ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನರ ಸಹವಾಸದ ದುರ್ಬಳಕೆ

Last Updated 26 ಆಗಸ್ಟ್ 2018, 19:53 IST
ಅಕ್ಷರ ಗಾತ್ರ

ಒಮ್ಮೆ ಬೋಧಿಸತ್ವ ಒಂದು ಪಾರಿವಾಳವಾಗಿ ಹುಟ್ಟಿದ್ದ. ಅಲ್ಲೊಂದು ಶ್ರೇಷ್ಠಿಯ ಮನೆ. ಶ್ರೇಷ್ಠಿಯ ಅಡುಗೆಯವನು ಪಕ್ಷಿಗಳಿಗೆ ಅನುಕೂಲವಾಗಲಿ ಎಂದು ಅಲ್ಲಲ್ಲಿ ಗೂಡುಗಳನ್ನು ನೇತು ಹಾಕಿದ್ದ. ಅಂಥ ಒಂದು ಗೂಡಿನಲ್ಲಿ ಬೋಧಿಸತ್ವ ವಾಸಿಸುತ್ತಿದ್ದ.

ಒಂದು ದಿನ ಕಾಗೆಯೊಂದು ಶ್ರೇಷ್ಠಿಯ ಮನೆಯ ಮೇಲೆ ಹಾರಿ ಹೋಗುತ್ತಿರುವಾಗ ಮೀನಿನ ಮಾಂಸದ ಒಗ್ಗರಣೆಯ ವಾಸನೆ ಮೂಗಿಗೆ ಬಡಿಯಿತು. ಮನೆಯೊಳಗೆ ಹೋಗಿ ಅದನ್ನು ಪಡೆಯುವುದು ಹೇಗೆ ಎಂದು ಚಿಂತಿಸುವಾಗ ಪಾರಿವಾಳ ಒಳಗೆ ಹೋಗುವುದನ್ನು ಕಂಡಿತು. ಈ ಪಾರಿವಾಳದ ಸ್ನೇಹ ಮಾಡಿಕೊಂಡರೆ ಮೀನಿನ ಮಾಂಸ ದೊರೆಯುವುದೆಂದು ತಿಳಿದು, ಮರುದಿನ ಪಾರಿವಾಳ ಬೆಳಿಗ್ಗೆ ಹೊರಟಾಗ ಅದರ ಹಿಂದೆಯೇ ಹೊರಟಿತು.

‘ಯಾಕೆ ನನ್ನ ಹಿಂದೆಯೇ ಬರುತ್ತೀ?’ ಎಂದು ಪಾರಿವಾಳ ಕೇಳಿದಾಗ ಕಾಗೆ ಹೇಳಿತು, ‘ಮಿತ್ರಾ, ನೀನು ಸಜ್ಜನ ವ್ಯಕ್ತಿ. ನಿನ್ನ ಜೀವನ ಶೈಲಿ ತುಂಬ ಸಾಧುವಾದದ್ದು. ಇಂದಿನಿಂದ ನಿನ್ನ ಜೊತೆಗಿದ್ದು ಸೇವೆ ಮಾಡುತ್ತೇನೆ!’. ‘ಅಯ್ಯಾ, ನನ್ನ ನಿನ್ನ ಆಹಾರ ಪದ್ಧತಿಗಳೇ ಬೇರೆ. ಹೇಗೆ ಸೇವೆ ಮಾಡುತ್ತೀ?” ಎಂದು ಕೇಳಿತು ಪಾರಿವಾಳ. ‘ಇಲ್ಲ, ನಾನು ನನ್ನ ಆಹಾರ ಪದ್ಧತಿಯನ್ನು ಬದಲಿಸಿ ತಮ್ಮಂತೆಯೇ ಇರುತ್ತೇನೆ’ ಎಂದಿತು ಕಾಗೆ ವಿನಯವನ್ನು ನಟಿಸುತ್ತ.

ಬೋಧಿಸತ್ವ ಹುಲ್ಲು, ಕಾಳುಗಳನ್ನು ತಿನ್ನುವಾಗ ಕಾಗೆ ಸ್ವಲ್ಪ ದೂರಹೋಗಿ ಸೆಗಣಿಯ ಹುಳಗಳನ್ನು ತಿಂದುಬಂದು ಕುಳಿತಿತು. ಸಂಜೆ ಪಾರಿವಾಳದ ಜೊತೆಗೆ ಕಾಗೆಯೂ ಅಡುಗೆ ಮನೆಯೊಳಗೆ ಬಂದಾಗ ಅಡುಗೆಯವನಿಗೆ ಆಶ್ಚರ್ಯವಾಯಿತು. ಅದು ಬೋಧಿಸತ್ವ ಪಾರಿವಾಳದೊಡನೆ ಬಂದಿದ್ದರಿಂದ ಇದೂ ಸಾಧುವೇ ಆಗಿರಬೇಕೆಂದುಕೊಂಡ. ನಾಲ್ಕು ದಿನಗಳು ಕಳೆದವು. ಒಂದು ದಿನ ಮನೆಯಲ್ಲಿ ಹಬ್ಬವೆಂದು ಬಹಳಷ್ಟು ಮಾಂಸವನ್ನು ತಂದು ಅಡುಗೆಮನೆಯಲ್ಲಿ ಇಟ್ಟಿದ್ದರು. ಅದನ್ನು ಕಂಡು ಕಾಗೆಯ ಬಾಯಿ ನೀರೂರಿತು. ಇಂದು ಪಾರಿವಾಳದ ಜೊತೆಗೆ ಹೋಗದೇ ಮನೆಯಲ್ಲಿಯೇ ಉಳಿದರೆ ಬೇಕಾದಷ್ಟು ಮಾಂಸ ಸಿಗುತ್ತದೆ ಎಂದುಕೊಂಡಿತು.

ಮಾರನೆಯ ದಿನ ಬೆಳಿಗ್ಗೆ ಪಾರಿವಾಳ ಹೊರಟಾಗ ಕಾಗೆ, ‘ಮಿತ್ರಾ, ನೀನೊಬ್ಬನೇ ಹೋಗು. ನನಗೆ ಹೊಟ್ಟೆನೋವು ಬಂದಿದೆ. ಉಪವಾಸ ಮಾಡಿದರೆ ಒಳ್ಳೆಯದು’ ಎಂದಿತು. ಪಾರಿವಾಳ ಯೋಚಿಸಿತು. ಕಾಗೆಗಳಿಗೆ ಹೊಟ್ಟೆನೋವು ಬರುವುದಿಲ್ಲ. ಬಹುಶ: ಇದು ಮಾಂಸ ತಿನ್ನುವ ಯೋಜನೆ ಇರಬೇಕು ಎಂದುಕೊಂಡು ‘ಅಯ್ಯಾ, ನೀನು ಮೀನಿನ ಮಾಂಸವನ್ನು ತಿನ್ನುವ ವಿಚಾರವಿದ್ದರೆ ಬಿಟ್ಟುಬಿಡು. ಅದು ಶ್ರೇಷ್ಠಿಯ ಪರಿವಾರಕ್ಕಾಗಿ ತಂದದ್ದು. ನೀನು ಅದಕ್ಕೆ ಆಸೆ ಪಟ್ಟರೆ ಶಿಕ್ಷೆ ತಪ್ಪದು’ ಎಂದು ಹೇಳಿ ಹಾರಿ ಹೋಯಿತು.

ಅಡುಗೆಯವನು ಮಾಂಸದ ಅಡಿಗೆಯನ್ನು ಮಾಡಿ, ಮುಚ್ಚಳವನ್ನು ತೆರೆದಿಟ್ಟು, ಅದರ ಮೇಲೆ ಸೌಟನ್ನು ಇಟ್ಟು ಹೊರಗೆ ಹೋದ. ಇದೇ ಒಳ್ಳೆಯ ಅವಕಾಶವೆಂದುಕೊಂಡು ಕಾಗೆ ಹಾರಿ ಪಾತ್ರೆಯ ಮೇಲೆ ಕುಳಿತು ಯಾವ ತಂಡು ತೆಗೆದುಕೊಳ್ಳಲಿ ಎಂದು ಚಿಂತಿಸುವಾಗ ಅದರ ರೆಕ್ಕೆಗೆ ಸೌಟು ಬಡಿದು ಠಣ್ ಎಂದು ಕೆಳಗೆ ಬಿತ್ತು. ಸಪ್ಪಳ ಕೇಳಿ ಓಡಿಬಂದ ಅಡುಗೆಯವ ಕಾಗೆಯನ್ನು ಕಂಡು, ಕೋಪದಿಂದ ಬೆನ್ನತ್ತಿ ಅದನ್ನು ಹಿಡಿದ. ಅದರ ರೆಕ್ಕೆ ಪುಕ್ಕಗಳನ್ನು ಕಿತ್ತುಹಾಕಿ ಹಸಿ ಶುಂಠಿ, ಉಪ್ಪು, ಖಾರದಪುಡಿಯನ್ನು ಸೇರಿಸಿ ಅದರ ಮೈಗೆಲ್ಲ ಬಡಿದು ಬಿಸಾಕಿದ. ಕಾಗೆ ಒದ್ದಾಡಿ ಹೋಯಿತು. ಸಂಜೆ ಗೂಡಿಗೆ ಬಂದ ಪಾರಿವಾಳ ಕಾಗೆಯನ್ನು ಕಂಡು ‘ಲೋಭಿ ಕಾಗೆ, ನೀನು ನನ್ನ ಮಾತು ಕೇಳದೇ ಶಿಕ್ಷೆ ಪಡೆದೆ’ ಎಂದು ಗೂಡನ್ನು ಬಿಟ್ಟು ಹಾರಿ ಹೋಯಿತು. ಕಾಗೆ ಸತ್ತು ಹೋಯಿತು.

ದೊಡ್ಡವರ, ಸಜ್ಜನರ ಜೊತೆಯ ಸಹವಾಸವನ್ನು ನಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಪಾಪ. ಅದು ನಮ್ಮ ಬದುಕಿನ ಉನ್ನತಿಗೆ, ಉತ್ಕರ್ಷಕ್ಕೆ ಕಾರಣವಾದರೆ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT