ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ನಿದ್ದೆ ಕದ್ದ ‘ಬುವಾ-–ಭತೀಜ’

ತಮ್ಮ ಮತಗಳನ್ನು ಪರಸ್ಪರರಿಗೆ ವರ್ಗಾಯಿಸುವ ಸಾಮರ್ಥ್ಯವೇ ನಿಜ ಪರೀಕ್ಷೆ
Last Updated 13 ಜನವರಿ 2019, 20:15 IST
ಅಕ್ಷರ ಗಾತ್ರ

ಒಂದು ಕಾಲದ ಕಡು ರಾಜಕೀಯ ವೈರಿಗಳಾಗಿದ್ದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ಮತ್ತು ಸಮಾಜವಾದಿ ಪಕ್ಷ(ಎಸ್‌ಪಿ)ಮತ್ತೆ ಅಧಿಕೃತವಾಗಿ ಕೈಕುಲುಕಿವೆ.ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ.ಒಟ್ಟು80 ಕ್ಷೇತ್ರಗಳಲ್ಲಿ ತಲಾ38ಸೀಟು ಹಂಚಿಕೊಂಡಿವೆ.ಈ ಗುರುತರ ರಾಜಕೀಯ ಬೆಳವಣಿಗೆ ಬಿಜೆಪಿಯ ನಿದ್ದೆ ಕದ್ದಿದೆ.ಕಾಂಗ್ರೆಸ್ ಮತ್ತು ಅಜಿತ್ ಸಿಂಗ್ ಅವರ ಭಾರತೀಯ ಲೋಕದಳಕ್ಕೆ ಈ ಮೈತ್ರಿಯಲ್ಲಿ ಅಧಿಕೃತ ಸ್ಥಾನಮಾನ ದೊರೆತಿಲ್ಲ.ಆದರೆ, ಸ್ನೇಹ ಸೌಜನ್ಯದ ದ್ಯೋತಕವಾಗಿ ಅಮ್ಮ-ಮಗ ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಮತ್ತು ತಂದೆ-ಮಗ ಅಜಿತ್ ಸಿಂಗ್-ಜಯಂತ್ ಚೌಧರಿ ಸ್ಪರ್ಧಿಸುವ ನಾಲ್ಕು ಕ್ಷೇತ್ರಗಳಲ್ಲಿ ಎಸ್‌ಪಿ- ಬಿಎಸ್‌ಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ.

ಒಂದು ವೇಳೆ ಮಾಯಾವತಿ ಪ್ರಧಾನಿ ಹುದ್ದೆಗೆ ದಾವೇದಾರರಾದರೆ ಅವರನ್ನು ಬೆಂಬಲಿಸುವ ನಿಚ್ಚಳ ಇಂಗಿತವನ್ನು ಅಖಿಲೇಶ್ ಯಾದವ್ ನೀಡಿದ್ದಾರೆ. ಮೈತ್ರಿಯನ್ನು ಇನ್ನಷ್ಟು ಭದ್ರವಾಗಿ ಬೆಸೆಯುವ ಅಂಶವಿದು.

ಉತ್ತರಪ್ರದೇಶದಲ್ಲಿ ದೊರೆತ71+2ಸೀಟುಗಳ ಭರ್ಜರಿ ಮುನ್ನಡೆ2014ರ ಮೋದಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.ಸಮಾಜವಾದಿ ಪಾರ್ಟಿ ಕೇವಲ ಐದು ಸೀಟುಗಳಿಗೆ ಸಮಾಧಾನ ಪಡಬೇಕಾಗಿ ಬಂದಿತ್ತು.ಮಾಯಾವತಿ ಅವರಿಗೆ ಒಂದು ಸೀಟೂ ಗಿಟ್ಟಲಿಲ್ಲ.ಆದರೆ, 31ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು34ಕ್ಷೇತ್ರಗಳಲ್ಲಿ ಬಿಎಸ್‌ಪಿ ಎರಡನೆಯ ಸ್ಥಾನದಲ್ಲಿದ್ದವು. ಕಣ್ಣು ಕುಕ್ಕುವ ಬಿಜೆಪಿ ಲೋಕಸಭಾ ಗೆಲುವಿನ ಹೊಳಪು ಮೂರು ವರ್ಷಗಳ ನಂತರವೂ ಮಾಸಲಿಲ್ಲ. 2017ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಖುದ್ದು 312ಸೀಟು ಗೆದ್ದಿತು.ಆದರೆ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದ 2018ರ ಉಪಚುನಾವಣೆಗಳು ಬೇರೆಯದೇ ಕತೆ ಹೇಳತೊಡಗಿದವು.ಬಿಜೆಪಿ ಭದ್ರಕೋಟೆಗಳೆನಿಸಿದ್ದ ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳು ಧ್ವಸ್ತಗೊಂಡವು.ಪ್ರತಿಪಕ್ಷಗಳು ಒಟ್ಟಾದ ಕಾರಣ ಖೈರಾನಾ ಲೋಕಸಭಾ ಕ್ಷೇತ್ರ ಕೂಡ ಬಿಜೆಪಿ ಕೈ ಬಿಟ್ಟಿತು.

ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ ಕೈ ಕಲೆಸಿರುವುದು ಇದೇ ಮೊದಲೇನೂ ಅಲ್ಲ. ರಾಮಮಂದಿರ ರಾಜಕಾರಣ ಪರಾಕಾಷ್ಠೆ ಮುಟ್ಟಿ ಬಾಬ್ರಿ ಮಸೀದಿ ನೆಲಸಮದ ನಂತರ ಬಿಜೆಪಿ ಬಲಿಷ್ಠವಾಗಿದ್ದ ದಿನಗಳಲ್ಲಿ ಕೂಡ ಈ ಮೈತ್ರಿ ಫಲ ನೀಡಿತ್ತು.ಮುಲಾಯಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು18ತಿಂಗಳ ನಂತರ ಬಿಎಸ್‌ಪಿ ವಾಪಸು ಪಡೆಯಿತು.ಆಕ್ರೋಶಗೊಂಡ ಮುಲಾಯಂ ಬೆಂಬಲಿಗರು ಮಾಯಾವತಿ ಮತ್ತು ಅವರ ಬೆಂಬಲಿಗರ ಮಾನ-ಪ್ರಾಣಗಳಿಗೆ ಭೀತಿ ಒಡ್ಡಿದ ಕುಖ್ಯಾತ'ಲಖನೌ ಗೆಸ್ಟ್ ಹೌಸ್ ಕಾಂಡ'ಜರುಗಿದ್ದು ಇದೇ ಹಂತದಲ್ಲಿ.ಬಿಜೆಪಿ ಬೆಂಬಲದೊಂದಿಗೆ ಮಾಯಾವತಿ ಮುಖ್ಯಮಂತ್ರಿಯಾದರು. ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಹೆಪ್ಪುಗಟ್ಟಿದ ಅಂದಿನ ಕಡು ಹಗೆ ಬಹುಕಾಲ ಕರಗಲಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ಪೆಟ್ಟು ತಿಂದಿದ್ದ ಎಸ್‌ಪಿ- ಬಿಎಸ್‌ಪಿ, 2017ರ ವಿಧಾನಸಭಾ ಚುನಾವಣೆಯಲ್ಲೂ ಚೇತರಿಸಿಕೊಳ್ಳಲಿಲ್ಲ.ಬಲಿಷ್ಠ ಬಿಜೆಪಿಯನ್ನು ಮಣಿಸಬೇಕಿದ್ದರೆ ಪರಸ್ಪರ ಕೈ ಜೋಡಿಸುವುದು ಅನಿವಾರ್ಯ ಎಂಬ ವಾಸ್ತವದ ಅರಿವು ತಡವಾಗಿಯಾದರೂ ಮೂಡಿತು.ಎರಡೂ ಪಕ್ಷಗಳ ನಾಯಕತ್ವವನ್ನು ಮೈತ್ರಿಗೆ ಬಾಗಿಸುವಲ್ಲಿ ಬೇರುಮಟ್ಟದ ಕಾರ್ಯಕರ್ತರು, ಪದಾಧಿಕಾರಿಗಳ ಪಾತ್ರ ದೊಡ್ಡದು ಎಂಬುದು ಬಹುಮುಖ್ಯ ಸಂಗತಿ.ಹೀಗಾಗಿಯೇ ಎಸ್‌ಪಿ ಮತಗಳು ಬಿಎಸ್‌ಪಿಗೂ, ಬಿಎಸ್‌ಪಿಯ ಮತಗಳು ಎಸ್‌ಪಿಗೂ ವರ್ಗವಾಗುವ ದಟ್ಟ ಸಾಧ್ಯತೆಗಳಿವೆ.ತನ್ನ ಮತಗಳನ್ನು ಮತ್ತೊಂದು ಮಿತ್ರಪಕ್ಷಕ್ಕೆ ವರ್ಗಾಯಿಸುವ ಕಾಂಗ್ರೆಸ್ ಪಕ್ಷದ ಸಾಮರ್ಥ್ಯದ ಕುರಿತು ಎಸ್‌ಪಿ ಮತ್ತು ಬಿಎಸ್‌ಪಿಗೆ ನಂಬಿಕೆ ಇಲ್ಲ. 1996ರಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದ ಮಾಯಾವತಿ ಮತ್ತು2017ರಲ್ಲಿ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಅವರಿಬ್ಬರದೂ ಈ ದಿಸೆಯಲ್ಲಿ ಕಹಿ ಅನುಭವ.ಇತ್ತೀಚಿನ ರಾಜಸ್ಥಾನ, ಛತ್ತೀಸಗಡ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮೊಂದಿಗೆ ಗೆಳೆತನ ಬೆಳೆಸುವ ಔದಾರ್ಯವನ್ನು ಕಾಂಗ್ರೆಸ್ ತೋರಿಸಲಿಲ್ಲ ಎಂಬುದೂ ಇವರಿಬ್ಬರ ಅಸಮಾ
ಧಾನಕ್ಕೆ ಮತ್ತೊಂದು ಕಾರಣ.ಹೀಗಾಗಿ ಮೈತ್ರಿಯಿಂದ ಹೊರಗೆ ಉಳಿದಿರುವ ಕಾಂಗ್ರೆಸ್ ಎಲ್ಲ80ಕ್ಷೇತ್ರ
ಗಳಲ್ಲೂ ಸ್ಪರ್ಧಿಸುವುದಾಗಿ ಸಾರಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ತನ್ನ ಬಲವನ್ನೇ ನೆಚ್ಚಿ ಸ್ಪರ್ಧಿಸಿದ್ದ ಕಾಂಗ್ರೆಸ್22 ಸೀಟುಗಳನ್ನು ಗೆದ್ದಿದ್ದು ಹೌದು. ‘ಮಾಯಾವತಿ-ಅಖಿಲೇಶ್ ಕುರಿತು ಕಹಿ ಭಾವನೆ ಇಲ್ಲ. ಬಿಜೆಪಿಯನ್ನು ಸೋಲಿಸುವುದಕ್ಕೇ ಮೊದಲ ಆದ್ಯತೆ. ಉತ್ತರಪ್ರದೇಶದಲ್ಲಿ ನಮ್ಮ ಸಂಘಟನೆಯನ್ನು ಬಲಪಡಿಸುತ್ತೇವೆ’ ಎಂಬುದು ರಾಹುಲ್ ಗಾಂಧಿ ನಿಲುವು.

ಎಸ್‌ಪಿ-ಬಿಎಸ್‌ಪಿ ಮತಗಳನ್ನು ಒಟ್ಟುಗೂಡಿ ಸುವ ಸರಳ ಗಣಿತವನ್ನೇ ನಂಬಿ ಲೆಕ್ಕ ಹಾಕಿದರೆ 50ಕ್ಕೂ ಹೆಚ್ಚು ಸೀಟುಗಳು ಮಾಯಾವತಿಅಖಿಲೇಶ್ ಜೋಡಿಯ ಪಾಲಾಗಲಿವೆ. ಬಿಜೆಪಿ ಸೀಟುಗಳು 71ರಿಂದ 25-30ರ ಆಸುಪಾಸಿಗೆ ಕುಸಿಯಲಿವೆ. ರಾಜಕಾರಣದಲ್ಲಿ ಕೇವಲ ಗಣಿತವನ್ನು ನೆಚ್ಚಿ ಲೆಕ್ಕಾಚಾರ ಹಾಕುವುದು ಸರಿಯಲ್ಲ ಎನ್ನುತ್ತದೆ ಚುನಾವಣಾ ಶಾಸ್ತ್ರ. ಮೊನ್ನೆ ತೆಲಂಗಾಣ ವಿಧಾನಸಭೆ ಫಲಿತಾಂಶದ ಉದಾಹರಣೆಯನ್ನೇ ನೋಡೋಣ. 2014ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಗೆದ್ದು ಸರ್ಕಾರ ರಚಿಸಿತ್ತು.ಮೊನ್ನೆ ನಡೆದ ಚುನಾವಣೆಯಲ್ಲಿ ಇದೇ ಪಕ್ಷ ಭಾರಿ ಬಹುಮತದಿಂದ ಅಧಿಕಾರಕ್ಕೆ ಮರಳಿತು.ಒಂದು ಕಾಲದ ಕಡು ಹಗೆಗಳಾಗಿದ್ದ ತೆಲುಗು ದೇಶಂ ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಠಾತ್ತನೆ ಕೈಕಲೆಸಿದವು. 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ತೆಲಂಗಾಣ ರಾಷ್ಟ್ರ ಸಮಿತಿಗಿಂತ ಹೆಚ್ಚು ಮತಗಳನ್ನು ಗಳಿಸಿದ್ದವು. ಮೈತ್ರಿಗೆ ಈ ಲೆಕ್ಕಾಚಾರವೇ ಆಧಾರವಾಯಿತು.ಆದರೆ, ಈ ಗಣಿತ ಫಲಿತಾಂಶಗಳಲ್ಲಿ ಕೈ ಕೊಟ್ಟಿತ್ತು.

ಸ್ಥಿತಿಗತಿಗಳು, ರಾಜಕೀಯ ಮತ್ತು ಜಾತಿ ಉಪಜಾತಿ, ಕೋಮು ಸಮೀಕರಣ- ಸಂರಚನೆ-ಸಂಕೀರ್ಣತೆ
ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುವುದು ನಿಜ. ಹೀಗಾಗಿ ತೆಲಂಗಾಣದ ಉದಾಹರಣೆಯನ್ನು ಅನಾಮತ್ತಾಗಿ ಉತ್ತರಪ್ರದೇಶಕ್ಕೆ ಅನ್ವಯಿಸಲಾಗದು.

2014ರಲ್ಲಿ ರಾಯಬರೇಲಿ ಮತ್ತು ಅಮೇಠಿಯನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ, ಆರು ಲೋಕಸಭಾ ಕ್ಷೇತ್ರಗಳಲ್ಲಿ
(ಸಹಾರಣಪುರ,ಕಾನ್ಪುರ,ಘಾಜಿಯಾಬಾದ್,ಲಖನೌ ಕುಶೀನಗರ ಹಾಗೂ ಬಾರಾಬಂಕಿ)ಎರಡನೆಯ ಸ್ಥಾನದಲ್ಲಿತ್ತು.ಮಾಯಾವತಿ ಮತ್ತು ಅಖಿಲೇಶ್ ಅವರು ಕಾಂಗ್ರೆಸ್ ಪಕ್ಷವನ್ನು ಮೈತ್ರಿಕೂಟದಿಂದ ದೂರ ಇಟ್ಟಿರುವ ಕಾರಣ ಈ ಆರೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದರಿಂದ ಬಿಜೆಪಿಗೆ ಹೆಚ್ಚು ಅನುಕೂಲ.

ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯ ಯಶಸ್ಸು ಅಥವಾ ವೈಫಲ್ಯ ಈ ಎರಡೂ ಪಕ್ಷಗಳು ತಮ್ಮ ಸಾಂಪ್ರದಾಯಿಕ ಮತಗಳನ್ನು ಪರಸ್ಪರರಿಗೆ ಎಷ್ಟು ಯಶಸ್ವಿಯಾಗಿ ವರ್ಗಾಯಿಸಬಲ್ಲವು ಎಂಬ ಅಂಶವನ್ನು ಆಧರಿಸಿದೆ.ಉಪಚುನಾವಣೆಗಳನ್ನು ಆಡಳಿತ ಪಕ್ಷಗಳೇ ಗೆಲ್ಲುವುದು ಸಾಮಾನ್ಯ ನಿಯಮ.ಆದರೆ ಗೋರಖಪುರ,ಫೂಲ್ಪುರ ಹಾಗೂ ಖೈರಾನಾ ಪರೀಕ್ಷೆಯನ್ನು ಎಸ್‌ಪಿ- ಬಿಎಸ್‌ಪಿ ಮೈತ್ರಿ ಘನವಾಗಿ ಪಾಸು ಮಾಡಿರುವುದು ಬಿಜೆಪಿಗೆ ಒಳ್ಳೆ ಸುದ್ದಿ ಅಲ್ಲ.

ಲೋಕಸಭಾ ಚುನಾವಣೆ ಬರೀ ಎರಡೂವರೆ ತಿಂಗಳು ದೂರವಿದೆ.ಇಂದಿನ ಲೆಕ್ಕಾಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಕೂಡದು.ಹಲವು ಹತ್ತು ಸಾಧ್ಯಾಸಾಧ್ಯತೆಗಳು ಶಕ್ತಿ ರಾಜಕಾರಣದ ಸ್ವಾಭಾವಿಕ ಗುಣಲಕ್ಷಣ.ಈ ಮಾತಿಗೆ ಬಂದರೆ ಎರಡೂವರೆ ತಿಂಗಳು ಸಾಕಷ್ಟು ದೀರ್ಘ ಅವಧಿಯೇ ಸೈ.ಏನು ಬೇಕಾದರೂ ಆದೀತು,ಯಾವ ತಿರುವನ್ನೂ ಪಡೆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT