ಮಂಗಳವಾರ, ಮೇ 17, 2022
26 °C

ಕುಮಾರನ ಶಕ್ತಿ ಪರೀಕ್ಷೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಹೋಷಧಕುಮಾರನನ್ನು ಪರೀಕ್ಷಿಸಲು ಅಮಾತ್ಯರು ತೀರ್ಮಾನಿಸಿದ್ದರಷ್ಟೇ? ನಾಲ್ಕೂ ಜನ ಅಮಾತ್ಯರು ಸೇರಿ ಕೆಲವು ಕಠಿಣ ಪರೀಕ್ಷೆಗಳನ್ನು ಅವನಿಗೆ ಕೊಡಲು ಯೋಜಿಸಿದರು. ಒಂದು ಪರೀಕ್ಷೆ ಹೀಗಿತ್ತು. ಒಂದು ದಿನ ಮಹೋಷಧಕುಮಾರ ಕ್ರೀಡಾಮಂಡಲದ ಬಳಿ ಹೋಗುತ್ತಿದ್ದಾಗ ಒಂದು ಘಟನೆ ನಡೆಯಿತು. ಅಲ್ಲೊಬ್ಬ ಕಟುಕ ಮಾಂಸವನ್ನು ಮಾರಲೆಂದು ಕತ್ತರಿಸಿ ತುಂಡುತುಂಡು ಮಾಡುತ್ತಿದ್ದ. ಆಗ ಒಂದು ದೊಡ್ಡ ಹದ್ದು ಹಾರಿಬಂದು ಮಾಂಸದ ತುಣುಕೊಂದನ್ನು ಕಚ್ಚಿಕೊಂಡು ಹಾರಿತು. ಕಟುಕ ಓಡಿ ಬಂದು ಕುಮಾರನನ್ನು ಬೇಡಿದ, ‘ಸ್ವಾಮಿ, ಹೇಗಾದರೂ ಮಾಡಿ ನನಗೆ ಹದ್ದು ತೆಗೆದುಕೊಂಡು ಹೋದ ಮಾಂಸವನ್ನು ಕೊಡಿಸಿ, ಅದು ಹೋದರೆ ನನಗೆ ತುಂಬ ನಷ್ಟವಾಗಿ ಊಟಕ್ಕೇ ತೊಂದರೆಯಾಗುತ್ತದೆ’ ಸುತ್ತಲೂ ನೆರೆದಿದ್ದ ಜನ ಕುಮಾರನನ್ನು ಗಮನಿಸುತ್ತಿದ್ದರು. ಅವರೊಂದಿಗೆ ಅಮಾತ್ಯರು ಕಳುಹಿಸಿದ ಸೇವಕರೂ ಇದ್ದರು. ಈ ಸಮಯದಲ್ಲಿ ಹದ್ದು ಎತ್ತಿಕೊಂಡು ಹೋದ ಮಾಂಸವನ್ನು ಬಿಡಿಸಲು ಕೆಲವು ತರುಣರು, ಹುಡುಗರು
ಹದ್ದನ್ನು ಹಿಂಬಾಲಿಸಿ ಓಡಾಡುತ್ತಿದ್ದರು. ಹದ್ದು ಅತ್ತಿಂದಿತ್ತ ಚಕ್ರಾಕಾರವಾಗಿ ಹಾರುತಿತ್ತು. ‘ನಾನು ಮಾಂಸವನ್ನು ಬಿಡಿಸಿ ಕೊಡಲೇ?’ ಎಂದು ಮಹೋಷಧಕುಮಾರ ಕೇಳಿದ. ಅದು ಅಸಾಧ್ಯವಾದ ಕೆಲಸವೆಂಬುದನ್ನು ತಿಳಿದಿದ್ದ ಜನ ಕುತೂಹಲದಿಂದ ಅವನನ್ನೇ ನೋಡುತ್ತಿದ್ದರು. ಮಹೋಷಧಕುಮಾರನು ಈ ಜನಜಂಗುಳಿಯಲ್ಲಿ ಅನೇಕರು ಹೊರನಾಡಿನವರಿರುವುದನ್ನು ಗಮನಿಸಿದ್ದ. ಬಹುಶ: ಈ ಪ್ರಸಂಗ ತನ್ನ ಶಕ್ತಿಯ ಪರೀಕ್ಷೆ ಇರಬಹುದೆಂದು ಊಹಿಸಿದ. ಆಗ ಕಟುಕ ಮತ್ತೆ ಹೇಳಿದ, ‘ಸ್ವಾಮಿ, ಮಾಂಸವನ್ನು ಹದ್ದಿನ ಬಾಯಿಯಿಂದ ಬಿಡಿಸುವುದು ನಿಮಗೆ ಸಾಧ್ಯವಾದರೆ ಬಿಡಿಸಿ, ನೋಡೋಣ’.

2

ಆಗ ಮಹೋಷಧಕುಮಾರ ಥಟ್ಟನೆ ನೆಗೆದು ಹದ್ದಿನ ಹಿಂದೆ ಓಡತೊಡಗಿದ. ಈಗಾಗಲೇ ಅನೇಕರು ಅದರ ಹಿಂದೆ ಓಡುತ್ತಲೇ ಇದ್ದರು. ಈಗ ಕುಮಾರ ಹದ್ದನ್ನು ಬೆನ್ನಟ್ಟುವುದನ್ನು ಬಿಟ್ಟ. ಸೂರ್ಯನ ಗತಿಯನ್ನು ಗಮನಿಸಿದ,ಹದ್ದಿನ ನೆರಳು ನೆಲದ ಮೇಲೆ ಅಲೆದಾಡುವುದನ್ನು ಕಂಡ. ಅವನಿಗೆ ನೆರಳನ್ನು ಹಿಡಿಯುವ ವಿದ್ಯೆ ಕರಗತವಾಗಿತ್ತು. ಆತ ಹದ್ದಿನ ನೆರಳು ತನ್ನ ಬಳಿಗೆ ಬರುವವರೆಗೆ ಕಾಯ್ದು ನಿಂತ. ಅದು ಹತ್ತಿರಕ್ಕೆ ಬಂದ ತಕ್ಷಣ, ನೆಲಕ್ಕೆ ಬಾಗಿ ನೆರಳಿಗೆ ಪಟ್ ಎಂದು ತನ್ನ ಅಂಗೈಯಿಂದ ಬಡಿದ. ಆಶ್ಚರ್ಯ! ಹದ್ದು ಹಾರಲಾರದೆ ಆಕಾಶದಲ್ಲಿ ಪಟಪಟನೆ ರೆಕ್ಕೆ ಬಡಿಯುತ್ತ ನಿಂತಿತು. ಕುಮಾರ ನೆರಳನ್ನೇ ದಿಟ್ಟಿಸಿ ನೋಡುತ್ತ ಜೋರಾಗಿ ಶಿಳ್ಳೆ ಹೊಡೆದಂತೆ ಶಬ್ದ ಮಾಡುತ್ತ ಕೂಗಿದ. ಆ ಕೂಗಿಗೆ ಹದ್ದು ಹೆದರಿತು. ಆ ಧ್ವನಿ ಅದರ ಹೊಟ್ಟೆಯನ್ನು ಸೀಳಿ ಹೊರಬಂದಂತೆ ಆಯಿತು. ಗಾಬರಿಯಿಂದ ಹದ್ದು ಮಾಂಸವನ್ನು ತನ್ನ ಕೊಕ್ಕಿನಿಂದ ಬಿಟ್ಟುಬಿಟ್ಟಿತು. ಮಾಂಸದ ತುಂಡು ಆಕಾಶದಿಂದ ಕೆಳಕ್ಕೆ ಬೀಳುತ್ತಿತ್ತು. ಅದು ಕೆಳಗೆ ಬಿದ್ದರೆ ಮಣ್ಣು ಆಗಿ ಹೊಲಸಾಗುತಿತ್ತು. ಮಹೋಷಧಕುಮಾರ ನೆರಳಿನತ್ತ ನೋಡುತ್ತಲೇ ತನ್ನ ಎಡಗೈಯನ್ನು ಮೇಲಕ್ಕೆ ಮಾಡಿದ. ಮಾಂಸದ ತುಂಡು ಗಾಳಿಯಲ್ಲೇ ನಿಂತು, ನಿಧಾನವಾಗಿ ಸರಿಯುತ್ತಾ ಕಟುಕನ ಕಟ್ಟೆಯ ಮೇಲೆ ಬಂದಿಳಿಯಿತು. ಜನರೆಲ್ಲ ಜೈಕಾರ ಮಾಡಿದರು. ಅಮಾತ್ಯರು ಕಳುಹಿಸಿದ ದೂತರು ಬಂದು ಕುಮಾರನ ಶಕ್ತಿಯನ್ನು ವರ್ಣಿಸಿದರು. ಆಗ ಅಮಾತ್ಯರು ಇದೊಂದು ಸಣ್ಣ ಪರೀಕ್ಷೆ, ಇದಕ್ಕಿಂತ ದೊಡ್ಡ ಪರೀಕ್ಷೆ ಮಾಡಿ ಶಕ್ತಿಯನ್ನು ಅಳೆಯೋಣ ಎಂದು ತೀರ್ಮಾನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.