ಮಂಗಳವಾರ, ಅಕ್ಟೋಬರ್ 27, 2020
29 °C
ಮೋದಿಯವರಿಗೆ ಬೋಧಿಸಿದ ‘ರಾಜಧರ್ಮ’ವನ್ನು ಖುದ್ದು ಪಾಲಿಸದೆ ಹೋದರು ವಾಜಪೇಯಿ

ಅಟಲ್ ಬಿಹಾರಿ: ಮುಖವೇ, ಮುಖವಾಡವೇ?

d. umapathy Updated:

ಅಕ್ಷರ ಗಾತ್ರ : | |

Deccan Herald

ವಾಜಪೇಯಿ ನಗುತ್ತಿದ್ದರು. ಮನಸಾರೆ ನಗುತ್ತಿದ್ದರು. ಮುಖದ ಉದ್ದಗಲಕ್ಕೆ ತುಂಬಿ ತುಳುಕಿ ಹಾಸಿ ಹರಡಿರುತ್ತಿದ್ದನಗೆ ಅದು. ನಗಲು ಜಿಪುಣತನ ಮಾಡುತ್ತಿರಲಿಲ್ಲ.ಅದರಲ್ಲೊಂದು ಬೆಚ್ಚನೆಯ ಸ್ನೇಹ ಜಿನುಗಿರುತ್ತಿತ್ತು. ಸದಾ ಗಂಟು ಬಿಗಿದ, ಕುದಿ ಕೋಪವನ್ನು ಅದುಮಿಟ್ಟುಕೊಂಡ ಕಠೋರ ಮೋರೆ ಅವರದಾಗಿರಲಿಲ್ಲ. ಸದಾ ಬಿಗಿದ ಮುಖಮುದ್ರೆ ಧರಿಸಿ, ‘ಅದೃಶ್ಯ ವೈರಿಯ ಎದೆಯ ಮೇಲೆಯೇ ಪದಾಘಾತ ಮಾಡುತ್ತಿದ್ದೇನೆ, ಸದೆ ಬಡಿಯಲು ಸಿದ್ಧನಾಗಿದ್ದೇನೆ’ ಎಂಬಂತೆ ನಡೆಯುವ ಅಗತ್ಯ ಅವರಿಗೆ ಬೀಳಲಿಲ್ಲ. ಕೆಂಡಾಮಂಡಲ ಕೋಪಿಷ್ಠನಂತೆ ಚಿತ್ರಿಸಿದ ಹನುಮಂತನ ಮುಖದ ಸ್ಟಿಕರ್‌ಗಳನ್ನು ಅಂಟಿಸಿಕೊಂಡ ಲಕ್ಷಾಂತರ ಕಾರುಗಳು ಕುದಿಯಬೇಕಿರಲಿಲ್ಲ. ಜಟಾಜೂಟವನ್ನು ಚೆಲ್ಲಾಡಿ ಸುಡುಗಣ್ಣು ತೆರೆದ ಸಿಟ್ಟಿನಿಂದ ಕುದಿವ ಪರಶಿವನ ಸ್ಟಿಕರ್‌ಗಳು ಹಬ್ಬಿ ಹರಡಬೇಕಿರಲಿಲ್ಲ. ಜನವಸತಿಗಳಿಗೆ, ದಾರಿ ಹೆದ್ದಾರಿಗಳಿಗೆ ಹೀಗೆ ಕ್ರೋಧ- ದ್ವೇಷವನ್ನು ಸುರಿಯಬೇಕಿರಲಿಲ್ಲ. ಪ್ರಧಾನಮಂತ್ರಿ ಸ್ಥಾನಮಾನದ ಘನತೆ ಗಾಂಭೀರ್ಯವನ್ನೂ ಮರೆತು ಉನ್ಮಾದ ಮೆಟ್ಟಿದವರಂತೆ ಹತ್ತಾರು ಬಾರಿ ಸಭಿಕರಿಂದ ಎಡೆಬಿಡದೆ ಕೂಗಿಸಬೇಕಿರಲಿಲ್ಲ. ಇದೆಲ್ಲ ಮಾಡುವುದು ವಾಜಪೇಯಿ ಅವರಿಗೆ ಬೇಕಿರಲಿಲ್ಲ.

ಅವರ ಕಣ್ಣುಗಳು ತುಂಟತನದ ಹೊಳಪನ್ನು ತುಳುಕಿಸಿದವೇ ವಿನಾ ಹಗೆ ಮತ್ತು ತಿರಸ್ಕಾರವನ್ನು ಉಗುಳಲಿಲ್ಲ. ಸಹೋದ್ಯೋಗಿಗಳು, ಸಮಕಾಲೀನರ ನಡುವೆ ಮಾತ್ರವಲ್ಲ, ಭಾರತದ ರಾಜಕೀಯ ಇತಿಹಾಸದಲ್ಲಿ ಕೂಡ ಮೊದಲನೆಯವರು ತಾವು, ಎರಡನೆಯವರೂ ತಾವು, ಮೂರನೆಯವರಷ್ಟೇ ಅಲ್ಲ... ಕಡೆಗೆ ನೂರನೆಯವರೂ ತಾವೇ ಎಂಬ ಸ್ವಮೋಹ ಅಟಲ್ ಅವರನ್ನು ಕಾಡಲಿಲ್ಲ. ನೆಲದಿಂದ ಆಗಸಕ್ಕೆ ತ್ರಿವಿಕ್ರಮನಂತೆ ತಲೆಯೆತ್ತಿ ತಾನೇ ತಾನಾಗಿ ಸದಾ ಸರ್ವವ್ಯಾಪಿಯಾಗಿ ಕವಿದುಬಿಡಬೇಕು ಎಂಬ ಆತ್ಮರತಿಯ ರೋಗವನ್ನು ಅವರು ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ. ವಿರೋಧವನ್ನು-ವಿರೋಧಿಗಳನ್ನು ಬಗ್ಗುಬಡಿದು ಕಾಲ ಕೆಳಗೆ ಉಜ್ಜಿ ಒರೆಸಿ ಹಾಕಿಬಿಡಬೇಕು ಎಂಬ ದುಷ್ಟ ಹಟ ವಾಜಪೇಯಿಗೆ ಇರಲೇ ಇಲ್ಲ. ಅಭಿಪ್ರಾಯ ಭೇದಕ್ಕೆ ದೇಶದ್ರೋಹದ ಹಣೆಪಟ್ಟಿ ಹಚ್ಚಿ ‘ತೊಲಗಿಹೋಗಿರಿ ಪಾಕಿಸ್ತಾನಕ್ಕೆ’ ಎಂದು ಅವರು ಒಮ್ಮೆಯೂ ಹೇಳಲಿಲ್ಲ. ಕಾಶ್ಮೀರವನ್ನು ಕಾಡತೂಸಿನ ಭಾಷೆಯಲ್ಲಿ ಮಾತಾಡಿಸುವುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ತಮಗಿಂತ ಬುದ್ಧಿವಂತರ ಮುಂದೆ ಮಾತಿಗೆ ಕುಳಿತಾಗ ಅಸೂಯೆಪಡುತ್ತಿರಲಿಲ್ಲ. ಸಂಪುಟ ಸಭೆಯಲ್ಲಿ ಎಲ್ಲರಿಗೂ ಮಾತಾಡುವ ಅವಕಾಶ ಇರುತ್ತಿತ್ತು. ಅಚ್ಛೇ ದಿನ್ ಬಂದಿಲ್ಲ ಎಂದು ವಾದಿಸುವವರನ್ನು ದೇಶದ್ರೋಹಿಗಳು ಎಂದು ಅವರು ಕರೆಯುತ್ತಿರಲಿಲ್ಲ. ಭಾರತದಲ್ಲಿ ಕತ್ತಲೆಯೂ ಇದೆಯೆಂದು ಒಪ್ಪಿದ್ದರು.

ವಾಜಪೇಯಿ ಅವರನ್ನು ಭವಿಷ್ಯದ ಪ್ರಧಾನಮಂತ್ರಿ ಎಂದು ನೆಹರೂ ಗುರುತಿಸಿದ್ದರು. ‘ನಿಮ್ಮಲ್ಲಿ ಚರ್ಚಿಲ್‌ನ ಆಕ್ರಮಣಕಾರಿ ಗುಣವಿದೆ, ಚೇಂಬರ್ಲಿನ್‌ನಂತೆ ಮಂಡಿಯೂರಿ ಶರಣಾಗುವ ದೈನೇಸಿತನವೂ ಅಡಗಿದೆ’ ಎಂಬುದಾಗಿ ವಾಜಪೇಯಿ ಒಮ್ಮೆ ಸಂಸತ್ತಿನಲ್ಲಿ ನೆಹರೂ ವ್ಯಕ್ತಿತ್ವದ ದೂಳೀಪಟ ಮಾಡಿದ್ದರು. ಸಂಜೆ ಸಮಾರಂಭವೊಂದರಲ್ಲಿ ಎದುರಾದ ವಾಜಪೇಯಿ ಹೆಗಲ ಮಾಲೆ ಕೈಯಿರಿಸಿದ ನೆಹರೂ, ‘ನಿಮ್ಮ ಇಂದಿನ ಭಾಷಣ ಬಹಳ ಸೊಗಸಾಗಿತ್ತು’ ಎಂದು ನಕ್ಕು ಮೆಚ್ಚುಗೆ ಸೂಚಿಸಿದ್ದರು. ಈಗ ಈ ರೀತಿಯ ಭಾಷಣ ಅಪಾಯಕಾರಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ವಾಜಪೇಯಿ. ನಿಜಕ್ಕೂ ಎಷ್ಟು ಅಪಾಯಕಾರಿ ಎಂಬುದನ್ನು ಕಳೆದ ನಾಲ್ಕೂವರೆ ವರ್ಷಗಳು ತೋರಿಸಿಕೊಟ್ಟಿವೆ.

‘ಕಡು ದ್ವೇಷದ ವಾತಾವರಣ ಇಂದಿನ ರಾಜಕಾರಣ ವನ್ನು ಆವರಿಸಿ ಕವಿದಿದೆ. ಅಟಲ್ ಎಂದಿಗೂ ಅಂತಹ ರಾಜಕಾರಣ ನಡೆಸಲಿಲ್ಲ. ಉದ್ಧಟತನ, ಅಹಂಕಾರ ಮೆರೆಯಲಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸಿದರು. ಅವರ ರಾಜಕಾರಣವನ್ನು ನಾವು ಮತ್ತೆ ಆಚರಣೆಗೆ ತರಬೇಕಿದೆ’ ಎಂದಿದ್ದಾರೆ ಇತ್ತೀಚಿನವರೆಗೆ ಆರೆಸ್ಸೆಸ್ ವಕ್ತಾರರಾಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್. ಮೋದಿ- ಅಮಿತ್ ಶಾ ಜೋಡಿ ಮಾಧವ್ ಮಾತುಗಳತ್ತ ಗಮನಹರಿಸುವುದು ಒಳಿತು.

1964ರಲ್ಲಿ ನೆಹರೂ ನಿಧನದ ನಂತರ ವಾಜಪೇಯಿ ಅತೀವ ದುಃಖಿತರಾಗಿದ್ದರು. ಅವರ ಶ್ರದ್ಧಾಂಜಲಿ ಭಾಷಣ ನಂಬಲು ಅಸಾಧ್ಯ ಎನ್ನುವಷ್ಟು ಮಾನವೀಯ ಆಗಿತ್ತು- ‘ಕನಸೊಂದು ಚೂರುಚೂರಾಗಿದೆ. ಗೀತೆಯೊಂದು ಮೌನ ಧರಿಸಿದೆ. ಬೆಳಕೊಂದು ಅನಂತದಲ್ಲಿ ಲೀನಗೊಂಡಿದೆ. ಭಯ ಮತ್ತು ಹಸಿವು ಇಲ್ಲದ ವಿಶ್ವದ ಕನಸು ಅದು. ಭಗವದ್ಗೀತೆಯನ್ನು ಮಾರ್ದನಿಸುವ ಮತ್ತು ರೋಜಾ ಹೂವಿನ ಕಂಪು ಸೂಸುವ ಮಹಾಕಾವ್ಯವೊಂದರ ಗಾನವದು. ಇರುಳೆಲ್ಲ ಉರಿದು ಕತ್ತಲ ಜೊತೆ ಬಡಿದಾಡಿ, ನಮಗೆಲ್ಲ ದಾರಿ ತೋರಿ ಮುಂಜಾನೆ ನಿರ್ವಾಣ ಹೊಂದಿದ ದೀಪವೊಂದರ ಬೆಳಕಾಗಿತ್ತು ಅದು. ತನ್ನ ಅಚ್ಚುಮೆಚ್ಚಿನ ರಾಜಕುಮಾರನನ್ನು ಕಳೆದುಕೊಂಡು ತಾಯಿ ಭಾರತಿ ಇಂದು ಶೋಕತಪ್ತಳಾಗಿದ್ದಾಳೆ. ಮಾನವೀಯತೆ ಮನಸು ಮುದುಡಿ ಖಿನ್ನವಾಗಿದೆ ಮತ್ತು ತನ್ನ ಆರಾಧಕನೊಬ್ಬನನ್ನು ಕಳೆದುಕೊಂಡಿದೆ. ಶಾಂತಿ ಚಡಪಡಿಸಿದೆ, ಅದರ ಸಂರಕ್ಷಕ ಇನ್ನಿಲ್ಲ. ದಲಿತ ದಮನಿತರ ಆಶ್ರಯ ಕುಸಿದು ಬಿದ್ದಿದೆ. ಜನಸಾಮಾನ್ಯನ ಕಣ್ಣುಗಳ ಬೆಳಕು ಆರಿ ಹೋಗಿದೆ’.

ನೆಹರೂ ಪ್ರತಿಪಾದಿಸಿದ ರಾಜಕಾರಣಕ್ಕೆ ಸಮಾನಾಂತರ ರಾಜಕಾರಣ ಕಟ್ಟಲು ಹೊರಟಿದ್ದ ಪಕ್ಷದ ತಲೆಯಾಳು ಆಡಿದ ಈ ಮಾತುಗಳು ಅದೇ ಪಕ್ಷ- ಪರಿವಾರದ ಘಟಾನುಘಟಿಗಳಿಗೆ ರುಚಿಸುತ್ತವೆ ಎಂಬ ಭ್ರಮೆ ಯಾರಿಗೂ ಇಲ್ಲ. ನೆಹರೂ ಪರಂಪರೆಯನ್ನು ಬೇರುಸಹಿತ ಕಿತ್ತು ಹಾಕುವ ಬಗೆ ಬಗೆಯ ಕೃತ್ಯಗಳಿಗೆ,ಹೇಯ ಚಾರಿತ್ರ್ಯವಧೆಗಳಿಗೆ ಇವರೆಲ್ಲರ ಕುಮ್ಮಕ್ಕು ಹೆಚ್ಚು ನಿಚ್ಚಳ. 2009ರ ನಂತರ ವಾಜಪೇಯಿ ಮಾತು ಕಳೆದುಕೊಂಡು ಮೂಲೆಪಾಲಾದರು. ಒಂದು ವೇಳೆ ರಾಜಕಾರಣದಲ್ಲಿ ಸಕ್ರಿಯರಾಗಿ ಮುಂದುವರೆದಿದ್ದರೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿಯವರಂತೆ ಒಮ್ಮೆಯೂ ಸಭೆ ಸೇರಿಲ್ಲದ ‘ಮಾರ್ಗದರ್ಶಕ ಮಂಡಲ’ದ ಸದಸ್ಯರಾಗಿ ದಿನ ದೂಡಬೇಕಿತ್ತು. ಸಾರ್ವಜನಿಕ ವೇದಿಕೆಗಳಲ್ಲಿ ಕೈ ಮುಗಿದು ನಿಂತ ತಮ್ಮತ್ತ ನೋಡದೆ ಮುಂದೆ ಸಾಗಿ ಮತ್ತೆ ತಿರುಗಿ ಬರುವಾಗಲೂ ನಿರ್ಲಕ್ಷಿಸುವ ಪ್ರಧಾನಿಯವರು ಹೊರಿಸುವ ಅವಹೇಳನದ ಒಜ್ಜೆಯಿಂದ ಅಡ್ವಾಣಿಯವರ ವೃದ್ಧಾಪ್ಯದ ಹೆಗಲುಗಳು ಕುಸಿದಿವೆ. ವಾಜಪೇಯಿಹೆಗಲುಗಳೂ ಅಂತೆಯೇ ಕುಸಿಯುತ್ತಿದ್ದವು. ಕಣ್ಣುಗಳು ಖಚಿತವಾಗಿಯೂ ಹಸಿಯಾಗುತ್ತಿದ್ದವು. ಅಡ್ವಾಣಿ ಮನಸ್ಸಿನಲ್ಲಿ ಸುಳಿದು ಯಾತನೆ ಮೂಡಿಸುವ ಅವೇ ಭಾವಗಳು ವಾಜಪೇಯಿ ಮನಸಿನಲ್ಲೂ ಮೆರವಣಿಗೆ ನಡೆಸುತ್ತಿದ್ದವು.

ವಾಜಪೇಯಿ ವರ್ಚಸ್ಸಿನ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಾಗ ಬರೆಯುವ ನಿಧನವಾರ್ತೆಯು ಕೇವಲ ಹೊಗಳಿ ದೈವತ್ವಕ್ಕೇರಿಸುವ ದಸ್ತಾವೇಜು ಆಗುವುದು ಬಹಳ ಸುಲಭ. ‘ಸಂತನೊಬ್ಬನ ಸ್ಥಾನಮಾನಕ್ಕೆ ಅವರನ್ನು ಏರಿಸಲಾರೆ. ವೈಫಲ್ಯಗಳನ್ನು ದಾಖಲಿಸಲೇಬೇಕು’ ಎನ್ನುತ್ತಾರೆ ವಿಖ್ಯಾತ ಪತ್ರಕರ್ತ ಮಾರ್ಕ್ ಟಲ್ಲಿ. ಅಪೂರ್ಣ ಮನುಷ್ಯರು ಸಾವಿನ ನಂತರ ದಿಢೀರನೆ ಪರಿಪೂರ್ಣರಾಗಿಬಿಡುವ ಇಲ್ಲವೇ ಮಹಾಪುರುಷರನ್ನಾಗಿ ಮಾಡುವ ಪವಾಡ ನಡೆವುದು ಪ್ರಾಯಶಃ ನಮ್ಮ ದೇಶದಲ್ಲೇ ಇದ್ದೀತು. ಬಲದ ಜೊತೆಗೆ ದೌರ್ಬಲ್ಯವನ್ನೂ ದಾಖಲಿಸುವುದು ಅಪಚಾರ ಎಂದೇ ಬಗೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಆಯಾಮಗಳನ್ನು ಏರಿ ನಿಂತಿರುವ ಕಾಯಿಲೆ ಇದು.

‘ನಿಧನವಾರ್ತೆ ಎಂಬುದು ವ್ಯಕ್ತಿಯ ಕುರಿತ ಕಟ್ಟಕಡೆಯ ದಸ್ತಾವೇಜು. ಒಳಿತು ಕೆಡುಕಿನ ಪ್ರಾಮಾಣಿಕ ಮತ್ತು ವಿಮರ್ಶಾತ್ಮಕ ಎಣಿಕೆ ನಡೆಯಲೇಬೇಕು’ ಎಂದಿದ್ದರು ದಿವಂಗತ ಖುಷ್ವಂತ್ ಸಿಂಗ್. ವಾಜಪೇಯಿ ತೀರಾ ಆಲಸಿಯಾಗಿದ್ದ ಕೆಲ ಸಂದರ್ಭಗಳಿದ್ದವು. ಅಪಹರಿಸಲಾದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಮೃತಸರ ವಿಮಾನ ನಿಲ್ದಾಣದಿಂದ ಪುನಃ ಹಾರದಂತೆ ತಡೆಯುವಲ್ಲಿ ಅವರು ವಿಫಲರಾದರು. ಗುಜರಾತ್ ಕೋಮುಗಲಭೆಗಳನ್ನು ತಹಬಂದಿಗೆ ತರಲಿಲ್ಲ. ದತ್ತುಮಗಳ ಗಂಡ ರಂಜನ್ ಭಟ್ಟಾಚಾರ್ಯ, ಬ್ರಜೇಶ್ ಮಿಶ್ರ ಹಾಗೂ ಎನ್.ಕೆ. ಸಿಂಗ್ ಪ್ರಧಾನಿ ಕಾರ್ಯಾಲಯದಲ್ಲಿ ಮಿತಿಮೀರಿ ವರ್ತಿಸುತ್ತಿದ್ದಾರೆ ಎಂದು ಪ್ರಮುಖ ಇಂಗ್ಲಿಷ್ ನಿಯತಕಾಲಿಕವೊಂದು ವರದಿ ಪ್ರಕಟಿಸಿತ್ತು. ಈ ನಿಯತಕಾಲಿಕಕ್ಕೆ ಹಣಕಾಸು ಒದಗಿಸುತ್ತಿದ್ದ ಉದ್ಯಮಿಯೊಬ್ಬರನ್ನು ಬೇಟೆಯಾಡಲು ತೆರಿಗೆ ಅಧಿಕಾರಿಗಳನ್ನು ಛೂ ಬಿಟ್ಟ ವಾಜಪೇಯಿ, ಪತ್ರಿಕಾರಂಗವನ್ನು ಗೌರವಿಸಲಿಲ್ಲ. ದೇಶದ ರಕ್ಷಣಾ ಸಾಧನೆ ಸಲಕರಣೆಗಳ ಖರೀದಿ ವ್ಯವಹಾರ ಕುರಿತ ಹಗರಣವನ್ನು ಬಯಲಿಗೆಳೆದ ಮತ್ತೊಂದು ಇಂಗ್ಲಿಷ್ ನಿಯತಕಾಲಿಕವನ್ನೂ 18 ತಿಂಗಳ ಕಾಲ ಬೆನ್ನಟ್ಟಿ ಕಿರುಕುಳ ನೀಡಲಾಯಿತು ಎಂದು ಮಾರ್ಕ್ ಟಲ್ಲಿ ತಾವು ಬರೆದ ನಿಧನವಾರ್ತೆಯೊಂದರಲ್ಲಿ ಪಟ್ಟಿ ಮಾಡಿದ್ದಾರೆ.

ಸಮಾಜವನ್ನು ಒಡೆಯುವ ರಾಜಕಾರಣವು ದೇಶವನ್ನು ಒಡೆಯುತ್ತದೆ ಎಂಬ ಸತ್ಯ ತಡವಾಗಿಯಾದರೂ ಅವರ ತಿಳಿವಿಗೆ ಇಳಿಯತೊಡಗಿತ್ತು. ಹಿಂದಿಗೆ ದೇಶದ ಎಲ್ಲ ರಾಜ್ಯಗಳೂ ಮೊದಲ ಮಣೆ ಹಾಕಬೇಕು ಎಂಬ ಹಟವನ್ನೂ ಅವರು ಕ್ರಮೇಣ ತೊರೆದರು. ಹಿಂದೂಗಳೇ ಮೊದಲು ಎಂಬ ಅವರಲ್ಲಿನ ಜನಸಂಘದ ರಾಜಕಾರಣವೂ ಹಿಂದೆ ಸರಿಯತೊಡಗಿತ್ತು. ಆದರೆ ಇವೆಲ್ಲವುಗಳ ನಡು ನಡುವೆಯೇ ಅದು ಆಗಾಗ ಹೆಡೆಯೆತ್ತಿ ಭುಸುಗುಟ್ಟಿ ಮತ್ತೆ ಹೆಡೆ ಮುದುರುತ್ತಿದ್ದುದೂ ಕಟು ವಾಸ್ತವ.

ಅಸ್ಸಾಂನಲ್ಲಿ ಜರುಗಿದ 1983ರ ನೆಲ್ಲಿ ನರಮೇಧದಲ್ಲಿ 2000ಕ್ಕೂ ಹೆಚ್ಚು ಬಂಗಾಳಿ ಭಾಷಿಕ ಮುಸಲ್ಮಾನರನ್ನು ಕೊಚ್ಚಿ ಹಾಕಲಾಗಿತ್ತು. ಅಲ್ಲಿ ವಾಜಪೇಯಿ ಮಾಡಿದ್ದ ಮುಸ್ಲಿಂ ದ್ವೇಷದ ಭಾಷಣವನ್ನು ಖುದ್ದು ಬಿಜೆಪಿ ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಳ್ಳುವಷ್ಟು ಉಗ್ರವಾಗಿತ್ತು.

ಬಾಬರಿ ಮಸೀದಿ ಧ್ವಂಸದ ಕುರಿತ ಅವರು ಕಾಯ್ದುಕೊಂಡ ದೂರದಲ್ಲೂ ಪ್ರಾಮಾಣಿಕತೆ ಇರಲಿಲ್ಲ. ನೆಲಸಮದ ಹಿಂದಿನ ದಿನ ಅವರು ಮಾಡಿದ್ದ ಭಾಷಣವೊಂದು ಈ ಮಾತಿಗೆ ಸಾಕ್ಷಿ. ‘ಅಲ್ಲಿ (ಅಯೋಧ್ಯೆ) ಚೂಪು ಬಂಡೆಗಳಿವೆ, ಅವುಗಳ ಮೇಲೆ ಯಾರೂ ಕುಳಿತುಕೊಳ್ಳಲಾಗದು. ಜಮೀನನ್ನು ಸಮತಟ್ಟು ಮಾಡಬೇಕು, ಕುಳಿತುಕೊಳ್ಳಲು ಲಾಯಕ್ಕಾಗಿಸಬೇಕು. ಜಮೀನು ಸಮತಟ್ಟಾದ ನಂತರವೇ ಹೊಸ ನಿರ್ಮಾಣ ಸಾಧ್ಯ. ಭಜನೆ, ಕೀರ್ತನೆಗಳನ್ನು ನಿಂತು ಮಾಡಲು ಬರುವುದಿಲ್ಲ. ಎಲ್ಲಿಯತನಕ ಹೀಗೆಯೇ ನಿಲ್ಲಬೇಕು?’ ತಮ್ಮ ರಥಯಾತ್ರೆಗೆ ವಾಜಪೇಯಿ ವಿರೋಧ ಇರಲಿಲ್ಲ. ಇದ್ದಿದ್ದರೆ ತಾವು ಯಾತ್ರೆ ಕೈಗೊಳ್ಳುತ್ತಿರಲಿಲ್ಲ ಎಂದು ಅಡ್ವಾಣಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2002ರ ಗೋಧ್ರೋತ್ತರ ಕೋಮುಗಲಭೆಗಳ ನಂತರ ನರೇಂದ್ರ ಮೋದಿಯವರಿಗೆ ಬೋಧಿಸಿದ ರಾಜಧರ್ಮವನ್ನು ಖುದ್ದು ತಾವೇ ಪಾಲಿಸಲಿಲ್ಲ. ಪಾಲಿಸಿದ್ದರೆ ತಾವು ಪಡೆಯಬೇಕೆಂದು ಬಯಸಿದ್ದ ರಾಜೀನಾಮೆಯನ್ನು ಪಡೆದೇ ತೀರುತ್ತಿದ್ದರು ಎಂಬ ಟೀಕೆಯಿಂದ ವಾಜಪೇಯಿ ತಪ್ಪಿಸಿಕೊಳ್ಳಲು ಬರುವುದಿಲ್ಲ.

ಮೋದಿ ರಾಜೀನಾಮೆ ನೀಡಬೇಕೆಂದು ದಿನಗಟ್ಟಲೆ ಹಿಡಿದ ಪಟ್ಟನ್ನು ಹಠಾತ್ತನೆ ಬದಲಿಸಿ ಗೋವೆಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಅಂತ್ಯದಲ್ಲಿ ಮುಸಲ್ಮಾನರ ಮೇಲೆ ತೀವ್ರ ದಾಳಿ ನಡೆಸುತ್ತಾರೆ. ‘ಮೊದಲು ಬೆಂಕಿ ಇಟ್ಟಿದ್ದುಯಾರು’ ಎನ್ನುತ್ತಾರೆ. ರಾಜಧರ್ಮ- ರಾಜೀನಾಮೆಯ ಮಾತಿಗೆ ಮುನ್ನ ತಾವು ಗೋಧ್ರಾ ಬಳಿ ರೈಲು ಬೋಗಿಯ ಬೆಂಕಿಯಲ್ಲಿ ಬೆಂದ ಹಿಂದೂಗಳ ಫೋಟೊಗಳನ್ನು ನೋಡಿರಲಿಲ್ಲ. ಹಿಂದೂಗಳನ್ನು ಜೀವಂತ ಸುಡದೆ ಹೋಗಿದ್ದರೆ ಆನಂತರದ ನರಮೇಧ ನಡೆಯುತ್ತಿರಲಿಲ್ಲ ಎಂಬ ಅವರ ಹೇಳಿಕೆ ಮತ್ತು ಕ್ರಿಯೆಗೆ ಬದಲಾಗಿ ಪ್ರತಿಕ್ರಿಯೆ ಎಂಬ ಮೋದಿ ಹೇಳಿಕೆಗಳ ನಡುವೆ ಇನಿತೂ ವ್ಯತ್ಯಾಸ ಇಲ್ಲ.

‘ಅಡ್ವಾಣಿಯವರೇ ನಿಜವಾದ ಮುಖ. ಅಟಲ್ ಕೇವಲ ಮುಖವಾಡ’ ಎಂಬುದಾಗಿ ಬ್ರಿಟಿಷ್ ರಾಜತಾಂತ್ರಿಕ ತಂಡಕ್ಕೆ ಹೇಳಿದ್ದರು ಕೆ.ಎನ್.ಗೋವಿಂದಾಚಾರ್ಯ. ಬಳಿಕ ಅಟಲ್ ಆಗ್ರಹಕ್ಕೆ ಗುರಿಯಾದ ಗೋವಿಂದಾಚಾರ್ಯರ ವನವಾಸ ಇಂದಿಗೂ ಮುಗಿದಿಲ್ಲ.

ಮನುಸ್ಮೃತಿಯ ಪ್ರಸ್ತಾಪವೇ ಇಲ್ಲವೆಂದು ಸಂವಿಧಾನವನ್ನು ಬೀಳುಗಳೆದಿದ್ದ ಸಂಘಟನೆಯ ನಿಷ್ಠರು ವಾಜಪೇಯಿ. ಸಂವಿಧಾನ ಮರುವಿಮರ್ಶೆಗಾಗಿ ರಾಷ್ಟ್ರೀಯ ಆಯೋಗ ರಚಿಸಿ ಬಹುಜನ ಸಮಾಜದಲ್ಲಿ ಆತಂಕ ನಿರ್ಮಿಸಿದ್ದರು.

‘ಜಿನ್ನಾ ಜಾತ್ಯತೀತವಾದಿ’ ಎಂಬ ಹೇಳಿಕೆಗಾಗಿ ಶಿಕ್ಷೆಗೆ ಗುರಿಯಾಗಿದ್ದ ಅಡ್ವಾಣಿ, ಆರ್.ಎಸ್.ಎಸ್. ವಿರುದ್ಧ ದನಿ ಎತ್ತಿದ್ದರು- ‘ಆರ್.ಎಸ್.ಎಸ್. ಒಪ್ಪಿಗೆಯಿಲ್ಲದೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಗ್ರಹಿಕೆ ಬಿಜೆಪಿ ಮತ್ತು ಆರೆಸ್ಸೆಸ್‌ ಎರಡಕ್ಕೂ ಒಳ್ಳೆಯದಲ್ಲ’ ಎಂದಿದ್ದರು. ಉದಾರವಾದಿ ಎಂದು ಬಣ್ಣಿಸಲಾದ ವಾಜಪೇಯಿ ಆಗಾಗ ಗೊಣಗಿ ಮಣಮಣಿಸಿದರೇ ವಿನಾ ಅಡ್ವಾಣಿಯವರ ದಿಟ್ಟತನವನ್ನು ತೋರಲಿಲ್ಲ.

ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋದಿಯವರನ್ನು 2001ರಲ್ಲಿ ಹಠಾತ್ತನೆ ಕರೆದು ಗುಜರಾತಿನ ಮುಖ್ಯಮಂತ್ರಿಯಾಗಿ ಕಳಿಸಿದ್ದರು ಪ್ರಧಾನಿ ವಾಜಪೇಯಿ. ಅಂದು ಅವರು ಆ ನಿರ್ಧಾರ ಕೈಗೊಳ್ಳದೆ ಹೋಗಿದ್ದರೆ ಮೋದಿಯವರು ಪ್ರಾಯಶಃ ಪ್ರಧಾನಿ ಗಾದಿಯತ್ತ ಸುಳಿಯುತ್ತಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು