ಬುಧವಾರ, ಸೆಪ್ಟೆಂಬರ್ 29, 2021
19 °C
ಚಾರಿತ್ರ್ಯ– ಪಾವಿತ್ರ್ಯ ಎಂಬ ಪದಗಳು ಎಳೆಯ ಹುಡುಗಿಯರ ಭಾವಕೋಶವನ್ನು ಕತ್ತರಿಸುವ ಕತ್ತಿಗಳಾಗದಿರಲಿ

ಡಾ.ಗೀತಾ ವಸಂತ ಅಂಕಣ| ಕನಸುಗಾರ್ತಿಯರು ಮತ್ತು ಭಯದ ಕಾರ್ಖಾನೆ

ಡಾ. ಗೀತಾ ವಸಂತ Updated:

ಅಕ್ಷರ ಗಾತ್ರ : | |

ಅತ್ಯಾಚಾರದಂಥ ಕ್ರೌರ್ಯವು ಸಂಭವಿಸಿದಾಗ ಸಮಾಜ ಒಮ್ಮೆ ಬೆಚ್ಚಿಬೀಳುತ್ತದೆ. ಹೆಣ್ಣಿಗೆ ತಾನು ಭಯದ ಕಾರ್ಖಾನೆಯ ಉತ್ಪನ್ನ ಎಂಬುದು ಮತ್ತೊಮ್ಮೆ ನೆನಪಾಗುತ್ತದೆ. ಸದಾ ತನ್ನ ದೇಹದ ಸುರಕ್ಷತೆಯ ಕುರಿತು ತಲ್ಲಣಿಸುತ್ತಲೇ ಇರಬೇಕೆಂಬ ವಾಸ್ತವವು ಆಕೆಯನ್ನು ಕಂಗೆಡಿಸತೊಡಗುತ್ತದೆ. ಅವಳ ಮೇಲಿನ ನಿರ್ಬಂಧಗಳು ಇನ್ನಷ್ಟು ಬಿಗಿಯಾಗಲಾರಂಭಿಸುತ್ತವೆ. ಮಾರಲ್ ಪೊಲೀಸಿಂಗ್ ಎಲ್ಲರಿಂದ ಎಗ್ಗಿಲ್ಲದೆ ನಡೆಯತೊಡಗುತ್ತದೆ. ಅವಳ ದೃಢ ಹೆಜ್ಜೆಗಳಿಗೆ ಸಣ್ಣ ಕಂಪನ. ಎಷ್ಟೋ ಹೋರಾಟಗಳಿಂದ ಪಡೆದುಕೊಂಡ ಮುಕ್ತಿ ಮತ್ತೆ ಗಗನಕುಸುಮವಾದೀತೇನೋ ಎಂಬ ಆತಂಕ, ಮುಂದಿಟ್ಟ ಹೆಜ್ಜೆಗಳನ್ನು ಮತ್ತೆ ಹಿಂದೆ ಎಳೆದು ನಿಲ್ಲಿಸಬಹುದೇ ಎಂಬ ಅವ್ಯಕ್ತ ಭಯ ಕಾಡಲಾರಂಭಿಸುತ್ತದೆ. ವಿಶೇಷವಾಗಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಂತದಲ್ಲಿರುವ ಹದಿಹರೆಯದ ಹುಡುಗಿಯರ ಮಾನಸಿಕತೆಯ ಕುರಿತು ಈ ಸಂದರ್ಭದಲ್ಲಿ ಹೆಚ್ಚು ಯೋಚಿಸುವುದು ಅಗತ್ಯ.


ಡಾ.ಗೀತಾ ವಸಂತ

ಸಮಾಜದಲ್ಲಿ ಯಾರೊಂದಿಗೆ ಹೇಗೆ ವರ್ತಿಸಬೇಕು? ಯಾವ ಗಂಡಸನ್ನು ಎಷ್ಟು ನಂಬಬೇಕು? ಹೆಣ್ಣು– ಗಂಡಿನ ಸಂಬಂಧದ ಸ್ವರೂಪವೇನು? ಹಾಗೂ ಅದರಲ್ಲಿ ತಮ್ಮ ತೊಡಗುವಿಕೆ ಹೇಗಿರಬೇಕು ಎಂದೆಲ್ಲ ಅವರು ಗೊಂದಲಕ್ಕೊಳಗಾಗುತ್ತಾರೆ. ಸರಿಯಾದ ಉತ್ತರ ಪೋಷಕರಿಂದಾಗಲೀ ಶಿಕ್ಷಕರಿಂದಾಗಲೀ ದೊರೆಯದೆ ವಿಚಿತ್ರ ಕಾಂಪ್ಲೆಕ್ಸ್‌ಗಳಲ್ಲಿ ನರಳುತ್ತಾರೆ.

ಒಂದು ಅತ್ಯಾಚಾರ ಪ್ರಕರಣ ವರದಿಯಾದ ಕೂಡಲೇ ಎಲ್ಲ ಮಾಧ್ಯಮಗಳು ಜಾಗೃತವಾಗುತ್ತವೆ. ಆ ಹುಡುಗಿ ಯಾರು, ಅವಳ ಹಿನ್ನೆಲೆ ಏನು, ಅವಳು ಆ ಸ್ಥಳಕ್ಕೆ ಆ ಸಮಯದಲ್ಲಿ ಯಾಕೆ ಹೋಗಬೇಕಿತ್ತು ಎಂಬ ಪ್ರಶ್ನೆಗಳೆಲ್ಲ ಉದ್ಭವಿಸುತ್ತವೆ. ನಂತರ ಅತ್ಯಾಚಾರಿಗಳು ಯಾರು, ಅವರ ಹಿನ್ನೆಲೆಯೇನು? ಅವರು ಸಿಕ್ಕಿಬಿದ್ದರಾ? ಅವರಿಗೆ ಏನು ಶಿಕ್ಷೆ ಕೊಡಬೇಕು ಎಂಬ ಚರ್ಚೆಗಳೂ ನಡೆಯುತ್ತವೆ. ಇನ್ನು ಸಾಮಾಜಿಕ ಜಾಲತಾಣ
ಗಳಲ್ಲಿ, ಆ ಹುಡುಗಿಯ ಜಾತಿ ಯಾವುದು? ಅವಳು ತನ್ನ ಜಾತಿಯಿಂದಾಗಿ ಹೆಚ್ಚಿನವರ ಅನುಕಂಪ ಪಡೆಯುತ್ತಿ
ದ್ದಾಳೆಯೇ? ಪ್ರತಿಭಟನೆ ದಾಖಲಿ ಸುತ್ತಿರುವವರು ಯಾವ ಸಮುದಾಯದವರು ಎಂದು ಅಂಕಿ ಅಂಶಗಳೊಡನೆ ಲೆಕ್ಕಾಚಾರಗಳು ನಡೆಯತೊಡಗುತ್ತವೆ.

ಇನ್ನು ಕೆಲವರು ಅತ್ಯಾಚಾರಕ್ಕೊಳಗಾದವಳ ಚಾರಿತ್ರ್ಯದ ಕುರಿತು ಸಂಶೋಧನೆ ನಡೆಸಿದವರಂತೆ ಮಾತಾಡತೊಡಗುತ್ತಾರೆ. ಅತ್ಯಾಚಾರಗಳಾಗಲು ಅವರ ಸ್ವಚ್ಛಂದ ನಡವಳಿಕೆಯೇ ಕಾರಣ, ಅವರು ತೊಡುತ್ತಿದ್ದ ಬಟ್ಟೆಯೇ ಕಾರಣ ಎಂದೆಲ್ಲ ಕಾರಣಗಳ ಪಟ್ಟಿ ಬೆಳೆಯು ತ್ತದೆ. ಹೆಣ್ಣುಮಕ್ಕಳು ಸಂಜೆ ವೇಳೆ ಕ್ಯಾಂಪಸ್‍ಗಳಲ್ಲಿ ಒಂಟಿಯಾಗಿ ಸುತ್ತಾಡಬಾರದೆಂದು ಶಿಕ್ಷಣ ಸಂಸ್ಥೆಗಳು ಸುತ್ತೋಲೆ ಹೊರಡಿಸುತ್ತವೆ. ಹೆಣ್ಣುಮಕ್ಕಳಿಗೆ ಪೋಷಕರು ಸಂಸ್ಕಾರ ಕಲಿಸಿ, ಅವರ ಮೇಲೆ ಕಣ್ಣಿಡಬೇಕು ಎಂದು ‘ಸಭ್ಯ’ ನಾಗರಿಕರೆನಿಸಿಕೊಂಡವರು ಹುಯಿಲಿಡುತ್ತಾರೆ. ಅಲ್ಲಿಗೆ ಅದುವರೆಗೂ ಗಳಿಸಿಕೊಂಡಿದ್ದ ಹುಡುಗಿಯರ ಧೈರ್ಯ, ಆತ್ಮವಿಶ್ವಾಸಗಳು ಅಲುಗಾಡಲಾರಂಭಿಸುತ್ತವೆ. ನಿರ್ಭಯವೇ ಸ್ವಾತಂತ್ರ್ಯ ಎಂಬ ಮಾತು ನೆಲ ಕಚ್ಚುತ್ತದೆ.

ಅವಳ ದೇಹವೇ ಅವಳ ವಿಧಿ ಎಂಬಂಥ ಹಳೆಯ ಹಳವಂಡಗಳಿಂದ ಲಿಬರೇಟ್ ಆದ ಇಂದಿನ ಯುವತಿಯರ ಜೀವನದೃಷ್ಟಿಯು ಸಹಜವಾಗಿಯೇ ಬದಲಾಗಿದೆ. ತಮ್ಮ ಸಾಮರ್ಥ್ಯಗಳ ಅರಿವು, ಸಾಧ್ಯತೆಗಳ ವಿಸ್ತಾರ ಅವರಿಗೆ ಮನವರಿಕೆಯಾಗುತ್ತಿದೆ. ಬರಿಯ ದೇಹವಾಗಿ ಉಳಿಯಲು ಅವರ ಚೈತನ್ಯವು ತಯಾರಿಲ್ಲ. ಇಂಥ ಸಂದರ್ಭದಲ್ಲಿ ಅವರ ವೈಯಕ್ತಿಕತೆಯನ್ನು ಗಾಸಿಗೊಳಿಸದೆ ಸಾಮಾಜಿಕ ನೀತಿಸಂಹಿತೆಯನ್ನು ಅವರಿಗೆ ತಿಳಿಸುವ ಅಗತ್ಯವಿದೆ.

ಹದಿಹರೆಯದ ಹುಡುಗ ಹುಡುಗಿಯರ ಭಾವಕೋಶವನ್ನು ಹೊಸಕಿಹಾಕದೇ ಸಲಹುವುದು ಹೇಗೆ? ಅವರ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವದ ಘನತೆಗಳು ಕಳೆಯದ ಹಾಗೆ ಕಾಪಿಡುವುದು ಹೇಗೆ? ಸ್ನೇಹ, ಪ್ರೇಮ, ಕಾಮಗಳ ನಡುವಿನ ಸೂಕ್ಷ್ಮ ಗೆರೆಯನ್ನು ಗುರುತಿಸಲು ಕಲಿಸುವುದು ಹೇಗೆ? ಹೆಣ್ಣು ಗಂಡಿನ ಸಂಬಂಧದ ಘನತೆಯನ್ನು ಅವರಿಗೆ ಅರ್ಥ ಮಾಡಿಸುವುದು ಹೇಗೆ? ಇದೆಲ್ಲ ಶಿಕ್ಷಣ ಸಂಸ್ಥೆಗಳ ಮುಂದಿರುವ ಸವಾಲು. ನೀತಿ ಶಿಕ್ಷಣ ಹಾಗೂ ಲೈಂಗಿಕ ಶಿಕ್ಷಣದಾಚೆ ಒಂದು ಆಪ್ತಸಲಹೆಯ ಅಗತ್ಯ ಅಲ್ಲಿರುತ್ತದೆ.

ಸ್ತ್ರೀತ್ವ ಹಾಗೂ ಪುರುಷತ್ವದ ಬಗೆಗಿನ ತೆಳುವಾದ ಕಲ್ಪನೆಗಳನ್ನು ಅಥವಾ ಅಪಕಲ್ಪನೆಗಳನ್ನು ಅವರ ಸುತ್ತಲ ಪರಿಸರದಿಂದ ಅವರೀಗಾಗಲೇ ಪಡೆದಿರುತ್ತಾರೆ. ಶಿಕ್ಷಣವು ಅದನ್ನು ಸರಿಯಾದ ವಿವೇಚನೆಯ ಮೂಲಕ ತಿದ್ದುವ ಕೆಲಸವನ್ನು ಮಾಡಬೇಕು. ಇದಕ್ಕೆ ಲಿಂಗಸೂಕ್ಷ್ಮತೆ ಹಾಗೂ ಲಿಂಗಸಂವೇದನಾಶೀಲತೆಯಿರುವ ಪ್ರಾಧ್ಯಾಪಕರು ಬೇಕು. ಅನೇಕ ಸಲ ನಮ್ಮ ಪ್ರಾಧ್ಯಾಪಕರೇ ಪೂರ್ವಗ್ರಹಪೀಡಿತರಾಗಿರುತ್ತಾರೆ. ಹುಡುಗಿಯರ ಆತ್ಮವಿಶ್ವಾಸ ತುಂಬಿದ ಮಾತುಕತೆ ಹಾಗೂ ಧೀರ ನಿಲುವು ಅವರ ಅಹಂಗೆ ಸವಾಲಾಗಿ ಕಾಣತೊಡಗುತ್ತವೆ. ಮುಕ್ತವಾಗಿ ನಗುತ್ತ ಹುಡುಗರೊಂದಿಗೆ ಮಾತನಾಡುವ, ಹೆಣ್ಣೆಂಬ ಅನಗತ್ಯ ಲಜ್ಜೆಯ ಭಾರ ಹೊರದ, ಕೀಳರಿಮೆ, ಮುಚ್ಚುಮರೆ ಗೊತ್ತೇ ಇರದ ಹೆಣ್ಣುಮಕ್ಕಳು ಅವರಿಗೆ ಸ್ವೇಚ್ಛಾಚಾರಿಗಳಂತೆ ತೋರುತ್ತಾರೆ. ಅವರ ಭಾವಭಂಗಿ
ಗಳೆಲ್ಲ ಉದ್ರೇಕಕಾರಿಯಾಗಿ ತೋರುತ್ತವೆ. ತಮ್ಮ ಅನು ಮಾನಗಳೆಲ್ಲ ಸತ್ಯವೇ ಎನ್ನುವಂತೆ ಸ್ಥಾಪಿಸಿ ಎಲ್ಲರ ಮುಂದೆ ಅಂಥ ವಿದ್ಯಾರ್ಥಿನಿಯರನ್ನು ಹಾದಿ ತಪ್ಪಿದವರೆಂದು ಬ್ರ್ಯಾಂಡ್ ಮಾಡಿಬಿಡುತ್ತಾರೆ. ಇದರಿಂದ ಸೂಕ್ಷ್ಮಮನದ ಹೆಣ್ಣುಮಕ್ಕಳ ಮನಸ್ಸು ಮುರಿದುಹೋಗುತ್ತದೆ. ಆತ್ಮವಿಶ್ವಾಸ ಕುಸಿದು ಖಿನ್ನತೆ ಆವರಿಸುತ್ತದೆ. ಆಕೆ ಸಹಜವಾಗಿ ಅರಳುತ್ತಿರುವ ತನ್ನತನವನ್ನು ಕಳಚಿಟ್ಟು, ತಾನು ಹೇಗಿದ್ದರೆ ಸರಿ, ಯಾರನ್ನು ಮೆಚ್ಚಿಸಿ ಬದುಕಬೇಕು ಎಂಬ ಭಾವನಾತ್ಮಕ ತುಯ್ತಕ್ಕೊಳಗಾಗುತ್ತಾಳೆ. ಸ್ವತಃ ಸ್ತ್ರೀಯರಾದ ಅಧ್ಯಾಪಕಿಯರು, ವಾರ್ಡನ್‍ಗಳೂ ಇದಕ್ಕೆ ಕಾರಣರಾಗುವುದಿದೆ. ದೇಹದ ಮೇಲೆ ಆಗುವುದು ಮಾತ್ರ ಅತ್ಯಾಚಾರವಲ್ಲ ಅಲ್ಲವೇ?

ನಮ್ಮ ಸಮಾಜಶಾಸ್ತ್ರೀಯ ಹಾಗೂ ಮನಃಶಾಸ್ತ್ರೀಯ ತಿಳಿವಳಿಕೆಯನ್ನು ಬರಿಯ ಸಿಲೆಬಸ್ ಆಗಿ ಕಾಣದೇ ಜೀವಂತ ವ್ಯಕ್ತಿಗಳ ನೆಲೆಗೆ ವಿಸ್ತರಿಸಿ ನೋಡುವ ಅಗತ್ಯವಿದೆ. ಲಿಂಗಸಂವೇದನಾಶೀಲತೆ, ಸಬಲೀಕರಣ, ಸಮಾನತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ತಾತ್ವಿಕ ಪರಿಕಲ್ಪನೆ
ಗಳಾಗಿರಲು ಬಿಡದೇ ಅವನ್ನು ಬದುಕಲು ಕಲಿಸದಿದ್ದರೆ ಆ ಶಿಕ್ಷಣವು ವ್ಯರ್ಥ. ‘ಶಿಕ್ಷಣವೆಂದರೆ ಚಾರಿತ್ರ್ಯ ನಿರ್ಮಾಣ’ ಎಂಬ ವಿವೇಕಾನಂದರ ಸೂಕ್ತಿಯನ್ನು ಹಲವೆಡೆ ಉಲ್ಲೇಖಿಸುವ ನಾವು, ಚಾರಿತ್ರ್ಯ ಎಂಬ ಪದದ ವಿಶಾಲ ಹಾಗೂ ಘನವಾದ ಅರ್ಥವನ್ನು ಮನನ ಮಾಡಿಕೊಳ್ಳಬೇಕಿದೆ. ಅಧ್ಯಾಪಕರಿಂದ, ಪಿಎಚ್.ಡಿ ಗೈಡುಗಳಿಂದಲೇ ಲೈಂಗಿಕ ಕಿರುಕುಳ ನಡೆಯುವುದು ಆಗಾಗ ಬಯಲಾಗುತ್ತ ಅಧಿಕಾರದ ನಾನಾ ಚಹರೆಗಳು ಭಯ ಹುಟ್ಟಿಸುತ್ತವೆ. ಮನೆಯಲ್ಲೇ ಕಿರುಕುಳಕ್ಕೊಳಗಾಗುವ ಹುಡುಗಿಯರಂತೂ ಧ್ವನಿಯನ್ನೇ ಕಳೆದುಕೊಂಡು ಸ್ತಬ್ಧರಾಗಿಬಿಡುತ್ತಾರೆ.

ಇಲ್ಲಿ ಯಾರಿಗೆ ಯಾರು ಶಿಕ್ಷಣ ಕೊಡಬೇಕು? ಈ ಚಾರಿತ್ರ್ಯ ಹಾಗೂ ಪಾವಿತ್ರ್ಯ ಎಂಬ ಪದಗಳು ತಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಎಳೆಯ ಹುಡುಗಿಯರ ಭಾವಕೋಶವನ್ನು ಕತ್ತರಿಸುವ ಕತ್ತಿಗಳಾಗದೆ ನಮ್ಮ ಅಂತರಂಗವನ್ನು ಕಾಣುವ ಕನ್ನಡಿ
ಗಳಾಗಿದ್ದರೇ ಸೂಕ್ತ.

ಸ್ವಾತಂತ್ರ್ಯವು ನಿಜವಾದ ಅರ್ಥ ಪಡೆದುಕೊಳ್ಳು ವುದು ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲೂ ನಿರ್ಭಯವಾಗಿ ಸಂಚರಿಸುವಂತಾದಾಗ ಎಂಬ ಗಾಂಧೀಜಿಯವರ ಮಾತು ಇಂದಿನ ದಿನಗಳಲ್ಲಿ ಅಣಕದಂತೆ ಭಾಸವಾಗುತ್ತಿದೆ. ಈ ಸ್ವಾತಂತ್ರ್ಯ ಎಲ್ಲೋ ಮಧ್ಯರಾತ್ರಿಯ ಮೋಜುಮಸ್ತಿಯ ನಶೆಯಲ್ಲಿ ಅಲೆವ ಕೆಲವೇ ಕೆಲವು ‘ಸೋಕಾಲ್ಡ್’ ಆಧುನಿಕ ಹೆಣ್ಣುಗಳ ಪಾಲಾಗಿದೆ. ದುಡಿಮೆಯ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬಯಸುವ ಮಹಿಳೆಯರು ಪ್ರಾಣ ಅಂಗೈಲಿ ಹಿಡಿದು ಓಡಾಡಬೇಕಿರುವುದೇ ಕಟುವಾಸ್ತವ.

ಬದುಕಿನ ಕೇಂದ್ರವನ್ನು ವಿಸ್ತರಿಸಹೊರಟ ಈ ಹೊಸಹೆಣ್ಣುಗಳು ಸೋಲೊ ಟ್ರಾವೆಲರ್‌ಗಳಾಗಿ ತಮ್ಮ ಲೋಕದರ್ಶನದ ಕನಸಿಗೆ ರೆಕ್ಕೆ ಹಚ್ಚುತ್ತಿದ್ದಾರೆ. ತಮ್ಮಿಷ್ಟದ ಕೋರ್ಸುಗಳನ್ನು ಕಲಿಯಲು, ತಮ್ಮ ಸಾಮರ್ಥ್ಯಕ್ಕೆ ತಕ್ಕ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಕಾಣದ ಊರುಗಳ ಬಾಗಿಲು ಬಡಿಯುತ್ತಿದ್ದಾರೆ. ಇವರೆಲ್ಲ ಹಾದಿ ತಪ್ಪಿದವ ರಲ್ಲ. ತಮ್ಮ ಹೆಣ್ತನಕ್ಕೆ ಘನತೆಯ ಆಯಾಮ ಸೃಷ್ಟಿಸಿ ಕೊಳ್ಳಲೆತ್ನಿಸುತ್ತಿರುವ ಸೂಕ್ಷ್ಮಮನದ ದಿಟ್ಟೆಯರು. ಸಾಮಾಜಿಕ ಅಭಿವೃದ್ಧಿ ಹಾಗೂ ಪರಿವರ್ತನಶೀಲ ಹಾದಿಯಲ್ಲಿ ತಮ್ಮ ಹೆಜ್ಜೆಯನ್ನೂ ಮೂಡಿಸುತ್ತಿರುವ ಕನಸುಗಾರ್ತಿಯರು. ಅವರನ್ನು ಭಯದ ಕಾರ್ಖಾನೆಯಲ್ಲಿ ಕತ್ತರಿಸುವುದು ಬೇಡ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು