ಶನಿವಾರ, ಅಕ್ಟೋಬರ್ 31, 2020
21 °C

ಈ ಇನ್ಶೂರೆನ್ಸ್ ಖರೀದಿಸಬೇಕೇ?

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

‘ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಮಾಡ್ಸಿ ಸರ್. ಈ ಪಾಲಿಸಿ ಮಾಡಿಸಿದ್ರೆ ಲೈಫ್ ಟೈಮ್ ಕವರೇಜ್ ಜತೆಗೆ ಸಖತ್ ಲಾಭನೂ ಸಿಗುತ್ತೆ...’ ಹೀಗೆಂದು ಹೇಳುತ್ತ ಇನ್ಶೂರೆನ್ಸ್ ಏಜೆಂಟರು ಬೆನ್ನಿಗೆ ಬೀಳುವ ಅನುಭವ ಒಂದಲ್ಲ ಒಂದು ಬಾರಿ ಪ್ರತಿಯೊಬ್ಬರಿಗೂ ಆಗಿರುತ್ತದೆ. ಆದರೆ, ಇನ್ಶೂರೆನ್ಸ್ ಏಜೆಂಟರು ಹೇಳಿ ಮಾಡಿಸುವ ಪಾಲಿಸಿಗಳಿಂದ ನಿಮಗೆ ಅನುಕೂಲವಿದೆಯಾ? ಯಾವ ಇನ್ಶೂರೆನ್ಸ್ ಆಯ್ಕೆ ಮಾಡಿದರೆ ನಿಮಗೆ ಅನುಕೂಲ? ಇಲ್ಲಿದೆ ಒಂದಿಷ್ಟು ವಿವರ.

ಏಜೆಂಟರ ಕಮಿಷನ್ ಶೇ 42 ರಷ್ಟು: ‘ಉಳಿತಾಯ, ಹೂಡಿಕೆ ಏನಾದ್ರೂ ಮಾಡಿದ್ದೀರಾ’ ಅಂತ ಯಾರನ್ನಾದರೂ ಕೇಳಿದರೆ ‘ಹೌದು, ಲೈಫ್ ಇನ್ಶೂರೆನ್ಸ್ ತಗೊಂಡಿದ್ದೀವಿ’ ಎಂಬ ಉತ್ತರ ಬಹುತೇಕರಿಂದ ಬರುತ್ತದೆ. ಆದರೆ, ಜೀವ ವಿಮೆಗಳು ಸುರಕ್ಷತೆ ನೀಡುವ ಜತೆಗೆ ಲಾಭ ತಂದುಕೊಡುತ್ತವೆಯೇ? ಖಂಡಿತ ಇಲ್ಲ! ಸಂಪೂರ್ಣ ಜೀವವಿಮೆ (Whole Life Policy), ಎಂಡೋಮೆಂಟ್, ಮನಿ ಬ್ಯಾಕ್, ಗ್ಯಾರಂಟಿ ಪಾಲಿಸಿ ಎಂಬಿತ್ಯಾದಿ ಹೆಸರಿನಲ್ಲಿ ಮಾರಾಟವಾಗುವ ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳು ಏಜೆಂಟರನ್ನು ಉದ್ಧಾರ ಮಾಡುತ್ತವೆಯೇ ವಿನಾ ಖರೀದಿಸಿದವರನ್ನಲ್ಲ.

ಇಲ್ಲಿ ಹೆಸರಿಸಿದ ಪಾಲಿಸಿಗಳನ್ನು ಖರೀದಿಸಿದರೆ ನೀವು ಪಾವತಿಸುವ ಮೊದಲ ಪ್ರೀಮಿಯಂನಲ್ಲಿ ಬರೋಬ್ಬರಿ ಶೇಕಡ 42ರಷ್ಟು ಹಣ ಏಜೆಂಟರಿಗೆ ಕಮಿಷನ್ ರೂಪದಲ್ಲಿ ಸಂದಾಯವಾಗುತ್ತದೆ. ನಂತರದ ವರ್ಷಗಳಲ್ಲಿ ಏಜೆಂಟರಿಗೆ ಪ್ರತಿ ವರ್ಷ ಶೇ 7.5ರಷ್ಟು ಕಮಿಷನ್ ಸಿಗುತ್ತದೆ. ಉದಾಹರಣೆಗೆ, ನೀವು ₹ 50 ಸಾವಿರ ಪ್ರೀಮಿಯಂ ಪಾವತಿಸುತ್ತೀರಿ ಅಂತಾದರೆ ಮೊದಲ ವರ್ಷ ಏಜೆಂಟ್‌ಗೆ ₹ 21 ಸಾವಿರ ಕಮಿಷನ್ ಪಾವತಿಯಾಗುತ್ತದೆ. ನಂತರದ ವರ್ಷಗಳಲ್ಲಿ ಪ್ರತಿ ವರ್ಷ ₹ 3,750 ಕಮಿಷನ್ ಹಣ ಸಿಗುತ್ತದೆ. 2019ರಲ್ಲಿ ಒಟ್ಟು 3 ಕೋಟಿ ಇನ್ಶೂರೆನ್ಸ್ ಪಾಲಿಸಿಗಳು ಮಾರಾಟವಾಗಿದ್ದು ₹ 1 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರ ಪೈಕಿ ಸಾಂಪ್ರದಾಯಿಕ ಪಾಲಿಸಿಗಳ ಪಾಲು ಶೇ 80ಕ್ಕಿಂತ ಹೆಚ್ಚು.

ಕವರೇಜ್ ಇಲ್ಲ, ಲಾಭನೂ ಇಲ್ಲ!: ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಹೆಚ್ಚು ಮೊತ್ತದ ವಿಮಾ ಕವರೇಜ್ ಇರುವುದಿಲ್ಲ, ನೀವು ಕಟ್ಟುವ ಪ್ರೀಮಿಯಂ ಮೇಲೆ ಹೆಚ್ಚಿಗೆ ಲಾಭವೂ ಬರುವುದಿಲ್ಲ. ಉದಾಹರಣೆಗೆ, ನೀವು ₹ 10 ಲಕ್ಷ ಇನ್ಶೂರೆನ್ಸ್ ಕವರೇಜ್ ನೀಡುವ ಜೀವ ವಿಮೆ ಪಾಲಿಸಿಯನ್ನು ಪಡೆಯಬೇಕಾದರೆ 15 ವರ್ಷಗಳ ಅವಧಿಗೆ ವಾರ್ಷಿಕ ಸುಮಾರು ₹ 50 ಸಾವಿರ ಪಾವತಿಸಬೇಕು. ಇವತ್ತಿನ ಖರ್ಚು ಮತ್ತು ಭವಿಷ್ಯದ ಹಣದುಬ್ಬರ ಲೆಕ್ಕ ಹಾಕಿದಾಗ ₹ 10 ಲಕ್ಷ ಕವರೇಜ್ ಯಾವುದಕ್ಕೂ ಸಾಲುವುದಿಲ್ಲ. ಅಷ್ಟೇ ಅಲ್ಲ ನೀವು ಇನ್ಶೂರೆನ್ಸ್‌ನಲ್ಲಿ 10ರಿಂದ 15 ವರ್ಷ ಪಾವತಿಸುವ ಪ್ರೀಮಿಯಂಗೆ ಶೇ 3ರಿಂದ ಶೇ 4ರ ಬಡ್ಡಿ ಮಾತ್ರ ಸಿಗುತ್ತದೆ. ಈ ಲಾಭ ಲೆಕ್ಕ ಹಾಕಿ ನೋಡಿದಾಗ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ), ಸರ್ಕಾರಿ ಬಾಂಡ್ ಬಡ್ಡಿ ದರವೇ ಲೇಸು ಎನ್ನುವುದು ಸ್ಪಷ್ಟವಾಗುತ್ತದೆ.

ಹೊರಬರೋದು ಕಷ್ಟ: ಹೇಗಾದರೂ ಮಾಡಿ ವಿಮೆಯಿಂದ ಹೊರ ಬರೋಣ ಅಂದುಕೊಂಡರೆ ಅದು ಕೂಡ ಅಷ್ಟು ಸುಲಭವಲ್ಲ. ಒಂದನೇ ವರ್ಷದ ಪ್ರೀಮಿಯಂ ಕಟ್ಟಿ ನಂತರ ನಿಲ್ಲಿಸಿದರೆ, ಪೂರ್ತಿ ಹಣ ಸಿಗುವುದಿಲ್ಲ. ಒಂದೆರಡು ವರ್ಷ ಪ್ರೀಮಿಯಂ ಕಟ್ಟಿ ಆಮೇಲೆ ನಿಲ್ಲಿಸೋಣ ಅಂದರೆ ಅದಕ್ಕೆ ಇನ್ಶೂರೆನ್ಸ್ ಕಂಪನಿ ದಂಡ ವಿಧಿಸುತ್ತದೆ. ಹಾಗಾಗಿ, ಇಂತಹ ಇನ್ಶೂರೆನ್ಸ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ.

ಯಾವ ಜೀವ ವಿಮೆ ಖರೀದಿಸಬೇಕು?: ವ್ಯಕ್ತಿಯ ವಾರ್ಷಿಕ ಆದಾಯದ 10 ಪಟ್ಟು ಇನ್ಶೂರೆನ್ಸ್ ಕವರೇಜ್ ಇರಬೇಕು. ಅಂದರೆ, ನಿಮ್ಮ ವಾರ್ಷಿಕ ಆದಾಯ ₹ 10 ಲಕ್ಷ ಇದ್ದರೆ ನೀವು ಕನಿಷ್ಠ ₹ 1 ಕೋಟಿ ಕವರೇಜ್ ಇರುವ ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಸುವುದು ಒಳಿತು. ₹ 1 ಕೋಟಿ ಮೊತ್ತದ ಕವರೇಜ್ ಇರುವ ಟರ್ಮ್ ಇನ್ಶೂರೆನ್ಸ್ ಪಡೆಯಲು 30 ವರ್ಷ ವಯಸ್ಸಿನ ವ್ಯಕ್ತಿಗೆ ಸುಮಾರು ₹ 8 ಸಾವಿರದಿಂದ ₹ 10 ಸಾವಿರ ಪ್ರೀಮಿಯಂ ಬರುತ್ತದೆ. ಟರ್ಮ್ ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ಆತನ ಕುಟುಂಬಕ್ಕೆ ₹ 1 ಕೋಟಿ ಇನ್ಶೂರೆನ್ಸ್ ಹಣ ಸಿಗುತ್ತದೆ. ಇದು ಅತ್ಯಂತ ಅಗ್ಗ ಮತ್ತು ಸುರಕ್ಷಿತ ಜೀವ ವಿಮೆ. ಆನ್ ಲೈನ್ ಮೂಲಕ ಖರೀದಿಸಿದರೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಒಳ್ಳೆಯ ಇನ್ಶೂರೆನ್ಸ್ ಸಿಗುತ್ತದೆ.

ಷೇರುಪೇಟೆಯಲ್ಲಿ ನೀರಸ ವಹಿವಾಟು
ಸೆಪ್ಟೆಂಬರ್ 18ಕ್ಕೆ ಕೊನೆಯಾದ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿವೆ. 11,504 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.35ರಷ್ಟು ಏರಿಕೆ ಕಂಡಿದ್ದರೆ, 38,845 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಬಹುತೇಕ ಇದ್ದ ಸ್ಥಿತಿಯಲ್ಲೇ ಇದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 4ರಷ್ಟು ಜಿಗಿತ ಕಂಡಿದ್ದರೆ, ಫಾರ್ಮಾ ಮತ್ತು ಐ.ಟಿ. ವಲಯಗಳು ಕ್ರಮವಾಗಿ ಶೇ 8.9ರಷ್ಟು ಮತ್ತು ಶೇ 6.4ರಷ್ಟು ಹೆಚ್ಚಳ ಕಂಡಿವೆ.

ವಿದೇಶಿ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ, ಕೆಲವು ದೇಶಗಳಲ್ಲಿ ಮತ್ತೆ ಲಾಕ್‌ಡೌನ್‌ ಹೇರಿದ್ದು, ಇನ್ನು ಕೆಲವೆಡೆ ಹೇರುವ ಸಾಧ್ಯತೆ ಇದೆ ಎಂಬ ವರ್ತಮಾನ, ಬ್ಯಾಂಕಿಂಗ್ ವಲಯದ ಎನ್‌ಪಿಎ ಹೆಚ್ಚಳವಾಗುವ ಭೀತಿ ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ಹಾಗಾಗಿ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 2ರಷ್ಟು ಕುಸಿದಿದೆ.

ಗಳಿಕೆ-ಇಳಿಕೆ: ಡಿಆರ್‌ಎಲ್ ಶೇ 21ರಷ್ಟು, ಎಚ್‌ಸಿಎಲ್ ಟೆಕ್ ಶೇ 12ರಷ್ಟು, ಸಿಪ್ಲಾ ಶೇ 11ರಷ್ಟು, ವಿಪ್ರೋ ಶೇ 8ರಷ್ಟು, ಯುಪಿಎಲ್ ಶೇ 8ರಷ್ಟು, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 7ರಷ್ಟು, ಇನ್ಫೊಸಿಸ್ ಶೇ 6ರಷ್ಟು, ಟೆಕ್ ಮಹೀಂದ್ರಾ ಶೇ 6ರಷ್ಟು ಮತ್ತು ಬಜಾಜ್ ಆಟೋ ಶೇ 5ರಷ್ಟು ಜಿಗಿತ ಕಂಡಿವೆ. ಎಸ್‌ಬಿಐ ಶೇ 5ರಷ್ಟು, ಬಜಾಜ್ ಫಿನ್‌ಸರ್ವ್ ಶೇ 4ರಷ್ಟು, ಬಿಪಿಸಿಎಲ್ ಶೇ 4ರಷ್ಟು ಮತ್ತು ಕೋಟಕ್ ಬ್ಯಾಂಕ್ ಶೇ 4ರಷ್ಟು ಕುಸಿದಿವೆ.

ಐಪಿಒ: ಕ್ಯಾಮ್ ಕಾನ್ ಸ್ಪೆಶಾಲಿಟಿ ಕೆಮಿಕಲ್ಸ್ ಸೆಪ್ಟೆಂಬರ್ 21ರಂದು ಆರಂಭಿಕ ಸಾರ್ವಜನಿಕ ಬಂಡವಾಳ ( ಐಪಿಒ) ಆರಂಭಿಸುತ್ತಿದೆ.

ಮುನ್ನೋಟ: ಈ ವಾರ ಪ್ರಭಾತ್ ಡೇರಿ ಲಿ., ಸಾಂಗ್ವಿ ಎಂಜಿನಿಯರ್ಸ್ ಲಿ., ಸೌಭಾಗ್ಯ ಮರ್ಸೆಂಟೈಲ್, ಕೊನಾರ್ಕ್ ಸಿಂಥೆಟಿಕ್, ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ಲಿ., ಸುದಿತಿ ಇಂಡಸ್ಟ್ರೀಸ್, ಸೂರಜ್ ಡೈಮೆಂಡ್ಸ್ ಎಕ್ಸ್‌ಪೋರ್ಟ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಸದ್ಯಕ್ಕೆ ಫಾರ್ಮಾ, ಐ.ಟಿ. ಮತ್ತು ವಾಹನ ಉತ್ಪಾದನಾ ವಲಯದ ಹೂಡಿಕೆಯಲ್ಲಿ ಸ್ಥಿರತೆ ಇರುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಕೋವಿಡ್ ಲಸಿಕೆ ವಿಚಾರದಲ್ಲಿ ಆಗುವ ಬೆಳವಣಿಗೆಗಳು ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.


ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು