ಒಳ್ಳೆ ಲೆಕ್ಕಿಗನಲ್ಲ ಪರಮೇಷ್ಠಿ; ನಮ್ಮಿಂದ |
ಸಲ್ಲುವುದ ಕೊಳಲು ಜನ್ಮಾಂತರಕೆ ಕಾಯ್ಪಂ ||
ಇಲ್ಲಿ ಸಲ್ಲುವುದ ತಾನಿಂದೆ ತೀರಿಸಿಕೊಳ್ಳ - |
ಲೊಲ್ಲನೇನಂತಕನು? –ಮಂಕುತಿಮ್ಮ || 313 ||

ಪದ-ಅರ್ಥ: ಲೆಕ್ಕಿಗನಲ್ಲ=ಲೆಕ್ಕಿಗನು(ಲೆಕ್ಕಚಾರದವನು)+ಅಲ್ಲ, ಕಾಯ್ಪಂ=ಕಾಯುತ್ತಾನೆ, ತಾನಿಂದೆ=ತಾನ್+ಇಂದೆ, ತೀರಿಸಿಕೊಳ್ಳಲೊಲ್ಲನೇನಂತಕನು=ತೀರಿಸಿಕೊಳ್ಳಲು+ಒಲ್ಲನೇನು+ಅಂತಕನು

ವಾಚ್ಯಾರ್ಥ: ಸೃಷ್ಟಿಕರ್ತ ಲೆಕ್ಕಾಚಾರ ನಿಪುಣನಲ್ಲ. ನಮ್ಮಿಂದ ತನಗೆ ಸಲ್ಲಬೇಕಾದದ್ದನ್ನು ಆಗಲೇ ಪಡೆಯದೆ ಜನ್ಮಾಂತರಗಳಲ್ಲಿ ಕಾಯುತ್ತಾನೆ. ಇಲ್ಲಿ ಸಲ್ಲಬೇಕಾದದ್ದನ್ನು ಇಂದೆಯೇ ಏಕೆ ತೀರಿಸಿಕೊಳ್ಳುವುದಿಲ್ಲ?

ವಿವರಣೆ: ಇದು ಡಿ.ವಿ.ಜಿಯವರ ಕಗ್ಗಗಳ ವಿಶೇಷತೆ. ಎಷ್ಟೋ ಕಗ್ಗಗಳಲ್ಲಿ ಬರೀ ಪ್ರಶ್ನೆ ಕಾಣುತ್ತದೆ, ಸಂಶಯ ಮತ್ತು ಪರಿಹಾರವಾಗದಂತಹ ಸಮಸ್ಯೆಗಳು ಎದ್ದು ಕಾಣುತ್ತವೆ. ಆದರೆ ಆ ಕಗ್ಗಗಳ ಉದ್ದೇಶ ಬರೀ ಪ್ರಶ್ನೆ ಕೇಳುವುದಲ್ಲ. ಅವು ನಮ್ಮ ಮನಸ್ಸುಗಳನ್ನು, ಚಿಂತನೆಗಳನ್ನು ಕೆದಕಬೇಕು, ಪ್ರಚೋದಿಸಬೇಕು. ಆಗ ಚಿಂತನೆಯ ನವನೀತ ನಮಗೆ ದೊರೆತೀತು.

ಈ ಕಗ್ಗವೂ ಹಾಗೆಯೇ ಒಂದು ಪ್ರಶ್ನೆಯನ್ನು ಎತ್ತುತ್ತದೆ. ಒಂದು ಜನ್ಮದಲ್ಲಾದ ತಪ್ಪಿಗೆ ಅಥವಾ ಒಳ್ಳೆಯ ಕಾರ್ಯಕ್ಕೆ ಅದೇ ಜನ್ಮದಲ್ಲಿ ಶಿಕ್ಷೆಯನ್ನೋ, ಪುರಸ್ಕಾರವನ್ನೋ ನೀಡುವುದನ್ನು ಬಿಟ್ಟು ಮುಂದಿನ ಜನ್ಮಕ್ಕೇಕೆ ರವಾನಿಸುತ್ತಾನೆ ಭಗವಂತ? ಅವನು ಒಳ್ಳೆಯ ಲೆಕ್ಕಾಚಾರಿಯಾಗಿದ್ದರೆ ಅಂದಿನ ಲೆಕ್ಕವನ್ನು ಅಂದೇ ಮುಗಿಸಿಬಿಡುತ್ತಿದ್ದ. ಇದು ಸಾಮಾನ್ಯ ಮನುಷ್ಯರ ಮನಸ್ಸಿನಲ್ಲಿ ಬರುವ ಆಲೋಚನೆ.

ಆದರೆ ಇದರ ಹಿಂದಿನ ಚಿಂತನೆ ದೊಡ್ಡದಾದದ್ದು. ಯಾವ ಜೀವಿಯೂ ಕರ್ಮಮಾಡದೆ ಇರುವುದು ಅಸಾಧ್ಯ. ಆದ್ದರಿಂದ ಅಷ್ಟೋ, ಇಷ್ಟೋ ಪುಣ್ಯ ಪಾಪಗಳು ಬಂದು ಸೇರುತ್ತವೆ. ಅವುಗಳಿಗೆ ಫಲಗಳೂ ದೊರಕಲೇ ಬೇಕು. ಆದರೆ ಈ ಫಲಗಳನ್ನು ಕೊಡುವವರು ಯಾರು? ಯೋಗ ವಾಶಿಷ್ಠ ಒಂದು ಸುಂದರವಾದ ಮಾತನ್ನು ಹೇಳುತ್ತದೆ.

ಪ್ರಾಕ್ತನಂ ಪೌರುಷಂ ತದ್ವೈ ದೈವಶಬ್ದೇನ ಕಥ್ಯತೇ ||

ಕರ್ಮದಲ್ಲಿ ಭಾಗಿಗಳಾದವರು ಎಲ್ಲರೂ ತಮ್ಮ ಪೂರ್ವಾಜಿತ ಕರ್ಮಗಳಿಗೆ ಅನುಸಾರವಾಗಿ ಅನುಗ್ರಹ ಅಥವಾ ಶಿಕ್ಷೆಯನ್ನು ತೀರ್ಮಾನಿಸುವ ಅಧಿಕಾರ ಯಾರಿಗೆ ಇದೆಯೋ, ಅದೇ ದೈವ, ಭಗವಂತ ಅಥವಾ ಅಂತಕ. ಆದರೆ ದೈವ ನೀಡಬಹುದಾದ ಫಲ ಯಾವಾಗ ಬಂದೀತು ಎಂಬುದು ಕಾಲಗಣನೆಗೆ ಸಿಲುಕುವುದಿಲ್ಲ. ಅದು ಬರುವುದು ಮೊದಲೇ ನಿಶ್ಚಿತವಾಗಿದ್ದರೂ, ನಮಗೆ ತಿಳಿಯಲಾರದು. ಅದು ದೈವ ತೀರ್ಮಾನಿಸಿದ ಕಾಲಕ್ಕೆ ಒದಗುವಂತಹದು.

ದುರ್ಯೋಧನನ ದ್ವೇಷ ಪ್ರಾರಂಭವಾದದ್ದು ಬಾಲ್ಯದಲ್ಲಿ, ಮೋಸದ ಕೆಲಸಗಳು ಯೌವನಾವಸ್ಥೆಯಲ್ಲಿ. ಆದರೆ ಶಿಕ್ಷೆ ದೊರೆತದ್ದು ಇಳಿವಯಸ್ಸಿನಲ್ಲಿ. ಅಧಿಕಾರಿ ಲಂಚ ಪಡೆದದ್ದು ಯೌವನ ಕಾಲದಲ್ಲಿ ಆದರೆ ಸಿಕ್ಕು ಬಿದ್ದು ನರಳಿದ್ದು ನಿವೃತ್ತಿಯ ಹಂತದಲ್ಲಿ. ಕೆಲವರ ಅನ್ಯಾಯ ಯಾವ ಪ್ರಮಾಣದಲ್ಲಿರಬಹುದೆಂದರೆ ಬಹುಶಃ ಅದನ್ನು ತೀರಿಸಲು ಈ ಜನ್ಮ ಸಾಲದು. ಅದಕ್ಕೇ ಭಾರತೀಯ ಪರಂಪರೆಯಲ್ಲಿ ಪುನರ್ಜನ್ಮದ ಕಲ್ಪನೆ ಇದೆ. ನಾವು ಮಾಡಿದ್ದನ್ನು ಮುಂದಿನ ಜನ್ಮದಲ್ಲಾದರೂ ತೀರಿಸಲೇಬೇಕು. ಅದಕ್ಕೇ ಲೆಕ್ಕಿಗನಾದ ಭಗವಂತ ದಡ್ಡನಲ್ಲ, ಮಹಾಚತುರ, ಬಡ್ಡಿಬಿಡದೆ ವಸೂಲಿ ಮಾಡುತ್ತಾನೆ. ಕಾಲವನ್ನು ಆತನೇ ತೀರ್ಮಾನಿಸುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.