ಶನಿವಾರ, ಫೆಬ್ರವರಿ 27, 2021
30 °C

ಶ್ರಮಣ ನೀತಿಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಕುರುರಾಷ್ಟ್ರದ ಇಂದ್ರಪ್ರಸ್ಥವನ್ನು ಧನಂಜಯನೆಂಬ ಕೌರವ್ಯ ಆಳುತ್ತಿದ್ದ. ಆಗ ಬೋಧಿಸತ್ವ ಅವನ ಅಮಾತ್ಯನಾಗಿ, ಧರ್ಮಬೋಧಕನಾಗಿ ಹುಟ್ಟಿದ್ದ. ಅವನ ಹೆಸರು ವಿಧುರ. ಆತನ ಧರ್ಮಬೋಧನೆ ಮತ್ತು ಅದರ ಕ್ರಮ ಎಷ್ಟು ಚೆನ್ನಾಗಿತ್ತೆಂದರೆ ಜಂಜೂದ್ವೀಪದ ರಾಜರೆಲ್ಲ ಅವನ ಬೋಧೆಯಿಂದ ಪರವಶರಾಗಿದ್ದರು. ಆತ ಬುದ್ಧಲೀಲೆಯಿಂದ ಜನರಿಗೆ ಧರ್ಮಬೋಧೆ ಮಾಡುತ್ತ ಸಂತೋಷದಿಂದ ಬದುಕಿದ್ದ.

ವಾರಾಣಸಿಯಲ್ಲಿ ನಾಲ್ಕು ಜನ ಗೃಹಸ್ಥರು ಬದುಕಿನಲ್ಲಿ ಭೋಗ-ಭಾಗ್ಯಗಳು ಸಾಕೆಂದುಕೊಂಡು, ಹಿಮಾಲಯಕ್ಕೆ ತೆರಳಿ ಋಷಿ ಪ್ರವ್ರಜ್ಯೆಯನ್ನು ಪಡೆದರು. ಅನೇಕ ವರ್ಷಗಳ ಕಾಲ ಅಲ್ಲಿಯೇ ಧ್ಯಾನಮಾಡುತ್ತ ಕಾಲ ಕಳೆದರು. ನಂತರ ಒಂದು ದಿನ ಪರ್ಯಟನೆ ಮಾಡಲೆಂದು ಪರ್ವತದಿಂದಿಳಿದು ಅಂಗರಾಷ್ಟ್ರದ ಕಾಳಚಂಪಾನಗರಕ್ಕೆ ಬಂದು ಅಲ್ಲಿಯ ರಾಜೋದ್ಯಾನದಲ್ಲಿ ನೆಲೆ ಮಾಡಿದರು. ಆ ನಗರದ ನಾಲ್ವರು ಗೃಹಸ್ಥರು ಈ ಮುನಿಗಳನ್ನು ನೋಡಿ ಸಂತೋಷಪಟ್ಟರು. ಒಬ್ಬೊಬ್ಬರು, ಒಬ್ಬೊಬ್ಬ ಸನ್ಯಾಸಿಯನ್ನು ತಮ್ಮ ಮನೆಗೆ ಕರೆದೊಯ್ದು, ಪ್ರಣೀತ ಭೋಜನ ಮಾಡಿಸಿ, ಮರಳಿ ರಾಜೋದ್ಯಾನಕ್ಕೆ ಕರೆದು ತಂದು ಬಿಟ್ಟರು. ಹೀಗೆ ನಾಲ್ವರೂ ಸನ್ಯಾಸಿಗಳು ಗೃಹಸ್ಥರ ಮನೆಯಲ್ಲಿ ಊಟ ಮಾಡುತ್ತ, ಹಗಲು ವಿಶ್ರಾಂತಿ ಪಡೆಯಲು ಬೇರೆ ಬೇರೆ ಜಾಗೆಗಳಿಗೆ ಹೋಗುತ್ತಿದ್ದರು. ಒಬ್ಬ ಸನ್ಯಾಸಿ ದೇವಲೋಕದ ತ್ರಯೋತ್ರಿಂಶ ಭವನಕ್ಕೆ, ಮತ್ತೊಬ್ಬ ನಾಗಭವನಕ್ಕೆ, ಇನ್ನೊಬ್ಬ ಗರುಡ ಭವನಕ್ಕೆ ಹಾಗೂ ಮಗದೊಬ್ಬ ಕೌರವ್ಯರಾಜನ ಅರಮನೆಗೆ ಹೋಗುತ್ತಿದ್ದ.

ದೇವಲೋಕಕ್ಕೆ ಹೋಗಿ ಬಂದವನು ಅಲ್ಲಿಯ ಇಂದ್ರಭವನದ ವೈಭವವನ್ನು ಉಳಿದವರಿಗೆ ವರ್ಣಿಸುತ್ತಿದ್ದ. ನಾಗಭವನಕ್ಕೆ ಹೋಗಿ ಬಂದವನು, ಅಲ್ಲಿಯ ಸೌಂದರ್ಯವನ್ನು, ಶ್ರೀಮಂತಿಕೆಯನ್ನು ವರ್ಣಿಸುತ್ತಿದ್ದ. ನಿತ್ಯವೂ ಗರುಡಭವನಕ್ಕೆ ಹೋಗಿ ಬರುತ್ತಿದ್ದವನು ಅಲ್ಲಿಯ ಜನರ ಪರಾಕ್ರಮವನ್ನು, ಸಂಪತ್ತನ್ನು ಹೊಗಳುತ್ತಿದ್ದ. ಅಂತೆಯೇ ಕೌರವ್ಯರಾಜನ ಅರಮನೆಯಿಂದ ಬರುತ್ತಿದ್ದ ಸನ್ಯಾಸಿ ರಾಜನ ಶ್ರೀ ಸಂಪತ್ತನ್ನು, ಔದಾರ್ಯದ ವರ್ಣನೆಯನ್ನು ಮಾಡುತ್ತಿದ್ದ. ಹೀಗೆ ನಿತ್ಯವೂ ಆ ಸ್ಥಳಗಳಲ್ಲೇ ಮನಸ್ಸನ್ನು ನೆಟ್ಟಿದ್ದ ಅವರು ತಮ್ಮ ಆಯುಷ್ಯವನ್ನು ಕಳೆದು ಆಯಾ ಸ್ಥಾನಗಳಲ್ಲೇ ಹುಟ್ಟಿದರು. ಒಬ್ಬ ಶಕ್ರನಾದ, ಇನ್ನೊಬ್ಬ ನಾಗರಾಜನಾದ, ಮತ್ತೊಬ್ಬ ಗರುಡರಾಜನಾದ ಹಾಗೂ ಕೊನೆಯವ ಕೌರವ್ಯರಾಜನಾದ.

ಒಂದು ದಿನ ನಾಲ್ವರೂ ಮತ್ತೆ ಅದೇ ರಾಜೋದ್ಯಾನಕ್ಕೆ ಬಂದು ಧ್ಯಾನಕ್ಕೆ ಕುಳಿತರು. ಆಗ ಶಕ್ರ ಕೇಳಿದ, ‘ನಾವು ನಾಲ್ವರೂ ರಾಜರಾಗಿದ್ದೇವೆ. ನಮ್ಮಲ್ಲಿ ಯಾರ ಶೀಲ ದೊಡ್ಡದು?’ ತಕ್ಷಣವೇ ನಾಗರಾಜ ಹೇಳಿದ, ‘ನನ್ನ ಶೀಲ ದೊಡ್ಡದು. ಯಾಕೆಂದರೆ ನಮ್ಮೆಲ್ಲರ ಜೀವನಾಶಕ ಶತ್ರುವಾದ ಗರುಡರಾಜ ಮುಂದೆಯೇ ಕುಳಿತಿದ್ದರೂ ಕೋಪಮಾಡಿಕೊಳ್ಳದೆ ಕುಳಿತಿದ್ದೇನೆ’. ಗರುಡ ರಾಜ ಹೇಳಿದ, ‘ನನ್ನ ಶೀಲ ದೊಡ್ಡದು. ಯಾಕೆಂದರೆ ನಮಗೆ ನಾಗಗಳು ಅಗ್ರ ಭೋಜನ. ಅಂತಹ ನಾಗರಾಜ ಮುಂದೆ ಕುಳಿತಿದ್ದರೂ ಹಸಿವನ್ನು ಸಹಿಸಿಕೊಂಡು ಪಾಪ ಮಾಡುತ್ತಿಲ್ಲ’. ಕೌರವ್ಯರಾಜ ಹೇಳಿದ, ‘ಹದಿನಾರು ಸಾವಿರ ಚೆಲುವಾದ ನರ್ತಕಿಯರು ಇರುವ ರಾಣಿ ವಾಸದ ಭೋಗವನ್ನು ಬಿಟ್ಟು ಧ್ಯಾನಕ್ಕೆ ಬಂದಿದ್ದೇನೆ. ಈ ನಿಗ್ರಹದಿಂದ ನನ್ನ ಶೀಲ ದೊಡ್ಡದು. ಶಕ್ರ ಹೇಳಿದ, ‘ನಿಮ್ಮೆಲ್ಲರಿಗಿಂತ ವೈಭವದಲ್ಲಿರುವ ನಾನು ಲೋಕರಕ್ಷಣೆಗಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಶೀಲ ದೊಡ್ಡದು’. ಇದರ ತೀರ್ಮಾನಕ್ಕಾಗಿ ವಿಧುರನನ್ನು ಕರೆಸಿದರು. ಆತ ಹೇಳಿದ, ‘ನೀವು ನಾಲ್ಕೂ ಜನ ಒಂದೊಂದು ಗುಣದಲ್ಲಿ ಶ್ರೇಷ್ಠರಾಗಿದ್ದೀರಿ. ಇನ್ನು ಮೇಲೆ ಉಳಿದ ಮೂವರ ಗುಣಗಳನ್ನು ನೀವು ಪಾಲಿಸುವುದಾದರೆ ನಾಲ್ವರೂ ಶ್ರೇಷ್ಠ ಶ್ರಮಣರಾಗುತ್ತೀರಿ’. ನಾಲ್ಕು ಜನ ಒಪ್ಪಿ ಅದನ್ನು ಸಾಧಿಸಲು ತಮ್ಮ ತಮ್ಮ ಕ್ಷೇತ್ರಗಳಿಗೆ ಹೊರಟರು. ಲೋಕರಕ್ಷಣೆ, ಇಂದ್ರಿಯ ನಿಗ್ರಹ, ಕೋಪ ನಿಗ್ರಹ ಮತ್ತು ಹಸಿವಿನ ನಿಗ್ರಹ ಇವು ನಾಲ್ಕು ಮುಖ್ಯ ಶ್ರಮಣ ನೀತಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು