ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬೋಧಿಸತ್ವನ ಜನನ

Last Updated 3 ಜೂನ್ 2021, 19:42 IST
ಅಕ್ಷರ ಗಾತ್ರ

ಪುಸತಿ ಶಕ್ರನಿಂದ ವರ ಪಡೆದು ದೇವಲೋಕದಿಂದ ಕೆಳಗಿಳಿದು ಮದ್ರರಾಜನ ಪಟ್ಟದರಸಿಯ ಗರ್ಭವನ್ನು ಪ್ರವೇಶಿಸಿದಳು. ಆಕೆ ಹುಟ್ಟಿದಾಗ ಚಂದನದ ಸುವಾಸನೆ ಅರಮನೆಯನ್ನು ತುಂಬಿದ್ದರಿಂದ ಆಕೆಗೆ ‘ಪುಸತಿ’ ಎಂದೇ ಹೆಸರಿಟ್ಟರು. ಆಕೆ ವೈಭವದಿಂದ ಬೆಳೆದು ಹದಿನಾರನೆಯ ವರ್ಷದಲ್ಲಿ ಅತ್ಯಂತ ರೂಪವತಿಯಾದಳು. ಆಗ ಸಿವಿರಾಜ ಅವಳನ್ನು ತನ್ನ ಮಗ ಸಂಜಯಕುಮಾರನಿಗೆ ಸರಿಯಾದ ಜೋಡಿ ಎಂದು ತಿಳಿದು ಮದುವೆ ಮಾಡಿಸಿದ. ಪುಸತಿಯನ್ನು ಹದಿನಾರು ಸಾವಿರ ಸ್ತ್ರೀಯರಲ್ಲಿ ಶ್ರೇಷ್ಠಳೆಂದು ತೀರ್ಮಾನಮಾಡಿ ಆಕೆಯನ್ನು ಪಟ್ಟದರಾಣಿಯನ್ನಾಗಿ ಮಾಡಿದ. ಶಕ್ರ ಇದನ್ನು ದಿವ್ಯದೃಷ್ಟಿಯಿಂದ ನೋಡಿ ಪುಸತಿಯ ಇನ್ನೊಂದು ಅಪೇಕ್ಷೆ ಉಳಿದಿರುವುದನ್ನು ತಿಳಿದ. ಅದು ಬುದ್ಧನಂತಹ ಮಗನಿಗೆ ತಾನು ತಾಯಿಯಾಗಬೇಕೆಂದು ಪ್ರಾರ್ಥಿಸಿದ್ದು. ಆಗ ಬೋಧಿಸತ್ವ ತ್ರಯೋತ್ರಿಂಶ ದೇವಲೋಕದಲ್ಲಿದ್ದ. ಅಲ್ಲಿ ಅವನ ಆಯುಸ್ಸು ಮುಗಿಯಲು ಬಂದಿತ್ತು. ಶಕ್ರ ಅವನ ಬಳಿಗೆ ಹೋಗಿ, ‘ಬೋಧಿಸತ್ವ, ಇಲ್ಲಿ ನಿನ್ನ ಸಮಯ ಮುಗಿದಿದೆ. ನೀನು ಮನುಷ್ಯಲೋಕಕ್ಕೆ ಹೋಗಿ ಸಿವಿರಾಜನ ಪಟ್ಟದರಸಿ ಪುಸತಿಯ ಗರ್ಭದಲ್ಲಿ ಜನಿಸಬೇಕು. ನಿನ್ನೊಂದಿಗೆ ಚ್ಯುತರಾಗುವ ಅರವತ್ತು ಸಾವಿರ ದೇವಪುತ್ರರೂ ನಿನ್ನೊಂದಿಗೆ ಅದೇ ರಾಜ್ಯದಲ್ಲಿ ಜನಿಸುತ್ತಾರೆ’. ಬೋಧಿಸತ್ವ ಪುಸತಿಯ ಗರ್ಭಕ್ಕೆ ಇಳಿದ. ಉಳಿದ ದೇವಪುತ್ರರೂ ಸಾವಿರ ಅಮಾತ್ಯರ, ನಾಯಕರ ಮನೆಗಳಲ್ಲಿ ಹುಟ್ಟಿದರು. ಬೋಧಿಸತ್ವ ಗರ್ಭಕ್ಕೆ ಬಂದೊಡನೆ ತಾಯಿ ಪುಸತಿಗೆ ಬಯಕೆಗಳು ಉಂಟಾಗತೊಡಗಿದವು. ಆಕೆಗೆ ಕೇವಲ ದಾನಮಾಡುವ ಬಯಕೆ. ಅದರಂತೆ ನಗರದ ನಾಲ್ಕು ದ್ವಾರಗಳ ಬದಿಯಲ್ಲಿ, ನಗರದ ಮಧ್ಯೆ ಮತ್ತು ಅರಮನೆಯ ಮಹಾದ್ವಾರದಲ್ಲಿ ದಾನಶಾಲೆಗಳನ್ನು ನಿರ್ಮಾಣ ಮಾಡಿಸಿ, ನಿತ್ಯ ದಾನ ಮಾಡಲು ರಾಜ ನೇಮಿಸಿದ. ಪುರೋಹಿತರು, ‘ಮಹಾರಾಜಾ, ಯಾವುದೋ ಉದಾತ್ತವಾದ ಜೀವ ರಾಣಿಯ ಗರ್ಭವನ್ನು ಸೇರಿದೆ. ಅದಕ್ಕಾಗಿಯೇ ಈ ದಾನದ ಗುಣ ಬಂದದ್ದು. ಈ ದಾನದಿಂದ ಆ ಜೀವಕ್ಕೆ ತೃಪ್ತಿಯಾಗುತ್ತದೆ’ ಎಂದರು.

ಪುಸತಿ ರಾಣಿಯ ಗರ್ಭ ಬೆಳೆಯುವುದನ್ನು ಇಡೀ ನಗರ ಸಂಭ್ರಮದಿಂದ ಗಮನಿಸುತ್ತಿತ್ತು. ಆಕೆಗೂ ತುಂಬ ಸಂತೋಷ. ಹತ್ತು ತಿಂಗಳು ಪೂರ್ಣಗೊಂಡ ಮೇಲೆ ಒಂದು ದಿನ ಆಕೆ ನಗರ ಪ್ರದಕ್ಷಿಣೆಗೆ ಮನಸ್ಸು ತೋರಿದಳು. ರಾಜ ಇಡೀ ನಗರವನ್ನು ದೇವನಗರಿಯಂತೆ ಅಲಂಕರಿಸಿ, ಅವಳನ್ನು ನಾಲ್ಕು ಕುದುರೆಗಳಿಂದ ಹೂಡಿದ ಶ್ರೇಷ್ಠ ರಥದಲ್ಲಿ ಕೂರಿಸಿಕೊಂಡು ನಗರ ಪ್ರದಕ್ಷಿಣೆ ಮಾಡಿಸಿದ. ಆಕೆಗೆ ದಿನ ತುಂಬಿತ್ತು. ರಥ ವೈಶ್ಯರ ಬೀದಿಯಲ್ಲಿ ಬರುತ್ತಿದ್ದಂತೆ, ಆಕೆಗೆ ಪ್ರಸವವೇದನೆ ಪ್ರಾರಂಭವಾಯಿತು. ಆಗ ರಾಜ ಅಲ್ಲಿಯೇ ವೈಶ್ಯರ ಬೀದಿಯಲ್ಲಿಯೇ ಹೆರಿಗೆಯ ವ್ಯವಸ್ಥೆಯನ್ನು ಮಾಡಿದ. ಬೋಧಿಸತ್ವ ಅಲ್ಲಿಯೇ ಹುಟ್ಟಿದ. ಅವನು ವೈಶ್ಯರ ಬೀದಿಯಲ್ಲಿ ಹುಟ್ಟಿದ್ದರಿಂದ ಅವನಿಗೆ ವೆಸ್ಸಂತರ ಎಂದು ಹೆಸರು ಬಂತು. ಬೋಧಿಸತ್ವ ಹುಟ್ಟಿದೊಡನೆ ಕಣ್ತೆರೆದು, ‘ಅಮ್ಮಾ, ನಾನು ದಾನ ಮಾಡಬೇಕು. ಏನಾದರೂ ಕೊಡು’ ಎಂದ. ಆಕೆ ಸಾವಿರ ನಾಣ್ಯಗಳ ಚೀಲವನ್ನು ಅವನ ಮುಂದಿಟ್ಟಾಗ ಅವನ್ನೆಲ್ಲ ದಾನವಾಗಿ ನೀಡಿಬಿಟ್ಟ. ಮಗು ಹುಟ್ಟಿದ ಕೂಡಲೆ ಮಾತನಾಡಿದ್ದು ಮತ್ತು ದಾನ ಮಾಡಿದ್ದು ಅತ್ಯಂತ ಅಪರೂಪವೆಂದು ಪುರೋಹಿತರು ಹೇಳಿದರು. ಬೋಧಿಸತ್ವ ಹುಟ್ಟಿದೊಡನೆ ದೇಶದಲ್ಲೆಲ್ಲ ಮಂಗಳವಾದ್ಯಗಳು ಮೊಳಗಿದವು, ಅವನನ್ನು ಸ್ವಾಗತಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT