ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆಲೋಚನಾಶಕ್ತಿಯ ಪರೀಕ್ಷೆ

Last Updated 14 ಫೆಬ್ರುವರಿ 2021, 19:42 IST
ಅಕ್ಷರ ಗಾತ್ರ

ಮಹೋಷಧಕುಮಾರನಾಗಿ ಹುಟ್ಟಿದ ಬೋಧಿಸತ್ವನ ಕೀರ್ತಿ ಹರಡುತ್ತಿತ್ತು. ನಾಲ್ಕು ಅಮಾತ್ಯರು ಅವನನ್ನು ಯಾವುದಾದರೂ ಪರೀಕ್ಷೆಯಲ್ಲಿ ಸೋಲಿಸಬೇಕೆಂದು ಕಾಯುತ್ತಿದ್ದರು. ಆದರೆ ಅವನ ಶಕ್ತಿಯನ್ನು ತೋರುವಂತೆ ಬೇರೆ ಬೇರೆ ಘಟನೆಗಳು ನಡೆಯುತ್ತಲೇ ಇದ್ದವು.

ನಗರದ ಪೂರ್ವ ನಿಗಮದಲ್ಲಿ ಗೋಲಕಾಲನೆಂಬ ವ್ಯಕ್ತಿ ಇದ್ದ. ಅವನು ಗೂನ ಹಾಗೂ ಅತ್ಯಂತ ಕಪ್ಪಾಗಿದ್ದ. ಅವನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಒಬ್ಬ ಬಡವ ಮಾತ್ರ, ನೀನು ನನ್ನ ಮನೆಯಲ್ಲಿ ಏಳು ವರ್ಷ ಸೇವೆ ಮಾಡಿಕೊಂಡಿದ್ದರೆ ನನ್ನ ಮಗಳನ್ನು ಮದುವೆಮಾಡಿ ಕೊಡುತ್ತೇನೆ ಎಂದ. ಗೋಲಕಾಲ ಅವನ ಮನೆಯಲ್ಲಿ ಏಳು ವರ್ಷ ಕೆಲಸ ಮಾಡಿ ಅವನ ಮಗಳು ದೀರ್ಘತಾಡಳನ್ನು ಮದುವೆಯಾದ. ಅವನಿಗೆ ಹೆಂಡತಿಯನ್ನು ತನ್ನ ತಂದೆ-ತಾಯಿಯರಿಗೆ ತೋರಿಸಬೇಕೆಂಬ ಆಸೆ. ಆದರೆ ಆಕೆ ಪ್ರತಿಬಾರಿಯೂ ತಡೆಯುತ್ತಿದ್ದಳು. ಕೊನೆಗೊಮ್ಮೆ ಆಕೆಯನ್ನು ಒಪ್ಪಿಸಿ, ಪೂರಿ, ಪಲ್ಯ, ಸಿಹಿತಿಂಡಿಗಳನ್ನು ಮಾಡಿ ಕಟ್ಟಿಕೊಂಡು ಅವಳೊಂದಿಗೆ ತನ್ನ ಊರಿಗೆ ಹೊರಟ.

ದಾರಿಯಲ್ಲೊಂದು ನದಿ ಬಂದಿತು. ಅದು ಆಳವಿಲ್ಲದ ನದಿ. ಇಬ್ಬರಿಗೂ ನೀರಿನ ಹೆದರಿಕೆಯಾದ್ದರಿಂದ, ನೀರಿಗಿಳಿಯದೆ ದಂಡೆಯಲ್ಲಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ದೀರ್ಘಪೀಡನೆಂಬ ಮನುಷ್ಯ ಅಲ್ಲಿಗೆ ಬಂದ. ಗೋಲಕಾಲ ಕೇಳಿದ, ‘ಇಲ್ಲಿ ನೀರು ಬಹಳ ಆಳವಿದೆಯೇ?’. ಇವರ ಗಾಬರಿಯನ್ನು ಕಂಡು ದೀರ್ಘಪೀಡ, ‘ನೀರು ಇಲ್ಲಿ ಬಹಳ ಆಳ ಮಾತ್ರವಲ್ಲ, ಭಯಂಕರವಾದ ಮೊಸಳೆಗಳಿಂದ ತುಂಬಿದೆ’ ಎಂದು ಹೆದರಿಸಿದ. ಆಮೇಲೆ, ‘ನೀವು ಭಯಪಡಬೇಡಿ, ಈ ಮೊಸಳೆಗಳು ನನಗೆ ಪರಿಚಯವಾದ್ದರಿಂದ ಏನೂ ಮಾಡುವುದಿಲ್ಲ. ನಿಮ್ಮನ್ನು ನಾನು ಪಾರು ಮಾಡುತ್ತೇನೆ. ಒಬ್ಬೊಬ್ಬರನ್ನೇ ಹೆಗಲ ಮೇಲೆ ಹೊತ್ತು ದಾಟಿಸುತ್ತೇನೆ’ ಎಂದು ಹೇಳಿ ಗೋಲಕಾಲನ ಬಳಿ ಇದ್ದ ಹಣವನ್ನೆಲ್ಲ ಇಸಿದುಕೊಂಡ. ನಂತರ ದೀರ್ಘತಾಡಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನದಿಗೆ ಇಳಿದ. ‘ಈಕೆಯನ್ನು ಆ ದಡಕ್ಕೆ ಇಳಿಸಿ ಬಂದು, ನಿನ್ನನ್ನು ಕರೆದುಕೊಂಡು ಹೋಗುತ್ತೇನೆ’ ಎಂದ.

ಅರ್ಧ ನದಿ ದಾಟಿದ ಮೇಲೆ ದೀರ್ಘತಾಡಳಿಗೆ ಹೇಳಿದ, ‘ನೀನು ಚೆಂದದ ಹುಡುಗಿ, ಈ ಗೂನನನ್ನು ಕಟ್ಟಿಕೊಂಡು ಏನು ಮಾಡುತ್ತೀ? ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ದಾಸ, ದಾಸಿಯರನ್ನು ಕೊಟ್ಟು ಸಂತೋಷವಾಗಿಡುತ್ತೇನೆ’. ಆಕೆಗೆ ಅವನ ಮಾತು ಒಪ್ಪಿಗೆಯಾಯಿತು. ನದಿಯನ್ನು ದಾಟಿದ ಮೇಲೆ ಇಬ್ಬರೂ ಕುಳಿತು ಪೂರಿ, ಪಲ್ಯ, ಸಿಹಿ ತಿಂಡಿ ತಿಂದು, ಈ ದಡದಲ್ಲಿದ್ದ ಗೋಲಕಾಲನಿಗೆ ಕೈ ಮಾಡಿ ಹೊರಟೇ ಬಿಟ್ಟರು. ಸಂಕಟದಿಂದ ಗೋಲಕಾಲ ನೀರಿಗೆ ಹಾರಿದ. ಅದು ಆಳವಿಲ್ಲದುದನ್ನು ಕಂಡು, ಸರಸರನೇ ದಾಟಿ, ದಂಡೆ ಸೇರಿ ಅವರನ್ನು ತಲುಪಿ ಜಗಳ ತೆಗೆದ. ದೀರ್ಘಪೀಡ, ಆಕೆ ನನ್ನ ಹೆಂಡತಿಯೇ ಎಂದ. ಆಕೆಯೂ ಅದನ್ನೇ ಹೇಳಿದಳು. ಜಗಳವನ್ನು ಮಹೋಷಧಕುಮಾರನ ಕಡೆಗೆ ತಂದರು. ಆತ ಮೂವರನ್ನು ಬೇರೆ ಬೇರೆ ಕಡೆಗೆ ನಿಲ್ಲಿಸಿ ಮೊದಲು ದೀರ್ಘಪೀಡನನ್ನು ಕರೆದು ಕೇಳಿದ.

‘ನಿನ್ನ ಹೆಂಡತಿಯ, ಆಕೆಯ ತಂದೆ ತಾಯಿಯರ ಹೆಸರೇನು?’ ಈತನಿಗೆ ಯಾವುದೂ ಗೊತ್ತಿಲ್ಲದಿದ್ದರಿಂದ ಬೇರೆ ಬೇರೆ ಹೆಸರು ಹೇಳಿದ. ನಂತರ ಕುಮಾರ ದೀರ್ಘತಾಡಳನ್ನು ಕರೆದು, ‘ನಿನ್ನ ಗಂಡನ, ಅವನ ತಂದೆ-ತಾಯಿಯರ ಹಾಗೂ ನಿನ್ನ ತಂದೆ ತಾಯಿಯರ ಹೆಸರು ಹೇಳು’ ಎಂದ. ಆಕೆ ತನ್ನ ತಂದೆತಾಯಿಯರ ಹೆಸರುಗಳನ್ನು ಸರಿಯಾಗಿ ಹೇಳಿ ಗಂಡನ ಹೆಸರು ಮತ್ತು ಅವನ ತಂದೆ ತಾಯಿಯರ ಹೆಸರುಗಳನ್ನು ಬೇರೆಯೇ ಹೇಳಿದಳು. ಕೊನೆಗೆ ಗೋಲಕಾಲನನ್ನು ಕರೆದು ಕೇಳಿದಾಗ ಆಗ ತನ್ನ ಹೆಂಡತಿಯ, ಆಕೆಯ ತಂದೆತಾಯಿಯರ ಸರಿಯಾದ ಹೆಸರುಗಳನ್ನು ಹೇಳಿದ. ಮಹೋಷಧಕುಮಾರ ದೀಘಪೀಡನಿಗೆ ಶಿಕ್ಷೆ ಕೊಟ್ಟು, ದೀರ್ಘತಾಡಳಿಗೆ ಗಂಡನೊಂದಿಗೆ ಚೆನ್ನಾಗಿ ಬಾಳಲು ಬುದ್ಧಿ ಹೇಳಿ ಕಳುಹಿಸಿದ. ಇದರಿಂದ ಮಹೋಷಧಕುಮಾರನ ಕೀರ್ತಿ ಮತ್ತಷ್ಟು ಹೆಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT