ಶುಕ್ರವಾರ, ಮೇ 20, 2022
23 °C

ಹಣಕಾಸು ಸಾಕ್ಷರತೆ| ಏನಿದು ಆರ್‌ಬಿಐನ ರಿಟೇಲ್ ಡೈರೆಕ್ಟ್?

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ಸಣ್ಣ ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅವಕಾಶ ಕಲ್ಪಿಸಲಿದೆ. ಸರ್ಕಾರಿ ಸಾಲಪತ್ರಗಳ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆರ್‌ಬಿಐನ ‘ರಿಟೇಲ್ ಡೈರೆಕ್ಟ್’ ಬಗ್ಗೆ ಮಾಹಿತಿ ಇಲ್ಲಿದೆ.


ಪ್ರಮೋದ್ ಬಿ.ಪಿ.

1. ಸರ್ಕಾರಿ ಸಾಲಪತ್ರ (Government Securities) ಅಂದರೆ?: ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುವ ಬಾಂಡ್‌ಗಳನ್ನು ಸಾಲ ಪತ್ರಗಳು ಎಂದು ಕರೆಯಬಹುದು. ರಾಜ್ಯ ಸರ್ಕಾರಗಳು ಕೂಡ ಈ ರೀತಿಯ ಬಾಂಡ್‌ಗಳನ್ನು ವಿತರಿಸಬಹುದು. ಅವನ್ನು ರಾಜ್ಯ ಅಭಿವೃದ್ಧಿ ಸಾಲಗಳು ಎಂದು ಕರೆಯಲಾಗುತ್ತದೆ. 6 ತಿಂಗಳಿಂದ ಹಿಡಿದು 40 ವರ್ಷಗಳ ಅವಧಿಯ ಸಾಲ ಪತ್ರಗಳು ಇವೆ. ಈ ಬಾಂಡ್‌ಗಳನ್ನು ಖರೀದಿಸಿದವರಿಗೆ ವರ್ಷಕ್ಕೆ ಎರಡು ಬಾರಿ ಬಡ್ಡಿ ಪಾವತಿಸಲಾಗುತ್ತದೆ. ಬಡ್ಡಿ ಲಾಭ ಗಳಿಕೆಗೆ ನಿಮ್ಮ ಆದಾಯ ತೆರಿಗೆ ಮಿತಿಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

2. ಆರ್‌ಬಿಐ ನೀಡಿರುವ ಅನುಮತಿ ಏನು?: ಸಣ್ಣ ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಆರ್‌ಬಿಐ ಅವಕಾಶ ಕಲ್ಪಿಸಲಿದೆ. ‘ರಿಟೇಲ್ ಡೈರೆಕ್ಟ್’ ವೇದಿಕೆ ಮೂಲಕ ಈ ವ್ಯವಸ್ಥೆ ಲಭ್ಯವಾಗಲಿದೆ.

3. ರಿಟೇಲ್ ಡೈರೆಕ್ಟ್‌ಗೆ ಅನುಮತಿ ನೀಡಿರುವುದು ಏಕೆ?: ಮುಂಬರುವ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ₹ 12 ಲಕ್ಷ ಕೋಟಿ ಸಾಲ ಪಡೆಯುವ ಗುರಿ ಹೊಂದಿದ್ದು, ಇದನ್ನು ನಿಭಾಯಿಸುವ ಹೊಣೆ ಆರ್‌ಬಿಐ ಮೇಲಿದೆ. ಈಗ ಆರ್‌ಬಿಐ ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಸಾಲಪತ್ರಗಳನ್ನು ಸುಲಭವಾಗಿ ಖರೀದಿಸಲು ಅನುವಾಗುವಂತೆ ರಿಟೇಲ್ ಡೈರೆಕ್ಟ್ ಆರಂಭಿಸುತ್ತಿದೆ.

4. ಸಣ್ಣ ಹೂಡಿಕೆದಾರರಿಗೆ ಏನು ಪ್ರಯೋಜನ?: ಇಲ್ಲಿಯ ತನಕ ಸಣ್ಣ ಹೂಡಿಕೆದಾರರು ನೇರವಾಗಿ ಸರ್ಕಾರಿ ಬಾಂಡ್ ಖರೀದಿಸಲು ಅವಕಾಶವಿರಲಿಲ್ಲ. ಈಗ ನೇರವಾಗಿ ಬಿಡ್ಡಿಂಗ್ ಮಾಡಲು ಸಾಧ್ಯವಾಗಲಿದೆ.

5. ನೇರ ಖರೀದಿ ಹೇಗೆ?: ಸಣ್ಣ ಹೂಡಿಕೆದಾರರು ಆರ್‌ಬಿಐನ ಇ-ಕುಬೇರ್ ವೇದಿಕೆ ಮೂಲಕ ‘ಗಿಲ್ಟ್‌ ಸೆಕ್ಯುರಿಟೀಸ್‌ ಖಾತೆ’ ತೆರೆಯಬೇಕು. ನಂತರ ಆರ್‌ಬಿಐನ NDS-OM (ನೆಗೋಷಿಯೇಟೆಡ್ ಡೀಲಿಂಗ್ ಸಿಸ್ಟಮ್ – ಆರ್ಡರ್ ಮ್ಯಾಚಿಂಗ್) ಮೂಲಕ ಬಿಡ್ ಸಲ್ಲಿಸಬಹುದು.

6. ಈ ಹೂಡಿಕೆಯಲ್ಲಿ ರಿಸ್ಕ್ ಇಲ್ಲವೇ?: ಬಡ್ಡಿ ದರ ಜಾಸ್ತಿಯಾದಾಗ ಬಾಂಡ್‌ಗಳ ಗಳಿಕೆ ಇಳಿಕೆಯಾಗುತ್ತದೆ. ಬಡ್ಡಿ ದರ ಇಳಿಕೆಯಾದಾಗ ಬಾಂಡ್‌ಗಳ ಗಳಿಕೆ ಹೆಚ್ಚಾಗುತ್ತದೆ. ವಿಚಿತ್ರ ಅನಿಸಿದರೂ ಇದು ಕೆಲಸ ಮಾಡುವುದು ಹೀಗೆಯೇ.

ಬಡ್ಡಿ ದರಗಳು ಹೆಚ್ಚಾದಾಗ ಹೊಸ ಬಾಂಡ್‌ಗಳನ್ನು ಹೆಚ್ಚಿನ ಬಡ್ಡಿ ದರಕ್ಕೆ ಬಿಡುಗಡೆ ಮಾಡಲಾಗುತ್ತದೆ. ಹೊಸ ಬಾಂಡ್‌ಗಳಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆದರೆ ಈಗಾಗಲೇ ಹಳೆಯ ಬಾಂಡ್‌ಗಳನ್ನು ಖರೀದಿಸುವವರಿಗೆ ಬಡ್ಡಿ ದರ ಹೆಚ್ಚಿಗೆ ಆಗುವುದಿಲ್ಲ. ಬಡ್ಡಿ ದರ ಇಳಿಕೆಯಾದಾಗ ಕಡಿಮೆ ಬಡ್ಡಿ ದರಕ್ಕೆ ಹೊಸ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹಳೆಯ ಬಾಂಡ್‌ಗಳಲ್ಲಿ ಹೆಚ್ಚಿಗೆ ಬಡ್ಡಿ ದರ ಇರುತ್ತದೆ. ಆದರೆ ಹೊಸ ಬಾಂಡ್‌ಗಳಲ್ಲಿ ಬಡ್ಡಿ ಕಡಿಮೆ ಇರುವ ಕಾರಣ ಬಾಂಡ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಈ ರೀತಿಯ ಮಿತಿ ಈ ಹೂಡಿಕೆಯಲ್ಲಿದೆ.

7. ಅವಧಿ ಠೇವಣಿ, ಅಂಚೆ ಕಚೇರಿ ಹೂಡಿಕೆ, ಮ್ಯೂಚುವಲ್ ಫಂಡ್‌ಗಿಂತ ಇದು ಉತ್ತಮವೇ?: ಈ ಹೊಸ ಹೂಡಿಕೆ ವ್ಯವಸ್ಥೆ ಹೂಡಿಕೆದಾರರಿಗೆ ಅವಧಿ ಠೇವಣಿ (ಎಫ್.ಡಿ), ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್, ಅಂಚೆ ಕಚೇರಿ ಹೂಡಿಕೆ ಯೋಜನೆಗಳನ್ನು ಹೊರತುಪಡಿಸಿ ಹೊಸದೊಂದು ಹೂಡಿಕೆ ಅವಕಾಶ ಕಲ್ಪಿಸಲಿದೆ. ದೀರ್ಘಾವಧಿಯಲ್ಲಿ ಸರ್ಕಾರಿ ಬಾಂಡ್‌ಗಳಲ್ಲಿ ಬಡ್ಡಿ ದರ ಅವಧಿ ಠೇವಣಿಗಿಂತ ಹೆಚ್ಚಿಗೆ ಇದೆ. ಈ ಹೂಡಿಕೆಯಲ್ಲಿ ರಿಸ್ಕ್ ಸ್ವಲ್ಪ ಕಡಿಮೆ ಆದರೂ ನಗದೀಕರಣ ಸ್ವಲ್ಪ ಕಷ್ಟ.

ಇತಿಹಾಸ ಸೃಷ್ಟಿಸಿದ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಫಬ್ರುವರಿ 5ಕ್ಕೆ ಕೊನೆಗೊಂಡ ವಾರದಲ್ಲಿ ಇತಿಹಾಸ ಬರೆದಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೊದಲ ಬಾರಿಗೆ ಕ್ರಮವಾಗಿ 51,000 ಮತ್ತು 15,000 ಅಂಶಗಳ ಗಡಿ ದಾಟಿವೆ. 50,731 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 9.6ರಷ್ಟು ಏರಿಕೆ ದಾಖಲಿಸಿದ್ದರೆ, 15,014 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 9.4ರಷ್ಟು ಜಿಗಿದಿದೆ. ಆದರೆ ಮಿಡ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಇಳಿಕೆ ಕಂಡಿದೆ.

ಬಜೆಟ್ ಘೋಷಣೆಗಳಿಗೆ ಹೂಡಿಕೆದಾರರು ಬಹುಪರಾಕ್ ಹೇಳಿರುವುದು, ವಿದೇಶಿ ಹೂಡಿಕೆಯಲ್ಲಿ ಮತ್ತೆ ಹೆಚ್ಚಳ ಆಗಿರುವುದು, ಆರ್‌ಬಿಐ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು, ತ್ರೈಮಾಸಿಕ ಫಲಿತಾಂಶಗಳು ನಿರೀಕ್ಷೆಯಂತೆ ಬರುತ್ತಿರುವುದು ಸೇರಿ ಹಲವು ಅಂಶಗಳು ಮಾರುಕಟ್ಟೆ ಏರಿಕೆಗೆ ಕಾರಣವಾಗಿವೆ.

ವಲಯವಾರು ನೋಡಿದಾಗ, ಎಲ್ಲಾ ವಲಯಗಳು ಸಕಾರಾತ್ಮಕವಾಗಿ ಕಂಡುಬಂದಿವೆ. ನಿಫ್ಟಿ ಬ್ಯಾಂಕ್ ಶೇ 16ರಷ್ಟು ಏರಿಕೆ ಕಂಡಿದ್ದರೆ, ಖಾಸಗಿ ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ವಲಯಗಳು ಕ್ರಮವಾಗಿ ಶೇ 13 ಮತ್ತು ಶೇ 11.5ರಷ್ಟು ಹೆಚ್ಚಳ ದಾಖಲಿಸಿವೆ.

ಗಳಿಕೆ–ಇಳಿಕೆ

ನಿಫ್ಟಿಯಲ್ಲಿ ಎಸ್‌ಬಿಐ ಶೇ 40ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 21ರಷ್ಟು, ಟಾಟಾ ಮೋಟರ್ಸ್ ಶೇ 21ರಷ್ಟು, ಬಜಾಜ್ ಫೈನಾನ್ಸ್ ಶೇ 17ರಷ್ಟು, ಶ್ರೀ ಸಿಮೆಂಟ್ ಶೇ 17ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 19ರಷ್ಟು, ಕೋಟಕ್ ಬ್ಯಾಂಕ್ ಶೇ 16ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 15ರಷ್ಟು, ಐಟಿಸಿ ಶೇ 15ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 15ರಷ್ಟು, ಎಚ್‌ಡಿಎಫ್‌ಸಿ ಶೇ 14ರಷ್ಟು, ಐಸಿಐಸಿಐ ಬ್ಯಾಂಕ್ ಶೇ 14ರಷ್ಟು, ಟಾಟಾ ಸ್ಟೀಲ್ ಶೇ 14ರಷ್ಟು ಹೆಚ್ಚಳವಾಗಿವೆ. ಯುಪಿಎಲ್ ಶೇ 4ರಷ್ಟು ಮತ್ತು ಏಷಿಯನ್ ಪೇಂಟ್ಸ್ ಶೇ 1.31ರಷ್ಟು ಕುಸಿದಿವೆ.

ಮುನ್ನೋಟ

ಬಿಪಿಸಿಎಲ್, ಬರ್ಗರ್ ಕಿಂಗ್, ಸನ್ ಟಿವಿ, ಬರ್ಜರ್ ಪೇಂಟ್ಸ್, ಕಾಫಿ ಡೇ, ಎಂಡ್ಯೂರೆನ್ಸ್ ಟೆಕ್ನಾಲಜೀಸ್, ಅದಾನಿ ಪೋರ್ಟ್ಸ್, ಆಸ್ಟ್ರಾಜೆನಿಕಾ ಇಂಡಿಯಾ, ವಿಆರ್‌ಎಲ್, ಬಾಂಬೆ ಡೈಯಿಂಗ್, ಆರ್ಕಿಡ್ ಪ್ಲೈ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಬ್ಯಾಂಕ್, ಫಾರ್ಮಾ, ಲೋಹ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಪೂರಕ ಸ್ಥಿತಿಯಿದೆ. ಡಾಲರ್ ಬೆಲೆ ಏರಿಳಿತ ಮತ್ತು ಜಾಗತಿಕ ವಿದ್ಯಮಾನಗಳು ಸಹ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು