ಕೊಚ್ಚಿ: ಬೆಂಗಳೂರು ಎಫ್‌ಸಿ ವಿರುದ್ಧ ಇಂಡಿಯನ್ ಸೂಪರ್ ಲೀಗ್ ಪಂದ್ಯದ ವೇಳೆ ತನ್ನ ಆಟಗಾರನ ವಿರುದ್ಧ ನಡೆದಿದೆ ಎನ್ನಲಾದ ಜನಾಂಗೀಯ ನಿಂದನೆ ಪ್ರಕರಣಕ್ಕೆ ಕೇರಳ ಬ್ಲಾಸ್ಟರ್ಸ್ ಫುಟ್‌ಬಾಲ್ ಕ್ಲಬ್ ತೀವ್ರ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದೆ.
ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಎಸ್‌ಎಲ್ ಹತ್ತನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಆಟಗಾರ ರಯಾನ್ ವಿಲಿಯಮ್ಸ್ ಅವರು ಕೇರಳ ಬ್ಲಾಸ್ಟರ್ಸ್ ಡಿಫೆಂಡರ್ ಐಬಾನ್ ದೊಹ್ಲಿಂಗ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 82ನೇ ನಿಮಿಷ ಈ ಘಟನೆ ನಡೆದಿದೆ. ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಜಯಗಳಿಸಿತ್ತು.
‘ಬೆಂಗಳೂರು ಎಫ್‌ಸಿ ಆಟಗಾರನೊಬ್ಬ ನಮ್ಮ ಆಟಗಾರನಿಗೆ ನಿಂದನಾತ್ಮಕ ಸಂಜ್ಞೆ ಮಾಡಿದ್ದಾರೆ. ಇಂಥ ಜನಾಂಗೀಯ ಮತ್ತು ಅವಹೇಳನಕಾರಿ ವರ್ತನೆಗೆ ನಾವು ಯಾವುದೇ ರೀತಿಯಲ್ಲಿ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಜನಾಂಗೀಯ ನಿಂದನೆ, ತಾರತಮ್ಯ, ಅಗೌರವದ ನಡವಳಿಕೆಗೆ ಫುಟ್‌ಬಾಲ್ ಮೈದಾನ ಅಥವಾ ಎಲ್ಲಿಯೂ ಜಾಗವಿಲ್ಲ’ ಎಂದು ಕೇರಳ ಬ್ಲಾಸ್ಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳಿಗೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದ್ದು, ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ ಎಂದೂ ಕ್ಲಬ್ ತಿಳಿಸಿದೆ.
‘ಫುಟ್‌ಬಾಲ್, ವೈವಿಧ್ಯಮಯ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದಿರುವ ಜನರನ್ನು ಒಗ್ಗೂಡಿಸುವ ಕ್ರೀಡೆಯಾಗಿದೆ. ಪರಸ್ಪರ ಗೌರವಕ್ಕೆ ವೇದಿಕೆಯೂ ಸಹ’ ಎಂದು ಕ್ಲಬ್ ತಿಳಿಸಿದೆ.
ಪಂದ್ಯದ ವೇಳೆ ಆದ ಈ ಪ್ರಕರಣದ ವಿಡಿಯೊದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮೋಹನ್ ಬಾಗನ್‌ಗೆ ಸುಲಭ ಜಯ
ಕೋಲ್ಕತ್ತ (ಪಿಟಿಐ): ಹಾಲಿ ಚಾಂಪಿಯನ್ ಮೋಹನ್ ಬಾಗನ್ ತಂಡ, ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 3–1 ಗೋಲುಗಳಿಂದ ಪಂಜಾಬ್ ಎಫ್‌ಸಿ ತಂಡವನ್ನು ಸೋಲಿಸಿತು.
ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೋಹನ್ ಬಾಗನ್ ಪ್ರಾಬಲ್ಯ ಮೆರೆದು ವಿರಾಮದ ವೇಳೆಗೆ 2–1 ಮುನ್ನಡೆ ಸಾಧಿಸಿತು. ಜೇಸನ್ ಕುಮಿಂಗ್ಸ್ 9ನೇ ನಿಮಿಷ ಮೊದಲ ಗೋಲು ಗಳಿಸಿದರು. ಡಿಮಿಟ್ರಿ ಪೆಟ್ರಾಟಸ್ 34ನೇ ನಿಮಿಷ ಅಂತರ ಹೆಚ್ಚಿಸಿದರು.
ವಿರಾಮದ ನಂತರ ಲುಕಾ ಮಜೆಸೆನ್ (53ನೇ ನಿಮಿಷ) ಅವರು ಪಂಜಾಬ್ ಪರ ಗೋಲು ಗಳಿಸಿದರು. ಆದರ 63ನೇ ನಿಮಿಷ ಮನ್ವೀರ್ ಸಿಂಗ್ ಅವರ ಮೂಲಕ ಕೋಲ್ಕತ್ತದ ತಂಡ ಗೆಲುವಿನ ಅಂತರ ಹಿಗ್ಗಿಸಿತು.
ಪ್ರಸಾರದ ಗೊಂದಲ ಬಗೆಹರಿಸುವ ಸಂಬಂಧ ಈ ಪಂದ್ಯ 35 ನಿಮಿಷ ತಡವಾಗಿ ಆರಂಭವಾಯಿತು.
ಒಡಿಶಾ ಎಫ್‌ಸಿ ಶುಭಾರಂಭ:
ಒಡಿಶಾ ಎಫ್‌ಸಿ ತಂಡ, ಭುವನೇಶ್ವರದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನ ಇನ್ನೊಂದು ಪಂದ್ಯದಲ್ಲಿ ಶನಿವಾರ ಚೆನ್ನೈಯಿನ್ ಎಫ್‌ಸಿ ತಂಡವನ್ನು 2–0 ಯಿಂದ ಸೋಲಿಸಿ ಶುಭಾರಂಭ ಮಾಡಿತು.
ಹೊಸ ಕೋಚ್ ಸೆರ್ಗಿಯೊ ಲೊಬೆರಾ ಅವರ ಮಾರ್ಗದರ್ಶನದಲ್ಲಿ ಒಡಿಶಾ ತಂಡ ಆಕ್ರಮಣಕಾರಿಯಾಗಿ ಆಡಿತು. ಪಂದ್ಯದ ಹೆಚ್ಚಿನ ಅವಧಿಯಲ್ಲಿ ಆ ತಂಡ ಚೆಂಡಿನ ನಿಯಂತ್ರಣ ಹೊಂದಿತ್ತು. 45ನೇ ನಿಮಿಷ ಜೆರಿ ಮವಿಮಿಂಗ್‌ತೊಂಗ ಅವರು ಗೋಲು ಗಳಿಸಿದರೆ, 63ನೇ ನಿಮಿಷ ಡೀಗೊ ಮೌರಿಸಿಯೊ ಮುನ್ನಡೆ ಹೆಚ್ಚಿಸಿದರು.
.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.