ಗುರುವಾರ , ಡಿಸೆಂಬರ್ 1, 2022
20 °C

ಬೆರಗಿನ ಬೆಳಕು: ಹೊಸತನವೆ ಬಾಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |

ರಸವು ನವನವತೆಯಿಂದನು ದಿನವು ಹೊಮ್ಮಿ ||

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |

ಪಸರುತಿರೆ ಬಾಳ್ ಚೆಲುವು – ಮಂಕುತಿಮ್ಮ || 720

||

ಪದ-ಅರ್ಥ: ಹಳಸಿಕೆಯೆಲ್ಲ ಹಳಸಿಕೆ(ಹಿಂದಾದದ್ದು)+ ಎಲ್ಲ, ನವನವತೆಯಿಂದನುದಿನವು=ನವನವತೆಯಿಂದ+ಅನುದಿನವು(ಪ್ರತಿದಿನ), ಹಸನೊಂದು=ಸ್ವಚ್ಛತೆಯೊಂದು, ಪಸರುತಿರೆ=ಹರಡುತ್ತಿದ್ದರೆ.

ವಾಚ್ಯಾರ್ಥ: ಹೊಸದಾಗಿರುವುದೆ ಬಾಳು, ಹಳೆಯದ್ದೆಲ್ಲ ಸತ್ತು ಹೋಗಿದೆ ಬಿಡು. ನಮ್ಮ ನುಡಿಯಲ್ಲಿ, ನಡೆಯಲ್ಲಿ, ನೋಟದಲ್ಲಿ ಹೊಸತನ ದಿನದಿನವೂ ಹೊಮ್ಮಿದರೆ ಆನಂದದ ರಸ ಹೊಮ್ಮಿ ಹರಡಿ, ಬಾಳು ಚೆಲುವಾಗುತ್ತದೆ.
ವಿವರಣೆ: ಚಂದೂ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಅವನು ಕಿವಿಗೆ ಒಂದು ಪುಟ್ಟ ಯಂತ್ರವನ್ನು ಹಾಕಿಕೊಂಡು ಮೊಬೈಲ್‌ನಲ್ಲಿದ್ದ ಹಾಡನ್ನೋ, ಉಪನ್ಯಾಸವನ್ನೋ ಕೇಳುತ್ತ ಸಂತೋಷವಾಗಿ ಕುಳಿತಿದ್ದ. ಅವನನ್ನು ನೋಡಿದರೆ ಅವನಷ್ಟು ಸುಖಪುರುಷ ಪ್ರಪಂಚದಲ್ಲೇ ಯಾರೂ ಇಲ್ಲ ಎನ್ನಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಸುತ್ತಮುತ್ತ ಕುಳಿತವರೊಡನೆ ಮಾತುಕತೆ ಪ್ರಾರಂಭವಾಯಿತು. ಎಲ್ಲದರಲ್ಲೂ ಚಂದೂವಿನ ನಗೆ, ಸಂತೋಷ ಹರಡುತ್ತಿತ್ತು. ಅಜ್ಜಿಯೊಬ್ಬರು ಹೇಳಿದರು,

“ನೀನು ಪುಣ್ಯವಂತನಪ್ಪಾ, ಒಬ್ಬನೇ ಹಾಯಾಗಿದ್ದೀಯಾ. ನಾವೆಲ್ಲ ಸಂಸಾರ ಕಟ್ಟಿಕೊಂಡು ಒದ್ದಾಡತಾ ಇದ್ದೇವೆ. ನಮ್ಮ ಕಷ್ಟಗಳು ಮುಗಿಯುವುದೇ ಇಲ್ಲ”. ಉಳಿದವರೂ ಅದೇ ಮಾತನ್ನು ಧ್ವನಿಸಿದರು. ಆಗ ಚಂದೂ ಹೇಳಿದ, “ಸ್ವಾಮಿ, ಸಂತೋಷ, ಸುಖಗಳನ್ನು ಯಾರೂ ತಟ್ಟೆಯಲ್ಲಿಟ್ಟು ಕೊಡುವುದಿಲ್ಲ. ನಮಗೆ ಬಂದದ್ದರಲ್ಲಿ ಅದನ್ನು ಕಂಡುಕೊಳ್ಳಬೇಕು”. ಉಳಿದ ಪ್ರಯಾಣಿಕರು, “ಅಯ್ಯಾ, ನಿನಗೆ ಯಾವ ತೊಂದರೆ ಇಲ್ಲದೆ ಚೆನ್ನಾಗಿದ್ದೀಯಾ ಎಂದು ಹೀಗೆ ಹೇಳುತ್ತೀ. ನಮ್ಮ ಕಷ್ಟ ನಮಗೇ ಗೊತ್ತು” ಎಂದಾಗ ಚಂದೂ ನಕ್ಕು, ಕಿವಿಯಲ್ಲಿಯ ಯಂತ್ರವನ್ನು ತೆಗೆದಿಟ್ಟು, ನಿಧಾನವಾಗಿ ಬಗ್ಗಿ ತನ್ನ ಪ್ಯಾಂಟನ್ನು ಮೇಲಕ್ಕೇರಿಸಿದ. ಅವನ ಎರಡೂ ಕಾಲುಗಳು ಕೃತ್ರಿಮ, ಮರದ ಕಾಲುಗಳು! ಎಲ್ಲರೂ ಬೆಚ್ಚಿದರು. ಚಂದೂ ಹೇಳಿದ, “ಸ್ನೇಹಿತರೇ ನಾನು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಕೆಲಸ ಮಾಡುವಾಗ ಉಗ್ರಗಾಮಿಗಳು ದಾಳಿ ಮಾಡಿದರು. ನಾನು ಭಾರತೀಯ ಸೈನಿಕರಿಗೆ ಸಹಾಯ ಮಾಡಲೆಂದು ಮನೆಯ ಹಿಂಭಾಗಕ್ಕೆ ಬಂದಾಗ ಉಗ್ರಗಾಮಿಗಳು ಎಸೆದ ಬಾಂಬು ನನ್ನ ಕಾಲಡಿಯಲ್ಲಿ ಸ್ಫೋಟಗೊಂಡವು. ಆಗ ನನ್ನೆರಡೂ ಕಾಲುಗಳು ಕತ್ತರಿಸಿ ಹೋಗು ವುದರೊಂದಿಗೆ ನನ್ನ ಜೊತೆಗಿದ್ದ ಪ್ರಿಯ ಪತ್ನಿ ಮತ್ತು ಮಕ್ಕಳಿಬ್ಬರೂ ಸತ್ತು ಹೋದರು. ನಾನೀಗ ಏಕಾಂಗಿ. ಆದರೆ ಹಿಂದಾಗಿ ಹೋದದ್ದಕ್ಕೆ ಕೊರಗಿದರೆ ಅವರು ಮರಳಿ ಬರುತ್ತಾರೆಯೆ? ಅದಕ್ಕೆ ನಾನು ಭಗವಂತ ನೀಡಿದ್ದೇ ಸರಿಯಾಗಿದೆ ಎಂದು ಹಿಂದಿನದನ್ನು ಮರೆಯಲು ಪ್ರಯತ್ನಿಸುತ್ತ ನಾಳಿನ ದಿನವನ್ನು ಸಂತೋಷದಿಂದ ಎದುರು ನೋಡುತ್ತಿದ್ದೇನೆ”. ಎಲ್ಲರೂ ತಣ್ಣಗಾದರು. ಅವನ ಕಷ್ಟಗಳ ಮುಂದೆ ತಮ್ಮದು ಏನೂ ಅಲ್ಲ. ಇದೇ ಸುಂದರ ಬದುಕಿನ ಗುಟ್ಟು. ಅದನ್ನೇ ಕಗ್ಗ ಹೇಳುತ್ತದೆ ಪ್ರತಿಕ್ಷಣವೂ ಹೊಸತಾಗುವುದೆ ಬಾಳು. ಹಿಂದಾಗಿ ಹೋದದ್ದೆಲ್ಲ ಬರೀ ಸಾವು. ಅದು ಮತ್ತೆಂದೂ ಮರಳಿ ಬರ ಲಾರದು. ಆದ್ದರಿಂದ ನಮ್ಮ ನಡೆಯಲ್ಲಿ, ನುಡಿಯಲ್ಲಿ, ನೋಟದಲ್ಲಿ ಸ್ವಚ್ಛತೆ ಇದ್ದು, ಸದಾ ಹೊಸದನ್ನು, ಸುಂದರವಾದದ್ದನ್ನು ಕಾಣಲು ಪ್ರಯತ್ನಿಸಿದರೆ ನವನವತೆಯ ರಸ ಪ್ರತಿದಿನ ಹೊಮ್ಮಿ ಬದುಕನ್ನು ಸಹ್ಯವಾಗಿ, ಸುಂದರವಾಗಿ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು