ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಜೀವಶಿಲೆ ಮೃದುವಾಗುವ ಪರಿ

Last Updated 15 ಏಪ್ರಿಲ್ 2022, 15:26 IST
ಅಕ್ಷರ ಗಾತ್ರ

ಉದರಶಿಖಿಯೊಂದು ಕಡೆ, ಹೃದಯಶಿಖಿಯೊಂದು ಕಡೆ |
ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||
ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ|
ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||605||

ಪದ-ಅರ್ಥ: ಉದರಶಿಖಿಯೊಂದು=ಉದರ (ಹೊಟ್ಟೆ)+ಶಿಖಿ(ಬೆಂಕಿ)+ಒಂದು, ಹೃದಯಶಿಖಿ=ಹೃದಯ+ಶಿಖಿ+ಒಂದು, ಮೃದುವಪ್ಪುದೆಂತು=ಮೃದು+ಅಪ್ಪುದು(ಆಗುವುದು) +ಎಂತು(ಹೇಗೆ), ಬದುಕಿನುರಿಯಲಿ=
ಬದುಕಿನ+ಉರಿಯಲಿ, ಪುದಿಯದಾ
ತ್ಮಾರ್ಣವದಿ=ಪುದಿಯದು(ತುಂಬದು)+

ಆತ್ಮಾರ್ಣವದಿ (ಆತ್ಮವೆಂಬ ಸಮುದ್ರದಲ್ಲಿ).

ವಾಚ್ಯಾರ್ಥ: ಒಂದೆಡೆಗೆ ಹೊಟ್ಟೆಯ ಬೆಂಕಿ, ಇನ್ನೊಂದೆಡೆಗೆ ಹೃದಯದ ಬೆಂಕಿ, ಇವೆರಡೂ ಜೀವವೆಂಬ ಕಲ್ಲನ್ನು ಕುದಿಸದಿದ್ದರೆ ಅದು ಹೇಗೆ ಮೃದುವಾದೀತು? ಬದುಕಿನ ಉರಿಯಲ್ಲಿ ಕರಗಿ, ತಿಳಿಯಾಗದಿದ್ದರೆ ಜೀವ ಆತ್ಮವೆಂಬ ಸಮುದ್ರದಲ್ಲಿ ಸೇರಲಾರದು.

ವಿವರಣೆ: ಬಿರುಸಾದ ವಸ್ತುವನ್ನು ಮೃದು ಮಾಡಲು ಅದನ್ನು ಚೆನ್ನಾಗಿ ಕಾಯಿಸಿ ಕರಗಿಸಬೇಕು. ಅದಕ್ಕಾಗಿ ಬೆಂಕಿ ಬೇಕು. ಆದರೆ ಮನುಷ್ಯನೆಂಬ ಕಠಿಣ ವಸ್ತುವನ್ನು ಎರಡು ಬೆಂಕಿಗಳು ಕುದಿಸುತ್ತವಂತೆ. ಒಂದು ಉದರಶಿಖಿ. ಅದು ಹೊಟ್ಟೆಯಲ್ಲಿಯ ಬೆಂಕಿ. ಹೊಟ್ಟೆಪಾಡಿಗೆ ಮನುಷ್ಯ ಏನೇನು ಕೆಲಸ ಮಾಡುತ್ತಾನೆ ಅಲ್ಲವೆ? ತನಗೆ ಇಷ್ಟವಿದ್ದ, ಇಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಾನೆ. ಇದಕ್ಕಾಗಿ ಆತ ಬದುಕಿನಲ್ಲಿ ಅನೇಕ ಸಂಬಂಧಗಳನ್ನು ಕುದುರಿಸಿಕೊಳ್ಳುತ್ತಾನೆ. ಈ ಸಂಬಂಧಗಳಿಗಾಗಿ ಆತನಿಗೆ ಸುಖ-ದುಃಖ, ಆಸೆ-ನಿರಾಸೆ, ಲಾಭ-ನಷ್ಟ ಎಲ್ಲವೂ ಆಗುತ್ತವೆ. ಅವು ಅವನನ್ನು ಚೆನ್ನಾಗಿ ಕುದಿಸುತ್ತವೆ. ಇದು ಸಾಕಾಗಲಿಲ್ಲವೆಂದು ಮತ್ತೊಂದು ಬೆಂಕಿ ಮನುಷ್ಯನನ್ನು ಕುದಿಸುತ್ತದೆ. ಅದು ಹೃದಯಶಿಖಿ. ಹೃದಯದ ಬೆಂಕಿ. ಇದಕ್ಕೂ ಸಂಬಂಧಗಳೇ ಕಾರಣ. ನಮ್ಮ ಪರಿವಾರದವರ ಜೊತೆಗಿನ ಪ್ರೀತಿ, ಕರುಣೆ, ಅಂತ:ಕರಣಗಳು ನಮ್ಮ ಅಂತರಂಗವನ್ನು ಕಲಕಿಬಿಡುತ್ತವೆ. ಮಕ್ಕಳ ಭವಿಷ್ಯದ ಚಿಂತೆ, ಅವರ ನಡೆ-ನುಡಿಗಳ ಚಿಂತೆ, ಪರಿವಾರದವರು ನಿಮ್ಮಿಂದ ಬಯಸುವ ಅಪೇಕ್ಷೆಗಳು ಮತ್ತು ನೀವು ಅವರಿಂದ ಅಪೇಕ್ಷಿಸುವ ಸಂಗತಿಗಳು, ಅವು ವಿಫಲವಾದಾಗ ಬರುವ ಸಂಕಟ. ತನ್ನವರ ಬೆಳವಣಿಗೆಗೆ ಅಡ್ಡವಾದವರ ಬಗ್ಗೆ ದ್ವೇಷ, ಮುಂದೆ ಸಾಗಲು ಸ್ಪರ್ಧೆ, ಇವುಗಳ ಕುದಿ ಏನು ಕಡಿಮೆಯೆ?

ಮೊದಲನೆಯ ಬೆಂಕಿ, ಹೊಟ್ಟೆಯ ಬೆಂಕಿ, ದೇಹಕ್ಕೆ ಸಂಬಂಧಿಸಿದ್ದು. ಅದು ದೇಹವನ್ನು ಹಣ್ಣು ಮಾಡುತ್ತದೆ. ಎರಡನೆಯದು ಮನಸ್ಸಿಗೆ, ಅಂತರಂಗಕ್ಕೆ ಸಂಬಂಧಿಸಿದ್ದು. ಮನುಷ್ಯನ ಬದುಕು ಇವೆರಡರಲ್ಲಿ ಇದೆ. ಕಗ್ಗ ಅದನ್ನ ಜೀವಶಿಲೆ ಎನ್ನುತ್ತದೆ. ಅನುಭವ ಕಡಿಮೆ ಇರುವಾಗ, ಬಾಲ್ಯದಲ್ಲಿ ತಾರುಣ್ಯದಲ್ಲಿ ಅದು ಶಿಲೆಯಂತೆ ಕಠಿಣವಾಗಿರುತ್ತದೆ. ಎಲ್ಲವನ್ನು ಸಾಧಿಸಬಲ್ಲೆ ಎಂಬ ಅಹಂನಲ್ಲಿ ನಿಂತಿರುತ್ತದೆ. ಮುಂದೆ ಇವೆರಡೂ ಬೆಂಕಿಯಲ್ಲಿ ಕುದಿದು ಬೆಂದ ಜೀವ ತಿಳಿಯಾಗುತ್ತದೆ. ಹಾಗೆ ಕುದಿದು ಹೊರಬಂದ ಜೀವದ ಕೊಳೆಯ ಪೊರೆಗಳು ಒಂದೊಂದಾಗಿ ಕಳಚಿ ಬೀಳುತ್ತ ಕೊನೆಗೆ ಅವನು ಶುದ್ಧಾತ್ಮನಾಗುತ್ತಾನೆ. ಈ ಭಾವ ಮೈಗೂಡಿದರೆ ಮನದಲ್ಲಿ ಆನಂದವೇ ಆನಂದ. ಅದು ಸುಖ-ದುಃಖವನ್ನು ಮೀರಿದ್ದು. ಅಂತಹ ವ್ಯಕ್ತಿಯನ್ನು ‘ಯೋಗಿ’ ಎಂದು ಜನ ಗುರುತಿಸುತ್ತಾರೆ. ಅಂತಹ ವ್ಯಕ್ತಿ ಆತ್ಮ ಎಂಬ ಮಹಾ ಸಮುದ್ರದಲ್ಲಿ ಒಂದಾಗಿ ಹೋಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT