ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ| ಅಹಿಂಸೆ: ಮಾನವಧರ್ಮ

ಅಕ್ಷರ ಗಾತ್ರ

ಹಿಂಸೆ ಮತ್ತು ಶೋಷಣೆ ಮಾನವನ ಕ್ರೂರ ಮನಃಸ್ಥಿತಿಯ ಎರಡು ಮುಖಗಳು. ಇವೆರಡು ಭಿನ್ನವಾಗಿ ಕಂಡರೂ, ಅವುಗಳ ಭಾವ ಒಂದೇ. ಅದು ಅಮಾನುಷತೆ. ಮಾನವ ಒಂದು ಪ್ರಾಣಿಪ್ರಭೇದವಾದರೂ, ಆತ ಪ್ರಾಣಿಗಳಿಗಿಂತ ಭಿನ್ನ ನೆಲೆಯಲ್ಲಿ ಕಂಡು ಬರಲು ಕಾರಣ, ಆತನ ಗುಣಸ್ವಭಾವ. ಮನುಷ್ಯನ ಗುಣಧರ್ಮದಿಂದಲೇ ಪ್ರಾಣಿಗುಂಪಿನಿಂದ ಹೊರಗಿದ್ದಾನೆ. ಮಾನವ ತನ್ನ ಸದ್ಗುಣ ಕಳೆದುಕೊಂಡಾಗ ಆತ ಪ್ರಾಣಿಗುಂಪಿನಲ್ಲೇ ಗುರುತಿಸಲ್ಪಡುತ್ತಾನೆ. ಈ ಹಿನ್ನೆಲೆಯಲ್ಲಿ ಮಾನವರು ತಮ್ಮ ಮನುಷ್ಯತನ ಕಾಪಾಡಿಕೊಳ್ಳಲು ಗುಣಮೌಲ್ಯಗಳನ್ನು ನಿತ್ಯ ಉನ್ನತೀಕರಿಸಿಕೊಳ್ಳುತ್ತಿರಬೇಕು. ಬಹುಮುಖ್ಯವಾಗಿ ಮನುಷ್ಯನಲ್ಲಿ ಆಗಾಗ ಕಾಣಿಸಿಕೊಳ್ಳುವ ತನ್ನ ಮೂಲ ಪ್ರಾಣಿಸ್ವಭಾವವಾದ ಕ್ರೌರ್ಯವನ್ನು ಹತ್ತಿಕ್ಕಿ ಮಾನವರಾಗಿ ಉಳಿಯಲು ಪ್ರಯತ್ನಿಸಬೇಕು. ಮಾನವರಲ್ಲಿ ಪ್ರಾಣಿಪ್ರವೃತ್ತಿ ಬೆಳೆಯದಂತೆ, ಅವರಲ್ಲಿ ಸದ್ಗುಣ ಮೂಡಿಸುವ ಸದುದ್ದೇಶದಿಂದ ಸ್ಥಾಪಿತವಾದ ಸನ್ಮಾರ್ಗವೇ ಧರ್ಮ.

ಧರ್ಮದ ಮೂಲ ಉದ್ದೇಶವೇ ಮಾನವನಲ್ಲಿ ಹುಟ್ಟುವ ಹಿಂಸಾಪ್ರವೃತ್ತಿಯನ್ನು ನಿಗ್ರಹಿಸುವುದು. ಅಂದರೆ, ಅಹಿಂಸೆಯೇ ಮಾನವ ಧರ್ಮ. ಪರಪೀಡನೆಯ ಕುಕೃತ್ಯ ಮೃಗಕ್ಕೆ ಸಮನಾಗುವುದರಿಂದ, ಮಾನವರು ಅಹಿಂಸಾಮಾರ್ಗದಲ್ಲಿ ನಡೆಯಬೇಕು. ದುರಾದೃಷ್ಟವಶಾತ್, ಇಂದು ಮಾನವರ ಸದ್ಪರಿವರ್ತನೆಗೆ ಹುಟ್ಟಿಕೊಂಡ ಧರ್ಮದಿಂದಲೇ ಹಿಂಸೆಯ ಪರಾಕಾಷ್ಠೆ ಮೆರೆಯುತ್ತಿದೆ. ಇದಕ್ಕೆ ಕಾರಣ ಮಾನವರಲ್ಲಿ ಧರ್ಮದ ಬಗೆಗಿನ ಅಜ್ಞಾನ. ಪ್ರಾಣಿ ಮತ್ತು ಮಾನವರನ್ನು ಪ್ರತ್ಯೇಕವಾಗಿಸುವುದೇ ಜ್ಞಾನ. ಪ್ರಾಣಿಗಳಲ್ಲಿ ಬುದ್ಧಿ ಕಡಿಮೆ ಇರುವುದರಿಂದ ಕ್ರೂರ ಮನಃಸ್ಥಿತಿ ಹೊಂದಿರುತ್ತವೆ. ಮನುಷ್ಯನ ಗುಣಾವಗುಣಗಳೂ ಸಹ ನಿಷ್ಕರ್ಷೆಯಾಗುವುದು ಅವನ ಬುದ್ಧಿಯಿಂದಲೇ. ಬುದ್ಧಿ ಕಡಿಮೆ ಇದ್ದವರಲ್ಲಿ ಹಿಂಸಾಪ್ರವೃತ್ತಿ ಹೆಚ್ಚು. ಬುದ್ಧಿ ಹೆಚ್ಚಿರುವ ಮಾನವರಲ್ಲಿ ಹಿಂಸಾಗುಣಗಳು ಕಾಣುವುದಿಲ್ಲ. ಬುದ್ಧಿ ಇಲ್ಲದ ಜನ ಮಾತ್ರ ಮತ್ತೊಬ್ಬರನ್ನು ಶೋಷಿಸುವ ಮತ್ತು ಹಿಂಸಿಸುವ ದುರ್ಗುಣವನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ, ಒಂದು ಜೀವವನ್ನು ಹಿಂಸಿಸುವ ಮತ್ತು ಕೊಲ್ಲುವ ಗುಣವುಳ್ಳವರನ್ನು ಮಾನವರೆಂದು ಕರೆಯಲಾಗುವುದಿಲ್ಲ. ಬುದ್ಧಿ ಕಡಿಮೆ ಇರುವ ಕ್ರೂರಪ್ರಾಣಿಗಳೆಂದೇ ಗುರುತಿಸಬೇಕಾಗುತ್ತದೆ.

ಶ್ರೀಕೃಷ್ಣ ಹೇಳಿದಂತೆ ‘ವಿಶಾಲವಾದ ಮನೋಭಾವ ಹೊಂದಿರುವವರು ಎಲ್ಲೆಲ್ಲೂ, ಎಲ್ಲರಲ್ಲೂ ಸಮಭಾವನೆಯನ್ನು ಹೊಂದಿರುತ್ತಾರೆ. ಜಗತ್ತಿನ ಸಕಲ ಚರಾಚರ ವಸ್ತುಗಳಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಅಂದರೆ ಒಳ್ಳೆಯದನ್ನೇ ಕಾಣುತ್ತಾರೆ. ಆದರೆ ಸಂಕುಚಿತ ಬುದ್ಧಿಯುಳ್ಳವರು ಮಾತ್ರ ಮನುಷ್ಯರಲ್ಲೂ ಭಿನ್ನವಾಗಿ ನೋಡುತ್ತಾರೆ.’ ‌

ಕುರುಕ್ಷೇತ್ರಯುದ್ಧ ನಡೆದದ್ದು ದುರ್ಯೋಧನನ ಸಂಕುಚಿತ ಬುದ್ಧಿಯಿಂದ. ಧರ್ಮರಾಯ ಯುದ್ಧವನ್ನು ಗೆದ್ದಿದ್ದು ವಿಶಾಲ ಮನೋಭಾವದಿಂದ. ಸೋದರಸಂಬಂಧಿಗಳಾದ ಪಾಂಡವರ ಮೇಲೆ ದ್ವೇಷ ಕಾರುತ್ತಲೇ ಇದ್ದ ದುರ್ಯೋಧನ ತನ್ನ ದುರಂತವನ್ನು ತಾನೇ ತಂದುಕೊಂಡ. ತಿಳಿಗೇಡಿತನ ಅವನ ಸರ್ವನಾಶ ಮಾಡಿತು.

ಇತ್ತೀಚೆಗೆ ದುರ್ಯೋಧನನಂಥ ಮಾನವರು ಹೆಚ್ಚಾಗುತ್ತಿದ್ದಾರೆ. ದ್ವೇಷಾಸೂಯೆಗಳಿಂದ ಮನಸ್ಸನ್ನು ಮಲಿನ ಮಾಡಿಕೊಂಡಿರುವ ಮಾನವರು ಸೋದರಸಂಬಂಧಗಳಲ್ಲೂ ಸಾಮರಸ್ಯವಿಲ್ಲದೆ ಬದುಕುತ್ತಿದ್ದಾರೆ. ಸಮಾಜದಲ್ಲಿ ಜಾತಿ-ಧರ್ಮದ ಹೆಸರಲ್ಲಿ ಹಿಂಸಾಚಾರ ಮಾಡುತ್ತಿದ್ದಾರೆ. ಧರ್ಮದ ತಿರುಳನ್ನು ಸರಿಯಾಗಿ ತಿಳಿಯದ ಜನ ಮನುಷ್ಯ-ಮನುಷ್ಯರ ನಡುವೆ ಕಂದಕ ನಿರ್ಮಿಸುತ್ತಿದ್ದಾರೆ. ಧರ್ಮ ಯಾವತ್ತೂ ಸಂಕುಚಿತವಾಗಿಲ್ಲ, ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಮತ್ತು ಪ್ರಚೋದಿಸುವುದೂ ಇಲ್ಲ. ಆದರೆ ಧರ್ಮದ ಹುಟ್ಟಿನ ಹಿನ್ನೆಲೆ, ಮತ್ತದರ ಸದಾಶಯಗಳನ್ನು ಅರ್ಥೈಸದ ಜನರಿಂದ ಧರ್ಮ ದುರ್ಬಳಕೆಯಾಗುತ್ತಿದೆ. ಮಾನವ ಧರ್ಮದ ಮೂಲ ಆಶಯವಾದ ಅಹಿಂಸಾತತ್ವವನ್ನು ಮರೆತ ತಿಳಿಗೇಡಿಗಳಿಂದ ಧರ್ಮ ಸಂಘರ್ಷಿಸುತ್ತಿದೆ. ಮಾನವರಲ್ಲಿ ಸಂಕುಚಿತ ಬುದ್ಧಿ ಅಳಿಯದಿದ್ದರೆ ವಿಶ್ವ ವಿನಾಶವಾಗುತ್ತದೆ. ಆದ್ದರಿಂದ ಮಾನವರೆಲ್ಲಾ ಒಂದೇ ಎಂಬ ಭ್ರಾತೃತ್ವಪ್ರೇಮದಿಂದ ಬದುಕುವುದನ್ನು ರೂಢಿಸಿಕೊಂಡು, ನಾವೆಲ್ಲಾ ‘ಸಚ್ಚಿದಾನಂದ’ದ ನೆಮ್ಮದಿಯ ಬದುಕನ್ನು ಸಾಕಾರಗೊಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT