ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಸಾಧನೆ ಉಳಿದ ಕ್ರೀಡೆಗಳಿಗೆ ಪ್ರೇರಣೆ

ಗಾಬಾ ಟೆಸ್ಟ್‌ ಐತಿಹಾಸಿಕ ಜಯವು ದೇಶದ ಎಲ್ಲ ಕ್ರೀಡೆಗಳಿಗೂ ಸ್ಫೂರ್ತಿಯಾಗಬಹುದೇ?
Last Updated 26 ಜನವರಿ 2021, 19:30 IST
ಅಕ್ಷರ ಗಾತ್ರ

ಕರ್ನಲ್ ಸಿ.ಕೆ. ನಾಯ್ಡು ನಾಯಕತ್ವದ ಭಾರತ ಕ್ರಿಕೆಟ್ ತಂಡವು 1932ರಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ ಆಡಿತು. ಅದಕ್ಕೂ ನಾಲ್ಕು ವರ್ಷಗಳ ಮುನ್ನವೇ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತ್ತು. ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರನ್ನು ಜಗತ್ತೇ ಕೊಂಡಾಡುತ್ತಿತ್ತು.

1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತವು ಹಾಕಿಯಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಧ್ಯಾನಚಂದ್ ಪಾತ್ರ ದೊಡ್ಡದಿತ್ತು. ‘ಕ್ರಿಕೆಟ್‌ನಲ್ಲಿ ರನ್‌ ಗಳಿಸುವಂತೆ ಹಾಕಿಯಲ್ಲಿ ಧ್ಯಾನಚಂದ್ ಗೋಲು ಗಳಿಸುತ್ತಾರೆ’ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಕೂಡ ಹೇಳಿದ್ದರು. 88 ವರ್ಷಗಳ ನಂತರ ಆಗಿರುವ ಬದಲಾವಣೆ ನೋಡಿ.

ಹೋದ ವಾರ ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಹಣಿಯುವಷ್ಟರ ಮಟ್ಟಿಗೆ ಭಾರತ ಕ್ರಿಕೆಟ್‌ ತಂಡ ಬಲಿಷ್ಠವಾಗಿ ಬೆಳೆದಿದೆ. ಬೆಂಚ್‌ನಲ್ಲಿದ್ದ ಹುಡುಗರೆಲ್ಲ ಸೇರಿ ಈ ಐತಿಹಾಸಿಕ ಸಾಧನೆ ಮಾಡಿದರು. ಆದರೆ ಹಾಕಿ ಸೇರಿದಂತೆ ಬೇರೆ ಕ್ರೀಡೆಗಳನ್ನು ನೋಡಿ, ಬೆಂಚ್‌ ಶಕ್ತಿ ಹೋಗಲಿ ಮುಖ್ಯವಾಹಿನಿಯಲ್ಲಿ ಸ್ಪರ್ಧಿಸುವ ಸಮರ್ಥರ ಕೊರತೆ ಕಾಡುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಆದರೂ, ಭಾರತದಲ್ಲಿ ಉಳಿದ ಕ್ರೀಡೆಗಳು ಸೊರಗಲು ಕ್ರಿಕೆಟ್‌ಗೆ ಸಿಗುವ ಅಬ್ಬರದ ಪ್ರಚಾರವೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸಂಪೂರ್ಣ ಸುಳ್ಳು ಎನ್ನಲಾಗದು. ಆದರೆ, ಗುಣಕ್ಕೆ ಮತ್ಸರವಿರಬಾರದು. ಕ್ರಿಕೆಟ್‌ ವೃತ್ತಿಪರವಾಗಿ ಬೆಳೆಯಲು ಕಾರಣವಾದ ಅಂಶಗಳತ್ತಲೂ ಉಳಿದ ಕ್ರೀಡಾ ಫೆಡರೇಷನ್‌ಗಳು ಗಮನಹರಿಸಬೇಕು.

ಕಳೆದ ಒಂಬತ್ತು ದಶಕಗಳಲ್ಲಿ ಕ್ರಿಕೆಟ್‌ನಲ್ಲಿಯೂ ತಾರಾ ವರ್ಚಸ್ಸಿನ ಹಲವು ಕ್ರಿಕೆಟಿಗರು ಬೆಳಗಿದರು. ಬೇರೆ ಕ್ರೀಡೆಗಳಲ್ಲಿಯೂ ಸಾಧಕರು ತಮ್ಮ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದರು. ಆದರೆ ತನ್ನ ತಾರೆಗಳ ಹೊಳಪನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಯಿತು. ಅದೇ ಉಳಿದ ಕ್ರೀಡಾ ಫೆಡರೇಷನ್‌ಗಳು ತಮ್ಮ ಅಂತಃಸತ್ವವನ್ನು ಬಂಡವಾಳ ಮಾಡಿಕೊಳ್ಳದೇ ಸೊರಗಿದವು.

ದೇಶದಲ್ಲಿ ಕ್ರಿಕೆಟ್‌ ಅಂಬೆಗಾಲಿಡುವ ಸಮಯದಲ್ಲಿಯೇ ಭಾರತದ ಬೇರೆ ಕ್ರೀಡೆಗಳಲ್ಲಿ ಸೂಪರ್ ಸ್ಟಾರ್‌ಗಳಿದ್ದರು. ಆ ಆಟಗಳನ್ನು ನೋಡಲು ಸೇರುವ ಜನಸ್ತೋಮ ಇತ್ತು. ಆಡಲು ಹಂಬಲಿಸುವ ಯುವ ಮನಸುಗಳಿದ್ದವು. ಅಥ್ಲೆಟಿಕ್ಸ್‌ನಲ್ಲಿ ಮಿಲ್ಕಾ ಸಿಂಗ್, ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ, ಹಾಕಿಯಲ್ಲಿ ಬಲ್ಬೀರ್ ಸಿಂಗ್ ಸೀನಿಯರ್, ಅಶೋಕ ಕುಮಾರ್, ಕುಸ್ತಿಯಲ್ಲಿ ಕಶೋಬಾ ಜಾಧವ್ ಅಂಥವರು ಸ್ಫೂರ್ತಿದಾಯಕ ಆಗಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ರಾಜಕಾರಣಿಗಳ ಹಿಡಿತದಲ್ಲಿ ಸಿಲುಕಿದ ಕ್ರೀಡಾ ಫೆಡರೇಷನ್‌ಗಳು ಮಗ್ಗುಲು ಬದಲಾಯಿಸಲಿಲ್ಲ.

ಚೀನಾ, ಯುರೋಪ್ ಮತ್ತು ಅಮೆರಿಕ ದೇಶಗಳ ಅಥ್ಲೀಟ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ತರಬೇತಿ ಪಡೆಯುತ್ತಿದ್ದಾರೆ. ಆದರೆ ಇಲ್ಲಿಯ ಕ್ರೀಡಾಪಟುಗಳು ಉನ್ನತ ತರಬೇತಿಗಾಗಿ ಈಗಲೂ ಹೊರದೇಶಗಳಿಗೆ ಹೋಗಬೇಕಾದ ಅನಿವಾರ್ಯ ಇದೆ. ಆದರೆ ಹಣಕಾಸಿನ ನೆರವಿಗಾಗಿ ಫೆಡರೇಷನ್‌ಗಳು ಮತ್ತು ಅಧಿಕಾರಿಗಳ ಮುಂದೆ ಕೈಯೊಡ್ಡಿ ನಿಲ್ಲಬೇಕು. ಈಗ ಕೆಲವು ವರ್ಷಗಳಿಂದ ಕೇಂದ್ರದ ಟಾಪ್ ಯೋಜನೆಯಲ್ಲಿ ಒಲಿಂಪಿಕ್ಸ್‌ಗೆ ಹೋಗುವ ಕ್ರೀಡಾಪಟುಗಳಿಗೆ ಧನಸಹಾಯ ಸಿಗುತ್ತಿದೆ. ಆದರೆ, ಬೇರುಮಟ್ಟದಲ್ಲಿಕ್ರೀಡೆಗಳ ಬೆಳವಣಿಗೆಗೆ ದುಡ್ಡಿನ ಹರಿವು ಇಲ್ಲ.

ತಮ್ಮ ಮಕ್ಕಳನ್ನು ಕ್ರೀಡೆಗೆ ಕಳಿಸುವುದರಿಂದ ಭವಿಷ್ಯದಲ್ಲಿ ಜೀವನ ಭದ್ರತೆ ಲಭಿಸುವುದೆಂಬ ಭರವಸೆ ಪಾಲಕರಲ್ಲಿ ಮೂಡಬೇಕು. ಆಗ ಮಾತ್ರ ಮಕ್ಕಳು ಆಟದಂಗಳಕ್ಕೆ ಬರುತ್ತಾರೆ. ಅಂತಹ ಸ್ಥಿತಿ ಎಷ್ಟು ಕ್ರೀಡೆಗಳಲ್ಲಿದೆ? ಪರ ಊರುಗಳಿಗೆ ಸ್ಪರ್ಧೆಗಳಿಗೆ ಹೋದ ಆಟಗಾರರು ರೈಲುಗಳಲ್ಲಿ ಟಿಕೆಟ್‌ ಸಿಗದೇ ಪ್ರಯಾಸದ ಪ್ರಯಾಣ ಮಾಡಿರುವ ಘಟನೆಗಳು ಈಗಲೂ ವರದಿಯಾಗುತ್ತಿವೆ.

ಆದರೆ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಕ್ರಿಕೆಟ್‌ನಲ್ಲಿದೆ. ಯಾವುದೇ ವಯೋಮಿತಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಕ್ರಿಕೆಟಿಗನಿಗೆ ಭತ್ಯೆ, ಸಂಭಾವನೆ ಮತ್ತಿತರ ಸೌಲಭ್ಯಗಳು ಸಿಗುತ್ತವೆ. ಐಪಿಎಲ್‌ನಂತಹ ಟೂರ್ನಿಗಳಲ್ಲಿ ಆಡುವ ಅವಕಾಶವನ್ನು ತಮ್ಮ 18ನೇ ವಯಸ್ಸಿನಲ್ಲಿಯೇ ಗಿಟ್ಟಿಸಿದ ಪ್ರತಿಭಾವಂತರು ಹಲವರಿದ್ದಾರೆ. ಇದರಿಂದಾಗಿ ಕಿರಿಯ ಮತ್ತು ಅನುಭವಿಗಳ ನಡುವಿನ ಆಂತರಿಕ ಪೈಪೋಟಿ ಹೆಚ್ಚುತ್ತದೆ. ಆಟ ಮತ್ತಷ್ಟು ಆಕರ್ಷಣೀಯವಾಗುತ್ತದೆ. ಜನರನ್ನು ಸೆಳೆಯುತ್ತದೆ. ಅದಕ್ಕೆ ತಕ್ಕಂತೆ ಮಾಧ್ಯಮಗಳಿಗೆ ಬೇಕಾದ ಮಾಹಿತಿಯನ್ನು ಒದಗಿಸುವ ಅಚ್ಚುಕಟ್ಟಾದ ವ್ಯವಸ್ಥೆ ಕ್ರಿಕೆಟ್‌ನ ಎಲ್ಲ ಹಂತಗಳಲ್ಲಿಯೂ ಇದೆ. ಪ್ರತಿಯೊಬ್ಬ ಆಟಗಾರನ ದತ್ತಾಂಶಗಳು ಬೆರಳ ತುದಿಯಲ್ಲಿ ಸಿಗುತ್ತವೆ. ಅದರಿಂದಾಗಿ ಕ್ರಿಕೆಟಿಗರ ಸಾಧನೆಗಳು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತವೆ. ಕ್ರಿಕೆಟ್‌ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಉದ್ಯಮ ಸಂಸ್ಥೆಗಳು ಮುಗಿಬೀಳುತ್ತವೆ.

ಇದರಿಂದ ಬರುವ ಆದಾಯವನ್ನು ತನ್ನ ಆಟಗಾರರಿಗೆ ವರ್ಗಾಯಿಸುವಲ್ಲಿ ಆಡಳಿತ ಮಂಡಳಿಗಳು ಮುಂಚೂಣಿಯಲ್ಲಿವೆ. ಅದಕ್ಕೊಂದು ಉದಾಹರಣೆ, ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ. ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತ ವಾಗಿದ್ದವು. ರಾಷ್ಟ್ರೀಯ ಮತ್ತು ಐಪಿಎಲ್ ತಂಡಗಳಲ್ಲಿ ಆಡುವ ಆಟಗಾರರನ್ನು ಬಿಟ್ಟರೆ ಇನ್ನುಳಿದ ಆಟಗಾರರಿಗೆ ಆದಾಯಮೂಲವೇ ನಿಂತುಹೋಗಿತ್ತು. ಅನ್‌ಲಾಕ್ ಪ್ರಕ್ರಿಯೆ ಆರಂಭವಾದಾಗ ಕೆಲವು ರಾಜ್ಯಗಳ, ಅದರಲ್ಲೂ ಈಶಾನ್ಯ ಭಾರತದ ತಂಡಗಳ ಕೆಲವು ಕ್ರಿಕೆಟಿಗರು ದೇಶಿ ಟೂರ್ನಿಗಳನ್ನು ಆಯೋಜಿಸುವಂತೆ ಬಿಸಿಸಿಐಗೆ ಪತ್ರ ಬರೆದರು. ಅದಕ್ಕಾಗಿ ಟಿ20 ಟೂರ್ನಿ ನಡೆಸಲಾಗುತ್ತಿದೆ. ಇದರಲ್ಲಿ ಒಂದು ಪಂದ್ಯ ಆಡಿದರೆ ಪ್ರತಿಯೊಬ್ಬ ಆಟಗಾರನಿಗೆ ತಲಾ ₹ 15 ಸಾವಿರದಿಂದ 20 ಸಾವಿರ ಸಂಭಾವನೆ ಲಭಿಸುತ್ತದೆ.

ಆಟದಿಂದ ನಿವೃತ್ತರಾದ ಕ್ರಿಕೆಟಿಗರಿಗೆ ವೃತ್ತಿ ಅವಕಾಶ ಗಳನ್ನು ಸೃಷ್ಟಿಸಲಾಗಿದೆ. ಅಂಪೈರ್, ಸ್ಕೋರರ್, ಕೋಚ್, ಕಾಮೆಂಟೇಟರ್ ಮತ್ತು ತಾಂತ್ರಿಕ ಕೆಲಸಗಳನ್ನು ನೀಡಲಾಗುತ್ತಿದೆ. ಆ ಮೂಲಕ ಅವರೆಲ್ಲರ ಅನುಭವದ ಸೇವೆ ಕ್ರಿಕೆಟ್‌ಗೆ ಸಿಗುತ್ತಿದೆ. ಜೂನಿಯರ್ ಕ್ರಿಕೆಟ್ ತಂಡಗಳಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಈಗ ಎನ್‌ಸಿಎಗೆ ಮುಖ್ಯಸ್ಥರಾಗಿದ್ದಾರೆ. ಅವರ ಮಾರ್ಗದರ್ಶನ ದಲ್ಲಿ ಬೆಳೆದ ಆಟಗಾರರು ಗಾಬಾ ಟೆಸ್ಟ್‌ನ ವಿಜಯಕ್ಕೆ ಕಾರಣರಾಗಿದ್ದರು.

ಇದೇ ಮಾದರಿಯನ್ನು ಬ್ಯಾಡ್ಮಿಂಟನ್‌ನಲ್ಲಿ ಕಾಣಬಹುದು. ಪುಲ್ಲೇಲ ಗೋಪಿಚಂದ್ ಕೋಚ್ ಆದ ನಂತರ ಭಾರತದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಒಲಿಂಪಿಕ್ಸ್‌ ಪದಕ ಜಯಿಸಿದರು. ಇನ್ನಷ್ಟು ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕಬಡ್ಡಿಯಲ್ಲೂ ಈಗ ಕ್ರಿಕೆಟ್‌ ಮಾದರಿ ಲೀಗ್‌ ನಡೆಯುತ್ತಿದೆ.

ಆದರೆ ಉಳಿದ ಕ್ರೀಡೆಗಳ ಮಟ್ಟಿಗೆ ಇದನ್ನು ಹೇಳ ಲಾಗದು. ಫ್ರ್ಯಾಂಚೈಸಿ ಕ್ರೀಡೆಗಳ ಕಾಲದಲ್ಲಿಯೂ ಬೇರು ಮಟ್ಟದ ಪ್ರತಿಭೆಗಳ ಮಾಹಿತಿ ಸಂಗ್ರಹ ಮತ್ತು ಹಂಚಿಕೆ ಯಲ್ಲಿ ಫೆಡರೇಷನ್‌ಗಳು ಹಿಂದುಳಿದಿವೆ. ಬಹುತೇಕ ಎಲ್ಲ ಫೆಡರೇಷನ್‌ಗಳೂ ಸರ್ಕಾರದ ಅನುದಾನ ಮತ್ತು ಸೌಲಭ್ಯಗಳನ್ನೇ ನೆಚ್ಚಿಕೊಂಡಿವೆ. ಆದ್ದರಿಂದ ಆಧಿಕಾರ ಸ್ಥರ ಓಲೈಕೆ ಮತ್ತು ಸ್ವಜನಪಕ್ಷಪಾತಗಳು ಹೆಚ್ಚಿವೆ.

ಕ್ರಿಕೆಟ್‌ನಲ್ಲಿಯೂ ಫಿಕ್ಸಿಂಗ್, ಡೋಪಿಂಗ್, ಹಿತಾಸಕ್ತಿ ಮತ್ತು ಭ್ರಷ್ಟಾಚಾರಗಳು ಇವೆ. ಆದರೆ 1983ರ ವಿಶ್ವಕಪ್, 2007ರ ಟಿ20 ವಿಶ್ವಕಪ್ ಮತ್ತು ಇತ್ತೀಚಿನ ಗಾಬಾ ಟೆಸ್ಟ್‌ ವಿಜಯಗಳು ಕ್ರಿಕೆಟ್‌ನ ಬೇರುಗಳಿಗೆ ಮತ್ತೆ ಚೈತನ್ಯ ತುಂಬಿವೆ. ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ರೂಪುಗೊಂಡಿರುವ ನಿಯಮಾವಳಿಗಳಿಂದಾಗಿ ವ್ಯವಸ್ಥೆಯು ಆಟ ಮತ್ತು ಆಟಗಾರರ ಬೆಳವಣಿಗೆಗೆ ಪೂರಕವಾಗಿರುವುದು ಆಶಾದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT