ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನ್ನದ ವ್ಯರ್ಥತೆ

Last Updated 28 ಮೇ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿದ್ದ. ಅವನ ಹೆಸರು ಜಿಣ್ಹಕುಮಾರ. ಅವನು ತಕ್ಕಶಿಲೆಗೆ ಹೋಗಿ ಹತ್ತು ವರ್ಷವಿದ್ದು ಎಲ್ಲ ವಿದ್ಯೆಗಳನ್ನು ಕಲಿತ. ಶಿಕ್ಷಣ ಮುಗಿಸಿ, ಗುರುಗಳ ಅಪ್ಪಣೆ ಪಡೆದು ತನ್ನ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಅವಸರದಿಂದ ಹೋಗುತ್ತಿರುವಾಗ ದಾರಿಯಲ್ಲಿ ಎದುರು ಬಂದ ಒಬ್ಬ ಬ್ರಾಹ್ಮಣನಿಗೆ ಡಿಕ್ಕಿ ಹೊಡೆದ. ಬ್ರಾಹ್ಮಣ ರಾತ್ರಿಯೂಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದ ಆಹಾರ ಕೆಳಗೆ ಬಿದ್ದು ಹೋಯಿತು. ಬ್ರಾಹ್ಮಣ, ‘ಅಯ್ಯಾ, ನಿನ್ನ ಅವಸರದಿಂದ ನನ್ನ ಇಡೀ ಪರಿವಾರ ಇಂದು ರಾತ್ರಿ ಉಪವಾಸವಿರಬೇಕು. ನನಗೆ ಆಹಾರದ ಮೌಲ್ಯವನ್ನು ಕೊಡು’ ಎಂದ. ಜಿಣ್ಹಕುಮಾರ, ‘ನನ್ನ ಹತ್ತಿರ ಈಗ ಏನೂ ಇಲ್ಲ. ನಾನೀಗ ಶಿಕ್ಷಣವನ್ನು ಮುಗಿಸಿ ವಾರಾಣಸಿಗೆ ಹೋಗುತ್ತಿದ್ದೇನೆ. ಮುಂದೆ ನಾನು ಅಲ್ಲಿಯ ರಾಜನಾಗುತ್ತೇನೆ. ಆಗ ನೀನು ಬಂದು ಕೇಳಿದರೆ, ಅಪೇಕ್ಷಿಸಿದ ಮೌಲ್ಯವನ್ನು ಕೊಡುತ್ತೇನೆ’ ಎಂದು ಹೇಳಿ ಹೊರಟ.

ಜಿಣ್ಹಕುಮಾರ ವಾರಾಣಸಿಗೆ ಬಂದು ತಂದೆಯ ಮುಂದೆ ತನ್ನ ಕಲಿಕೆಯನ್ನು ಪ್ರದರ್ಶನ ಮಾಡಿ, ಸಂತೋಷ ನೀಡಿದ. ಮುಂದೆ ಒಂದೆರಡು ವರ್ಷಗಳಲ್ಲಿ ತಾನು ಬದುಕಿರುವಂತೆಯೇ ತನ್ನ ಮಗನನ್ನು ರಾಜನನ್ನಾಗಿ ನೋಡಬೇಕೆಂದುಕೊಂಡು ಪಟ್ಟಾಭಿಷೇಕವನ್ನು ನೆರವೇರಿಸಿದ. ಜಿಣ್ಹಕುಮಾರ ರಾಜನಾಗಿ ತುಂಬ ಒಳ್ಳೆಯ ಕೆಲಸಗಳನ್ನು ಮಾಡತೊಡಗಿದ.

ಈ ವಿಷಯವನ್ನು ತಿಳಿದ ಬ್ರಾಹ್ಮಣ ವಾರಾಣಸಿಗೆ ಬಂದ. ಅಂದು ತಾನು ಕಳೆದುಕೊಂಡಿದ್ದ ಆಹಾರದ ಮೌಲ್ಯವನ್ನು ಕೇಳಬೇಕೆಂದುಕೊಂಡ. ಅ ಸಮಯದಲ್ಲಿ ರಾಜ ಜಿಣ್ಹಕುಮಾರ ಆನೆಯ ಅಂಬಾರಿಯ ಮೇಲೆ ಕುಳಿತು ನಗರ ಪ್ರದಕ್ಷಿಣೆ ಮಾಡುತ್ತಿದ್ದ. ಈ ಬ್ರಾಹ್ಮಣ ರಸ್ತೆಯ ಬದಿಯಲ್ಲಿ ಎತ್ತರದ ಸ್ಥಳದಲ್ಲಿ ನಿಂತು ಜೋರಾಗಿ ರಾಜನ ಜಯಕಾರ ಮಾಡಿದ. ಜನರ ಗಲಾಟೆಯಲ್ಲಿ, ದೂರದಲ್ಲಿದ್ದ ರಾಜನಿಗೆ ಇವನ ಧ್ವನಿ ಕೇಳಿಸಲಿಲ್ಲ. ಆಗ ಬ್ರಾಹ್ಮಣ ಸ್ವಲ್ಪ ಮುಂದೆ ಬಂದು, ‘ಹಿಂದೆ ಮಾಡಿದ ತಪ್ಪಿಗೆ ಮೌಲ್ಯಕೊಡಬೇಕಾದ ವ್ಯಕ್ತಿ, ಮಾತನ್ನು ಕೇಳಿಸಿಕೊಳ್ಳದೆ ಹೋಗುವುದು ಸರಿಯಲ್ಲ. ಅದರಲ್ಲೂ ಕೊಡಬೇಕಾದ ಆ ವ್ಯಕ್ತಿ ರಾಜನಾಗಿದ್ದರೆ ಅದು ಬಹುದೊಡ್ಡ ಅಪಚಾರ’ ಎಂದು ಕೂಗಿದ. ಎತ್ತರದಲ್ಲಿ ಕುಳಿತಿದ್ದ ರಾಜ ಅದನ್ನು ಕೇಳಿಸಿಕೊಂಡು, ಮಾವುತನಿಗೆ ಆನೆಯನ್ನು ನಿಲ್ಲಿಸಲು ಹೇಳಿದ. ನಂತರ, ‘ದಯವಿಟ್ಟು, ನಾನು ಯಾವ ತಪ್ಪಿಗೆ ಮೌಲ್ಯ ಕೊಡಬೇಕು, ತಿಳಿಸಿ’ ಎಂದ. ಬ್ರಾಹ್ಮಣ, ‘ಇಷ್ಟು ಬೇಗ ಮರೆತು ಹೋಯಿತೆ, ಕೊಟ್ಟ ವಚನ? ಗಾಂಧಾರ ರಾಜನ ಸುಂದರವಾದ ತಕ್ಕಶಿಲೆಯಲ್ಲಿ ನಾವು ಭೇಟಿಯಾಗಿದ್ದೆವು. ಕತ್ತಲೆಯಲ್ಲಿ ಬರುವಾಗ ನೀವು ನನಗೆ ಹಾಯ್ದದ್ದರಿಂದ ನನ್ನ ಮತ್ತು ಪರಿವಾರದ ಊಟ ಚೆಲ್ಲಿ ಹೋಗಿತ್ತು. ಅದಕ್ಕೆ ಮೌಲ್ಯವನ್ನು ರಾಜನಾದ ಮೇಲೆ ಕೊಡುವುದಾಗಿ ಹೇಳಿದ್ದಿರಿ. ಅದನ್ನು ಕೇಳಲು ನಾನು ಇಂದು ಬಂದಿದ್ದೇನೆ’ ಎಂದ. ತಕ್ಷಣ ಜಿಣ್ಹಕುಮಾರ ಆನೆಯಿಂದ ಕೆಳಗಿಳಿದ.

‘ಅಯ್ಯಾ, ಬ್ರಾಹ್ಮಣ, ನೀನು ಬಹಳ ಒಳ್ಳೆಯವನು. ನಾನು ಎರಡು ಅಪರಾಧ ಮಾಡಿದ್ದೇನೆ. ಮೊದಲನೆಯದು, ನಿನಗೆ ಮತ್ತು ನಿನ್ನ ಪರಿವಾರಕ್ಕೆ ಅಂದು ಉಪವಾಸವಿರುವಂತೆ ಮಾಡಿದ್ದು, ಹಾಗೂ ಎರಡನೆಯದು, ರೈತ ಕಷ್ಟಪಟ್ಟು ಬೆಳೆದ, ಮನೆಯ ಗೃಹಿಣಿ ಪರಿಶ್ರಮದಿಂದ ಸಿದ್ಧಪಡಿಸಿದ ಆಹಾರವನ್ನು ನೆಲಕ್ಕೆ ಚೆಲ್ಲಿ ವ್ಯರ್ಥಮಾಡಿದ್ದು. ಅದಕ್ಕೆ ಪರಿಹಾರವಾಗಿ ನಾನು ನಿನಗೆ ಐದು ಶ್ರೇಷ್ಠ ಗ್ರಾಮಗಳು, ಏಳು ನೂರು ದಾಸಿಯರು, ನೂರು ಹಸುಗಳು, ಸಾವಿರ ಬಂಗಾರದ ನಿಕಷಗಳು ಮತ್ತು ಇಬ್ಬರು ಅನುರೂಪರಾದ ಹೆಂಡತಿಯರನ್ನು ಕೊಡುತ್ತೇನೆ’ ಎಂದ ಮತ್ತು ಅಂತೆಯೇ ಮಾಡಿದ.

ಅನ್ನದ ಬೆಲೆ ಬಹಳ ದೊಡ್ಡದು. ಅದನ್ನು ವ್ಯರ್ಥಮಾಡುವುದು ಬಹುದೊಡ್ಡ ಅಪಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT