಲಸಾಳ ಮನೆ ಇತ್ತು. ಆಕೆ ಮೊದಲ ಮಹಡಿಯ ಕಿಟಕಿಯ ಬಳಿ ನಿಂತು ನೋಡುತ್ತಿರುವಾಗ ಸತ್ತುಕನನ್ನು ಕರೆದುಕೊಂಡು ಹೋಗುವ ದೃಶ್ಯ ಕಂಡಿತು. ಆ ಕಳ್ಳನ ದೇಹದಾರ್ಢ್ಯವನ್ನು ಕಂಡು ಸುಲಸೆಗೆ ಅವನ ಮೇಲೆ ಮನಸ್ಸಾಯಿತು. ಆ ಮಹಾಬಲಶಾಲಿಯಾದ ಪುರುಷನನ್ನು ಬಿಡುಗಡೆ ಮಾಡಿಸಿ ಮನೆಯಲ್ಲಿ ಇಟ್ಟುಕೊಂಡರೆ ಸಾಕು, ನಂತರ ವೇಶ್ಯಾವೃತ್ತಿಯನ್ನು ಬಿಟ್ಟು ಅವನೊಂದಿಗೆ ಬದುಕಿಬಿಡುತ್ತೇನೆ ಎಂದು ತೀರ್ಮಾನಿಸಿದಳು. ಆಕೆಗೆ ಈಗಾಗಲೇ ನಾಲ್ಕು ತಲೆಮಾರುಗಳಷ್ಟು ಜನ ಕುಳಿತು ತಿಂದರೂ ಕರಗದಷ್ಟು ಹಣವಿತ್ತು. ಸುಲಸಾ, ಸತ್ತುಕನನ್ನು ಹಿಡಿದುಕೊಂಡು ಹೊರಟಿದ್ದ ಕೊತ್ಪಾಲನನ್ನು ಕರೆಸಿ ಅವನಿಗೆ ಸಾವಿರ ಕಹಾಪಣಗಳನ್ನು ಲಂಚವಾಗಿ ಕೊಟ್ಟು ಸತ್ತುಕನನ್ನು ಬಿಡಿಸಿಕೊಂಡಳು.

ಮೂರು-ನಾಲ್ಕು ತಿಂಗಳು ಬದುಕು ಸಂತೋಷದಿಂದ ಸಾಗಿತು. ಬರಬರುತ್ತ ಕಳ್ಳ ಸತ್ತುಕನಿಗೆ ಬೇಸರವಾಗಲಾರಂಭಿಸಿತು. ಅವನು ಎಂದೂ ಹೀಗೆ ಮನೆಯಲ್ಲಿಯೇ ಕುಳಿತವನಲ್ಲ, ಕಳವು ಮಾಡದೆ ಅವನಿಗೆ ಸುಖವಿಲ್ಲ. ಸುಲಸಾಳ ಬಳಿ ಇದ್ದ ಚಿನ್ನದ ಆಭರಣಗಳು ಅವನ ಮನಸ್ಸನ್ನು ಆವರಿಸಿದ್ದವು. ಹೇಗಾದರೂ ಮಾಡಿ ಆಕೆಯನ್ನು ಕೊಂದು ಆ ಆಭರಣಗಳನ್ನು ಹೊಡೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ.

ಮರುದಿನ ಸುಲಸೆಯನ್ನು ಕರೆದು, ‘ಸೈನಿಕರು ನನ್ನನ್ನು ಬಂಧಿಸಿ, ಎಳೆದೊಯ್ಯುತ್ತಿದ್ದಾಗ ನಾನು ಈ ಬಂಧನದಿಂದ ಪಾರಾದರೆ ಪರ್ವತದ ಶಿಖರದ ಮೇಲಿರುವ ವೃಕ್ಷದೇವತೆಗೆ ಬಲಿ ಕೊಡುತ್ತೇನೆಂದು ಹರಕೆ ಹೊತ್ತಿದ್ದೆ. ಈಗಾಗಲೇ ಮೂರು-ನಾಲ್ಕು ತಿಂಗಳು ಕಳೆದದ್ದರಿಂದ ಭಯವಾಗುತ್ತಿದೆ. ಬೇಗನೇ ಹೋಗಿ ಹರಕೆ ತೀರಿಸಿಕೊಂಡು ಬರೋಣ’ ಎಂದ. ಆಕೆ ಅದನ್ನು ಒಪ್ಪಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಳು. ಹೊರಡುವಾಗ ಆತ, ‘ಆ ದೇವತೆಯ ಹರಕೆಯನ್ನು ಅತ್ಯಂತ ಸಂಭ್ರಮದಿಂದ ತೀರಿಸಬೇಕು. ಅದಕ್ಕೆ ನೀನು ನಿನ್ನ ಬಳಿ ಇರುವ ಎಲ್ಲ ಆಭರಣಗಳನ್ನು ಧರಿಸಿ ಬಾ’ ಎಂದ. ಅವನ ಮನಸ್ಸಿನ ಕೀಳುಭಾವನೆಯನ್ನರಿಯದ ಆಕೆ ತನ್ನೆಲ್ಲ ಒಡವೆಗಳನ್ನು ಧರಿಸಿ ಬಂದಳು.

ಇಬ್ಬರೂ ಪರ್ವತ ಶಿಖರವನ್ನೇರಿದರು. ಅಲ್ಲಿ ಆ ಕಳ್ಳ, ‘ಸುಲಸಾ, ನಾನು ಹರಕೆ ತೀರಿಸಲು ಇಲ್ಲಿ ಬಂದಿಲ್ಲ, ನಿನ್ನನ್ನು ತೀರಿಸಿ ಆಭರಣಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದ. ಆಕೆ ತಾನು ಅವನಿಗೆ ಮಾಡಿದ ಉಪಕಾರವನ್ನು ನೆನಪಿಸಿದಳು, ಬೇಡಿಕೊಂಡಳು. ಆ ಕಳ್ಳನ ಮನಸ್ಸು ಕರಗಲಿಲ್ಲ. ಆತ ತನ್ನ ಬಟ್ಟೆಯಲ್ಲಿ ಮುಚ್ಚಿಟ್ಟಿದ್ದ ಖಡ್ಗವನ್ನು ಹೊರತೆಗೆದ. ಆಗ ಸುಲಸಾ, ‘ಒಂದು ನಿಮಿಷ. ನಿಮ್ಮನ್ನೇ ದೇವರೆಂದು ಭಾವಿಸಿದ್ದೆ. ನಿಮಗೊಂದು ಪ್ರದಕ್ಷಿಣೆ ಹಾಕಿ ಬರುತ್ತೇನೆ. ಆಮೇಲೆ ನನ್ನನ್ನುಕೊಲ್ಲಬಹುದು’ ಎಂದು ಅವನ ಕಾಲಿಗೆ ನಮಸ್ಕರಿಸಿ ಪ್ರದಕ್ಷಿಣೆ ಹಾಕುತ್ತ ಅವನ ಹಿಂದೆ ಬಂದು ಬೆನ್ನನ್ನು ಹಿಡಿದು ಬಲವಾಗಿ ತಳ್ಳಿಬಿಟ್ಟಳು. ಆತ ಪರ್ವತದಾಳಕ್ಕೆ ಬೀಳುತ್ತ ಬೀಳುತ್ತ ಚಿಂದಿಯಾಗಿ ಹೋದ. ಆಕೆ ಮನೆಗೆ ಮರಳಿ ನಿಶ್ಚಿಂತಳಾಗಿ ಬದುಕಿದಳು.

ಅಪಾರವಾದ ದೇಹಬಲಕ್ಕಿಂತ ಚುರುಕಾದ ಬುದ್ಧಿ ಹೆಚ್ಚು ಶಕ್ತಿಶಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT