ಗುರುವಾರ , ಸೆಪ್ಟೆಂಬರ್ 24, 2020
28 °C

ನಮ್ಮದೇ ಬಾವಿಗೆ ವಿಷ ಬೆರೆಸಿ...

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

ಈಗಿನ ಸರ್ಕಾರದ ಆಡಳಿತ ಅವಧಿ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಈ ಸರ್ಕಾರ ಮಾಡಿರುವ ಕೆಲಸಗಳೇನು, ಆ ಕೆಲಸಗಳಿಂದ ಒಂದು ರಾಷ್ಟ್ರವಾಗಿ ನಮ್ಮ ಮೇಲೆ ಆಗಿರುವುದು ಏನು ಎಂಬ ಬಗ್ಗೆ ಆಲೋಚಿಸುತ್ತಿದ್ದೇನೆ. ಸರ್ಕಾರ ಹಾಗೂ ಅದರ ಆರ್ಥಿಕ ನೀತಿಗಳ ವಿಚಾರದಲ್ಲಿ ಮಾರುಕಟ್ಟೆ ಅಷ್ಟೇನೂ ವಿಶ್ವಾಸ ತೋರಿಸದ ಒಂದು ವಾರದ ನಂತರ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂಬುದು ನಿಜ.

ರೂಪಾಯಿಯ ಮೌಲ್ಯವು ಇದುವರೆಗಿನ ಅತ್ಯಂತ ಕೆಳಮಟ್ಟದಲ್ಲಿದೆ, ದುರ್ಬಲವಾಗಿಯೂ ಇದೆ. ಪೆಟ್ರೋಲ್ ಬೆಲೆಯು ಇದುವರೆಗಿನ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಇದೆ. ಅದು ಬರುವ ಮೇ ತಿಂಗಳಿಗೆ ಮೊದಲು ಇನ್ನಷ್ಟು ಹೆಚ್ಚಾಗುವುದಿಲ್ಲ ಎಂಬ ಯಾವ ಭರವಸೆಯೂ ನಮಗೆ ಇಲ್ಲ.

ಷೇರು ಮಾರುಕಟ್ಟೆಯು ಕಳೆದ ಹಲವು ತಿಂಗಳುಗಳಲ್ಲಿ ಗಳಿಸಿದ್ದನ್ನು ಮೂರೇ ದಿನಗಳಲ್ಲಿ ಕಳೆದುಕೊಂಡಿದೆ. ಈ ದೇಶದಲ್ಲಿ ಕಳೆದ 20 ವರ್ಷಗಳಿಂದ ಹೂಡಿಕೆ ಮಾಡುತ್ತಿರುವ ಗುಜರಾತಿಯಾಗಿ ನಾನು ಇತರೆಲ್ಲ ಹೂಡಿಕೆದಾರರಂತೆಯೇ ನಷ್ಟವನ್ನು ವೈಯಕ್ತಿಕವಾಗಿ ಕಾಣಬಲ್ಲೆ, ಅನುಭವಿಸಬಲ್ಲೆ.

ಈ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲಿನ 10 ವರ್ಷಗಳಿಗಿಂತ ಹೆಚ್ಚಿನ ವೇಗದ ಬೆಳವಣಿಗೆಯನ್ನು ಅರ್ಥ ವ್ಯವಸ್ಥೆಯು ಕಳೆದ ಐದು ವರ್ಷಗಳಲ್ಲಿ ಸಾಧಿಸಿಲ್ಲ. ಅರ್ಥ ವ್ಯವಸ್ಥೆ ಮಂದಗತಿಯ ಬೆಳವಣಿಗೆ ಕಂಡಿದೆ. ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ನಮ್ಮದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ನಾವು ಹೇಳುತ್ತಿದ್ದೇವೆ. ಏಕೆಂದರೆ, ನಮಗಿಂತ ಹೆಚ್ಚು ಮಂದಗತಿಯಲ್ಲಿ ಚೀನಾದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಅಂದರೆ, ನಮ್ಮ ಬೆಳವಣಿಗೆ ದರ ಕುಂಠಿತವಾಗಿದೆ ಎಂಬುದು ಪ್ರಶ್ನಾತೀತ.

ಒಳ್ಳೆಯ ವಿಚಾರ ಎಂದರೆ, ತನ್ನ ಅಧಿಕಾರದ ಬಹುಪಾಲು ಅವಧಿಯಲ್ಲಿ ಹಣದುಬ್ಬರ ದರವನ್ನು ನಿಯಂತ್ರಣದಲ್ಲಿ ಇರಿಸಲಾಗಿತ್ತು ಎಂದು ಇಂದಿನ ಸರ್ಕಾರ ಒಂದಿಷ್ಟು ಆಧಾರಗಳೊಂದಿಗೆ ಹೇಳಿಕೊಳ್ಳಬಹುದು. ಕಪ್ಪು ಹಣದ ವಿರುದ್ಧ ಕಠಿಣ ಕ್ರಮ ಜರುಗಿಸಿರುವುದಾಗಿಯೂ ಈ ಸರ್ಕಾರ ಹೇಳಿಕೊಳ್ಳಬಹುದು - ಆದರೆ, ಆ ಕ್ರಮದಿಂದ ಏನಾದರೂ ಪ್ರಯೋಜನ ಆಯಿತೇ ಎಂಬುದು ಬೇರೆಯ ವಿಚಾರ.

ಇದು ಅರ್ಥ ವ್ಯವಸ್ಥೆಯ ಹಿನ್ನೆಲೆ. ಆದರೆ, 2019ರ ಚುನಾವಣಾ ಪ್ರಚಾರಕ್ಕೆ ಸಿದ್ಧವಾಗುವ ಸಂದರ್ಭದಲ್ಲಿ ಈ ಸರ್ಕಾರ ತನ್ನ ಆರ್ಥಿಕ ಸಾಧನೆಯನ್ನು ಜನರ ಮುಂದಿಡಲು ಯತ್ನಿಸುವ ಸಾಧ್ಯತೆ ತೀರಾ ಕಡಿಮೆ.

ಬೆಳವಣಿಗೆ ಹಾಗೂ ನಿರುದ್ಯೋಗದ ವಿಚಾರವಾಗಿ ವಿರುದ್ಧಾರ್ಥಕ ಹೇಳಿಕೆಗಳು ಕೇಳಿಬರುತ್ತಿವೆ. ಉದ್ಯೋಗ ಸೃಷ್ಟಿಯನ್ನು ಅಂಕಿ-ಅಂಶ ಆಧರಿಸಿ ಸರಿಯಾಗಿ ಗುರುತಿಸುವ ವ್ಯವಸ್ಥೆ ಭಾರತದಲ್ಲಿ ಇಲ್ಲ. ಆದರೆ, ಉದ್ಯೋಗದ ಸ್ಥಿತಿ-ಗತಿ, ಅದರಲ್ಲೂ ಮುಖ್ಯವಾಗಿ ಉತ್ತಮ ಹಾಗೂ ಕಾಯಂ ಉದ್ಯೋಗಗಳ ಸ್ಥಿತಿ ಚೆನ್ನಾಗಿಲ್ಲ, ಹಿಂದಿಗಿಂತ ಖಂಡಿತವಾಗಿಯೂ ಉತ್ತಮವಾಗಿಲ್ಲ ಎಂಬುದನ್ನು ಉದ್ಯೋಗ ಸೃಷ್ಟಿಯ ಬಗ್ಗೆ ಅಂಕಿ-ಅಂಶಗಳನ್ನು ಇಟ್ಟುಕೊಂಡು ಸ್ವತಂತ್ರವಾಗಿ ಪರಿಶೀಲನೆ ನಡೆಸುವವರು ಹೇಳುತ್ತಿದ್ದಾರೆ.

ಆದರೆ, ಈ ಮಾತಿಗೆ ವ್ಯತಿರಿಕ್ತವಾದ ಪ್ರತಿಪಾದನೆಯನ್ನು ಸರ್ಕಾರವು ಪ್ರಧಾನಿಯವರ ಮೂಲಕ ಮಾಡಿದೆ. ಪ್ರಬಲ ಸಮುದಾಯಗಳಾದ ಪಟೇಲರು, ಮರಾಠರು, ಜಾಟರು ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಹೋರಾಟಗಳನ್ನು ಗಮನಿಸಿದರೆ, ಜನರನ್ನು ಕೃಷಿಯಿಂದ ಹೊಸ ಅರ್ಥ ವ್ಯವಸ್ಥೆಯ ತೆಕ್ಕೆಗೆ ತರಲು ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ವಿದೇಶಾಂಗ ನೀತಿಯ ವಿಚಾರದಲ್ಲಿ ಹೇಳುವುದಾದರೆ, ನಾವು ನಮ್ಮ ಪ್ರಭಾವ ಇದ್ದ ಪ್ರದೇಶಗಳಲ್ಲಿ ಚೀನಾದ ಕಾರಣದಿಂದಾಗಿ ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್‌, ಭೂತಾನ್‌ಗಳಲ್ಲಿ ನಾವು ಹೊಂದಿದ್ದ ಪ್ರಭಾವಿ ಸ್ಥಾನವನ್ನು ಚೀನಾ ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ಬಳಸಿ ತನ್ನದಾಗಿಸಿಕೊಂಡಿದೆ. ಐದು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ನಮ್ಮ ನೆರೆಹೊರೆಯಲ್ಲಿ, ಅಂದರೆ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ನಾವು ಇಂದು ಕಡಿಮೆ ಪ್ರಭಾವ ಹೊಂದಿದ್ದೇವೆ. ಇಲ್ಲಿ ಹೇಳಿರುವುದನ್ನು ಈ ಕ್ಷೇತ್ರದ ಯಾವ ತಜ್ಞನೂ ಅಲ್ಲಗಳೆಯಲಾರ.

ನನ್ನ ಪ್ರಕಾರ, ಇವೆಲ್ಲವೂ ಸಾಧ್ಯವಾಗಿದ್ದು ಈ ಸರ್ಕಾರಕ್ಕಿಂತ ಹೆಚ್ಚು ಪ್ರಬಲವಾದ ಶಕ್ತಿಗಳಿಂದಾಗಿ. ಚೀನಾದ ರಾಜಕೀಯ, ಮಿಲಿಟರಿ ಹಾಗೂ ಆರ್ಥಿಕ ಶಕ್ತಿಗೆ ಎದುರಾಗಿ ನಿಲ್ಲುವ ಸಾಮರ್ಥ್ಯ ಯಾವುದಾದರೂ ಸರ್ಕಾರಕ್ಕೆ ಇರುತ್ತಿತ್ತು ಎಂದು ನಾನು ಭಾವಿಸಿಲ್ಲ. ಏಕೆಂದರೆ, ಚೀನಾಕ್ಕೆ ಅಂಥದ್ದೊಂದು ಶಕ್ತಿ ಇದೆ. ನಮ್ಮಲ್ಲಿ ಅಷ್ಟು ಶಕ್ತಿ ಇಲ್ಲ. ಹಾಗೆಯೇ, ಉದ್ಯೋಗ ಸೃಷ್ಟಿ, ಪಟ್ರೋಲ್ ಬೆಲೆ ಅಥವಾ ರೂಪಾಯಿ ಮೌಲ್ಯದ ವಿಚಾರದಲ್ಲಿ ಬೇರೆ ಯಾವುದೇ ಸರ್ಕಾರ ಮಹತ್ವದ ಬದಲಾವಣೆ ತಂದಿರುತ್ತಿತ್ತು ಎಂದೂ ನಾನು ಭಾವಿಸಿಲ್ಲ. ಯಾವುದೇ ಸರ್ಕಾರ ಮಾಡಬಹುದಾದ ಕೆಲಸಕ್ಕೆ ಮಿತಿ ಇದೆ.

ಆದರೆ, ಹಿಂದಿನ ಯಾವ ಸರ್ಕಾರವೂ ಮಾಡದ ಒಂದು ನಿರ್ದಿಷ್ಟ ಕೆಲಸವನ್ನು ಈ ಸರ್ಕಾರ ಮಾಡಿದೆ. ಅಂದರೆ, 'ಋಜುತ್ವ' ಎಂಬುದು ಒಂದು ವಾದದಲ್ಲಿ ಮಾತ್ರವೇ ಇದೆ ಎಂಬುದನ್ನು ನಮ್ಮ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಗೆ ತಂದಿಟ್ಟಿರುವ ಕೆಲಸ. ಒಂದು ನಿರ್ದಿಷ್ಟ ದೃಷ್ಟಿಕೋನ ಮಾತ್ರ ರಾಷ್ಟ್ರದ ಹಿತಾಸಕ್ತಿಗಳಿಗೆ ಪೂರಕ, ಆ ದೃಷ್ಟಿಕೋನವನ್ನು ವಿರೋಧಿಸುವುದು ಅಥವಾ ಅದರ ಜೊತೆ ತಕರಾರು ಹೊಂದಿರುವುದು ದೇಶದ್ರೋಹ ಮತ್ತು ರಾಷ್ಟ್ರ ವಿರೋಧಿ ಎಂಬಂತಹ ಭಾವನೆ ಸೃಷ್ಟಿಸಿರುವುದು.

ಇದು ಹೂರಣದಲ್ಲಿ ಆಗಿರುವ ಬದಲಾವಣೆ ಅಲ್ಲ; ಧಾಟಿಯಲ್ಲಿ ಆಗಿರುವ ಬದಲಾವಣೆ. ನಾವು ಭಾರತದಲ್ಲಿ ಚರ್ಚಿಸುವ ಮತ್ತು ವಾದ ಮಾಡುವ ರೀತಿ 2014ರ ನಂತರ ನಾಟಕೀಯವಾಗಿ ಬದಲಾಗಿದೆ. ಕಪ್ಪು ಹಣ, ಭಯೋತ್ಪಾದನೆ, ನಿರಾಶ್ರಿತರು ಅಥವಾ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರಗಳಲ್ಲಿ ರಾಷ್ಟ್ರದ ಹಿತ ಅಂದರೆ ಏನು ಎಂಬುದನ್ನು ಈ ಸರ್ಕಾರವೇ ವ್ಯಾಖ್ಯಾನಿಸಿಬಿಟ್ಟಿದೆ.

ಈ ವ್ಯಾಖ್ಯಾನಕ್ಕೆ ಹೊರತಾದ ದೃಷ್ಟಿಕೋನ ನಿಮ್ಮದಾಗಿದ್ದರೆ ಅದನ್ನು ವ್ಯಕ್ತಪಡಿಸುವುದು ಇಂದು ಸುಲಭಸಾಧ್ಯವಲ್ಲ. ಮಿಲಿಟರಿ ಶಕ್ತಿ ನಿಮಗೆ ಅಷ್ಟೇನೂ ಹಿಡಿಸುವುದಿಲ್ಲ ಎಂದಾದರೆ, ಎಂದಿಗೂ ಬಳಸದ ಯಂತ್ರಗಳ ಮೇಲೆ ದೊಡ್ಡ ಮೊತ್ತದ ಹಣ ಸುರಿಯುವುದು ನಿಮಗೆ ಇಷ್ಟವಾಗದಿದ್ದರೆ (ನಾವು ಯುದ್ಧ ವಿಮಾನವನ್ನು, ಯುದ್ಧದ ಸಂದರ್ಭದಲ್ಲಿ ಕೊನೆಯ ಬಾರಿ ಬಳಕೆ ಮಾಡಿದ್ದು 40 ವರ್ಷಗಳ ಹಿಂದೆ) ನೀವು ರಾಷ್ಟ್ರೀಯವಾದಿ ಅಲ್ಲ. ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜಕ್ಕೆ ತಮ್ಮದೇ ಆದ ಸ್ಥಾನ ಇದೆಯಾದರೂ, ಆ 'ಸ್ಥಾನ' ಎಲ್ಲೆಡೆಯೂ ಇರುವುದಿಲ್ಲ ಎಂಬುದು ನಿಮ್ಮ ನಿಲುವಾಗಿದ್ದರೆ ನೀವು ನಿಮ್ಮ ರಾಷ್ಟ್ರವನ್ನು ದ್ವೇಷಿಸುತ್ತಿದ್ದೀರಿ ಎಂದರ್ಥ.

ನೆರೆಯ ದೇಶಗಳ ಜೊತೆ ಶಾಂತಿ ಬಯಸಿದರೆ ನೀವು ದೇಶದ್ರೋಹಿ. ಈ ರೀತಿಯ ಬದಲಾವಣೆಗಳೆಲ್ಲ ಆಗಿವೆ ಎಂಬುದನ್ನು ನಾನು ತೋರಿಸಿಕೊಡಬೇಕಿಲ್ಲ, ಸಾಬೀತು ಮಾಡಬೇಕಿಲ್ಲ. ಇವೆಲ್ಲ ನಮ್ಮ ಕಣ್ಣೆದುರೇ ಆಗಿರುವುದನ್ನು ಕಂಡಿರುವ ನಮಗೆ ಇವು ಗೊತ್ತಿವೆ. ನಾವು ನಮ್ಮದೇ ಬಾವಿಗೆ ವಿಷ ಹಾಕಿದ್ದೇವೆ. ಈಗ ನಮ್ಮಲ್ಲೇ ಹಲವರನ್ನು ಶತ್ರುಗಳಂತೆ ಕಾಣುತ್ತಿದ್ದೇವೆ. 2019ರಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಈ ಒಂದು ಬದಲಾವಣೆ ನಮ್ಮ ಜೊತೆ ಇರಲಿದೆ. ನಮ್ಮಲ್ಲಿ ಮೊದಲು ತುಂಬಿಕೊಂಡಿದ್ದ ವಿಷವನ್ನು, ಅಸಹ್ಯವನ್ನು ಹರಿಯಬಿಟ್ಟಿದ್ದೇವೆ. ಇವುಗಳನ್ನು ಹೊರಬಿಡುವಲ್ಲಿ ಈ ಸರ್ಕಾರ ಸಹಾಯ ಮಾಡಿದೆ - ಬಹುಶಃ ಶಾಶ್ವತವಾಗಿ ಹೊರಗೆ ಬಿಟ್ಟಿರಲು. ನನ್ನ ಪ್ರಕಾರ ಇದು ಅದರ ಬಹಳ ದೊಡ್ಡ ಸಾಧನೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು