ಮಂಗಳವಾರ, ಆಗಸ್ಟ್ 3, 2021
21 °C
ವಿಮಾನಯಾನ ಕ್ಷೇತ್ರದಲ್ಲಿ ಹೊಸಗಾಳಿ ಬೀಸಿದಾಗಷ್ಟೇ ಬೆಳವಣಿಗೆ ಸಾಧ್ಯ

ಜೆಟ್‌ ಟೇಕ್‌ಆಫ್‌ ಮತ್ತು ನರೇಶ್ ಶಸ್ತ್ರತ್ಯಾಗ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಆರ್ಥಿಕ ಸುಧಾರಣೆಗಳನ್ನು ತಂದ ಆರಂಭದ ದಿನಗಳಲ್ಲಿ, ವಿಮಾನಯಾನ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಲೈಸೆನ್ಸ್ ರಾಜ್ ವ್ಯವಸ್ಥೆಯ ಹಿಡಿತ ಸಡಿಲವಾದಾಗ ಹಲವು ಖಾಸಗಿ ವಿಮಾನಯಾನ ಸಂಸ್ಥೆಗಳು ಚಟುವಟಿಕೆ ಆರಂಭಿಸಿದವು. ಆದರೆ, ಕೆಲವೇ ವರ್ಷಗಳ ನಂತರ ಎರಡು ವಿಮಾನಯಾನ ಸಂಸ್ಥೆಗಳು ಮಾತ್ರ ಉಳಿದುಕೊಂಡವು. ಅವು ಜೆಟ್‌ ಏರ್‌ವೇಸ್‌ ಮತ್ತು ಸಹಾರಾ ಏರ್‌ಲೈನ್ಸ್‌. ಎನ್‌ಇಪಿಸಿ, ದಮಾನಿಯಾ, ಈಸ್ಟ್‌-ವೆಸ್ಟ್‌, ಸ್ಪ್ಯಾನ್‌, ರಾಜ್‌, ಯುಬಿ ಏರ್‌, ಗುಜರಾತ್ ಏರ್‌ ಸೇರಿದಂತೆ ಇತರ ಕಂಪನಿಗಳು ಬಾಗಿಲು ಮುಚ್ಚಿದವು.

ಅಸ್ತಿತ್ವ ಉಳಿಸಿಕೊಂಡ ಕಂಪನಿಗಳಾದ ಸಹಾರಾ ಮತ್ತು ಜೆಟ್‌ ಪೈಕಿ, ಜೆಟ್ ಕಂಪನಿಯು ಗುಣಮಟ್ಟ ಹಾಗೂ ಸೇವಾ ಸ್ಥಿರತೆಯಲ್ಲಿ, ಕಾರ್ಯಕ್ಷಮತೆಯಲ್ಲಿ, ಸಮಯಪಾಲನೆಯಲ್ಲಿ, ಸ್ವಚ್ಛತೆಯಲ್ಲಿ ಹಾಗೂ ಇತರ ಅನೇಕ ಅಂಶಗಳಲ್ಲಿ ಭಾರತೀಯರು ಹೆಮ್ಮೆಪಡುವಂತಹ ಬ್ರ್ಯಾಂಡ್‌ ಆಗಿ ಬೆಳೆದು ನಿಂತಿತು. ಈ ಕಂಪನಿಯ ಪ್ರವರ್ತಕ ನರೇಶ್ ಗೋಯಲ್. ಅವರು, ಅಷ್ಟೇನೂ ಪರಿಚಿತರಲ್ಲದಿದ್ದ ಟ್ರಾವೆಲ್ ಏಜೆಂಟ್. ಅಂದಿನ ಕಾಲವನ್ನು ಪರಿಗಣನೆಗೆ ತೆಗೆದುಕೊಂಡರೆ ಜೆಟ್ ಕಂಪನಿಯ ಸಾಧನೆ ಸಣ್ಣದೇನೂ ಅಲ್ಲವಾಗಿತ್ತು.

ವಿಮಾನಯಾನ ಕ್ಷೇತ್ರದಲ್ಲಿ ಬಹುಕಾಲ ಉಳಿದುಕೊಳ್ಳುವುದು ಹಾಗೂ ಅಲ್ಲಿ ಬೆಳೆಯುವುದು ವಿಶ್ವದ ಬಹುತೇಕ ಕಡೆಗಳಲ್ಲಿ ಕಷ್ಟಸಾಧ್ಯದ ಸಂಗತಿ. ವಿಮಾನಯಾನ ಉದ್ದಿಮೆಗೆ 100 ವರ್ಷಗಳು ಮಾತ್ರ ಆಗಿದ್ದರೂ, ಒಂದು ದಶಕಕ್ಕಿಂತ ಹೆಚ್ಚಿನ ಅವಧಿಗೆ ಸ್ಥಿರವಾದ ಸಾಧನೆ ತೋರಿಸಿ, ಆರ್ಥಿಕವಾಗಿ ಬೆಳವಣಿಗೆ ಸಾಧಿಸಿ, ಲಾಭದಲ್ಲಿ ನಡೆಯುತ್ತಿರುವ ಕಂಪನಿಗಳ ಸಂಖ್ಯೆ ಕೆಲವೇ ಕೆಲವು. ಬಹುಶಃ ಅಂತಹ ಕಂಪನಿಗಳ ಸಂಖ್ಯೆ 10ರಿಂದ 15 ಇದ್ದಿರಬಹುದು. ಇನ್ನುಳಿದ ಕಂಪನಿಗಳು ಹೆಣಗಾಟ ನಡೆಸುತ್ತಿವೆ, ಹಲವು ಕಂಪನಿಗಳು ಮಣ್ಣುಮುಕ್ಕಿವೆ.

ಬಿಗಿಯಾದ ನಿಯಂತ್ರಣ ಕ್ರಮಗಳು ಇರುವಲ್ಲಿ ವಿಮಾನಯಾನ ಉದ್ದಿಮೆ ಚೆನ್ನಾಗಿ ನಡೆಯಬೇಕು ಎಂದಾದರೆ ಕೆಲವು ಗುಣಗಳನ್ನು ಹೊಂದಿರಬೇಕಾಗುತ್ತದೆ. ನರೇಶ್ ಅವರಲ್ಲಿ ಕಂಪನಿಯನ್ನು ಬೆಳೆಸುವ ಗುಣ ಇತ್ತು. ಅಧಿಕಾರಶಾಹಿಗಳನ್ನು, ರಾಜಕೀಯ ವಲಯವನ್ನು ಸಂಬಾಳಿಸಿದರು, ಅಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಯನ್ನು ವೃತ್ತಿಪರವಾಗಿ ಬೆಳೆಸುವ ಗುಣ ಕೂಡ ಅವರಲ್ಲಿತ್ತು.

ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡ ಆರೋಪ ಕೂಡ ನರೇಶ್ ಅವರ ಮೇಲೆ ಇದೆ. ಟಾಟಾ-ಸಿಂಗಪುರ ಏರ್‌ಲೈನ್ಸ್‌ ಸಂಸ್ಥೆಗೆ ಭಾರತದಲ್ಲಿ ವಿಮಾನಯಾನ ಸೇವೆ ಆರಂಭಿಸಲು 1990ರ ದಶಕದ ಕೊನೆಯ ಭಾಗದಲ್ಲಿ ಹಾಗೂ 2000ನೇ ಇಸವಿಯ ಸುಮಾರಿಗೆ ಸರ್ಕಾರ ಪರವಾನಗಿ ನಿರಾಕರಿಸಿದಾಗ ಅದರ ಹಿಂದೆ ನರೇಶ್ ಹಸ್ತಕ್ಷೇಪ ಇತ್ತು ಎಂದು ಹಲವರು ಮಾತನಾಡಿದ್ದರು. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ– ಈಗ ಕೂಡ– ಆರ್ಥಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಇದ್ದ (ಇರುವ) ದೊಡ್ಡ ಅಡೆತಡೆ ಎಂದರೆ ‘ಪರವಾನಗಿ’ಯ ಪ್ರಯೋಜನ ಪಡೆದ ಕೆಲವು ಉದ್ಯಮಿಗಳೇ ಎಂಬುದನ್ನು ನಾವು ಕೆಲವೊಮ್ಮೆ ಮರೆಯುತ್ತೇವೆ. ಇಂತಹ ಉದ್ಯಮಿಗಳು ತಾವು ಸುರಕ್ಷಿತ ಹಂತ ತಲುಪಿದ ನಂತರ, ತಾವು ಕೂಡ ಸುಧಾರಣೆಗಳ ಲಾಭ ಪಡೆದವರು ಎಂಬುದನ್ನು ಮರೆತುಬಿಡುತ್ತಾರೆ. ಇತರರು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಗಳಾಗುವುದನ್ನು ತಮ್ಮ ಪ್ರಭಾವ ಬಳಸಿ ತಡೆಯುತ್ತಾರೆ.

‘ಕಡಿಮೆ ವೆಚ್ಚ’ದ ವಿಮಾನಯಾನ ಸೇವೆಗಳು ಸುರಕ್ಷಿತವಲ್ಲ, ವಿಮಾನಯಾನ ಕ್ಷೇತ್ರದಲ್ಲಿ ವೇತನದ ವೆಚ್ಚಗಳು, ವಿಮಾನದ ಗುತ್ತಿಗೆ ಮೊತ್ತ, ಇಂಧನ ವೆಚ್ಚ ಇವೆಲ್ಲ ಎಲ್ಲರಿಗೂ ಒಂದೇ ಆಗಿರುವ ಕಾರಣ ‘ಕಡಿಮೆ ವೆಚ್ಚದ ಸೇವೆ’ ಒದಗಿಸುವುದು ಸಾಧ್ಯವಿಲ್ಲದ ಮಾತು ಎಂದು ಅವರು ವಾದಿಸಿದ್ದರು. ಆದರೆ ಹಲವು ಕಂಪನಿಗಳು ಅಗ್ಗದ ದರದಲ್ಲಿ ವಿಮಾನಯಾನ ಸೇವೆ ಒದಗಿಸುವುದನ್ನು ತಡೆಯಲಿಕ್ಕೇನೂ ಅವರಿಂದ ಸಾಧ್ಯವಾಗಲಿಲ್ಲ.

ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಇರಬಾರದು ಎಂಬ ವಾದವನ್ನು ಕೂಡ ಅವರು ಪರಿಣಾಮಕಾರಿಯಾಗಿ ಮಂಡಿಸಿದ್ದರು. ಆದರೆ, ಅವರು ಜೆಟ್ ಏರ್‌ವೇಸ್‌ಗೆ ಎತಿಹಾದ್ ವಿಮಾನಯಾನ ಸಂಸ್ಥೆಯಿಂದ ಬಂಡವಾಳ ತಂದಿದ್ದರು.

ಬೇರೆ ಬೇರೆ ಪಕ್ಷಗಳ ರಾಜಕಾರಣಿಗಳು ನರೇಶ್ ಅವರ ವಿಮಾನಯಾನ ಸೇವಾ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿದ್ದರು ಅಥವಾ ಅವರಿಂದ ಉಪಕಾರ ಪಡೆಯುತ್ತಿದ್ದರು ಎಂಬ ಆರೋಪಗಳು ಆಗಾಗ ಕೇಳಿಬಂದಿವೆ. ನರೇಶ್ ಅವರಿಗೆ ಭೂಗತ ಜಗತ್ತಿನ ಜೊತೆ ನಂಟು ಇದೆ ಎಂಬ ಆರೋಪ ಸಂಸತ್ತಿನಲ್ಲಿಯೇ ಕೇಳಿಬಂದಾಗ ಅವರ ಕಂಪನಿ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ, ತನಿಖಾ ಸಂಸ್ಥೆಗಳಿಗೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಬಲ ಆಧಾರಗಳು ಸಿಗಲಿಲ್ಲ. ಈ ಎಲ್ಲ ವಿವಾದಗಳು, ಒಂದಾದ ಮೇಲೆ ಒಂದರಂತೆ ಬರುತ್ತಿದ್ದ ಸಮಸ್ಯೆಗಳ ನಡುವೆಯೇ ನರೇಶ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಜಾಲ ಕಟ್ಟಿದರು. ವಿಮಾನ ಹಾರಾಟಕ್ಕೆ ಅಗತ್ಯ ಅಂತರರಾಷ್ಟ್ರೀಯ ಮಾರ್ಗಗಳನ್ನು ಸಂಪಾದಿಸಿದರು. ಅಗಲ ದೇಹದ ಏರ್‌ಬಸ್‌ ಹಾಗೂ ಬೋಯಿಂಗ್‌ ವಿಮಾನಗಳನ್ನು ಖರೀದಿಸಿದರು. ದೇಶದೊಳಗಿನ ಜಾಲವನ್ನೂ ಗಟ್ಟಿಗೊಳಿಸಿಕೊಂಡರು.

ಸಾಮಾನ್ಯ ವ್ಯಕ್ತಿಯಾಗಿದ್ದಿದ್ದರೆ ನರೇಶ್ ಅವರು ಎಂದೋ ಸೋಲೊಪ್ಪಿಕೊಂಡಿರುತ್ತಿದ್ದರು. ಆದರೆ, ನರೇಶ್ ಅವರು ಈಗ ಬಹುತೇಕ ಕುಸಿದು ಬಿದ್ದಿದ್ದಾರೆ. ಜೆಟ್‌ ಏರ್‌ವೇಸ್‌ನ ಬಹುಪಾಲು ವಿಮಾನಗಳು ಹಾರಾಟ ನಿಲ್ಲಿಸಿವೆ. ಪೈಲಟ್‌ಗಳು ಪ್ರತಿಸ್ಪರ್ಧಿ ಕಂಪನಿಗಳನ್ನು ಸೇರುತ್ತಿದ್ದಾರೆ. ಗಾಯಗೊಂಡ ಹಕ್ಕಿಯನ್ನು ಹೊಡೆದುರುಳಿಸುವ ಹವಣಿಕೆಯಲ್ಲಿ ಪ್ರತಿಸ್ಪರ್ಧಿಗಳು ಇದ್ದಾರೆ. ಯಶಸ್ಸು ಎಂಬುದು ಕಣ್ಣಿಗೆ ಪೊರೆ ತರಿಸುವುದಿದೆ. ನರೇಶ್ ಅವರಿಗೆ ಜೆಟ್‌ ಏರ್‌ವೇಸ್‌ ಮೇಲೆ ಇದ್ದ ಪ್ರೀತಿ ಹಾಗೂ ಭಾವುಕ ಸಂಬಂಧ ಅವರ ತೀರ್ಮಾನಗಳ ಮೇಲೆ ಪರದೆ ಹೊದಿಸಿಬಿಟ್ಟಿತ್ತು.

ಈಗ ನರೇಶ್ ಮತ್ತು ಆಡಳಿತ ಮಂಡಳಿಯ ಇತರ ಕೆಲವು ಸದಸ್ಯರು ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಬ್ಯಾಂಕುಗಳು ಹಾಗೂ ಕಂಪನಿಯಲ್ಲಿ ಬಂಡವಾಳ ಹೂಡಿರುವ ಇತರರು ಈಗ ಸಮಯ ವ್ಯರ್ಥ ಮಾಡದೆ ಇನ್ನಷ್ಟು ಹಣ ಹೂಡಬೇಕು. ಸಿಇಒ ಹಾಗೂ ಅವರ ತಂಡದ ಮೂಲಕ ಅಗತ್ಯ ಬದಲಾವಣೆ ತರಬೇಕು.

ಭಾರತದಲ್ಲಿ ಇಂದು ಕೂಡ ವಿಮಾನಯಾನ ಎಲ್ಲರಿಗೂ ಕೈಗೆಟಕುವಂತೆ ಇಲ್ಲ. ಶೇಕಡ 4ರಷ್ಟು ಜನ ಮಾತ್ರ ವಿಮಾನಯಾನ ಮಾಡುವ ಅವಕಾಶ ಹೊಂದಿದ್ದಾರೆ. ನಿರ್ದಾಕ್ಷಿಣ್ಯವಾಗಿ ವೆಚ್ಚ ನಿಯಂತ್ರಿಸಿ, ಹೊಸತನ ತಂದು, ಈಗಿನ ವಹಿವಾಟು ಮಾದರಿಯಲ್ಲಿ ಸಂಪೂರ್ಣ ಬದಲಾವಣೆ ತಂದರೆ ಮಾತ್ರ ವಿಮಾನಯಾನದಲ್ಲಿ ಬೆಳವಣಿಗೆ ಸಾಧ್ಯವಿದೆ.

ಜೆಟ್‌ ಏರ್‌ವೇಸ್‌ ಕಂಪನಿ ದಿವಾಳಿ ಎದ್ದಿದ್ದರೆ ಭಾರತದ ಗ್ರಾಹಕರು ಮತ್ತು ಭಾರತದ ಅರ್ಥ ವ್ಯವಸ್ಥೆಗೆ ನಷ್ಟ ಆಗುತ್ತಿತ್ತು. ಕಂಪನಿಯ 15 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದರು. ಅಲ್ಲದೆ, ಅದರಿಂದ ಇತರ ಉದ್ದಿಮೆಗಳ ಮೇಲೆ ಕೂಡ ಪರಿಣಾಮ ಉಂಟಾಗುತ್ತಿತ್ತು.

ದೊಡ್ಡ ಕಂಪನಿಗಳು ಪ್ರತಿಸ್ಪರ್ಧಿ ಕಂಪನಿಗಳನ್ನು ಖರೀದಿಸುವುದು, ಎರಡು ಕಂಪನಿಗಳು ವಿಲೀನಗೊಳ್ಳುವುದು ಏಕಸ್ವಾಮ್ಯಕ್ಕೆ ಹೇಗೆ ದಾರಿ ಮಾಡಿಕೊಡುತ್ತದೆಯೋ, ಒಂದು ಕಂಪನಿ ಮುಚ್ಚಿಹೋಗುವುದು ಕೂಡ ಅದೇ ರೀತಿಯಲ್ಲಿ ಒಂದೆರಡು ಕಂಪನಿಗಳು ಮಾರುಕಟ್ಟೆ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದಕ್ಕೆ ನಾಂದಿಯಾಗುತ್ತದೆ. ಈಗ ನರೇಶ್ ಅವರು ಶಸ್ತ್ರತ್ಯಾಗ ಮಾಡಿರುವ ಕಾರಣದಿಂದಾಗಿ, ಜೆಟ್‌ ಏರ್‌ವೇಸ್‌ ಟೇಕ್‌ಆಫ್ ಆಗಲು ಇದ್ದ ಅಡ್ಡಿ ತೆರವಾದಂತಾಗಿದೆ.

ಲೇಖಕ: ವಿಮಾನಯಾನ ಕ್ಷೇತ್ರದ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು