ಗುರುವಾರ , ಆಗಸ್ಟ್ 13, 2020
21 °C

ಕೋವಿಡ್ ಕಲಿಸಿದ ಹಣಕಾಸು ಪಾಠಗಳು

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

ಕೋವಿಡ್ ಪಿಡುಗು ಎಲ್ಲರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದಾಯ, ಆರೋಗ್ಯ, ಉದ್ಯೋಗ, ಭವಿಷ್ಯ ಎಲ್ಲದರ ಮೇಲೂ ಕಾರ್ಮೋಡ ಆವರಿಸುವಂತೆ ಮಾಡಿದೆ. ಇದರ ಜತೆ ಜತೆಗೆ ನಮಗೆಲ್ಲ ಹಣಕಾಸಿನ ಹೊಸ ಪಾಠಗಳನ್ನೂ ಕಲಿಸಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ನಿಮ್ಮ ಹಣಕಾಸು ನಿರ್ವಹಣೆ ಹೇಗಿರಬೇಕು ಎನ್ನುವ ಬಗ್ಗೆ ವಿವರ ಇಲ್ಲಿದೆ.


ಕ್ಲಿಯೊನ್‌ ಡಿಸೋಜ

ಹೆಚ್ಚು ಹಣದ ಅವಶ್ಯಕತೆಯಿಲ್ಲ: ಜೀವನ ನಡೆಸುವುದಕ್ಕೆ ಸಾಕಷ್ಟು ಹಣ ಬೇಕು ಅನ್ನೋ ಭಾವನೆ ಸಾಮಾನ್ಯವಾಗಿತ್ತು. ಆದರೆ ಬದುಕು ಮುನ್ನಡೆಸಲು ಹೆಚ್ಚು ಹಣ ಬೇಕಿಲ್ಲ ಅಂತ ಕೋವಿಡ್ ಸಂದರ್ಭದ ಲಾಕ್‌ಡೌನ್ ತಿಳಿಸಿಕೊಟ್ಟಿತು.

ಬೇಸಿಗೆ ಪ್ರವಾಸ, ಹೊರಗಡೆ ಊಟ ತಿಂಡಿ, ವಾರಾಂತ್ಯದ ಶಾಪಿಂಗ್- ಸಿನಿಮಾ, ಬೇಕರಿ - ಚಾಟ್ಸ್ , ಪಾರ್ಟಿ ಎಲ್ಲದಕ್ಕೂ ಪೂರ್ಣ ವಿರಾಮ ಬಿದ್ದ ಕಾರಣ, ಸಾಮಾನ್ಯ ಜೀವನ ನಡೆಸಲು ಹೆಚ್ಚು ಹಣದ ಅವಶ್ಯಕತೆ ಇಲ್ಲ ಎನ್ನವುದು ಅರಿವಿಗೆ ಬಂತು. ಜನಸಾಮಾನ್ಯರು ಅವಶ್ಯಕತೆಗಳನ್ನು ಮಾತ್ರ ಖರೀದಿಸಿದ ಕಾರಣ ತಿಂಗಳ ವೆಚ್ಚ ತಗ್ಗಿ ಉಳಿತಾಯ ಹೆಚ್ಚಿತು. ವಿವೇಚನೆಯಿಂದ ಖರ್ಚು ಮಾಡಿದರೆ ಎಲ್ಲಾ ಸಮಯದಲ್ಲೂ ಉಳಿತಾಯ ಖಂಡಿತ ಸಾಧ್ಯ ಎನ್ನುವುದು ಎಲ್ಲರಿಗೂ ತಿಳಿಯಿತು.

ದೀರ್ಘಾವಧಿ ಹೂಡಿಕೆಗೆ ಷೇರು ಮಾರುಕಟ್ಟೆ: ಲಾಕ್‌ಡೌನ್ ಅವಧಿಯಲ್ಲಿ ಷೇರು ಮಾರುಕಟ್ಟೆ ಶೇ 35 ರಷ್ಟು ಕುಸಿತ ಕಂಡಿತು. ದಿಢೀರ್ ಕುಸಿತ ಕಂಡು ಷೇರುಗಳನ್ನು ಹೂಡಿಕೆದಾರರು ಮಾರಾಟ ಮಾಡಿದರು. ಇದೀಗ ಜೂನ್‌ನಲ್ಲಿ ಮಾರುಕಟ್ಟೆ ಶೇ 25 ರಷ್ಟು ಏರಿಕೆ ಕಂಡಿದೆ. ಈ ಹಿಂದೆ ಯಾರು ಷೇರು ಹೂಡಿಕೆ ಹಿಂದೆ ಪಡೆಯಲಿಲ್ಲವೋ ಅವರಿಗೆ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಯಾರು ದಿಢೀರ್ ಮಾರಾಟ ಮಾಡಿದರೋ ಅವರಿಗೆ ನಷ್ಟ ಹೆಚ್ಚಾಗಿದೆ. ಮಾರುಕಟ್ಟೆ ಏರಿಳಿತ ನಿಭಾಯಿಸಲು ಸಾಧ್ಯವಿಲ್ಲ ಎಂದಾದರೆ ದಯವಿಟ್ಟು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಡಿ.

ಮಾರುಕಟ್ಟೆ ಮುಂದಿನ ಕೆಲ ತಿಂಗಳಲ್ಲಿ ಎಷ್ಟರ ಮಟ್ಟಿಗೆ ಏರಿಳಿತಗಳನ್ನು ಕಾಣಲಿದೆ ಎಂದು ಅಂದಾಜು ಮಾಡುವುದು ಕಷ್ಟ. ಆದರೆ ಒಂದು ವಿಚಾರ ನೆನಪಿರಲಿ, ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವವರಿಗೆ ಷೇರು ಮಾರುಕಟ್ಟೆಯ ಈ ಏರಿಳಿತದಿಂದ ನಷ್ಟದ ಸಾಧ್ಯತೆ ತೀರಾ ಕಡಿಮೆ.  ‘ಕನಿಷ್ಠ 10 ವರ್ಷಗಳಾದರೂ ಹಣ ತೊಡಗಿಸಲು ಸಾಧ್ಯವಿಲ್ಲ ಎಂದರೆ ಷೇರು ಮಾರುಕಟ್ಟೆ ಹೂಡಿಕೆ ಮಾಡಬೇಡಿ’ ಎನ್ನುವ ವಾರನ್ ಬಫೆಟ್ ಅವರ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ.

ಹೂಡಿಕೆ ವೈವಿಧ್ಯತೆ ಕಡೆಗಣಿಸಬೇಡಿ: ಕೆಲವರು ಷೇರು ಮಾರುಕಟ್ಟೆಯಲ್ಲೇ ಹೆಚ್ಚು ಹಣ ತೊಡಗಿಸುತ್ತಾರೆ. ಇನ್ನು ಕೆಲವರು ಗಳಿಸಿದ ಹಣವನ್ನೆಲ್ಲಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿದ್ದರು. ಹೀಗೆ ಗಳಿಸಿದ್ದೆಲ್ಲವನ್ನೂ ಒಂದೇ ಕಡೆ ಹೂಡಿಕೆ ಮಾಡಬಾರದು ಎಂಬ ಪಾಠವನ್ನು ಕೋವಿಡ್ ಕಲಿಸಿಕೊಟ್ಟಿದೆ.  ಷೇರು ಮಾರುಕಟ್ಟೆಯಲ್ಲಿ ಅತಿಯಾಗಿ ಹಣ ತೊಡಗಿಸಿದವರು ಸದ್ಯದ ಸ್ಥಿತಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹಾಗೆಯೇ ಅತಿಯಾಗಿ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿದವರು ಹಣದ ದ್ರವ್ಯತೆಗಾಗಿ (ಲಿಕ್ವಿಡಿಟಿ) ಪರದಾಡುತ್ತಿದ್ದಾರೆ.

ತುರ್ತು ನಿಧಿ ಕಡೆಗಣಿಸಬೇಡಿ : ಬದುಕಿನ ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ಕನಿಷ್ಠ 6 ತಿಂಗಳ ತುರ್ತು ನಿಧಿ ಇಟ್ಟುಕೊಳ್ಳಬೇಕು. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಏರಿಳಿತಗಳಿದ್ದರೆ ಒಂದು ವರ್ಷಕ್ಕೆ ಬೇಕಾಗುವಷ್ಟು ಹಣ ತುರ್ತು ನಿಧಿಯಲ್ಲಿರುವುದು ಅವಶ್ಯ. ತುರ್ತು ನಿಧಿಯನ್ನು ಫಿಕ್ಸೆಡ್ ಡೆಪಾಸಿಟ್, ಸೇವಿಂಗ್ಸ್ ಅಕೌಂಟ್, ಸೇಫ್ ಡೆಟ್ ಫಂಡ್, ಸಾಂಪ್ರದಾಯಿಕ ಹೈಬ್ರೀಡ್ ಫಂಡ್‌ಗಳಲ್ಲಿ ಇರಿಸಿ.

ಹೂಡಿಕೆ, ಆಸ್ತಿ ಮಾಹಿತಿ ಸಂಗ್ರಹಿಸಿಡಿ / ಉಯಿಲು ಬರೆಯಿರಿ: ವಿವಿಧೆಡೆ ಮಾಡಿರುವ ಹೂಡಿಕೆಗಳ ಮಾಹಿತಿ, ದಾಖಲೆಗಳು, ಬ್ಯಾಂಕ್ ಅಕೌಂಟ್ ಪಾಸ್‌ವರ್ಡ್, ನಾಮಿನಿ ವಿವರ ಎಲ್ಲವನ್ನೂ ಒಟ್ಟುಗೂಡಿಸಿ ಪತ್ನಿ ಮತ್ತು ತಂದೆ ತಾಯಿಗೆ ಆ ಮಾಹಿತಿ ಒದಗಿಸಿರಿ. ತುರ್ತು ಸಂದರ್ಭದಲ್ಲಿ ಅದು ನೆರವಿಗೆ ಬರುತ್ತದೆ. ಆಸ್ತಿಯ ಸುರಕ್ಷಿತ ವರ್ಗಾವಣೆ ದೃಷ್ಟಿಯಿಂದ ಒಂದು ಉಯಿಲು (ವಿಲ್) ಸಿದ್ಧಪಡಿಸಿ.

ಆರೋಗ್ಯ ನಿಮ್ಮ ಪಾಲಿನ ಅತಿ ದೊಡ್ಡ ಹೂಡಿಕೆ: ಹಣ ಗಳಿಸುವ ಭರದಲ್ಲಿ ಆರೋಗ್ಯ ಕಡೆಗಣಿಸಿ ದುಡಿಯುವ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ ಆರೋಗ್ಯ ನಿಮ್ಮ ಪಾಲಿನ ಅತಿ ದೊಡ್ಡ ಹೂಡಿಕೆ ಎನ್ನುವುದನ್ನು ಕೋವಿಡ್ ಮತ್ತೆ ನೆನಪಿಸಿದೆ. ಕೆಲಸದ ಜತೆಗೆ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಿ. ಸುರಕ್ಷತೆಯ ದೃಷ್ಟಿಯಿಂದ ಒಂದು ಒಳ್ಳೆಯ ಆರೋಗ್ಯ ವಿಮೆ ಮಾಡಿಸಿಕೊಳ್ಳಿ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

 
ನಿರೀಕ್ಷೆಗೂ ಮೀರಿ ಜಿಗಿದ ಷೇರುಪೇಟೆ

ಸಾಕಷ್ಟು ನಕಾರಾತ್ಮಕ ಬೆಳವಣಿಗೆಗಳ ನಡುವೆಯೂ ಷೇರು ಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. 34,731 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ಜೂನ್ 19 ಕ್ಕೆ ಕೊನೆಗೊಂಡ ವಾರದಲ್ಲಿ ಶೇ 2.8 ರಷ್ಟು ಏರಿಕೆ ದಾಖಲಿಸಿದೆ. 10,244 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.7 ರಷ್ಟು ಜಿಗಿದಿದೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಶೇ 1.6 ಮತ್ತು ಸ್ಮಾಲ್ ಕ್ಯಾಪ್ ಶೇ 3.6 ರಷ್ಟು ಹೆಚ್ಚಳ ಕಂಡಿವೆ.

ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ, ಚೀನಾ – ಭಾರತ ಬಿಕ್ಕಟ್ಟು, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಳಪೆ ಸಾಧನೆ ಸೇರಿ ಹಲವು ನಕಾರಾತ್ಮಕ ಅಂಶಗಳ ನಡುವೆಯೂ ಷೇರುಪೇಟೆ ಪುಟಿದೆದ್ದಿದೆ. ಅರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವ ಕಾರಣ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ನಿಫ್ಟಿ ಮಾಧ್ಯಮ, ವಿದ್ಯುತ್ ಉತ್ಪಾದನಾ ವಲಯ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ ಗರಿಷ್ಠ ಗಳಿಕೆ ಕಂಡಿವೆ.

ಏರಿಕೆ- ಇಳಿಕೆ: ಬಜಾಜ್ ಫಿನ್ ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ , ವಿಪ್ರೊ, ಯುಪಿಎಲ್ ಗರಿಷ್ಠ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ ಸ್ಮಾಲ್‌ಕ್ಯಾಪ್ ಸೂಚ್ಯಂಕದಲ್ಲಿ 194 ಷೇರುಗಳು ಶೇ 10 ರಿಂದ ಶೇ 60 ರಷ್ಟು ಹೆಚ್ಚಳ ಕಂಡಿವೆ. ಬಿರ್ಲಾ ಕಾರ್ಪ್, ಸುವೆನ್ ಲೈಫ್, ಡಿಸಿಬಿ ಬ್ಯಾಂಕ್, ಧಾನೂಕ ಅಗ್ರಿಟೆಕ್, ಎಲ್‌ಟಿಫುಡ್ಸ್ , ಧನಲಕ್ಷ್ಮಿ ಬ್ಯಾಂಕ್, ಉಷಾ ಮಾರ್ಟಿನ್, ಟ್ರೆಂಟ್ ಸೇರಿ ಪ್ರಮುಖ ಕಂಪನಿಗಳು ಉತ್ತಮ ಸಾಧನೆ ತೋರಿವೆ.  ಇಂಡಸ್ ಇಂಡ್ ಬ್ಯಾಂಕ್, ಐಟಿಸಿ, ಎನ್‌ಟಿಪಿಸಿ ಮತ್ತು ಬಜಾಜ್ ಆಟೊ ಗರಿಷ್ಠ ಕುಸಿತ ಕಂಡಿವೆ.

ಮುನ್ನೋಟ: ಡೇಟಾ ಸಾಫ್ಟ್ , ನೌಕರಿ, ಏಷಿಯನ್ ಪೇಂಟ್ಸ್, ಬರ್ಜರ್ ಪೇಂಟ್ಸ್, ಟೈಮೆಕ್ಸ್, ಅಶೋಕ್ ಲೇಲ್ಯಾಂಡ್, ಅಪೋಲೊ ಹಾಸ್ಪಿಟಲ್ಸ್, ಪ್ರೆಸ್ಟೀಜ್, ಶೋಭಾ, ಯೂನಿಯನ್ ಬ್ಯಾಂಕ್, ಗೇಲ್, ಇಂಡಿಯ ಸಿಮೆಂಟ್ಸ್, ಹೋಂಡಾ ಪವರ್, ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಬಿಕ್ಕಟ್ಟು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಅರ್ಥಿಕ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಚುರುಕುಗೊಳ್ಳಲಿವೆ ಎನ್ನುವುದನ್ನು ಮಾರುಕಟ್ಟೆ ಗಮನಿಸಲಿದೆ.

ಎಫ್‌ಎಂಸಿಜಿ, ಟೆಲಿಕಾಂ, ರಾಸಾಯನಿಕ, ಮಾಹಿತಿ ತಂತ್ರಜ್ಞಾನ , ಫಾರ್ಮಾ ವಲಯಗಳ ಹೂಡಿಕೆಗಳು ಸದ್ಯದ ಮಟ್ಟಿಗೆ ಸುರಕ್ಷಿತ ಎನ್ನಬಹುದು. ಮುಂಬರುವ ತ್ರೈಮಾಸಿಕಗಳಲ್ಲಿ ಕಂಪನಿಗಳ ಫಲಿತಾಂಶಗಳು ಮತ್ತಷ್ಟು ನೆಲಕಚ್ಚುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಸ್ಥಿರತೆ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು