ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಕಂತು ಮುಂದೂಡಿಕೆ ತಂದ ಸಂಕಷ್ಟ!

Last Updated 7 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್ ಬಿಐ) ಆಗಸ್ಟ್ ಕೊನೆಯವರೆಗೆ ಅವಧಿ ಸಾಲಗಳ ಕಂತು ಮುಂದೂಡಲು (ಮೊರಟೋರಿಯಂ) ಗ್ರಾಹಕರಿಗೆ ಅವಕಾಶ ನೀಡಿದೆ. ಆದರೆ ಮೊರಟೋರಿಯಂ ಪಡೆದವರು ಈಗ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಲದ ಕಂತು ಮುಂದೂಡಿದವರಿಗೆ ಹೊಸ ಸಾಲಗಳನ್ನು ಮಂಜೂರು ಮಾಡಲು ಬ್ಯಾಂಕ್‌ ಗಳು ಹಿಂದೇಟು ಹಾಕುತ್ತಿವೆ. ಈಗಾಗಲೇ ಹಲವು ಬ್ಯಾಂಕ್‌‌ಗಳು ಸಾಲದ ಅರ್ಜಿಗಳನ್ನು ತಿರಸ್ಕರಿಸಿವೆ.

ಸಾಲದ ಅರ್ಜಿ ತಿರಸ್ಕರಿಸುತ್ತಿರುವುದು ಏಕೆ: ಸಾಲದ ಕಂತು ಪಾವತಿ ಮುಂದೂಡಿಕೆ ಆಯ್ಕೆ ಮಾಡಿಕೊಂಡವರ ಮರುಪಾವತಿ ಸಾಮರ್ಥ್ಯವನ್ನು ಬ್ಯಾಂಕ್‌ಗಳು ಅನುಮಾನದಿಂದ ನೋಡುತ್ತಿವೆ. ಈಗಾಗಲೇ ಇರುವ ಸಾಲದ ಕಂತನ್ನು ಪಾವತಿ ಮಾಡಲು ಕಷ್ಟಪಡುತ್ತಿರುವ ಗ್ರಾಹಕರು ಹೊಸ ಸಾಲ ಪಡೆದು ಹೇಗೆ ತೀರಿಸುತ್ತಾರೆ ಎನ್ನುವ ಕಾರಣ ಮುಂದಿಟ್ಟುಕೊಂಡು ಬ್ಯಾಂಕ್‌ಗಳು ಸಾಲದ ಅರ್ಜಿಗಳನ್ನು ತಿರಸ್ಕರಿಸುತ್ತಿವೆ. ಒಂದು ಕಡೆ ಸಾಲದ ಕಂತು ಮುಂದೂಡಿಕೆಯಿಂದ ಬಡ್ಡಿ ಹೊರೆ ಹೊರುವ ಜತೆಗೆ ಹೊಸ ಸಾಲಕ್ಕೂ ಅರ್ಹತೆ ಇಲ್ಲ ಎನ್ನುವ ಸ್ಥಿತಿಯಿಂದಾಗಿ ಗ್ರಾಹಕ ಇಕ್ಕಟ್ಟಿಗೆ ಸಿಲುಕಿದ್ದಾನೆ.

ಮೊರಟೋರಿಯಂ ಪಡೆದ ಕಾರಣದಿಂದಾಗಿ ಈಗಾಗಲೇ ಸಾಲ ಮಂಜೂರಾಗಿದ್ದ ಗ್ರಾಹಕರಿಗೂ ಹಣ ಬಿಡುಗಡೆಯನ್ನು ಕೆಲ ಬ್ಯಾಂಕ್‌ಗಳು ತಡೆ ಹಿಡಿದಿವೆ. ಸಾಲದ ಕಂತು ಮುಂದೂಡುವುದರಿಂದ ಕ್ರೆಡಿಟ್ ಸ್ಕೋರ್ (ಸಾಲದ ಅಂಕ) ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಹೇಳಿದ್ದರೂ ಸಾಲ ಕೊಡಲು ಬ್ಯಾಂಕ್‌ಗಳು ಮೀನಮೇಷ ಎಣಿಸುತ್ತಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ.

ಸಾಮಾನ್ಯ ಗ್ರಾಹಕ ಬಲಿಪಶು: ಸಾಲದ ಕಂತು ಮುಂದೂಡಿಕೆ ವಿಚಾರದಲ್ಲಿ ಜನಸಾಮಾನ್ಯರು, ಇಂಟರ್‌ನೆಟ್ ಬಳಕೆ ಗೊತ್ತಿಲ್ಲದವರು ಬಲಿಪಶುಗಳಾಗಿದ್ದಾರೆ. ಮೊರಟೋರಿಯಂ ಬಗ್ಗೆ ಒಂದೊಂದು ಬ್ಯಾಂಕ್‌ ಒಂದೊಂದು ರೀತಿ ನೀತಿ ಅನುಸರಿಸಿದ ಕಾರಣ ಕೆಲವು ಗ್ರಾಹಕರು ಸರಿಯಾದ ಮಾಹಿತಿ ಸಿಗದೆ ಬಲವಂತವಾಗಿ ಮೊರಟೋರಿಯಂ ಮೊರೆ ಹೋಗಿದ್ದಾರೆ.

ದ್ವಿಚಕ್ರ ವಾಹನ, ಗೃಹ ಉಪಯೋಗಿ ವಸ್ತುಗಳನ್ನು ಇಎಂಐ ಮೇಲೆ ಪಡೆದವರು ಮೊರಟೋರಿಯಂ ನಮಗೂ ಸ್ವಯಂ ಚಾಲಿತವಾಗಿ ಅನ್ವಯಿಸುತ್ತದೆ ಎಂದು ತಿಳಿದು ನಂತರದಲ್ಲಿ ಚೆಕ್ ಕ್ಲಿಯರ್ ಆಗದೆ ₹ 500 ರಿಂದ ₹ 600 ದಂಡ ಕಟ್ಟಿರುವ ಉದಾಹರಣೆಗಳೂ ಇವೆ. ಕೆಲ ಗ್ರಾಹಕರು ಇಎಂಐ ಕಟ್ಟಲು ಹಣ ಇದ್ದರೂ ಸಹಿತ ಸಂಕಷ್ಟ ಕಾಲದಲ್ಲಿ ನಗದು ಲಭ್ಯತೆ ಮುಖ್ಯ ಎನ್ನುವ ದೃಷ್ಟಿಯಲ್ಲಿ ಮೊರಟೋರಿಯಂ ಮೊರೆ ಹೋಗಿದ್ದಾರೆ. ಇನ್ನು ಕೆಲ ಗ್ರಾಹಕರು ಸಾಕಷ್ಟು ಹಣ ಇದ್ದರೂ ಬ್ಯಾಂಕ್‌ಗಳು ಮೊರಟೋರಿಯಂ ನೀಡಿವೆ ಎಂದು ಪೂರ್ವಾಪರ ಯೋಚಿಸದೆ ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹೀಗಿದ್ದರೂ ಸಹಿತ ಬ್ಯಾಂಕ್‌ಗಳು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಗ್ರಾಹಕರು ಸಂಕಷ್ಟ ಕಾಲದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ. ಮೊರಟೋರಿಯಂ ಪಡೆದವರೆಲ್ಲರೂ ಹೊಸ ಸಾಲಕ್ಕೆ ಅನರ್ಹರು ಎಂಬ ಲೆಕ್ಕಾಚಾರಕ್ಕೆ ಬ್ಯಾಂಕ್‌ಗಳು ಬರುವ ಬದಲು ವ್ಯಕ್ತಿಗತವಾಗಿ ಅಳೆದು ತೂಗಿ ನಿರ್ಧಾರ ಕೈಗೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ.

ನೀವು ಏನು ಮಾಡಬೇಕು?
* ಆಗಸ್ಟ್‌ವರೆಗೆ ಮೊರಟೋರಿಯಂಗೆ ಅವಕಾಶ ನೀಡಿದ್ದರೂ, ನಿಮಗೆ ನಿರ್ದಿಷ್ಟ ಮಾಸಿಕ ಆದಾಯ ಇದ್ದರೆ ಮೊರಟೋರಿಯಂ ಆಯ್ಕೆಯಿಂದ ಹೊರಬನ್ನಿ
* ನಗದು ಕೊರತೆ ಇದ್ದರೆ ಮಾತ್ರ ಇಎಂಐ ಮೊರಟೋರಿಯಂ ಮೊರೆ ಹೋಗಿ
* ಸಾಲದ ಕಂತು ಮುಂದೂಡಿಕೆಯಿಂದ ಬಡ್ಡಿ ಹೊರೆ ಬೀಳುತ್ತದೆ ಎನ್ನುವುದನ್ನು ಮರೆಯಬೇಡಿ
* ಹೊಸ ಸಾಲದ ಅಗತ್ಯವಿದ್ದರೆ ಮೊರಟೋರಿಯಂ ಪಡೆದಿದ್ದಕ್ಕೆ ಸೂಕ್ತ ಕಾರಣಗಳನ್ನು ಬ್ಯಾಂಕ್‌ಗೆ ನೀಡಿ. ಅಗತ್ಯವಿದ್ದರೆ ನಿಮ್ಮ ಸ್ಯಾಲರಿ ಸ್ಲಿಪ್ , ಬ್ಯಾಂಕ್‌ ಸ್ಟೇಟ್‌ಮೆಂಟ್ ನೀಡುವ ಮೂಲಕ ನಿಮಗೆ ನಿರ್ದಿಷ್ಟ ಮಾಸಿಕ ಆದಾಯವಿದೆ ಎನ್ನುವುದನ್ನು ಬ್ಯಾಂಕ್‌ಗೆ ಮನದಟ್ಟು ಮಾಡಿ. ಆಗ ಬ್ಯಾಂಕ್‌ ನಿಮ್ಮ ಸಾಲದ ಅರ್ಜಿ ಮಾನ್ಯ ಮಾಡಬಹುದು
* ಆರ್ಥಿಕತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಹೊಸ ಸಾಲಗಳಿಂದ ಸಾಧ್ಯವಾದಷ್ಟು ದೂರವಿರಿ

ಕ್ಲಿಯೋನ್‌ ಡಿಸೋಜ

ಅವಕಾಶ ಕಳೆದುಕೊಳ್ಳುವ ಅಂದಾಜಿನಲ್ಲಿ ಹೂಡಿಕೆ ಭರಾಟೆ
ಸಾಕಷ್ಟು ನಕಾರಾತ್ಮಕ ಸುದ್ದಿಗಳ ನಡುವೆಯೂ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡು ಬಂದಿವೆ. ಸತತ ಎರಡನೇ ವಾರವೂ ಸೂಚ್ಯಂಕಗಳು ಏರಿಕೆ ಹಾದಿಯಲ್ಲಿವೆ. ಅಕ್ಟೋಬರ್ 2017 ರ ನಂತರದಲ್ಲಿ ಭಾರತದ ಷೇರುಪೇಟೆ ವಾರದ ಅವಧಿಯಲ್ಲಿ ಕಂಡಿರುವ ಗರಿಷ್ಠ ಏರಿಕೆ ಇದಾಗಿದೆ. ಜೂನ್ 5 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 6 ರಷ್ಟು ಏರಿಕೆ ದಾಖಲಿಸಿದ್ದರೆ ಸ್ಮಾಲ್ ಕ್ಯಾಪ್ ಶೇ 8.8 ಮತ್ತು ಮಿಡ್ ಕ್ಯಾಪ್ ಸೂಚ್ಯಂಕ ಶೇ 6 ರಷ್ಟು ಜಿಗಿದಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ 1 ತಿಂಗಳ ಗರಿಷ್ಠ ಮಟ್ಟ, ಅಂದರೆ ಶೇ 8 ರಷ್ಟು ಏರಿಕೆಯಾಗಿದೆ.

ಮೂಡೀಸ್ ರೇಟಿಂಗ್ ಏಜೆನ್ಸಿ ನೀಡಿದ ನಕಾರಾತ್ಮಕ ಆರ್ಥಿಕ ಮುನ್ನೋಟ ಅಂದಾಜು, ತ್ರೈಮಾಸಿಕ ಫಲಿತಾಂಶಗಳಲ್ಲಿನ ಸಾಧಾರಣ ಬೆಳವಣಿಗೆ, ಮತ್ತು ಸಮಗ್ರ ಅರ್ಥಶಾಸ್ತ್ರದ ಸೂಚಕಗಳಲ್ಲೂ ಕಂಡುಬರದ ಚೇತರಿಕೆ ಹೊರತಾಗಿಯೂ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿತ್ತು. ವಿದೇಶಿ ಹೂಡಿಕೆದಾರರ ಖರೀದಿ ಭರಾಟೆ ಮತ್ತು ಭವಿಷ್ಯದಲ್ಲಿ ಷೇರುಗಳ ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆಯ ಅಂದಾಜಿನಿಂದಾಗಿ ಮಾರುಕಟ್ಟೆ ಪುಟಿದೆದ್ದಿತು. ಕೋವಿಡ್‌ಗೂ ಮುನ್ನ ಇದ್ದ ಖರೀದಿ ಉತ್ಸಾಹ ಮಾರುಕಟ್ಟೆಯಲ್ಲಿ ಕಂಡುಬಂತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜೂನ್ ಮೊದಲ ವಾರದಲ್ಲಿ ₹ 13,927.52 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ಟಾಟಾ ಮೋಟರ್ಸ್ ಶೇ 27, ಬಜಾಜ್ ಫೈನಾನ್ಸ್ ಶೇ 22, ಬಜಾಜ್ ಫಿನ್ಸ್ ಸರ್ವ್ ಶೇ 19, ಎಸ್‌ಬಿಐ ಶೇ 16, ಟಾಟಾ ಸ್ಟೀಲ್ ಶೇ 15, ವೇದಾಂತ ಶೇ 14, ಜೀ ಎಂಟರ್‌ಟೇನ್‌ಮೆಂಟ್ ಶೇ 12, ಟೈಟನ್ ಶೇ 11, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 11, ಟೆಕ್ ಮಹೀಂದ್ರಾ ಶೇ 9 ರಷ್ಟು ಜಿಗಿದಿವೆ. ಏಷಿಯನ್ ಪೇಂಟ್ಸ್ ಶೇ 3, ನೆಸ್ಲೆ ಇಂಡಿಯಾ ಶೇ 3, ಡಾ ರೆಡ್ಡಿಸ್ ಲ್ಯಾಬ್ ಶೇ 1 ಮತ್ತು ಹೀರೊ ಮೋಟೊ ಕಾರ್ಪ್ ಶೇ 1 ರಷ್ಟು ಕುಸಿದಿವೆ.

ಮುನ್ನೋಟ: ಐಷರ್ ಮೋಟರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೈಟನ್ , ಹೀರೊ ಮೋಟೊ ಕಾರ್ಪ್, ಪಿವಿಆರ್, ಬಾಂಬೆ ಡೈಯಿಂಗ್, ಗ್ರಾಫೈಟ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಂಆರ್‌ಪಿಎಲ್, ಬಿಎಚ್‌ಇಎಲ್, ಚಾಲೆಟ್ ಹೋಟೆಲ್ಸ್, ಟೀಂ ಲೀಸ್, ಚಾಲೆಟ್ ಹೋಟೆಲ್ಸ್, ಶ್ರೀರಾಮ್ ಟ್ರಾನ್ಸ್ ಪೋರ್ಟ್, ಮಹಾನಗರ್ ಗ್ಯಾಸ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ. ಜೂನ್ 12 ರಂದು ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದೆ. ಇಂದಿನಿಂದ ಲಾಕ್‌ಡೌನ್ ಸಡಿಲವಾಗುತ್ತಿದ್ದು ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿವೆ. ಜೂನ್ 10 ರಂದು ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ ಸಭೆಯ ನಿರ್ಣಯಗಳು ಹೊರಬರಲಿವೆ, ಈ ಎಲ್ಲಾ ಸಂಗತಿಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT