ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಚೂಡ್‌ ಎಂಬ ನ್ಯಾಯದ ಕೆಂಡ!

Last Updated 1 ಅಕ್ಟೋಬರ್ 2018, 5:07 IST
ಅಕ್ಷರ ಗಾತ್ರ

ತುಳಿಸಿಕೊಂಡವರ ಪಾಲಿನ ಕಟ್ಟಕಡೆಯ ಭರವಸೆಯ ಬೆಳಕು ಮತ್ತು ಪ್ರಜೆಗಳ ದಮನಕ್ಕೆ ಇಳಿಯುವ ಪ್ರಭುತ್ವದ ನೆತ್ತಿಯ ಮೇಲಿನ ಅಂಕುಶ ತಾನು ಎಂಬ ನಂಬಿಕೆಯನ್ನು ಸುಪ್ರೀಂ ಕೋರ್ಟು ಆಗಾಗ ಗಟ್ಟಿಗೊಳಿಸುತ್ತ ಇರುತ್ತದೆ. ಪ್ರಭುತ್ವದ ಅಧಿಕಾರ ಪ್ರಶ್ನಾತೀತ ಅಲ್ಲ ಎಂದು ನೆನಪಿಸುತ್ತಿರುತ್ತದೆ. ಪ್ರಜೆಗಳೇ ತನ್ನ ಪ್ರಭುಗಳು ಎಂದು ನಾಟಕದ ಮಾತಾಡುತ್ತದೆ ಪ್ರಭುತ್ವ. ಆದರೆ ನಿಜಾರ್ಥದಲ್ಲಿ ಜನರ ಉಣಿಸು, ತಿನಿಸು, ದಿರಿಸು, ನಡೆ–ನುಡಿ, ಪ್ರೀತಿ– ಪ್ರೇಮ, ಬಯಕೆ, ನೋಟವನ್ನು ತನ್ನ ಹಿತಾಸಕ್ತಿಯ ಅಚ್ಚಿಗೆ ಬಾಗಿಸಿ, ಬಳುಕಿಸಿ, ಮುರಿದು, ಜರೆದು, ಕರಗಿಸಿ ಎರಕ ಹೊಯ್ಯುವ ಕ್ರಿಯೆಯನ್ನು ನಿಲ್ಲಿಸದೆ ನಡೆಸಿರುತ್ತದೆ. ಸುಪ್ರೀಂ ಕೋರ್ಟ್‌ನ ಅಂಕುಶ ಇಲ್ಲದೆ ಹೋಗಿದ್ದರೆ ಕಾಲ ಕಾಲಕ್ಕೆ ಈ ದೇಶವನ್ನು ಆಳುತ್ತ ಬಂದಿರುವ ಪ್ರಭುತ್ವಗಳು ಅಸಹಾಯಕ ಜನಸಮುದಾಯಗಳನ್ನು ಇನ್ನೂ ಎಂಥೆಂಥ ಗುಲಾಮಗಿರಿಗಳಿಗೆ ನೂಕಿ, ಏನೇನು ಅವಾಂತರಗಳನ್ನು ಉಂಟು ಮಾಡುತ್ತಿದ್ದವೋ... ನೆನೆದರೆ ಮೈ ನಡುಗೀತು.

ಇತ್ತೀಚಿನ ವಾರಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಹುತೇಕ ಜನಪರವೂ ಜೀವಪರವೂ ಜನತಾಂತ್ರಿಕವೂ ಆಗಿರುವ ಹಲವು ತೀರ್ಪುಗಳು ಹೊರಬಿದ್ದಿವೆ. ಖಾಸಗಿತನದ ಹಕ್ಕು ನೀಡಿದ್ದು, ಸಮಲೈಂಗಿಕತೆಯನ್ನು ಅಪರಾಧರಹಿತಗೊಳಿಸಿದ್ದು, ‘ಆಧಾರ್’ ಎಂಬ ಪ್ರಭುತ್ವದ ಹದ್ದುಗಣ್ಣಿನ ಬೇಹುಗಾರನನ್ನು ಜನಸಾಮಾನ್ಯರ ಹೆಗಲುಗಳಿಂದ ಇಳಿಸಿದ್ದು, ಭಿನ್ನಮತದ ತೀರ್ಪಿನಲ್ಲಿ ಈ ಕಾಯ್ದೆಯ ಕ್ರೌರ್ಯವನ್ನು ಸಾರಿ ಹೇಳಿ, ಸಂವಿಧಾನಬಾಹಿರ ಎಂದು ಘೋಷಿಸಿದ್ದು, ಒಂದೆಡೆ ಆದಿಶಕ್ತಿಯೆಂದು ಪೂಜಿಸಲಾಗುವ ಹೆಣ್ಣಮಗಳ ಪಾಲಿಗೆ ಬಿಗಿಯಾಗಿ ಮುಚ್ಚ
ಲಾಗಿದ್ದ ದೇವಾಲಯದ ಬಾಗಿಲುಗಳ ತೆರೆದದ್ದು, ಹೆಣ್ಣಿನ ದೇಹ, ಮನಸುಗಳು ಗಂಡಿನ ಒಡೆತನದ ಆಸ್ತಿಯಲ್ಲ ಎಂದು ಘೋಷಿಸಿದ್ದು, ಮತ್ತೊಂದು ಭಿನ್ನಮತದ ತೀರ್ಪಿನಲ್ಲಿ ಭಿನ್ನದನಿಯು ಜನತಂತ್ರದ ಜೀವಾಳ ಎಂದದ್ದು ಐತಿಹಾಸಿಕ ವಿದ್ಯಮಾನ. ಕೆಲಮಟ್ಟಿಗೆ ಕ್ರಾಂತಿಕಾರಿಯೂ ಹೌದು.

ಈ ಎಲ್ಲ ಬಹುಮತದ ತೀರ್ಪುಗಳು ಮತ್ತು ವಿಶೇಷವಾಗಿ ಭಿನ್ನಮತದ ತೀರ್ಪುಗಳು ಸಾಮಾಜಿಕ ಬದುಕಿನಲ್ಲಿ ಸಹಜ- ಸ್ವಾಭಾವಿಕ ಎನ್ನುವಷ್ಟು ಬೆರೆತು ನಿತ್ಯ ನಡೆನುಡಿಗಳಲ್ಲಿ ತಣ್ಣಗೆ ಹರಿಯುವ ಬಗೆಬಗೆಯ ಹಿಂಸೆಗಳನ್ನೇ ಈಡಾಡಿವೆ. ಹಿಂಸೆ, ಕ್ರೌರ್ಯಗಳು ದೈಹಿಕವೇ ಆಗಿರಬೇಕಿಲ್ಲ. ಹಸಿವು, ವಂಚನೆ, ಅವಮಾನ, ಗುಲಾಮಗಿರಿ, ಮೇಲು–ಕೀಳು, ಕಪ್ಪು– ಬಿಳುಪು, ಬಡವ– ಬಲ್ಲಿದ, ಹೆಣ್ಣು– ಗಂಡಿನ ಪರಸ್ಪರ ದೈನಂದಿನ ಸಂಬಂಧಗಳಲ್ಲಿ ಅಡಗಿರುವ ಹಿಂಸೆಯಿದು.

ಹಿಂಸೆ ಮತ್ತು ದಮನಗಳು ಅಸಮಾನ ಸಮಾಜದ ಸಂರಚನೆಯ ಪದರಗಳಲ್ಲಿ ಹಾಸುಹೊಕ್ಕಾಗಿ ಹೆಪ್ಪುಗಟ್ಟಿವೆ. ಅನುದಿನವೂ ನಿಮಿಷ ನಿಮಿಷವೂ ಪ್ರಕಟಗೊಳ್ಳುವ ಈ ಹಿಂಸೆ ಮತ್ತು ದಮನವು ಉಂಡು, ಉಟ್ಟು ಮೆರೆಯುವ ಭದ್ರ ಪಟ್ಟಭದ್ರ ವರ್ಗದ ಕಣ್ಣಿಗೆ ಕಾಣುವುದಿಲ್ಲ. ಭೇದಭಾವಗಳು, ಸಾಮಾಜಿಕ- ಆರ್ಥಿಕ ಅಸಮಾನತೆಗಳು ಹೆಣ್ಣುಮಕ್ಕಳು, ದಲಿತರು, ಆದಿವಾಸಿಗಳ ಬದುಕುಗಳನ್ನು ನಿತ್ಯ ಕೆಂಡದ ಹೊಂಡಗಳನ್ನಾಗಿ ಕುದಿಸುವ ಹಿಂಸೆಗಳು. ತಲೆತಲಾಂತರಗಳ ಈ ಹಿಂಸೆಯ ಸಹಿಸದೆ ತಿರುಗಿ ಬಿದ್ದರೆ ಅದು ಪ್ರತಿಹಿಂಸೆ. ಪ್ರತಿಹಿಂಸೆಯನ್ನು ಮಾತ್ರವೇ ಹಿಂಸೆ ಎಂದು ಪರಿಗಣಿಸುವುದು ಅನ್ಯಾಯ. ಹಿಂಸೆ ಅಡಗಿದರೆ ಪ್ರತಿಹಿಂಸೆ ತಾನೇ ತಾನಾಗಿ ಅಡಗುವುದು. ಆದರೆ ಹಿಂಸೆಯ ಕುರಿತು ಶಾಮೀಲಿನ ಮೌನ ಧರಿಸುವ ಪ್ರಭುತ್ವ ಪ್ರತಿಹಿಂಸೆಯನ್ನು ದೇಶದ್ರೋಹ ಎಂದು ಬಣ್ಣಿಸುತ್ತದೆ! ಸೇನೆ ಮತ್ತು ಪೊಲೀಸ್ ಬಾಹುಬಲದ ಹಿಂಸೆಯನ್ನು ಪ್ರತಿಭಟನೆ- ಪ್ರತಿಹಿಂಸೆಯ ವಿರುದ್ಧ ಹರಿಯಬಿಡುತ್ತದೆ.

ಕಾಳ್ಗಿಚ್ಚನ್ನು ಅಡಗಿಸಲು ಪ್ರತಿಕಿಚ್ಚನ್ನು ಕಾಡಿನಲ್ಲಿ ಬಳಸುವುದುಂಟು. ಆದರೆ ಸಮಾಜ ಎಂಬುದು ಅರಣ್ಯ ಅಲ್ಲವಲ್ಲ! ಅರಣ್ಯ ನ್ಯಾಯವೇ ನಡೆಯಬೇಕಿದ್ದರೆ ಜನತಂತ್ರ, ಕಾನೂನು ಕಟ್ಟಳೆ, ಸಮಾನತೆ, ನಾಗರಿಕತೆ ಎಂಬ ಆಷಾಢಭೂತಿ ಮುಖವಾಡಗಳನ್ನು ಕಳಚಿಡಬೇಕು. ‘ಶ್ರೇಷ್ಠ’ ಮನುಷ್ಯನೆಂಬುವನು ‘ಕನಿಷ್ಠ’ ಮನುಷ್ಯನನ್ನು, ಗಂಡೆಂಬುವನು ಹೆಣ್ಣನ್ನು ಹರಿದು ತಿನ್ನುವ ಕ್ರೌರ್ಯದ ನಿಜವನ್ನೇಧರಿಸಿಬಿಡಬೇಕು.

ಪ್ರತಿಭಟನೆ- ಪ್ರತಿಹಿಂಸೆಯನ್ನು ಮಾತ್ರವೇ ಹಿಂಸೆ ಎಂಬ ನಿರ್ಮಿತಿಯನ್ನು ಆಗು ಮಾಡಿರುವವರು ಪಟ್ಟಭದ್ರರು ಮತ್ತು ಪ್ರಭುತ್ವ. ಈ ನಿರ್ಮಿತಿ ಬಿರುಕು ಬಿಡದಂತೆ ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಪಟ್ಟಭದ್ರರು- ಪ್ರಭುತ್ವದ ತುತ್ತೂರಿ ಮಾಧ್ಯಮಗಳು ಅತ್ಯಂತ ಶ್ರದ್ಧೆಯಿಂದ ಮಾಡುತ್ತ ಬಂದಿವೆ. ಪ್ರತಿಭಟನೆ-ಪ್ರತಿಹಿಂಸೆಯ ಕುರಿತು ಚರ್ಚೆ ನಡೆಯಬೇಕು ಹೌದು, ಆದರೆ ಅದಕ್ಕೆ ಕಾರಣೀಭೂತವಾದ ಅಸಮಾನ ಸಮಾಜದಲ್ಲಿ ಅವಿತ ಅಂತರ್ಗತ ಹಿಂಸೆ ಮತ್ತು ಪ್ರಭುತ್ವದ ಹಿಂಸೆಯೂ ಚರ್ಚೆಗೆ ಒಳಗಾಗಬೇಕು.

ಧನಂಜಯ ಚಂದ್ರಚೂಡ್ ಅವರಂತಹ ನ್ಯಾಯಮೂರ್ತಿಗಳು ನೀಡುವ ಭಿನ್ನಮತದ ತೀರ್ಪುಗಳು ಇಂತಹ ಓರೆಕೋರೆಗಳು ಮತ್ತು ಸಾಮಾಜಿಕ– ಧಾರ್ಮಿಕ ಕಟ್ಟುಪಾಡುಗಳ ಮರೆಯಲ್ಲಿ ಅವಿತ ಹಿಂಸೆಯನ್ನು ನೋಡುವಂತೆ ಜಾಣಕುರುಡು ಸಮಾಜವನ್ನು ಒತ್ತಾಯಿಸುತ್ತವೆ. ಭಿನ್ನಮತವು ನಮ್ಮ ಜೀವದುಂಬಿ ಮಿಡಿಯುವ ಜನತಂತ್ರದ ಸಂಕೇತ. ಜನತಂತ್ರವೆಂಬ ಕುಕ್ಕರಿನ ಸುರಕ್ಷಾ ಬಿರಟೆ. ನಿತ್ಯ ಬದುಕಿನ ಗುರುತಿನ ಚೀಟಿಗಳಿಗೆ ದಾರಿ ಮಾಡಿಕೊಡುವ ಸರಳ ಸಾಧನ ‘ಆಧಾರ್’ ವ್ಯಕ್ತಿಯ ಸಾಂವಿಧಾನಿಕ ಅಸ್ಮಿತೆಯನ್ನು ಅಳಿಸಿಹಾಕಬಾರದು. ಇತರರ ಭಿನ್ನ ಅಸ್ತಿತ್ವಗಳನ್ನು ಗುರುತಿಸುವ ನಮ್ಮ ಸಾಮರ್ಥ್ಯವು ನಮ್ಮದೇ ವಿಕಾಸದ ಸಂಕೇತ. ಸಹಾನುಭೂತಿ ಮತ್ತು ಮಾನವೀಯ ಸಮಾಜದ ಚಿಹ್ನೆಗಳಿಗೆ ನಾವು ಕುರುಡಾಗುವುದು ಆತ್ಮವಿನಾಶದ ಹಾದಿ. ಕಾನೂನು ಮತ್ತು ಸಮಾಜ ಅಂತರ್ಗತವಾಗಿ ಒಂದನ್ನೊಂದು ಹೆಣೆದುಕೊಂಡಿವೆ. ದಮನಕಾರಿ ಸಾಮಾಜಿಕ ಮೌಲ್ಯಗಳು ಹಲವಾರು ಸಲ ಕಾನೂನು ನಿರ್ಮಿತಿಗಳಲ್ಲಿ ಪ್ರಕಟಗೊಳ್ಳುತ್ತವೆ. ಮೂಲಭೂತವಾಗಿ ದಮನದ ಸಾಧನವಾದ ಕಾನೂನನ್ನು ವಿಮೋಚನೆಯ ಸಾಧನವಾಗಿ ರೂಪಾಂತರಿಸುವಲ್ಲಿ ನಮ್ಮ ಸಂವಿಧಾನದ್ದು ಹಿರಿಯ ಪಾತ್ರ. ಬರಿದೇ ತಾಂತ್ರಿಕ ಅಂಶಗಳು ನ್ಯಾಯದ ಆಶಯವನ್ನು ನುಂಗಬಾರದು ಎಂಬ ಅವರ ಮಾತುಗಳು ಬಹುಕಾಲ ಬಾಳುವಂತಹವು.

ಕಾನೂನು ಪಾಲನೆಯನ್ನು ಎತ್ತಿ ಹಿಡಿಯುವುದು ಮಾತ್ರವಲ್ಲ, ನ್ಯಾಯಯುತ ಮತ್ತು ಕಾರುಣ್ಯ ತುಂಬಿದ ತೀರ್ಮಾನ ನೀಡುವುದೇ ನ್ಯಾಯಾಧೀಶನೊಬ್ಬನ ಕರ್ತವ್ಯ. ತಮ್ಮ ತೀರ್ಪುಗಳ ಮೂಲಕ ಕಾನೂನಿನ ಮಾನವೀಯ ಮುಖವನ್ನು ಅನಾವರಣಗೊಳಿಸುವ ಅಪರೂಪದ ನ್ಯಾಯಮೂರ್ತಿ ಚಂದ್ರಚೂಡ್.

ಬಯೊಮೆಟ್ರಿಕ್ ದೃಢೀಕರಣ ವೈಫಲ್ಯದ ಕಾರಣ ಕಟ್ಟಕಡೆಯ ದಟ್ಟದಾರಿದ್ರ್ಯರು ಸರ್ಕಾರದ ಆಹಾರ ಸುರಕ್ಷತೆ ಮತ್ತು ಉದ್ಯೋಗ ಖಾತರಿ ಯೋಜನೆಗಳಿಂದ ಹೊರಗೆ ಉಳಿಯುತ್ತಿದ್ದಾರೆ. ಇಂತಹವರ ಪ್ರಮಾಣ ಶೇ 0.23 ಎಂದು ಆಧಾರ್ ಬಹುಮತದ ತೀರ್ಪು ಹೇಳುತ್ತದೆ. ಆದರೆ ಈ ಪ್ರಮಾಣ ಶೇ 23 ಎಂದು ಈ ಕ್ಷೇತ್ರದ ಬೇರುಮಟ್ಟದಲ್ಲಿ ದುಡಿಯುತ್ತಿರುವ ಹೋರಾಟಗಾರರು ಹೇಳುತ್ತಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಗುರುತಿಸಲಾಗಿರುವ ಫಲಾನುಭವಿಗಳ ಪೈಕಿ 20 ಲಕ್ಷ ಕುಟುಂಬಗಳು ಅರ್ಥಾತ್ ಒಂದು ಕೋಟಿ ಮಂದಿ ತಮ್ಮ ಪಾಲಿನ ದವಸ ಧಾನ್ಯಗಳನ್ನು ಪಡೆಯಲಾಗುತ್ತಿಲ್ಲ. ಇಂತಹ ಅವಘಡಗಳು ತುಂಬಿರುವ ಆಧಾರ್ ಜನಪರವಲ್ಲ ಎಂದೇ ಚಂದ್ರಚೂಡ್ ಬಣ್ಣಿಸಿದ್ದಾರೆ.

ನ್ಯಾಯಮೂರ್ತಿಗಳ ನಡುವಿನ ಅಭಿಪ್ರಾಯಭೇದವು ಅಂತಿಮವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಆರೋಗ್ಯಕರ ಜನತಾಂತ್ರಿಕ ಪ್ರವೃತ್ತಿ ಎಂದು ಬಣ್ಣಿಸಲಾಗುತ್ತದೆ. ಭಿನ್ನಮತದ ತೀರ್ಪು ಜಾರಿಯಾಗುವ ತೀರ್ಪಲ್ಲ ನಿಜ. ಹಾಗೆಂದು ಕೇವಲ ಶೈಕ್ಷಣಿಕ ಆಸಕ್ತಿಗೂ ಸೀಮಿತ ಅಲ್ಲ. ಭವಿಷ್ಯದ ಹಲವು ಕಾಯ್ದೆ ಕಾನೂನು ಬದಲಾವಣೆಗಳಿಗೆ ಭಿನ್ನಮತದ ತೀರ್ಪುಗಳು ಅಡಿಪಾಯ ಹಾಕುತ್ತವೆ.

ನ್ಯಾಯಮೂರ್ತಿಗಳಾದ ಹಿದಾಯತ್‌ ಉಲ್ಲಾ ಮತ್ತು ಜೆ.ಎಸ್.ಮುಧೋಳ್ಕರ್ ಅವರು ಸಜ್ಜನ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ ಮೊಕದ್ದಮೆಯಲ್ಲಿ ಪ್ರಕಟಿಸಿದ ಭಿನ್ನಮತದ ತೀರ್ಪು, ಗೋಲಕನಾಥ್ ವರ್ಸಸ್ ಸ್ಟೇಟ್ ಆಫ್‌ ಪಂಜಾಬ್ ಎಂಬ ಮತ್ತೊಂದು ಮೊಕದ್ದಮೆಯಲ್ಲಿಹನ್ನೊಂದು ಮಂದಿ ನ್ಯಾಯಮೂರ್ತಿಗಳ ಪೀಠವು ಮಹತ್ವದ ತೀರ್ಪು ನೀಡಲು ದಾರಿ ಮಾಡಿತು. ಸಂವಿಧಾನದಲ್ಲಿ ಕಾಣಿಸಲಾಗಿರುವ ಮೂಲಭೂತ ಹಕ್ಕುಗಳಿಗೆ ಸಂಸತ್ತು ತಿದ್ದುಪಡಿ ತರುವಂತಿಲ್ಲ ಎಂದು ಸಾರಿತು. ಆನಂತರವೂ ತಿದ್ದುಪಡಿ ತಂದ ಸಂಸತ್ತಿನ ನಡೆಯನ್ನು 13 ನ್ಯಾಯಮೂರ್ತಿಗಳ ಮತ್ತೊಂದು ನ್ಯಾಯಪೀಠ ಪರಿಶೀಲಿಸಿತು. ತಿದ್ದುಪಡಿ ಮಾಡಬಹುದು, ಆದರೆ ಸಂವಿಧಾನದ ಮೂಲ ಸಂರಚನೆಯನ್ನು ಬದಲಾಯಿಸುವ ಇಲ್ಲವೇ ಹಾಳುಗೆಡಹುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಸಾರಿತು. ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ ಎಂಬ ಈ ಮೊಕದ್ದಮೆ ಭಾರತೀಯ ನ್ಯಾಯಾಂಗ ಚರಿತ್ರೆಯ ಮೈಲುಗಲ್ಲಾಯಿತು.

ತುರ್ತುಪರಿಸ್ಥಿತಿಯಡಿ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸುವ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ತೀರ್ಮಾನವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ನ್ಯಾಯಪೀಠ ಎತ್ತಿ ಹಿಡಿದಿತ್ತು. ಎ.ಡಿ.ಎಂ.ಜಬ್ಬಲ್ಪುರ್ ವರ್ಸಸ್ ಶಿವಕಾಂತ ಶುಕ್ಲಾ ಎಂಬುದಾಗಿ 1976ರ ಈ ಮೊಕದ್ದಮೆ ಹೆಸರುವಾಸಿಯಾಯಿತು.ಬಹುಮತದ ತೀರ್ಪನ್ನು, ಅದೇ ನ್ಯಾಯಪೀಠದ ಸದಸ್ಯರಾಗಿದ್ದ ಎಚ್‌.ಆರ್‌. ಖನ್ನಾ ಒಪ್ಪಲಿಲ್ಲ. ಭಿನ್ನಮತದ ತೀರ್ಪು ಬರೆದರು. ನ್ಯಾಯಮೂರ್ತಿ ಖನ್ನಾ ಅವರ ಈ ತೀರ್ಪಿನ ಜೊತೆಗೆ ನ್ಯಾಯಮೂರ್ತಿ ಸೈಯದ್ ಫಜಲ್ ಅಲಿ ಹಾಗೂ ನ್ಯಾಯಮೂರ್ತಿ ಸುಬ್ಬರಾವ್ ನೀಡಿರುವ ಭಿನ್ನಮತದ ತೀರ್ಪುಗಳನ್ನು ಭಾರತೀಯ ನ್ಯಾಯಾಂಗ ಇತಿಹಾಸದ ಪ್ರಬಲ ಭಿನ್ನಮತದ ತೀರ್ಪುಗಳು ಎಂದು ಬಣ್ಣಿಸಲಾಗುತ್ತದೆ.

ಎಲ್ಲ ಮೂಲಭೂತ ಹಕ್ಕುಗಳು ಪರಸ್ಪರ ಪೂರಕವೇ ವಿನಾ ಅವುಗಳು ಪ್ರತ್ಯೇಕವಾಗಿ ನಿಲ್ಲುವುದಿಲ್ಲ. ಒಂದರೊಡನೆ ಮತ್ತೊಂದು ಮಿಳಿತವಾಗಿವೆ ಎಂಬುದಾಗಿ ನ್ಯಾಯಮೂರ್ತಿ ಫಜಲ್ ಅಲಿ 1950ರಲ್ಲಿ ಎ.ಕೆ.ಗೋಪಾಲನ್ ವರ್ಸಸ್ ಸ್ಟೇಟ್ ಆಫ್ ಮದ್ರಾಸ್ ಮೊಕದ್ದಮೆಯಲ್ಲಿ ನೀಡಿದ್ದ ಭಿನ್ನಮತದ ತೀರ್ಪು ಆಗ ಅಲ್ಪಮತದ ತೀರ್ಪಾಗಿತ್ತು. ಆದರೆ ಈಗ ಅದೇ ವ್ಯಾಖ್ಯೆ ನೆಲೆಗೊಂಡಿದೆ.

ಖಾಸಗಿತನದ ಹಕ್ಕನ್ನು ನಮ್ಮ ಸಂವಿಧಾನ ಮೂಲಭೂತ ಹಕ್ಕು ಎಂದು ಗುರುತಿಸಿಲ್ಲ ನಿಜ. ಆದರೆ ವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವದು ಎಂಬುದಾಗಿ ನ್ಯಾಯಮೂರ್ತಿ ಸುಬ್ಬರಾವ್ ಅವರು 1963ರ ಖಡಕ್ ಸಿಂಗ್ ವರ್ಸಸ್ ಸ್ಟೇಟ್ ಅಫ್ ಉತ್ತರಪ್ರದೇಶ ಮೊಕದ್ದಮೆಯ ತೀರ್ಪಿನಲ್ಲಿ ಭಿನ್ನಮತದ ತೀರ್ಪು ನೀಡಿದ್ದರು. ಸುಪ್ರೀಂ ಕೋರ್ಟ್‌ 2017ರಲ್ಲಿ ಖಡಕ್ ಸಿಂಗ್ ಮೊಕದ್ದಮೆಯ 1963ರ ಬಹುಮತದ ತೀರ್ಪನ್ನು ತಲೆಕೆಳಗು ಮಾಡಿತು. ಸುಬ್ಬರಾವ್ ನೀಡಿದ್ದ ಭಿನ್ನಮತದ ತೀರ್ಪಿನ ತೀರ್ಮಾನಕ್ಕೇ ಬಂದಿತು. ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ವ್ಯಾಖ್ಯಾನಮಾಡಿತು. ಅಂದಿನ ಭಿನ್ನಮತದ-ಅಲ್ಪಮತದ ತೀರ್ಪು ಇಂದು ಸಂವಿಧಾನಪೀಠದ ಬಹುಮತದ ತೀರ್ಪಾಗಿ ಪರಿಣಮಿಸಿತು.

ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ವಾತಾವರಣ ನಿಂತ ನೀರಲ್ಲ, ಬದಲಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಿನ್ನಮತದ ತೀರ್ಪುಗಳು ಪ್ರಸ್ತುತ ಎನಿಸುತ್ತವೆ.

ಭಿನ್ನಮತದ ಶಕ್ತಿಯ ಈ ಪರಂಪರೆಯೇ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಹಲವು ಮುಖ್ಯ ಮೊಕದ್ದಮೆಗಳನ್ನು ಆರಿಸಿದ ನ್ಯಾಯಪೀಠಗಳಿಗೆ ಒಪ್ಪಿಸುತ್ತಿದ್ದರು ಎನ್ನಲಾದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನಡೆಯನ್ನು ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ ಅಪೂರ್ವ ದಿಟ್ಟ ವಿದ್ಯಮಾನಕ್ಕೆ ದಾರಿ ಮಾಡಿತು.

ಇಂದಿನ ಭಿನ್ನಮತದ ತೀರ್ಪು ನಾಳೆಯ ಬಹುಮತದ ತೀರ್ಪೂ ಆಗಬಲ್ಲದು ಎಂಬ ಮಾತಿನಲ್ಲಿ ತಥ್ಯ ಅಡಗಿದೆ.

ಆದರೆ ದಟ್ಟ ಅಸಮಾನತೆಯ ಗತವೈಭವದಲ್ಲಿ ಮತ್ತು ಇತಿಹಾಸದ ಉದ್ದಗಲಕ್ಕೆ ನಡೆದುಕೊಂಡು ಬಂದಿರುವ ಯಥಾಸ್ಥಿತಿವಾದದ ಮೆತ್ತೆಯಲ್ಲಿ ಮೈಮರೆತವರು ಚಾರಿತ್ರ್ಯವಧೆಯ ಮೊದಲ ಅಸ್ತ್ರ ನ್ಯಾಯಮೂರ್ತಿ ಚಂದ್ರಚೂಡರ ವಿರುದ್ಧ ಪ್ರಯೋಗಿಸಿದ್ದಾರೆ. ಅವರು ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿ, ಮುಂಬರುವ ವರ್ಷಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸುವವರು ಎಂದು ತಿಳಿದೂ ತಿಳಿದೂ ಚಾರಿತ್ರ್ಯವಧೆಗೆ ಇಳಿಯುವ ಭಂಡ ಧೈರ್ಯದ ಮೂಲವೇನು ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ಸಮಾಜ ಕೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT