ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಗುಲಾಬಿ ಗಿಡದ ಪಾಠ

Last Updated 18 ಅಕ್ಟೋಬರ್ 2021, 2:39 IST
ಅಕ್ಷರ ಗಾತ್ರ

ಹೂವತಳೆದ ಗುಲಾಬಿಯಿಂದ ಮನಕಹುದೇನು ?|
ನೋವೊ? ಸಂತಸವೊ? ನೋಡಾಮುಳ್ಳು ಬಾಳ್ಗೆ ||
ಹೂವೆ ದಿವ್ಯ ಕಿರೀಟವದುವೆ ಕಾಲಕಟಾಕ್ಷ |
ಜೀವನದ ತಿರುಳಷ್ಟೆ – ಮಂಕುತಿಮ್ಮ || 477 ||

ಪದ-ಅರ್ಥ: ಮನಕಹುದೇನು=ಮನಕೆ+ಅಹುದೇನು, ನೋಡಾಮುಳ್ಳು=ನೋಡು+ಆ+ಮುಳ್ಳು, ದಿವ್ಯಕಿರೀಟವದುವೆ=ದಿವ್ಯ+ಕಿರೀಟ+ಅದುವೆ, ತಿರುಳಷ್ಟೆ=ತಿರುಳು+ಅಷ್ಟೆ.
ವಾಚ್ಯಾರ್ಥ: ಹೂವನ್ನು ತಳೆದ ಗುಲಾಬಿಯ ಗಿಡವನ್ನು ಕಂಡಾಗ ಮನಸ್ಸಿಗೆ ಏನನ್ನಿಸುತ್ತದೆ? ನೋವೋ, ಸಂತೋಷವೋ? ಅದರ ಬಾಳು ಮುಳ್ಳೇ. ಆದರೆ ಹೂವು ದಿವ್ಯಕಿರೀಟ. ಅದು ದೊರೆಯುವುದು ಕಾಲದ ಕಟಾಕ್ಷದಿಂದ, ನಮ್ಮ ಬದುಕಿನ ತಿರುಳೂ ಅಷ್ಟೆ.

ವಿವರಣೆ: ಗುಲಾಬಿಯ ಗಿಡ ಮನುಷ್ಯನ ಬದುಕಿಗೊಂದು ಅಸಾಮಾನ್ಯವಾದ ತಿಳಿವನ್ನು ನೀಡುತ್ತದೆ. ಅದು ತುಂಬ ಬೋಧಪ್ರದವಾದದ್ದು. ಗಿಡ ತನ್ನ ಮುಡಿಗೆ ಹೂವನ್ನೇರಿಸಿಕೊಂಡು ನಲಿದಾಗ ಮನಕ್ಕೆ ತುಂಬ ಮುದ ನೀಡುತ್ತದೆ. ಆದರೆ ಅದರ ಸುತ್ತ ಮುತ್ತ ಇರುವ ಚೂಪಾದ ಮುಳ್ಳುಗಳನ್ನು ಕಂಡಾಗ, ಇಂಥ ಸುಂದರವಾದ, ನಾಜೂಕಾದ ಹೂವಿನ ಸುತ್ತ ಇಂಥ ಹರಿತವಾದ ಮುಳ್ಳುಗಳು ಬೇಕಿತ್ತೆ ಎಂದು ನೋವಾಗುತ್ತದೆ. ಅದಕ್ಕೇ ಈ ಕಗ್ಗ ಕೇಳುತ್ತದೆ, ಗುಲಾಬಿಯ ಗಿಡವನ್ನು ಕಂಡಾಗ ಮನಸ್ಸಿಗೆ ಆಗುವುದು ನೋವೊ, ಸಂತೋಷವೊ? ಎರಡೂ ಭಾವಗಳು ಉದಿಸುವುದು ಸಹಜ.

ಗುಲಾಬಿಯ ಸಸಿಯನ್ನು ನೆಲದಲ್ಲಿ ಹಾಕಿದಾಗ ಮೊದಲು ಹೂವು ಬರುವುದಿಲ್ಲ. ಕಾಂಡ ಚಿಗಿತು ಬೆಳೆದಾಗ ಮೊದಲು ಬರುವುದು ಮುಳ್ಳೇ. ಎಲೆಗಳೊಂದಿಗೆ ಮುಳ್ಳುಗಳು ಬೆಳೆಯುತ್ತ ಬರುತ್ತವೆ. ತೋಟಗಾರ ಗಿಡವನ್ನು ಎಲೆ ಹಾಗೂ ಮುಳ್ಳುಗಳಿಗಾಗಿ ಬೆಳೆಸುವುದಿಲ್ಲ. ಕೈಗೆ ಮುಳ್ಳುಗಳನ್ನು ಚುಚ್ಚಿಸಿಕೊಳ್ಳುತ್ತ, ಗೊಬ್ಬರ, ನೀರು ಹಾಕಿ, ಮುಂದೆ ಬರಬಹುದಾದ ಸುಂದರ ಹೂವುಗಳಿಗಾಗಿ ಪರಿಶ್ರಮಪಡುತ್ತಾನೆ. ಅಲ್ಲಿಯವರೆಗೂ ಅವನಿಗೆ ದೊರೆಯುವುದು ನೋವು ಮಾತ್ರ. ಆದರೆ ಅದರೊಂದಿಗೆ ಸುಂದರವಾದ ಹೂವುಗಳ ಭರವಸೆ ಇದೆ. ಕಾಲ ಕಳೆದಂತೆ ಮೊಗ್ಗು ಬಂದು ಹೂವು ಅರಳುತ್ತದೆ. ಅದನ್ನು ಅವಸರಿಸಲು ಆಗುವುದಿಲ್ಲ. ಅದಕ್ಕೆ ಸರಿಯಾದ ಕಾಲ ಬರಬೇಕು.

ಮನುಷ್ಯನ ಬದುಕಿನಲ್ಲೂ ಆಗುವುದು ಹೀಗೆಯೇ. ಅಲ್ಲವೆ? ಬಾಲ್ಯದಲ್ಲಿ ಆಟ, ಯೌವನದಲ್ಲಿ ಓದು, ತಿರುಗಾಟದ ನಂತರ ಮುಂದೆ ಸಾಧನೆಯ ಮೆಟ್ಟಿಲುಗಳನ್ನೇರುವ ಪ್ರಯತ್ನದ ಕಷ್ಟದ ದಾರಿ. ಗುಲಾಬಿಯ ಹೂವಿನಂತೆ, ಸಾಧನೆಯ ಫಲದ ಮರ್ಯಾದೆ ದೊರಕುವುದು ಒಂದು ಹಂತದ ಬದುಕು ಮುಗಿದ ಮೇಲೆಯೆ. ಗಾಂಧೀಜಿ ಮಹಾತ್ಮರಾದದ್ದು, ಕಲಾಂ ಭಾರತರತ್ನರಾದದ್ದು, ದಲಾಯಿಲಾಮಾ ನೋಬೆಲ್ ಪುರಸ್ಕೃತರಾದದ್ದು, ಡಾ. ರಾಧಾಕೃಷ್ಣನ್ ರಾಷ್ಟçಪತಿಯಾದದ್ದು ಇವೆಲ್ಲ ಆದದ್ದು ಕಾಲನ ಕಟಾಕ್ಷ ದೊರೆತ ನಂತರವೆ.

ಬಾಳಿನ ಸಫಲತೆ ದೊರೆಯುವ ಮೊದಲು ಕಷ್ಟಗಳ ಮುಳ್ಳುಗಳು ಚುಚ್ಚುತ್ತವೆ, ನೋವು ನೀಡುತ್ತವೆ. ಆ ಮುಳ್ಳುಗಳು ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತವೆ. ಅಷ್ಟಲ್ಲದೆ ಯಶಸ್ಸು ಬಂದಾಗ ಅದನ್ನು ಬೇರೆಯವರು ಸುಲಭವಾಗಿ ಕಿತ್ತುಕೊಳ್ಳದಂತೆ ಸುತ್ತಲಿದ್ದು ಕಾಪಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT