ಭಾನುವಾರ, ನವೆಂಬರ್ 17, 2019
27 °C

ಟ್ರಾಯ್ ಅಧ್ಯಕ್ಷರ ಆಧಾರ್ ಪ್ರಹಸನ

Published:
Updated:

ಕರ್ನಾಟಕದ ಎಲ್ಲೆಡೆ ಸರಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ವ್ಯಾಪಕವಾಗಿ ದೂರು ಬಂದರೆ ಪೊಲೀಸ್ ಮಹಾನಿರ್ದೇಶಕರು ಏನು ಮಾಡಬಹುದು? ಅದನ್ನು ನಿಯಂತ್ರಿಸಲು ಇಲಾಖೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ವಿವರಿಸಬಹುದು. ಅಥವಾ ಜನರು ಇಂಥ ಸಂದರ್ಭಗಳಲ್ಲಿ ಹೇಗೆ ಪೊಲೀಸರನ್ನು ಸಂಪರ್ಕಿಸಬೇಕು ಹೇಗೆ ಪೊಲೀಸರಿಗೆ ಸಹಕರಿಸಬೇಕು ಎಂಬ ಪ್ರಕಟಣೆಗಳನ್ನು ನೀಡಬಹುದು. ಇವೆಲ್ಲದರ ಬದಲಿಗೆ ಪೊಲೀಸ್ ಮಹಾನಿರ್ದೇಶಕರು ತಮ್ಮ ಕುತ್ತಿಗೆಯಲ್ಲೊಂದು ದೊಡ್ಡ ಚಿನ್ನದ ಸರವನ್ನು ಧರಿಸಿ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಏಕಾಂಗಿಯಾಗಿ ಓಡಾಡುತ್ತೇನೆ ಎಂಬ ಪ್ರಕಟಣೆ ನೀಡಿ ‘ಧೈರ್ಯವಿದ್ದರೆ ಕಳ್ಳರು ಬಂದು ನನ್ನ ಸರ ಕದಿಯಲಿ’ ಎಂದರೆ ಏನಾಗಬಹುದು? ಉತ್ತರವನ್ನು ಊಹಿಸುವುದು ಬಹಳ ಸುಲಭ. ‘ಇದೆಂಥ ಬಾಲಿಶ ವರ್ತನೆ’ ಎಂದು ಜನರು ಪೊಲೀಸ್ ಮಹಾನಿರ್ದೇಶಕರನ್ನು ಟೀಕಿಸುವುದಂತೂ ಖಚಿತ.

ಇಂಥದ್ದೇ ಒಂದು ಘಟನೆ ಎರಡು ದಿನಗಳ ಹಿಂದೆ (ಜುಲೈ 28) ನಡೆಯಿತು. ದೂರಸಂಪರ್ಕ ಕ್ಷೇತ್ರದ ನಿಯಂತ್ರಣದ ಮಟ್ಟಿಗೆ ಪೊಲೀಸ್ ಮಹಾನಿರ್ದೇಶಕರಿಗಿಂತ ಮುಖ್ಯವಾದ ಹುದ್ದೆಯಲ್ಲಿರುವ ಭಾರತೀಯ ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷ ಆರ್.ಎಸ್. ಶರ್ಮ ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ ‘ಇದನ್ನು ಬಳಸಿ ನನಗೆ ಯಾರು ಹಾನಿಯನ್ನುಂಟು ಮಾಡುತ್ತಾರೋ ಮಾಡಿ ತೋರಿಸಲಿ’ ಎಂದರು. ಇದನ್ನು ಸವಾಲಾಗಿ ಸ್ವೀಕರಿಸಿದ ಹಲವರು ಆರ್.ಎಸ್. ಶರ್ಮ ಅವರ ಆಧಾರ್ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ಅವರ ವೈಯಕ್ತಿಕ ವಿವರಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದರು. ಅವರ ಬ್ಯಾಂಕ್ ಖಾತೆಯ ಸಂಖ್ಯೆ, ಅವರ ವಾಟ್ಸ್ ಆ್ಯಪ್ ಖಾತೆಯಲ್ಲಿ ಬಳಸಲಾಗಿರುವ ಛಾಯಾಚಿತ್ರ, ಅವರ ಮೊಬೈಲ್ ಯಾವುದು ಇತ್ಯಾದಿ ವಿವರಗಳೆಲ್ಲವೂ ಬಯಲಾದವು. ಒಬ್ಬರಂತೂ ಅಮೇಜಾನ್‌ನಲ್ಲಿ ಆರ್.ಎಸ್. ಶರ್ಮ ಹೆಸರಿನಲ್ಲಿ ಕ್ಯಾಶ್ ಆನ್ ಡೆಲಿವರಿ ಷರತ್ತಿನ ಅನ್ವಯ ಮೊಬೈಲ್ ಫೋನ್ ಖರೀದಿಸಿ ಅವರ ಮನೆಗೆ ಕಳುಹಿಸಿಕೊಟ್ಟರು.

ಈ ಪ್ರಹಸನ ಇಷ್ಟಕ್ಕೇ ಕೊನೆಗೊಳ್ಳಲಿಲ್ಲ. ಆರ್.ಎಸ್. ಶರ್ಮ ತಮ್ಮ ಬಾಲಿಶ ವರ್ತನೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದರು. ಮತ್ತೊಂದು ಟ್ವೀಟ್‌ನ ಮೂಲಕ ‘ಇವೆಲ್ಲಾ ನನ್ನ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ವಿವರಗಳು. ಇದಕ್ಕೆ ಆಧಾರ್ ಸಂಖ್ಯೆಯೇ ಬೇಕೆಂದೇನೂ ಇರಲಿಲ್ಲ. ಇಷ್ಟಾಗಿಯೂ ನನಗೆ ಯಾವ ಹಾನಿಯನ್ನೂ ಉಂಟು ಮಾಡಲು ಸಾಧ್ಯವಾಗಲಿಲ್ಲ’ ಎಂದು ವಾದಿಸಿದರು. ಆರ್. ಎಸ್. ಶರ್ಮ ಯಾರು ಎಂಬುದನ್ನು ಅರಿತು ಅವರು ಹೇಳುತ್ತಿರುವ ‘ಹಾನಿ’ಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇವರು ಆಧಾರ್ ಸಂಖ್ಯೆಗಳನ್ನು ನೀಡುವ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ (ಯುಐಎಡಿಐ) ಸ್ಥಾಪಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು. ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಅಥವಾ ಟ್ರಾಯ್ ಎಂಬ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಟ್ರಾಯ್ ಈಗ ತನ್ನ ವ್ಯಾಪ್ತಿಯನ್ನು ಇಂಟರ್ನೆಟ್‌ನ ನಿಯಂತ್ರಣಕ್ಕೂ ವಿಸ್ತರಿಸಿಕೊಳ್ಳುತ್ತಿದೆ.

ಇಷ್ಟೊಂದು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ಬಹಿರಂಗಗೊಳಿಸಿ ‘ತಾಕತ್ತಿದ್ದರೆ ನನಗೆ ತೊಂದರೆ ಕೊಡಿ’ ಎನ್ನುವುದು ಬಾಲಿಶ ವರ್ತನೆ. ಇದು ಲೇಖನದ ಆರಂಭದಲ್ಲಿ ನೀಡಿದ ಉದಾಹರಣೆಯಂಥ- ಪೊಲೀಸ್ ಮಹಾ ನಿರ್ದೇಶಕರೊಬ್ಬರು ಸರಗಳ್ಳರಿಗೆ ಸವಾಲೊಡ್ಡುವಂಥ ಪ್ರಹಸನ.

ಆರ್.ಎಸ್. ಶರ್ಮ ಅವರ ಆಧಾರ್ ಸಂಖ್ಯೆಯನ್ನು ಬಳಸಿ ಈಗಾಗಲೇ ಬಹಿರಂಗ ಪಡಿಸಲಾಗಿರುವ ಮಾಹಿತಿಯನ್ನು ಬಳಸಿ ಅವರ ಬ್ಯಾಂಕ್ ಖಾತೆಗೆ ಕನ್ನಹಾಕುವುದಾಗಲೀ ಅವರ ಇ-ಮೇಲ್‌ನ ಪಾಸ್‌ವರ್ಡ್ ಬದಲಾಯಿಸುವುದಾಗಲೀ ಸುಲಭದ ಕೆಲಸವೇ ಆಗಿರಬಹುದು. ಆದರೆ ಅದಕ್ಕೆ ಯಾರೂ ಮುಂದಾಗುವುದಿಲ್ಲ. ಏಕೆಂದರೆ ಶರ್ಮ ಅವರು ಇರುವ ಹುದ್ದೆ ಅವರಿಗೆ ಒದಗಿಸುವ ಸವಲತ್ತುಗಳು ಹೇಗಿವೆ ಎಂದರೆ ಕ್ಷಣಾರ್ಧದಲ್ಲಿ ಹಾಗೆ ಮಾಡಿದವರನ್ನು ಕಂಡುಹಿಡಿಯಲು ಸಾಧ್ಯವಿದೆ. ಒಬ್ಬ ಸಾಮಾನ್ಯ ವ್ಯಕ್ತಿಯ ವಿವರಗಳು ಬಯಲಾದರೆ ಸ್ಥಿತಿ ಹೀಗಿರುವುದಿಲ್ಲ. ಇದು ಹೇಗೆ ಸಂಭವಿಸಬಹುದು ಎಂಬುದಕ್ಕೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಈವರೆಗೆ ನಡೆದ ವಂಚನೆಗಳನ್ನು ಗಮನಿಸಿದರೆ ಸಾಕಾಗುತ್ತದೆ. ಬ್ಯಾಂಕ್ ಖಾತೆಯಿಂದ ಹಣ ತೆಗೆಯುವುದರಿಂದ ಆರಂಭಿಸಿ ವಾಹನ ಖರೀದಿಯ ತನಕದ ವಂಚನೆಗಳು ಸಾಧ್ಯ ಎಂಬುದನ್ನು ಈ ಪಟ್ಟಿ ಹೇಳುತ್ತದೆ.

ಆರ್. ಎಸ್. ಶರ್ಮ ಅವರು ಹೇಳುವ ‘ಹಾನಿ’ ಎಂಬುದು ಬಹಳ ಸಾಪೇಕ್ಷವಾದ ಪದ. ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸುವುದು,  ಆರ್.ಎಸ್. ಶರ್ಮ ಅವರಿಗೆ ಮಾಡಿದಂತೆ ಆನ್‌ಲೈನ್ ಮಳಿಗೆಗಳಲ್ಲಿ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ ಷರತ್ತಿನಲ್ಲಿ ಖರೀದಿಸಿ ಕಳುಹಿಸುವುದು ಮುಂತಾದುವುಗಳನ್ನೆಲ್ಲಾ ಮಾಡಬಹುದು. ಒಂದು ವೇಳೆ ಯುವತಿಯೊಬ್ಬಳ ವಿವರಗಳು ಹೀಗೆ ಬಹಿರಂಗಗೊಂಡರೆ ಏನೆಲ್ಲಾ ಸಂಭವಿಸಬಹುದು ಎಂಬುದನ್ನೂ ಊಹಿಸಿದರೇ ಭಯವಾಗುತ್ತದೆ. ಬರೇ ಆನ್‌ಲೈನ್ ಹಿಂಬಾಲಿಸುವಿಕೆಗಳೇ ಅನೇಕ ಮಹಿಳೆಯರ ಸಾವಿನಲ್ಲಿ ಅಂತ್ಯಗೊಂಡಿರುವ ಪ್ರಕರಣಗಳೂ ಇವೆ.

ಇಷ್ಟೆಲ್ಲಾ ಅಪಾಯಗಳಿರುವಾಗ ಆರ್.ಎಸ್. ಶರ್ಮ ಅವರಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ಹೀಗೆ ಬಹಿರಂಗ ಪಡಿಸುವುದು ತಪ್ಪು ಸಂದೇಶ ನೀಡುತ್ತದೆ. ಆಧಾರ್ ಸಂಖ್ಯೆಯನ್ನು ಬಹಿರಂಗ ಪಡಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಸಾಮಾನ್ಯ ಜನರು ನಂಬುವಂತಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಯಐಡಿಎಐ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಕಾಯ್ದೆ ಹೇಳುವಂತೆ ಆಧಾರ್ ಸಂಖ್ಯೆಯನ್ನು ಹೀಗೆ ಬಹಿರಂಗಗೊಳಿಸುವುದು ಕಾನೂನಿನ ಉಲ್ಲಂಘನೆ ಇದೇ ಕಾರಣಕ್ಕಾಗಿ ಯುಐಡಿಎಐ ಈಗಾಗಲೇ ಕೇಸುಗಳನ್ನೂ ದಾಖಲಿಸಿದೆ. ಈ ಸಂಸ್ಥೆಯ ಸ್ಥಾಪಕ ಕಾರ್ಯನಿರ್ವಾಹಕರಾಗಿದ್ದವರೇ ಈ ಬಗೆಯ ಕೃತ್ಯದಲ್ಲಿ ತೊಡಗುವುದು ಸರಿಯೇ ಎಂಬ ಪ್ರಶ್ನೆ ಇಲ್ಲಿದೆ.

ಆರ್.ಎಸ್ ಶರ್ಮ ಅವರ ವರ್ತನೆಗಿಂತ ಬಾಲಿಶವಾಗಿ ಕಂಡದ್ದು ಯುಐಡಿಎಐ ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ರೀತಿ. ಅದು ತಮ್ಮ ಸ್ಥಾಪಕ ಕಾರ್ಯನಿರ್ವಾಹಕರ ವರ್ತನೆಯನ್ನು ಖಂಡಿಸುವ ಬದಲಿಗೆ ‘ಟ್ವಿಟ್ಟರ್ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಆರ್.ಎಸ್. ಶರ್ಮ ಅವರಿಗೆ ಸಂಬಂಧಿಸಿದ ವಿವರಗಳನ್ನು ಆಧಾರ್ ದತ್ತ ಸಂಚಯದಿಂದ ಪಡೆಯಲಾಗಿಲ್ಲ. ಇವೆಲ್ಲರೂ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿವೆ’ ಎಂಬ ಸ್ಪಷ್ಟೀಕರಣವನ್ನು ನೀಡಿತು.

ಟ್ವಿಟ್ಟರ್‌ನಲ್ಲಿ ಆರ್.ಎಸ್. ಶರ್ಮ ಅವರು ಒಡ್ಡಿದ ಸವಾಲನ್ನು ಸ್ವೀಕರಿಸಿದವರು ಮಾಹಿತಿಯನ್ನು ಕಲೆ ಹಾಕಲು ಬಳಸಿಕೊಂಡದ್ದು ಆಧಾರ್ ಸಂಖ್ಯೆಯನ್ನು ಎಂಬುದರ ಬಗ್ಗೆ ಯುಐಎಡಿಐ ಜಾಣ ಕುರುಡನ್ನು ತೋರುತ್ತಿದೆ. ಆರ್.ಎಸ್. ಶರ್ಮ ಅವರ ಫೋಟೋ ಅಷ್ಟೇಕೆ ಬ್ಯಾಂಕ್ ಖಾತೆ ಸಂಖ್ಯೆಯೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಎಂದು ಒಪ್ಪೋಣ. ಆದರೆ ಅವರ ಜಿಮೇಲ್ ಪಾಸ್‌ವರ್ಡ್ ಬದಲಾಯಿಸುವ ಗುಪ್ತಪ್ರಶ್ನೆಯ ಉತ್ತರವಂತೂ ಸಾರ್ವಜನಿಕ ಮಾಹಿತಿಯಲ್ಲ. ಅದನ್ನು ಹೇಗೆ ಪಡೆಯಲು ಸಾಧ್ಯವಾಯಿತು ಎಂಬ ಪ್ರಶ್ನೆ ಇಲ್ಲಿ ಉಳಿದೇ ಇದೆ. ಇಷ್ಟಕ್ಕೂ ಸೋರಿಕೆಯಾಗಿರುವ ಮಾಹಿತಿಗಳೆಲ್ಲವೂ ಶಾಶ್ವತ ಸ್ವರೂಪದವು. ಸ್ವಯಂಪ್ರೇರಿತವಾಗಿ ಬಹಿರಂಗ ಪಡಿಸಿದ ಆಧಾರ್ ಸಂಖ್ಯೆಯೇ ಶಾಶ್ವತ ಸ್ವರೂಪದ್ದು. ಇನ್ನು ಬ್ಯಾಂಕ್ ಖಾತೆಗಳು, ದೂರವಾಣಿ ಸಂಖ್ಯೆಗಳನ್ನೆಲ್ಲಾ ಅವರು ಬದಲಾಯಿಸಿಕೊಳ್ಳ ಬಹುದು. ಆದರೆ ಶಾಶ್ವತ ಸ್ವರೂಪದ ಆಧಾರ್ ಸಂಖ್ಯೆ ಉಳಿದ ಮಾಹಿತಿಗಳನ್ನು ಮತ್ತೆ ಸಂಗ್ರಹಿಸುವ ಹಾದಿಗಳನ್ನು ತರೆಯುತ್ತದೆಯಲ್ಲವೇ?

ಆರ್.ಎಸ್. ಶರ್ಮ ಅವರಿಗೆ ಆಧಾರ್ ಯೋಜನೆಯನ್ನು ಸಮರ್ಥಿಸುವ ಉದ್ದೇಶವಿದ್ದರೆ ಅದು ತಪ್ಪಲ್ಲ. ಹಾಗೆಯೇ ಯುಐಡಿಎಐಗೆ ಆಧಾರ್ ದತ್ತ ಸಂಚಯ ಸುರಕ್ಷಿತವಾಗಿದೆ ಎಂದು ಹೇಳಿಕೊಳ್ಳುವ ಹಕ್ಕಿದೆ. ಆದರೆ ಅದಕ್ಕೆ ತಾವೇ ರೂಪಿಸಿದ ಮತ್ತು ದೇಶವಿಡೀ ಪಾಲಿಸಬೇಕಾದ ಕಾನೂನುಗಳನ್ನು ಉಲ್ಲಂಘಿಸುವ ವಿಧಾನವನ್ನು ಅನುಸರಿಸುವುದಂತೂ ಸರಿಯಲ್ಲ. ಮತ್ತೆ ಇಡೀ ಪ್ರಹಸನವನ್ನು ಕೇವಲ ಅತ್ಯುತ್ಸಾಹಿ ಸಮರ್ಥಕರ ಬಾಲಿಶ ವರ್ತನೆ ಎಂದು ಕಡೆಗಣಿಸಲೂ ಸಾಧ್ಯವಿಲ್ಲ.

ಟ್ರಾಯ್ ಮುಖ್ಯಸ್ಥರು ಹಾಗೂ ಯುಐಡಿಎಐಗಳೆರಡೂ ಒಟ್ಟಾಗಿ ವೈಯಕ್ತಿಕ ಮಾಹಿತಿಯ ಸೋರಿಕೆಯ ಸಮರ್ಥನೆಗೆ ಒಂದು ತಂತ್ರ ರೂಪಿಸಿದ್ದಾರೆಂದೇ ಭಾವಿಸಬೇಕಾಗುತ್ತದೆ. ಇಲ್ಲಿಯೂ ‘ತಂತ್ರಜ್ಞಾನ ವಿಧಿವಾದ’ (Technological determinism) ಅದರ ಕೆಟ್ಟ ಮಾದರಿಯಲ್ಲಿ ಬಳಕೆಯಾಗಿದೆ. ಸಾಮಾಜಿಕ ಸಮಸ್ಯೆಯೊಂದನ್ನು ತಾಂತ್ರಿಕವಾಗಿ ಗ್ರಹಿಸಲು ಸಾಧ್ಯವಾದರೆ ಸಮಸ್ಯೆಯ ಸ್ವರೂಪವನ್ನೇ ಬದಲಾಯಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ತಂತ್ರಜ್ಞಾನ ವಿಧಿವಾದ ಭಾವಿಸುತ್ತದೆ. ಬಾಲಿಶವಾದ ಟ್ವಿಟ್ಟರ್ ಸವಾಲಿನ ಮೂಲಕ ಆಧಾರ್‌ ದತ್ತಸಂಚಯದ ಸುರಕ್ಷತೆ, ವೈಯಕ್ತಿಕ ಮಾಹಿತಿಯ ರಕ್ಷಣೆ ಕುರಿತ ಗಂಭೀರ ಚರ್ಚೆಗಳೆಲ್ಲವನ್ನೂ ಪ್ರಹಸನದ ಮಟ್ಟಕ್ಕೆ ಇಳಿಸುವಲ್ಲಿ ಆರ್. ಎಸ್. ಶರ್ಮ ಈಗ ಯಶಸ್ವಿಯಾಗಿದ್ದಾರೆ. ಸಾಮಾನ್ಯರು ಆಧಾರ್ ಸಂಖ್ಯೆ ಬಹಿರಂಗ ಪಡಿಸುವುದರಿಂದ ಆಪಾಯವಿಲ್ಲ ಎಂದು ನಂಬಿಸುವ ಅವರ ಯೋಜನೆ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದಿದೆ ಎಂದೇ ಹೇಳಬೇಕಾಗುತ್ತದೆ.

ಈ ಪ್ರಹಸನಕ್ಕಿಂತ ದುರದೃಷ್ಟಕರ ಅಂಶವೊಂದಿದೆ. ಸರ್ಕಾರ ಕೊನೆಗೂ ದತ್ತಾಂಶ ಮತ್ತು ವೈಯಕ್ತಿಕ ಮಾಹಿತಿಯ ಸಂರಕ್ಷಣೆಗೆ ಸಂಬಂಧಿಸಿದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದೆ. ಈ ನೀತಿ ನಿರೂಪಣೆಯ ಪ್ರಕ್ರಿಯೆಯಲ್ಲಿ ಆರ್.ಎಸ್. ಶರ್ಮ ಅವರಿಗೆ ಮುಖ್ಯ ಸ್ಥಾನವಿದೆ. ಎಷ್ಟರ ಮಟ್ಟಿಗೆ ಎಂದರೆ ಇವರನ್ನು ಬಿ.ಎನ್. ಶ್ರೀಕೃಷ್ಣ ಸಮಿತಿ ಸಲಹೆ ಮಾಡಿರುವ ‘ದತ್ತಾಂಶ ಸಂರಕ್ಷಣಾ ಪ್ರಾಧಿಕಾರ’ದ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ದತ್ತಾಂಶ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಕೆಲಸಗಳಲ್ಲಿ ಒಂದು ವ್ಯಕ್ತಿಗಳ ಖಾಸಗಿ ಮಾಹಿತಿಯ ರಕ್ಷಣೆ.

ಪ್ರತಿಕ್ರಿಯಿಸಿ (+)