ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಐಪಿಒ ಹೂಡಿಕೆಯ ಸುಗ್ಗಿ ಕಾಲ

Last Updated 7 ಮಾರ್ಚ್ 2021, 19:31 IST
ಅಕ್ಷರ ಗಾತ್ರ

2017ರ ಮಾರ್ಚ್ 8ರಂದು ಅವೆನ್ಯೂ ಸೂಪರ್ ಮಾರ್ಕೆಟ್ಸ್ ಅರ್ಥಾತ್ ಡಿ-ಮಾರ್ಟ್ ಕಂಪನಿಯ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಆರಂಭವಾದಾಗ ಪ್ರತಿ ಷೇರಿನ ಬೆಲೆ ₹ 299 ಇತ್ತು. ಈಗ ಅದೇ ಷೇರಿನ ಬೆಲೆ ₹ 3,286ಕ್ಕೆ ಏರಿಕೆಯಾಗಿದೆ. ಅಂದರೆ, ನಾಲ್ಕು ವರ್ಷಗಳ ಅಂತರದಲ್ಲಿ ಹೂಡಿಕೆಯ ಮೊತ್ತ 11 ಪಟ್ಟು ಹೆಚ್ಚಳವಾಗಿದೆ.

ಒಳ್ಳೆಯ ಐಪಿಒಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. 2021ರಲ್ಲೂ ಸಾಲು ಸಾಲು ಐಪಿಒಗಳು ಬರುತ್ತಿವೆ. ಅಳೆದು–ತೂಗಿ ಒಳ್ಳೆಯ ಐಪಿಒಗಳಲ್ಲಿ ಹೂಡಿಕೆ ಮಾಡಿದರೆ ದುಡ್ಡು ಬೆಳೆಸುವ ನಿಮ್ಮ ಕನಸು ನನಸಾಗುತ್ತದೆ. ಈವರೆಗಿನ ಐಪಿಒಗಳು ಕೊಟ್ಟಿರುವ ಫಲಿತಾಂಶದ ವಿಶ್ಲೇಷಣೆ ಇಲ್ಲಿದೆ.

ಐಪಿಒ ಎಂದರೇನು?: ಇನಿಷಿಯಲ್ ಪಬ್ಲಿಕ್ ಆಫರಿಂಗ್ ‘ಐಪಿಒ’ದ ವಿಸ್ತೃತ ರೂಪ. ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ, ಬಂಡವಾಳ ಸಂಗ್ರಹ ಮಾಡುವ ಪ್ರಕ್ರಿಯೆಗೆ ‘ಐಪಿಒ’ ಎನ್ನುತ್ತಾರೆ. ‘ಐಪಿಒ’ ಪ್ರಕ್ರಿಯೆ ಬಳಿಕ ಆ ನಿರ್ದಿಷ್ಟ ಕಂಪನಿಯ ಷೇರು ಮಾರುಕಟ್ಟೆಯಲ್ಲಿ ಸ್ಥಾನ (ಲಿಸ್ಪಿಂಗ್) ಪಡೆದುಕೊಳ್ಳುತ್ತದೆ.

2021ರ ಐಪಿಒಗಳ ಒಳನೋಟ: ಈ ವರ್ಷದ ಜನವರಿಯಿಂದ ಇಲ್ಲಿಯ ತನಕ ಒಂಭತ್ತು ಕಂಪನಿಗಳು ಐಪಿಒ ನಡೆಸಿ ಷೇರು ಮಾರುಕಟ್ಟೆ ಪ್ರವೇಶಿಸಿವೆ. ಒಟ್ಟು ಒಂಭತ್ತು ಕಂಪನಿಗಳ ಪೈಕಿ ಸದ್ಯ ಮೂರು ಕಂಪನಿಗಳ ಫಲಿತಾಂಶ ನಕಾರಾತ್ಮಕವಾಗಿದೆ. ಇನ್ನುಳಿದ ಆರು ಕಂಪನಿಗಳು ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಷೇರುಪೇಟೆಗೆ ಸೇರ್ಪಡೆಗೊಂಡ ದಿನ ಶೇಕಡ 29.29ರಷ್ಟು ಲಾಭ ಕೊಟ್ಟಿದ್ದ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್5 ಷೇರಿನ ಬೆಲೆ ₹ 315ರಿಂದಈಗ ₹ 297ಕ್ಕೆ ಇಳಿದಿದೆ.

ಷೇರುಪೇಟೆ ಪ್ರವೇಶಿಸಿದ ದಿನ ಶೇ (-)4.42ರಷ್ಟು ನಕಾರಾತ್ಮಕ ಗಳಿಕೆ ಕೊಟ್ಟ ಐಆರ್‌ಎಫ್‌ಸಿ ಷೇರಿನ ಪ್ರಸ್ತುತ ಬೆಲೆ ₹ 26ರಿಂದ ₹ 24.95ಕ್ಕೆ ತಗ್ಗಿದೆ. ಮಾರುಕಟ್ಟೆಗೆ ಬಂದ ಮೊದಲ ದಿನ ಶೇ 109.31ರಷ್ಟು ಲಾಭಾಂಶ ಕೊಟ್ಟ ಇಂಡಿಗೋ ಪೇಂಟ್ಸ್‌ನ ಬೆಲೆ ಈಗ ₹ 2,525 ಇದೆ. ಐಪಿಒ ವೇಳೆ ಹೋಮ್ ಫಸ್ಟ್ ಫೈನಾನ್ಸ್‌ನ ಪ್ರತಿ ಷೇರಿನ ಬೆಲೆ ₹ 518 ಇತ್ತು, ಈಗ ಅದರ ಬೆಲೆ ₹ 530 ಆಗಿದೆ. ಸ್ಟವ್ ಕ್ರಾಫ್ಟ್ ಐಪಿಒ ಷೇರಿನ ಬೆಲೆ ₹ 385 ಇತ್ತು, ಈಗ ಅದು ₹ 503ಕ್ಕೆ ಏರಿದೆ. ಬ್ರೂಕ್ ಫೀಲ್ಡ್ ಐಪಿಒ ಷೇರಿನ ಬೆಲೆ ₹ 275 ಇದ್ದದ್ದು ಈಗ
₹ 246ಕ್ಕೆ ಕುಸಿದಿದೆ. ನ್ಯೂರೇಕಾ ಷೇರಿನ ಬೆಲೆ ₹ 626ಕ್ಕೆ ಹೆಚ್ಚಳವಾಗಿದೆ. ರೇಲ್ ಟೆಲ್ ಷೇರಿನ ಬೆಲೆ ₹ 94ರಿಂದ ₹ 159 ಆಗಿದೆ. ಹೆರನ್ಬಾ ಷೇರು ₹ 627ರಿಂದ ₹ 812ಕ್ಕೆ ಜಿಗಿದಿದೆ.

ಮಾರ್ಚ್‌ನಲ್ಲಿ ಸಂಭಾವ್ಯ ಐಪಿಒ: ಈಸ್ ಮೈ ಟ್ರಿಪ್, ಕ್ರಾಫ್ಟ್ಸ್‌ಮೆನ್ ಆಟೋಮೇಷನ್, ಕಲ್ಯಾಣ್ ಜ್ಯುವೆಲರ್ಸ್, ಬರ್ಬಿಕ್ಯೂ ನೇಷನ್, ಅನುಪಂ ರಾಸಾಯನ್ ಇಂಡಿಯಾ ಲಿ., ಲಕ್ಷ್ಮಿ ಆರ್ಗ್ಯಾನಿಕ್ ಇಂಡಸ್ಟ್ರೀಸ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಅಪಿಜೇ ಸುರೇಂದ್ರ ಪಾರ್ಕ್ ಹೊಟೇಲ್ಸ್, ಆಧಾರ್ ಹೌಸಿಂಗ್ ಫೈನಾನ್ಸ್.

ಬಿದ್ದು ಎದ್ದ ಪೇಟೆಗೆ ಜಾಗತಿಕ ಅಡೆತಡೆಗಳು
ಸತತ ಎರಡು ವಾರಗಳ ಕಾಲ ಕುಸಿತ ಕಂಡಿದ್ದ ಷೇರುಪೇಟೆ ಮಾರ್ಚ್ 5ಕ್ಕೆ ಕೊನೆಗೊಂಡ ವಾರದಲ್ಲಿ ಏರಿಕೆ ದಾಖಲಿಸಿದೆ. 50,405 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 2.6ರಷ್ಟು ಗಳಿಕೆ ಕಂಡಿದ್ದರೆ, 14,938 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.8ರಷ್ಟು ಏರಿಕೆ ದಾಖಲಿಸಿದೆ. ಬಿಎಸ್ಇ (ಸೆನ್ಸೆಕ್ಸ್) ಲಾರ್ಜ್, ಸ್ಮಾಲ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 3, ಶೇ 4 ಮತ್ತು ಶೇ 3ರಷ್ಟು ಜಿಗಿದಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 6.5ರಷ್ಟು, ಮಾಹಿತಿ ತಂತ್ರಜ್ಞಾನ ಶೇ 3.8ರಷ್ಟು, ವಾಹನ ಉತ್ಪಾದನೆ ಶೇ 3.5ರಷ್ಟು ಮತ್ತು ಮೂಲಸೌಕರ್ಯ ಶೇ 3.2ರಷ್ಟು ಹೆಚ್ಚಳ ಕಂಡಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2ರಷ್ಟು ಇಳಿಕೆಯಾಗಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,199.74 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಹೂಡಿಕೆದಾರರು ₹ 2635.39 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ-ಇಳಿಕೆ: ಮಾರ್ಚ್ 1ರಿಂದ 5ರವರೆಗಿನ ಐದು ದಿನಗಳ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಗ್ರಾಸಿಮ್ ಶೇ 11.54ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 11.37ರಷ್ಟು, ಅದಾನಿ ಪೋರ್ಟ್ಸ್ ಶೇ 10.81ರಷ್ಟು, ಕೋಟಕ್ ಮಹೀಂದ್ರ ಬ್ಯಾಂಕ್ ಶೇ 1.31ರಷ್ಟು ಮತ್ತು ಹೀರೊ ಮೋಟೋಕಾರ್ಪ್ ಶೇ 7.37ರಷ್ಟು ಗಳಿಸಿಕೊಂಡಿವೆ. ಏರ್‌ಟೆಲ್ ಶೇ 1.92ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 4.77ರಷ್ಟು ಎಸ್‌ಬಿಐ ಶೇ 4.13ರಷ್ಟು, ಕೋಲ್ ಇಂಡಿಯಾ ಶೇ 0.72ರಷ್ಟು ಮತ್ತು ಹಿಂಡಾಲ್ಕೋ ಶೇ 3.32ರಷ್ಟು ಕುಸಿತ ದಾಖಲಿಸಿವೆ.

ಮುನ್ನೋಟ: ವಾಹನ ಉತ್ಪಾದನಾ ವಲಯದಲ್ಲಿನ ಸಕಾರಾತ್ಮಕತೆ, ಅರ್ಥ ವ್ಯವಸ್ಥೆಯಲ್ಲಿನ ಚೇತರಿಕೆಯಿಂದ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದ್ದರೂ ಬಾಂಡ್ ಮೇಲಿನ ಗಳಿಕೆ ಹೆಚ್ಚಳ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ನಕಾರಾತ್ಮಕತೆ ಸೂಚ್ಯಂಕಗಳ ಓಟಕ್ಕೆ ತಡೆ ಒಡ್ಡಿವೆ. ಸದ್ಯದ ಸ್ಥಿತಿಯಲ್ಲಿ ಜಾಗತಿಕ ಮಾರುಕಟ್ಟೆಗಳ ವರ್ತನೆ ನೇರವಾಗಿ ದೇಶೀಯ ಮಾರುಕಟ್ಟೆಯ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಇದರ ಜತೆ ದೇಶೀಯವಾಗಿ ಗ್ರಾಹಕ ಬೆಲೆ ಸೂಚ್ಯಂಕ, ಸಗಟು ದರ ಸೂಚ್ಯಂಕ, ಕೈಗಾರಿಕೆ ಉತ್ಪಾದನೆ ದತ್ತಾಂಶಗಳ ಮೇಲೆ ಹೂಡಿಕೆದಾರರ ಗಮನವಿರಲಿದೆ.

ಪ್ರಮೋದ್ ಬಿ.ಪಿ., ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ
ಪ್ರಮೋದ್ ಬಿ.ಪಿ., ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT